ADVERTISEMENT

ಕಾವೇರಿ ತೀರದ ಸುಂದರ ದೇಗುಲಗಳ ಬಗ್ಗೆ ಗೊತ್ತೆ?

ಉಗಮದಲ್ಲೇ ಇದೆ ದೈವ ಸನ್ನಿಧಿ, ಎಲ್ಲೆಲ್ಲೂ ತೀರ್ಥಕ್ಷೇತ್ರಗಳು

ಸಿ.ಎಸ್.ಸುರೇಶ್
Published 15 ಅಕ್ಟೋಬರ್ 2022, 19:30 IST
Last Updated 15 ಅಕ್ಟೋಬರ್ 2022, 19:30 IST
ತಲಕಾವೇರಿಯಲ್ಲಿನ ಕಾವೇರಿಕುಂಡಿಕೆ
ತಲಕಾವೇರಿಯಲ್ಲಿನ ಕಾವೇರಿಕುಂಡಿಕೆ   

ನಾಪೋಕ್ಲು: ‘ದಕ್ಷಿಣ ಗಂಗೆ’ ಎಂದು ವಿಖ್ಯಾತವಾಗಿರುವ ಪವಿತ್ರ ನದಿ ಕಾವೇರಿ ತಲಕಾವೇರಿಯಲ್ಲಿ ಉದ್ಭವಿಸಿ ಲೋಕಪಾವನೆಯಾಗಿ ಹರಿಯುತ್ತಿದ್ದಾಳೆ. ಕಾವೇರಿ ತೀರ್ಥೋದ್ಭವದ ಹಿನ್ನೆಲೆಯಲ್ಲಿ ‘ಕಾವೇರಿ ಜಾತ್ರೆ’ಗೆ ಭಾಗಮಂಡಲ-ತಲಕಾವೇರಿ ದೇವಾಲಯಗಳು ಸಜ್ಜಾಗುತ್ತಿವೆ.

ತಲಕಾವೇರಿಯು ಸುಪ್ರಸಿದ್ಧವಾದ ಪುಣ್ಯಕ್ಷೇತ್ರ. ಕಾವೇರಿಯು ನದಿರೂಪ ತಳೆಯುವ ಪುಟ್ಟದಾದ ಪವಿತ್ರ ಪುಷ್ಕರಿಣಿ ಇಲ್ಲಿದ್ದು ಅದು ಲಕ್ಷಾಂತರ ಭಕ್ತರ ಆರಾಧನಾ ಕೇಂದ್ರವಾಗಿದೆ. ಕೊಡಗಿನ ಕುಲದೇವಿ, ಕರ್ನಾಟಕದ ಸಿರಿದೇವಿ, ತಮಿಳುನಾಡಿನ ಭಾಗ್ಯಲಕ್ಷ್ಮಿ ಎಂದು ಪ್ರಸಿದ್ಧಿ ಪಡೆದಿರುವ ಕಾವೇರಿ ನದಿಯ ಉದ್ದಕ್ಕೂ ಎಡಬಲ ದಂಡೆಗಳಲ್ಲಿ ಹಲವು ದೇಗುಲಗಳು ಕಾವೇರಿಯ ದಿವ್ಯತೆಯ ಪ್ರಭಾವಕ್ಕೆ ನಿದರ್ಶನವಾಗಿ ಮೈವೆತ್ತು ನಿಂತಿವೆ.

