ಸೋಮವಾರಪೇಟೆ: ‘ಪ್ರತಿಯೊಬ್ಬ ವಿದ್ಯಾರ್ಥಿಗಳು ಕೊಡಗಿನ ಸ್ವಾತಂತ್ರ್ಯ ಹೋರಾಟಗಾರರ ಚರಿತ್ರೆ ತಿಳಿದುಕೊಳ್ಳುವ ಪ್ರಯತ್ನ ಮಾಡಬೇಕು’ ಎಂದು ಸಂತ ಜೊಸೆಫರ ಪದವಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಛಾಯಾ ಹೇಳಿದರು.
ಜಿಲ್ಲಾ ಮತ್ತು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ನಿಂದ ಗುರುವಾರ ಇಲ್ಲಿನ ಸಂತ ಜೋಸೆಫರ ಪದವಿ ಕಾಲೇಜಿನ ಸಭಾಂಗಣದಲ್ಲಿ ಗಂಗಾಧರ ಶೇಟ್ ಸುಲೋಚನಾ ಬಾಯಿ ಸ್ಮಾರಕ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ,‘ಕೊಡಗಿನ ಸ್ವಾತಂತ್ರ್ಯ ಹೋರಾಟಗಾರರ ನೆನಪು’ ವಿಷಯದಲ್ಲಿ ಮಾತನಾಡಿ, ಕೊಡಗಿನಲ್ಲಿ ಸ್ವಾತಂತ್ರ್ಯ ಹೋರಾಟಗಾರರನ್ನು ದರೋಡೆಕೋರರೆಂದು ಬಿಂಬಿಸಿ, ಅನೇಕ ಮುಂಚೂಣಿ ಹೋರಾಟಗಾರರನ್ನು ಗಲ್ಲಿಗೇರಿಸಿ, ಅವರ ಕುಟುಂಬದವರಿಗೆ ಮಾನಸಿಕ ಹಿಂಸೆ ನೀಡಿ ಬ್ರಿಟಿಷರು ಕ್ರೂರತನ ಮೆರೆದಿದ್ದರು’ ಎಂದರು.
‘ಭಾರತದ ಇತಿಹಾಸದಲ್ಲಿ 1852 ಮಹತ್ವದ ವರ್ಷವಾಗಿದ್ದು, ಮೊದಲ ಭಾರತ ಸ್ವಾತಂತ್ರ್ಯಸಂಗ್ರಾಮ ನಡೆದಿತ್ತು. ಬ್ರಿಟಿಷರು ಅದನ್ನು ದಂಗೆ ಎಂದೇ ಕರೆದರು. ಅದಕ್ಕಿಂತ ಮೊದಲು 1834ರಲ್ಲಿ ಬ್ರಿಟಿಷರ ವಿರುದ್ಧ ಕೊಡಗಿನಲ್ಲಿ ‘ಅಮರಸುಳ್ಯ ದಂಗೆ’ ನಡೆಯಿತು. ಕೆದಂಬಾಡಿ ರಾಮೇಗೌಡ, ಗುಡ್ಡೆಮನೆ ಅಪ್ಪಯ್ಯಗೌಡ ನೇತೃತ್ವದಲ್ಲಿ ಹೋರಾಟ ನಡೆಯಿತು. ಬ್ರಿಟಿಷರು ರೈತರ ಹೋರಾಟವನ್ನು ದರೋಡೆ, ಸುಲಿಗೆ ಎಂದು ಕರೆದು ರಾಮೇಗೌಡ, ಅಪ್ಪಯ್ಯಗೌಡರನ್ನು ಬಂಧಿಸಿ ಮಡಿಕೇರಿಯಲ್ಲಿ ಗಲ್ಲಿಗೇರಿಸಿ, ಅವರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದರು’ ಎಂದರು.
‘1835ರಲ್ಲಿ ರೈತರೆಲ್ಲಾ ಒಟ್ಟುಸೇರಿ ರೈತಸೇನೆ ಕಟ್ಟಿಕೊಂಡು, ಸ್ವಾತಂತ್ರ ಹೋರಾಟಕ್ಕೆ ಧುಮುಕಿದ ಅನೇಕ ರೈತ ವೀರರು ತಮ್ಮ 40ನೇ ವಯಸ್ಸಿಗೆಲ್ಲಾ ಜೀವವನ್ನು ಕಳೆದುಕೊಂಡಿದ್ದಾರೆ’ ಎಂದು ಹೇಳಿದರು.
ಕ.ಸಾ.ಪದ ಜಿಲ್ಲಾ ಸಮಿತಿ ಟಿ.ಪಿ.ರಮೇಶ್ ಮಾತನಾಡಿ,‘ಕೊಡಗಿನ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡು ಅನೇಕ ವೀರರು ಪ್ರಾಣ ತ್ಯಾಗ ಮಾಡಿದ್ದಾರೆ. ಅಂತಹವರ ಹೋರಾಟದ ಫಲವಾಗಿ ಸ್ವಾತಂತ್ರ್ಯ ಅನುಭವಿಸುತ್ತಿದ್ದೇವೆ. ಸಾರಾಯಿ ವಿರುದ್ಧ ಹೋರಾಟ, ವಿದೇಶಿ ವಸ್ತುಗಳನ್ನು ತಿರಸ್ಕರಿಸಿ ಹೋರಾಟ, 1929ರಲ್ಲಿ ಮಡಿಕೇರಿ ಕೋಟೆಯಲ್ಲಿ ಬ್ರಿಟಿಷ್ ಧ್ವಜ ಕಿತ್ತೆಸೆದು ಸ್ವಾತಂತ್ರ್ಯ ಕಹಳೆ ಮೊಳಗಿಸಿದರು. 1942ರ ಕ್ವಿಟ್ ಇಂಡಿಯಾ ಚಳುವಳಿ ಕೊಡಗಿನ ಉಗ್ರ ರೂಪವನ್ನೇ ತಾಳಿತ್ತು. 98 ಮಂದಿ ಸ್ವತಂತ್ರ್ಯ ಹೋರಾಟಗಾರರು ದೀರ್ಘಕಾಲದ ಜೈಲು ಶಿಕ್ಷೆ ಅನುಭವಿಸಿದ್ದರು’ ಎಂದು ಹೇಳಿದರು.
ಇದೇ ಸಂದರ್ಭ ಜಯವೀರಮಾತೆ ಚರ್ಚ್ ಧರ್ಮಗುರು ಎಂ.ರಾಯಪ್ಪ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಕ.ಸಾ.ಪ.ತಾಲ್ಲೂಕು ಘಟಕದ ಅಧ್ಯಕ್ಷ ಎಸ್.ಡಿ.ವಿಜೇತ, ಪದವಿ ಕಾಲೇಜಿನ ಪ್ರಾಂಶುಪಾಲರಾದ ಹರೀಶ್, ಪ್ರೌಢಶಾಲಾ ಮುಖ್ಯ ಶಿಕ್ಷಕ ಹ್ಯಾರಿಮೋರಸ್, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಮಾರ್ಗರೆಟ್ ನೆವಿಲ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.