ADVERTISEMENT

ಮಡಿಕೇರಿ: ಜಿನುಗುವ ಮಳೆಯ ನಡುವೆ ಧುಮುಕಿತು ಕಾವ್ಯಧಾರೆ

​ಪ್ರಜಾವಾಣಿ ವಾರ್ತೆ
Published 24 ಜೂನ್ 2024, 5:05 IST
Last Updated 24 ಜೂನ್ 2024, 5:05 IST
ಕವಿಗೋಷ್ಠಿಯಲ್ಲಿ ಕವನ ವಾಚಿಸಿದ ಎಲ್ಲರೂ ಖುಷಿಯಿಂದ ಫೋಟೊ ತೆಗೆಸಿಕೊಂಡರು
ಕವಿಗೋಷ್ಠಿಯಲ್ಲಿ ಕವನ ವಾಚಿಸಿದ ಎಲ್ಲರೂ ಖುಷಿಯಿಂದ ಫೋಟೊ ತೆಗೆಸಿಕೊಂಡರು   

ಮಡಿಕೇರಿ: ಜಿನುಗುತ್ತಿದ್ದ ಮಳೆಯ ನಡುವೆ ಕಾವ್ಯಧಾರೆಯೊಂದು ಹರಿದು, ಕಾವ್ಯಾಸಕ್ತರನ್ನು ಪುಳಕಗೊಳಿಸಿತು.

ಇಲ್ಲಿನ ಭಾರತೀಯ ವಿದ್ಯಾಭವನದ ಸಭಾಂಗಣದಲ್ಲಿ ಭಾನುವಾರ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಕೊಡಗು ಜಿಲ್ಲಾ ಸಮಿತಿ ಏರ್ಪಡಿಸಿದ್ದ ‘ಕವಿಗೋಷ್ಠಿ’ಯು ಸಹೃದಯರನ್ನು ಬರಸೆಳೆಯಿತು.

‘ಪ್ರಕೃತಿ’ ವಿಷಯ ಕುರಿತು ಏರ್ಪಡಿಸಲಾಗಿದ್ದ ಕವಿಗೋಷ್ಠಿಯಲ್ಲಿ 25 ಮಂದಿ ಕವನ ವಾಚಿಸಿದರು. ಇವರಲ್ಲಿ ವಿಶೇಷ ಚೇತನರು, ಹಿರಿಯ ನಾಗರಿಕರು, ಮಕ್ಕಳು, ಮಹಿಳೆಯರು, ವಿದ್ಯಾರ್ಥಿಗಳು, ಗೃಹಿಣಿಯರು, ಉಪನ್ಯಾಸಕರು ಭಾಗವಹಿಸಿದ್ದು ವಿಶೇಷ ಎನಿಸಿತು.

ADVERTISEMENT

ಗಾಲಿ ಕುರ್ಚಿಯಲ್ಲೇ ಬಂದು ಈಶ್ವರಿ ಅವರು ವಾಚಿಸಿದ ‘ಪರಿಸರ’ ಎಂಬ ಕವನ ಹಾಗೂ ಅವರು ಹಾಡಿದ ಹಾಡುಗಳು ವೀಕ್ಷಕರನ್ನು ತನ್ಮಯಗೊಳಿಸಿತು.

ಬಹುತೇಕ ಕವಿಗಳು ವಾಚಿಸಿದ ಕವನಗಳು ಗೇಯತೆಯಿಂದ, ಪ್ರಾಸಬದ್ಧತೆಯಿಂದ ಕೂಡಿದ್ದವು. ಕೆಲವು ಕವನಗಳಂತೂ ಧ್ವನಿಪೂರ್ಣವಾಗಿದ್ದವು. ಕೆಲವು ಕವನಗಳು ಗದ್ಯದ ಸಾಲಿನಂತೆಯೂ ಕೇಳಿ ಬಂದು, ಗಂಟಲಲ್ಲಿ ಕಡುಬು ಸಿಲುಕಿದಂತಾಯಿತು.

ವಿಮಲಾ ಧಶರಥ ಅವರ ‘ಸಸ್ಯ ಶ್ಯಾಮಲೆ’ ಕವನವು ಪ್ರಾಸಬದ್ಧವಾಗಿತ್ತು. ಇದರಲ್ಲಿ ಬಂದ ‘ದಯೆ ಇರುವ ಧರಣಿಯ ಉಳಿಸುವ...’ ಎಂಬ ಸಾಲು ಗಮನ ಸೆಳೆಯಿತು.