ತಲಕಾವೇರಿಯಲ್ಲಿ ಪುಟ್ಟದಾಗಿ ಹುಟ್ಟಿ ಮುಂದೆ ಹರಿದು 8 ಕಿ.ಮೀ ಅಂತರದ ಕೆಳಗೆ ಭಾಗಮಂಡಲಕ್ಕೆ ಬಂದು ಸೇರುವಾಗ ಕಾವೇರಿಯು ಸಂಗಮಗೊಳ್ಳುವ ನದಿ ಕನ್ನಿಕೆ. ಅಂತರ್ ವಾಹಿನಿಯಾಗಿ ಹರಿದು ಬಂದು ಅಲ್ಲೇ ಕಾವೇರಿಯನ್ನು ಸೇರುವ ಸುಜ್ಯೋತಿ ನದಿ ಎರಡನೆಯದು. ಈ ತ್ರಿವೇಣಿ ಸಂಗಮ ಇರುವ ಭಾಗಮಂಡಲದಲ್ಲಿ ಪುರಾಣ ಪ್ರಸಿದ್ಧವಾದ ಭಗಂಡೇಶ್ವರ ದೇಗುಲ ಸಮುಚ್ಚಯವಿದೆ. ತ್ರಿವೇಣಿ ಸಂಗಮದ ಸ್ನಾನ, ಪಿತೃಗಳ ಆರಾಧನೆಯ ಅಂಗವಾಗಿ ಪಿಂಡ, ತರ್ಪಣಾದಿಗಳನ್ನು ಅರ್ಪಿಸುವಿಕೆ, ಭಗಂಡೇಶ್ವರ ದೇವಾಲಯದಲ್ಲಿ ದೇವತಾರಾಧನೆ ಇವುಗಳನ್ನು ಭಕ್ತರು ಕಾವೇರಿ ಜಾತ್ರೆ ಹಾಗೂ ಇನ್ನಿತರ ಅವಧಿಯಲ್ಲಿ ಕ್ಷೇತ್ರಕ್ಕೆ ಬಂದು ಶ್ರದ್ಧಾಭಕ್ತಿಗಳಿಂದ ನಡೆಸುತ್ತಾರೆ.

ADVERTISEMENT

ಭಾಗಮಂಡಲದಿಂದ ಮುಂದೆ ಸಾಗುತ್ತಾ ಹೋಗುವ ಕಾವೇರಿಯ ತೀರದಲ್ಲಿ ಒಂದು ಪುರಾತನವಾದ ಶಿವ ದೇವಾಲಯವಿದೆ. ಹಿಂದೆ ಹರಿಶ್ಚಂದ್ರ ಮಹಾರಾಜನು ಯಜ್ಞ ಮಾಡಿದುದರಿಂದ ಆ ಸ್ಥಳಕ್ಕೆ ಹರಿಶ್ಚಂದ್ರ ಎಂಬ ಹೆಸರು ಬಂದಿದೆ. ಕಾವೇರಿಯ ಎಡಭಾಗದಲ್ಲಿ ಬೆಟ್ಟಗೇರಿ-ನಾಪೋಕ್ಲು ರಸ್ತೆಯ ಎಡಪಾರ್ಶ್ವದಲ್ಲಿ ಎತ್ತರದಗುಡ್ಡದ ಮೇಲೆ ಪಾಲೂರಪ್ಪನ ದೇವಾಲಯವಿದೆ. ಪಾಲೂರು ಗ್ರಾಮದ ಈ ಮಹಾಲಿಂಗೇಶ್ವರ ದೇವಾಲಯವು ಪ್ರಮುಖ ಶಿವ ದೇವಾಲಯವಾಗಿದೆ.

ಜಿಲ್ಲೆಯ ದೇವಾಲಯಗಳ ಪೈಕಿ ವೈಶಿಷ್ಟ್ಯಪೂರ್ಣವಾಗಿ ಗಮನೆ ಸೆಳೆಯುವ ಪಾಲೂರು ಮಹಾಲಿಂಗೇಶ್ವರ ದೇವಾಲಯವು ಕಾವೇರಿ ನದಿ ತಟದಲ್ಲಿದ್ದು ಅತ್ಯಂತ ಪ್ರಾಚೀನವಾದ ದೇವಾಲಯ ಮಾತ್ರವಲ್ಲ ತನ್ನದೇ ಆದ ಇತಿಹಾಸವನ್ನೂ ಹೊಂದಿದೆ. ರಸ್ತೆಬದಿಯಲ್ಲಿರುವ ಕಮಾನಾಕೃತಿಯ ಪ್ರವೇಶ್ವಾರವು ದೇವಾಲಯಕ್ಕೆ ಭೇಟಿ ನೀಡುವ ಭಕ್ತರನ್ನು ಸ್ವಾಗತಿಸುತ್ತದೆ.

