ADVERTISEMENT

ಕೊಡಗು | ಒಂದೆಡೆ ಪ್ರವಾಹ, ಮತ್ತೊಂದೆಡೆ ಜಲಪಾತ

ಕೀರೆಹೊಳೆಯ ಸೊಬಗು

ಜೆ.ಸೋಮಣ್ಣ
Published 19 ಜುಲೈ 2024, 5:47 IST
Last Updated 19 ಜುಲೈ 2024, 5:47 IST
<div class="paragraphs"><p>ಕೀರೆಹೊಳೆ ನೀರು ಸೇತುವೆ ಕೆಳಗಿನಿಂದ ನದಿಗೆ ಹರಿಯುತ್ತಿರುವುದು</p><p><br></p></div>

ಕೀರೆಹೊಳೆ ನೀರು ಸೇತುವೆ ಕೆಳಗಿನಿಂದ ನದಿಗೆ ಹರಿಯುತ್ತಿರುವುದು


   

ಗೋಣಿಕೊಪ್ಪಲು: ತ್ಯಾಜ್ಯದಿಂದ ಹೂಳು ತುಂಬಿ ಒಂದುವರೆ ತಿಂಗಳ ಹಿಂದೆ ಒಣಗಿ ಹೋಗಿದ್ದ ಗೋಣಿಕೊಪ್ಪಲು ಕೀರೆಹೊಳೆಗೆ ಈಗ ಜಲಪಾತದ ಕಳೆ ಬಂದಿದೆ.

ADVERTISEMENT

ದಕ್ಷಿಣ ಕೊಡಗಿನಾದ್ಯಂತ ಬೀಳುತ್ತಿರುವ ಧಾರಾಕಾರ ಮಳೆಗೆ ಕೀರೆಹೊಳೆ ತುಂಬಿ ಹರಿಯುತ್ತಿದೆ. ಅಮ್ಮತ್ತಿ ಭಾಗದಲ್ಲಿ ಜನಿಸುವ ಈ ಹೊಳೆ ಕಾಫಿ ತೋಟ ಮತ್ತು ಗದ್ದೆಗಳ ಬಯಲಲ್ಲಿ ಬಾಗಿ, ಬಳುಕಿ ಹರಿದು, ಗೋಣಿಕೊಪ್ಪಲು ಪಟ್ಟಣ ಪ್ರವೇಶಿಸಲಿದೆ. ಬಳಿಕ, ಸಣ್ಣ ತೊರೆಯಂತೆ ನಗರದ ರಸ್ತೆ ಚರಂಡಿ ನೀರು ತುಂಬಿಕೊಂಡು ಸೀಗೆತೋಡು ಬಳಿ ನಗರದಿಂದ ಹೊರ ಬೀಳುತ್ತದೆ. ಬಳಿಕ, ಇದು ಸಂಪೂರ್ಣನದಿ ರೂಪತಾಳಿ ಕಿರುಗೂರು ಬಳಿ ತನ್ನ ವಿರಾಟಸ್ವರೂಪ ತಾಳುತ್ತದೆ.

ಕಿರುಗೂರು ಬಳಿ ಕೃಷಿಗೆ ನೀರು ಒದಗಿಸಲು 100 ವರ್ಷಗಳ ಹಿಂದೆ ನಿರ್ಮಿಸಿರುವ ಪಿಕಪ್ (ಕಿರುಸೇತುವೆ) ಮೇಲಿಂದ ಭೋರ್ಗರೆಯುತ್ತಾ ಧುಮ್ಮಿಕ್ಕುತ್ತಿದೆ. ಹೀಗೆ, ಧುಮ್ಮಿಕ್ಕುವ ನೀರಿನ ಜಲಧಾರೆ ಈಗ ಜಲಪಾತವಾಗೇ ಮಾರ್ಪಟ್ಟಿದೆ. ಈ ದೃಶ್ಯವನ್ನು ಈಗ ನೋಡುವುದೇ ಆನಂದ.

