ಮಡಿಕೇರಿ: ಇಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕನ್ನಡದ ಪ್ರಸಿದ್ಧ ಕವಿ ಪಂಜೆ ಮಂಗೇಶರಾಯರು ಹಾಗೂ ಜಿ.ಟಿ. ನಾರಾಯಣ ರಾವ್ ಅವರ ಸ್ಮರಣಾರ್ಥ ಅವರ ಪುತ್ಥಳಿಯನ್ನು ನಿರ್ಮಿಸಬೇಕು ಎನ್ನುವ ಒತ್ತಾಯ ಕೇಳಿ ಬಂತು.
ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಮಂಗಳವಾರ ಕನ್ನಡ ಸಿರಿ ಸ್ನೇಹ ಬಳಗದ ವತಿಯಿಂದ ಕರ್ನಾಟಕ ಸುವರ್ಣ ಸಂಭ್ರಮ ಅಂಗವಾಗಿ ಏರ್ಪಡಿಸಿದ್ದ ‘ಪಂಜೆ ಮಂಗೇಶರಾಯರ ಬದುಕು ಬರಹ’ ಕುರಿತು ವಿಚಾರ ಸಂಕಿರಣ ಹಾಗೂ ಚಿತ್ರಕಲಾ ಸ್ಪರ್ಧಾ ಕಾರ್ಯಕ್ರಮ’ದಲ್ಲಿ ಬಳಗದ ಅಧ್ಯಕ್ಷ ಬಿ.ಎಸ್. ಲೊಕೇಶ್ ಸಾಗರ್ ಬೇಡಿಕೆ ಮಂಡಿಸಿದರು.
‘ಈ ಇಬ್ಬರೂ ಮಹನೀಯರು ಇಲ್ಲಿಯೇ ಈ ಹಿಂದೆ ಕಾರ್ಯನಿರ್ವಹಿಸಿದ್ದರು. ಅವರ ನೆನಪನ್ನು ಚಿರಸ್ಥಾಯಿಯಾಗಿಸಲು ಹಾಗೂ ವಿದ್ಯಾರ್ಥಿಗಳಿಗೆ ಅವರ ಬಗ್ಗೆ ಅರಿವು ಮೂಡಿಸಲು ಈ ಕ್ರಮ ಕೈಗೊಳ್ಳಬೇಕು’ ಎಂದು ಅವರು ಮನವಿ ಮಾಡಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಮಡಿಕೇರಿ ತಾಲ್ಲೂಕು ಘಟಕದ ಮಾಜಿ ಅಧ್ಯಕ್ಷ ಕುಡೆಕಲ್ ಸಂತೋಷ್ ಮಾತನಾಡಿ, ‘ಹಲವು ಸಾಧಕರನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿರುವ ಸರ್ಕಾರಿ ಪದವಿಪೂರ್ವ ಕಾಲೇಜು ಒಂದು ರೀತಿಯಲ್ಲಿ ಸಾಧಕರ ಮನೆಯಾಗಿದೆ. ಈ ಶಾಲೆಯಲ್ಲಿ ವಿದ್ಯಾರ್ಜನೆ ಮಾಡುತ್ತಿರುವ ವಿದ್ಯಾರ್ಥಿಗಳೇ ಪುಣ್ಯವಂತರು’ ಎಂದು ಕಾಲೇಜಿನ ಮಹತ್ವ ಕುರಿತು ಮಾತನಾಡಿದರು.
ಬಂಟ್ವಾಳದಲ್ಲಿ ಜನಿಸಿದ ಪಂಜೆ ಮಂಗೇಶರಾಯರು ವಿವಿಧ ಕಡೆಗಳಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿ ಕೊಡಗಿನ ಈ ಶಾಲೆಯಲ್ಲೂ ಕಾರ್ಯನಿರ್ವಹಿಸಿದ್ದರು. ಕೊಡಗಿನ ಬಗ್ಗೆ ಅವರು ಬರೆದ ಹುತ್ತರಿ ಹಾಡು ಇಂದಿಗೂ ಜನಜನಿತವಾಗಿದೆ ಎಂದು ತಿಳಿಸಿದರು.