ಕೇರಳದ ಶೈಲಿಯಲ್ಲಿರುವ ಈ ದೇವಾಲಯವನ್ನು ತಲುಪಬೇಕೆಂದರೆ ರಸ್ತೆಯಿಂದ ಪ್ರವೇಶ ದ್ವಾರದ ಮೂಲಕ ಸುಮಾರು 101 ಮೆಟ್ಟಿಲುಗಳನ್ನು ಏರಬೇಕಾಗುತ್ತದೆ. ದೇವಾಲಯದ ಸುತ್ತಲೂ ವಿಶಾಲವಾದ ಪ್ರಾಕಾರವಿದ್ದು ಗರ್ಭಗುಡಿಯು ಚೌಕಾಕಾರವಾಗಿದೆ. ಎದುರಿಗೆ ಮುಖಮಂಟಪವನ್ನೂ ಹೊಂದಿದೆ. ಈ ಮುಖ ಮಂಟಪವು ಆಕರ್ಷಕವಾಗಿದ್ದು ಇದರಲ್ಲಿ ಕೆತ್ತಲಾದ ವಿವಿಧ ರೀತಿಯ ಕೆತ್ತನೆಗಳು ಮನಸೆಳೆಯುತ್ತದೆ. ಗರ್ಭಗುಡಿಯಲ್ಲಿನ ದೇವರ ವಿಗ್ರಹಕ್ಕೆ ಎದುರಾಗಿರುವ ಮುಖಮಂಟಪದಲ್ಲಿ ಸುಂದರವಾದ ಬಸವನನ್ನು ಕೆತ್ತಲಾಗಿದೆ. ದೇವಾಲಯದ ಮುಖ ದ್ವಾರವು ಪಡುವಣ ದಿಕ್ಕಿಗೆ ಇರುವುದು ಈ ದೇವಾಲಯದ ಮತ್ತೊಂದು ವೈಶಿಷ್ಟ್ಯವಾಗಿದೆ.

ಮಹಾಲಿಂಗೇಶ್ವರ ದೇವಾಲಯವು ಬಹಳಷ್ಟು ಪ್ರಾಚೀನವಾದುದು ಎನ್ನಲಾಗಿದ್ದು, ಕ್ರಿ.ಶ.11ನೇ ಶತಮಾನಕ್ಕೆ ಹಿಂದೆಯೇ ನಿರ್ಮಿಸಲಾಗಿದೆ. ಇದಕ್ಕೆ ಪೂರಕವಾಗಿ ಈ ದೇವಾಲಯದಲ್ಲಿ ಶಿಲಾಶಾಸನವಿದ್ದು ಅದರಲ್ಲಿ ಪಾಲಯೂರು ಎಂದು ಬರೆಯಲಾಗಿದೆ.

ಬಲಮುರಿಯು ಕಾವೇರಿ ತೀರದಲ್ಲಿರುವ ಒಂದು ಪುರಾಣ ಪ್ರಸಿದ್ಧವಾದ ಪುಣ್ಯಕ್ಷೇತ್ರ. ಇಲ್ಲಿ ಕಾವೇರಿ ದಡದಲ್ಲಿ ಬಲಭಾಗದಲ್ಲಿ ಅಗಸ್ತ್ಯೇಶ್ವರ ದೇವಾಲಯವಿದೆ. ಎಡಭಾಗದಲ್ಲಿ ದಂಡೆಯ ಮೇಲೆ ಮುನೀಶ್ವರ ದೇವಾಲಯವಿದೆ. ಮಡಿಕೇರಿಯಿಂದ 32 ಕಿ.ಮೀ. ದೂರದಲ್ಲಿರುವ ಗುಹ್ಯ ನದಿ ತೀರದ ಮತ್ತೊಂದು ಪುಣ್ಯಕ್ಷೇತ್ರ. ಇಲ್ಲಿ ಎತ್ತರವಾದ ಸ್ಥಳದಲ್ಲಿ ಸುಂದರವಾದ ಶಿವ ದೇವಾಲಯವಿದೆ. ಮಹರ್ಷಿ ಅಗಸ್ತ್ಯರು ಪುರಾತನ ಕಾಲದಲ್ಲಿ ಇಲ್ಲಿ ಶಿವಲಿಂಗವನ್ನು ಸ್ಥಾಪನೆ ಮಾಡಿದರು.

ಗುಹ್ಯ, ಕುಶಾಲನಗರ, ರಾಮಸ್ವಾಮಿ ಕಣಿವೆ, ಶಿರಂಗಾಲ ಎಂಬ ಊರುಗಳನ್ನು ಹಾದು ಕಾವೇರಿ ನದಿ ಹಾಸನ ಜಿಲ್ಲೆಯನ್ನು ಪ್ರವೇಶಿಸುತ್ತದೆ. ಜಿಲ್ಲೆಯಲ್ಲಿ ಹಲವು ಸುಂದರ ದೇವಾಲಯಗಳಿದ್ದು ಭಕ್ತರ ಆರಾಧನಾ ಸ್ಥಳಗಳಾಗಿವೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.