ಇದರ ಮತ್ತೊಂದು ಬದಿಯಲ್ಲಿ ಕಿರುಗೂರು ಮಾಯಮುಡಿಗೆ ವಾಹನ ಸಂಪರ್ಕ ಕಲ್ಪಿಸಲು 10 ವರ್ಷಗಳ ಹಿಂದೆ ನೂತನ ಸೇತುವೆ ನಿರ್ಮಾಣಗೊಂಡಿದೆ. ಇದರ ಮೇಲು ಭಾಗದಲ್ಲಿ ನೂರಾರು ಮಂದಿ ನಿಂತು ಪಿಕಪ್‌ನಿಂದ ನೀರು ಧುಮ್ಮಿಕ್ಕುವ ನಯನ ಮನೋಹರ ದೃಶ್ಯವನ್ನು  ಕಣ್ತುಂಬಿಕೊಳ್ಳುತ್ತಿದ್ದಾರೆ.

ನದಿ ನೀರು ಮುಂದೆ ವಿಶಾಲವಾಗಿ ಹರಿದು ನಲ್ಲೂರು ಬಳಿ ಗದ್ದೆ ಬಯಲಿಗೆ ಧುಮಿಕಿ ಬೃಹತ್ ಸಾಗರವನ್ನೇ ಸೃಷ್ಟಿಸಿದೆ. ನದಿ ಪ್ರವಾಹದ ನೀರು ನಲ್ಲೂರಿನ ಕೃಷಿಕ ಸುಜಯ್ ಬೋಪಯ್ಯ ಅವರ ಗದ್ದೆ ಬಯಲಿನಲ್ಲಿ ಹರಿದು ಮತ್ತೆ ಮರಳಿ ನದಿ ಸೇರಿ ಬೆಸಗೂರು ಬಳಿ ಲಕ್ಷ್ಮಣತೀರ್ಥ ನದಿಯಲ್ಲಿ ಲೀನಗೊಳ್ಳುತ್ತದೆ.

ಕಿರುಗೂರಿನಿಂದ 20 ಕಿ.ಮೀ ದೂರದ ಲಕ್ಷ್ಮಣತೀರ್ಥ ನದಿ ಸೇರುವವರೆಗೆ ನದಿ ಬಯಲಿನ ಗದ್ದೆಗಳು ಸಾಕ್ಷಾತ್ ಸಮುದ್ರದಂತೆಯೇ ಕಂಡು ಬರುತ್ತಿವೆ.

ಈ ಬಾರಿ ಕೀರೆಹೊಳೆಯನ್ನು ಶಾಸಕ ಪೊನ್ನಣ್ಣ ಗೋಣಿಕೊಪ್ಪಲು ಗ್ರಾಮ ಪಂಚಾಯಿತಿಗೆ ಕಟ್ಟುನಿಟ್ಟಾಗಿ ಸೂಚಿಸಿ ಹೊಳೆಯ ಹೂಳೆತ್ತಿಸಿದ್ದರು. ಕಸ ಹಾಕುವವರಿಗೆ ನೋಟೀಸ್ ನೀಡಿ ದಂಡ ಹಾಕುವ ಕ್ರಮವನ್ನೂ ಕೈಗೊಂಡಿದ್ದರು. ಅಲ್ಲದೆ, ಹೊಳೆಯಲ್ಲಿ ತೇಲಿ ಬರುವ ಪ್ಲಾಸ್ಟಿಕ್ ತ್ಯಾಜ್ಯವನ್ನು ನಿಯಂತ್ರಿಸಲು ₹ 6.5 ಲಕ್ಷ ವೆಚ್ಚದಲ್ಲಿ ಇನಿಷಿಯೇಟೀವ್ ಕೂರ್ಗ್ ಪರಸರ ಸಂಸ್ಥೆ ಮೂಲಕ ಜರ್ಮನ್ ತಂತ್ರಜ್ಞಾನದ ನೂತನ ಕಸ ತಡೆಗೋಡೆ ನಿರ್ಮಿಸಲಾಗಿತ್ತು. ಆದರೆ, ಈ ತಡೆಗೋಡೆ ಭಾರಿ ಮಳೆಯ ಪ್ರವಾಹಕ್ಕೆ ಕೊಚ್ಚಿ ಹೋಗಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.