ಇದಕ್ಕೂ ಮುನ್ನ ಮಾತನಾಡಿದ ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ.ವೈ. ರಾಜೇಶ್, ‘ಮಂಗೇಶರಾಯರು ಸಾಹಿತ್ಯ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆಗಳನ್ನು ಮಾಡಿದ್ದಾರೆ. ಅವರ ಕೊಡುಗೆ ಅಪಾರವಾದುದು’ ಎಂದು ಶ್ಲಾಘಿಸಿದರು.
ನಗರಸಭಾ ಸದಸ್ಯ ಮಹೇಶ್ ಜೈನಿ ಮಾತನಾಡಿ, ‘ಕನ್ನಡ ಸ್ನೇಹ ಸಿರಿ ಬಳಗ ಕನ್ನಡ ನಾಡು, ನುಡಿಗಾಗಿ ಸೇವೆ ಸಲ್ಲಿಸಿದವರ ನೆನಪು ಮಾಡಿಕೊಳ್ಳುವಂತಹ ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದೆ. ಪಂಜೆ ಮಂಗೇಶರಾಯರ ಬಗ್ಗೆ ಕಾರ್ಯಕ್ರಮ ಹಮ್ಮಿಕೊಂಡಿರುವದು ಉತ್ತಮವಾದುದುದಾಗಿದೆ. ಇನ್ನು ಮುಂದಕ್ಕೂ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತಾಗಲಿ’ ಎಂದು ಹೇಳಿದರು.
ಶಾಲಾ ಉಪ ಪ್ರಾಂಶುಪಾಲರಾದ ಶಶಿಕಲಾ ಮಾತನಾಡಿ, ‘ಇಂತಹ ಕಾರ್ಯಕ್ರಮಗಳಿಂದ ಮಕ್ಕಳಿಗೆ ಉತ್ತಮ ವಿಚಾರಗಳನ್ನು ತಿಳಿದುಕೊಳ್ಳಲು ಒಂದು ವೇದಿಕೆ ಸಿಕ್ಕಂತಾಗಿದೆ’ ಎಂದು ಹೇಳಿದರು.
ವಿದ್ಯಾರ್ಥಿಗಳು ಪಾಠದೊಂದಿಗೆ ಇತರ ಸಾಧಕರ ವಿಚಾರಗಳನ್ನು ಕೂಡ ತಿಳಿದುಕೊಳ್ಳಬೇಕಿದೆ. ಇಂತಹ ಕಾರ್ಯಕ್ರಮಗಳು ನಡೆದಾಗ ಅದರಲ್ಲಿ ಭಾಗವಹಿಸಬೇಕು. ಆಗ ಮಕ್ಕಳಲ್ಲಿರುವ ಪ್ರತಿಭೆ ಹೊರಬರಲು ಸಾಧ್ಯ ಎಂದರು.
ಇದೇ ವೇಳೆ ವಿದ್ಯಾರ್ಥಿಗಳಿಗೆ ಸ್ಥಳದಲ್ಲೇ ಮಂಗೇಶರಾಯರ ಚಿತ್ರ ಬಿಡಿಸುವ ಸ್ಪರ್ಧೆ ಏರ್ಪಡಿಸಿ ವಿಜೇತರಿಗೆ ಬಹುಮಾನ ನೀಡಲಾಯಿತು. ಭಾಗವಹಿಸಿದವರೆಲ್ಲರಿಗೂ ಪ್ರಶಂಸನಾ ಪತ್ರ ನೀಡಲಾಯಿತು. ಗೀತ ಗಾಯನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಪಂಜೆ ಮಂಗೇಶರಾಯರ ಗೀತೆಗಳು ಸೇರಿದಂತೆ ಇತರ ಭಾವಗೀತೆ, ದಾಸರ ಪದಗಳನ್ನು ಹಾಡಿದರು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಬಿ.ಡಿ. ಶಿವಶಂಕರ್, ಶಿಕ್ಷಕಿಯರಾದ ಸೌಮ್ಯಲತಾ, ಉಷಾ, ಸುಜಾತಾ, ಉಪ ಪ್ರಾಂಶುಪಾಲರಾದ ಶಶಿಕಲಾ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.