ಮಡಿಕೇರಿ: ನಗರ ಸೇರಿದಂತೆ ಕೊಡಗು ಜಿಲ್ಲೆಯ ಹಲವೆಡೆ ಭಾನುವಾರ ರಾತ್ರಿ ಇಡೀ ಬೀಸಿದ ಬಿರುಸಿನ ಗಾಳಿ ಹಾಗೂ ಭಾರಿ ಮಳೆ ಸೋಮವಾರವೂ ಮುಂದುವರಿದಿದೆ. ಮಳೆಗಿಂತಲೂ ಗಾಳಿಯ ವೇಗವೇ ಅತ್ಯಧಿಕವಾಗಿದ್ದು, ಮರಗಳು ಬೀಳುತ್ತಿವೆ.
ಭಾಗಮಂಡಲ- ತಲಕಾವೇರಿ ರಸ್ತೆಯಲ್ಲಿ ಕೆಲವೆಡೆ ಮರಗಳು ಬಿದ್ದಿವೆ. ಸುಂಟಿಕೊಪ್ಪ ಸಮೀಪದ ಏಳನೇ ಹೊಸಕೋಟೆ ಹಾಗೂ ಮಂಜಿಕೆರೆಯ ಬಳಿ ಮರಗಳು ಹಾಗೂ ವಿದ್ಯುತ್ ಕಂಬಗಳು ನೆಲಕಚ್ಚಿವೆ. ಹಲವೆಡೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.
ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ನೀರಿನ ಮಟ್ಟ ಗಣನೀಯವಾಗಿ ಏರಿಕೆಯಾಗಿದೆ. ಕಾವೇರಿ ಸೇರಿದಂತೆ ಹಲವು ನದಿ, ತೊರೆಗಳಲ್ಲಿ ನೀರು ರಭಸವಾಗಿ ಹರಿಯುತ್ತಿದೆ. ಕುಶಾಲನಗರ ವ್ಯಾಪ್ತಿಯ ಕಾವೇರಿ, ಹಾರಂಗಿ ನದಿ ಪಾತ್ರದಲ್ಲಿ ಪ್ರವಾಹ ಭೀತಿ ಸೃಷ್ಟಿಯಾಗಿದೆ.
ಗಾಳಿಯ ವೇಗ ಇಂದು ಇನ್ನಷ್ಟು ಅಧಿಕವಾಗಿರಲಿದ್ದು ಆರೆಂಜ್ ಅಲರ್ಟ್ ಅನ್ನು ಹವಾಮಾನ ಇಲಾಖೆ ನೀಡಿದೆ. ಹೀಗಾಗಿ ಜಿಲ್ಲೆಯ ಎಲ್ಲ ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಮಡಿಕೇರಿ ನಗರದಲ್ಲಿ ದಟ್ಟವಾಗಿ ಮೋಡ ಕವಿದಿದ್ದು, ಮಂಜಿನೊಂದಿಗೆ ಮಳೆ ಸುರಿಯುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.