ರಂಜಿತ್ ದಾಮೋದರ ಅವರ ‘ಅಳಲು’ ಕವನ ಧ್ವನಿಪೂರ್ಣವಾಗಿತ್ತು. ‘ಪ್ರಕೃತಿಯ ಮೆರವಣಿಗೆಯಲ್ಲಿ ಯಂತ್ರದ ವಿಕೃತಿ’ ಎಂಬಂತಹ ಹಲವು ಸಾಲುಗಳು ಏಕಕಾಲಕ್ಕೆ ಹಲವು ಅರ್ಥಗಳನ್ನು ಹೊಮ್ಮಿಸುತ್ತಿದ್ದವು.

ಶಿವದೇವಿ ಅವನೀಶಚಂದ್ರ ಅವರು ವಾಚಿಸಿದ ‘ಮಳೆಯೊಂದು ಸಂಭ್ರಮ’ ಎಂಬ ಕವಿತೆ ಮಳೆಯ ಸಂಭ್ರಮವನ್ನು ಕಟ್ಟಿಕೊಟ್ಟಿತು.

ಎ.ಎನ್. ಗಾಯತ್ರಿ ಅವರ ‘ಹಸಿರೇ ಉಸಿರು’ ಕವನದಲ್ಲಿ ಬಂದ ‘ಬಗೆಬಗೆದು ಪರಿಸರವ ಅಗೆದು ತಿನ್ನುವ ಬಕಾಸುರರ...’ ಎಂಬಂತಹ ಸಾಲುಗಳು ಪರಿಸರದ ಮೇಲೆ ಮನುಷ್ಯ ನಡೆಸುತ್ತಿರುವ ದೌರ್ಜನ್ಯವನ್ನು ಓದುಗರಿಗೆ ದಾಟಿಸಿತು.

ಸುಶೀಲಾ ಕುಶಾಲಪ್ಪ ಅವರ ‘ಪರಿಸರದ ರಕ್ಷಣೆ’ ಕವನವು ಗೇಯತೆಯ ಅಂಶಗಳನ್ನು ಹೆಚ್ಚಾಗಿ ಒಳಗೊಂಡಿತ್ತು.

‘ಹಸಿರೂರ ಸಿಂಗಾರಿ ಹೊಂಬಣ್ಣ ತಳೆದಾಗ ನಮ್ಮೂರ ನವಿಲುಗಳು ಆಡುತಾವೋ...ನಲಿದಾಡುತಾವೋ’ ಎಂಬ ಸಾಲುಗಳನ್ನು ವಾಚಿಸಿದ ರಾಧಿಕಾ ವಿಶ್ವನಾಥ್ ಅವರಿಗೆ ಪ್ರಥಮ ಬಹುಮಾನವನ್ನು ‘ಸುಕೃತವು ನಮ್ಮದು’ ಎಂಬ ಕವನ ವಾಚಿಸಿದ ವೈಲೇಶ್ ಅವರಿಗೆ ದ್ವಿತೀಯ ಬಹುಮಾನವನ್ನು ಹಾಗೂ ‘ಪರಿಸರದ ರಕ್ಷಣೆ’ ಕವನ ವಾಚಿಸಿದ ಸುಶೀಲಾ ಕುಶಾಲಪ್ಪ ಅವರಿಗೆ ತೃತೀಯ ಬಹುಮಾನವನ್ನೂ ಘೋಷಿಸಲಾಯಿತು.

ಸಂಘಟನೆಯ ಅಧ್ಯಕ್ಷ ಸಿ.ಎಸ್. ಸುರೇಶ್ ಭಾಗವಹಿಸಿದ್ದರು.

ಕವಿಗೋಷ್ಠಿಯಲ್ಲಿ ತೃತೀಯ ಸ್ಥಾನ ಪಡೆದ ಸುಶೀಲಾ ಕುಶಾಲಪ್ಪ ದ್ವಿತೀಯ ಸ್ಥಾನ ಪಡೆದ ವೈಲೇಶ್ ಹಾಗೂ ಪ್ರಥಮ ಸ್ಥಾನ ಪಡೆದ ರಾಧಿಕಾ ವಿಶ್ವನಾಥ್ ಅವರನ್ನು ಸನ್ಮಾನಿಸಲಾಯಿತು. ಪ್ರೀತಿ ಡಿಸೋಜಾ ಕಡ್ಲೇರ ಆಶಾ ಧರ್ಮಪಾಲ್ ಜಾನಕಿ ಮಾಚಯ್ಯ ಚಂದನ್ ನಂದರಬೆಟ್ಟು ಬಬ್ಬೀರ ಸರಸ್ವತಿ ಸಿ.ಎಸ್ ಸುರೇಶ್ ಕಿಗ್ಗಾಲು ಗಿರೀಶ್ ತಮ್ಮಯ್ಯ ಹೇಮಂತ್ ಪಾರೇರ ಭಾಗವಹಿಸಿದ್ದರು.
ಜನರಲ್ಲಿ ಜಾಗೃತಿ ಮೂಡಿಸುವುದು ಅವರ ಜವಾಬ್ದಾರಿ ನೆನಪಿಸುವುದು ಹೊಸಬರಿಗೆ ವೇದಿಕೆ ಕಲ್ಪಿಸುವುದು ಬಾಂಧವ್ಯ ಗಟ್ಟಿ ಗೊಳಿಸುವುದು ಕವಿಗೋಷ್ಠಿಯ ಉದ್ದೇಶ
ಬಬ್ಬೀರ ಸರಸ್ವತಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿ.

ಕವನ ವಾಚಿಸಿದವರು:

ರಾಜೇಶ್ ಚಿಕ್ಕಅಳುವಾರು ರಾಧಿಕಾ ವಿಶ್ವನಾಥ್ ಎಸ್. ಸೈಮನ್ ಎಸ್.ಕೆ. ಈಶ್ವರಿ ಹೇಮಲತಾ ಪೂರ್ಣಪ್ರಕಾಶ್ ಎಸ್.ವಿ. ಜಶ್ಮಿತಾ ಭಾಗೀರಥಿ ಅಪರ್ಣ ಅನಿತಾ ಜಗದೀಶ್ ಯಶೋಧಾ ಪೇರಿಯಂಡ ಕೊಂಪುಳಿರ ಇಂದ್ರಾವತಿ ಮುಕ್ಕಾಟಿ ಹರಿಣಿ ಗಿರೀಶ ಕಾವೇರಿ ಪ್ರಗತಿ ಕೇಡನ ಕವಿತಾ ರಜಿತಾ ಕಾರ್ಯಪ್ಪ ಎನ್.ಎಂ. ಗೀತಾಂಜಲಿ ಮಧುರ ಪಾರೇರ ರಂಜಿತ್ ಪಾಲೋದರ ಶಿವದೇವಿ ಅವನೀಶಚಂದ್ರ ಎ.ಎನ್. ಗಾಯತ್ರಿ ವೈಲೇಶ್ ಸುಶೀಲಾ ಕುಶಾಲಪ್ಪ ಪಾರ್ವತಿ ಮೂರ್ನಾಡು

ಕವಿಗಳಿಗೆ ಕಿವಿಮಾತು ಹೇಳಿದ ಕಿಗ್ಗಾಲು ಗಿರೀಶ್

ತೀರ್ಪುಗಾರರಾಗಿ ಭಾಗವಹಿಸಿದ್ದ ಕಿಗ್ಗಾಲು ಗಿರೀಶ್ ಮಾತನಾಡಿ ‘ಕವನ ಎನ್ನುವುದು ಭಾವದಿಂದ ತುಂಬಿರಬೇಕು ಅದರಲ್ಲಿ ಗೇಯತೆ ಇರಬೇಕು ಛಂದೋಬದ್ಧವಾಗಿ ರಾಗ ತಾಳ ಲಯಗಳಿಂದ ಕೂಡಿದ್ದಲ್ಲಿ ಅವು ಖಂಡಿತ ಯಶಸ್ವಿಯಾಗುತ್ತವೆ’ ಎಂದು ಕವಿಗಳಿಗೆ ಕಿವಿಮಾತುಗಳನ್ನು ಹೇಳಿದರು. ಜೊತೆಗೆ ಕವಿಗೋಷ್ಠಿಯಲ್ಲಿ ಕೇಳಿ ಬಂದ ಕವನಗಳು ಉತ್ಕೃಷ್ಟವಾಗಿದ್ದವು ಎಂದು ಶ್ಲಾಘಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.