ADVERTISEMENT

ಕೊಡಗಿನ ಹಲಸಿಗೆ ಬೆಂಗಳೂರಿನಲ್ಲಿ ಬಹು ಬೇಡಿಕೆ

ಸುರಿಯುವ ಮಳೆಯಲ್ಲೂ ನಡೆದಿದೆ ಹಲಸಿನಕಾಯಿಯ ಭರ್ಜರಿ ವ್ಯಾಪಾರ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2024, 6:50 IST
Last Updated 2 ಆಗಸ್ಟ್ 2024, 6:50 IST
ಸುರಿಯುವ ಮಳೆಯಲ್ಲೂ ಶನಿವಾರಸಂತೆಯ ತೋಟಗಳಲ್ಲಿ ಹಲಸಿನಕಾಯಿಗಳನ್ನು ಖರೀದಿಸಿ ವಾಹನಗಳಿಗೆ ತುಂಬುತ್ತಿರುವುದು
ಸುರಿಯುವ ಮಳೆಯಲ್ಲೂ ಶನಿವಾರಸಂತೆಯ ತೋಟಗಳಲ್ಲಿ ಹಲಸಿನಕಾಯಿಗಳನ್ನು ಖರೀದಿಸಿ ವಾಹನಗಳಿಗೆ ತುಂಬುತ್ತಿರುವುದು   

ಶನಿವಾರಸಂತೆ: ಕಾಫಿ ತೋಟಗಳಲ್ಲಿ ಕೊಳೆತು ಬೀಳುತ್ತಿದ್ದ ಕೊಡಗಿನ ಹಲಸಿನ ಹಣ್ಣಿಗೆ ಬೆಂಗಳೂರು ನಗರದಲ್ಲಿ ಬಹು ಬೇಡಿಕೆ ವ್ಯಕ್ತವಾಗಿದೆ.

ಈ ಬಗೆಯ ಹಲಸಿನ ಬೇಡಿಕೆಯನ್ನು ಇಲ್ಲಿನ ರೈತರು ಹಿಂದೆ ಎಂದಿಗೂ ಕಂಡಿರಲಿಲ್ಲ. ಇದರಿಂದ ಇಂತಹ ಬಿರುಸಿನ ಮಳೆಯಲ್ಲೂ ಕೂಡ ಯುವಕರ ತಂಡ ಹಲಸಿನ ಮರವನ್ನು ಏರಿ ಹಲಸಿನ ಕಾಯಿ ಮತ್ತು ಹಣ್ಣುಗಳನ್ನು ಮರದಿಂದ ಇಳಿಸಿ ಬೆಂಗಳೂರಿನ ಮಾರುಕಟ್ಟೆಗೆ ಸರಬರಾಜು ಮಾಡುತ್ತಿದ್ದಾರೆ.

ರೈತರ ತೋಟದಲ್ಲಿರುವ ಪ್ರತಿ ಹಲಸಿನ ಕಾಯಿಗೆ ₹ 50 ರಿಂದ ₹ 80ರವರೆಗೆ ಗಾತ್ರಕ್ಕೆ ಅನುಸಾರವಾಗಿ ಹಣವನ್ನು ನೀಡಿ ಖರೀದಿಸುತ್ತಿದ್ದಾರೆ.

ADVERTISEMENT

ಇಲ್ಲಿನ ವ್ಯಾಪಾರಸ್ಥರು ಸ್ವತಃ ಅವರೇ ಹಲಸಿನ ಮರದಿಂದ ಕಾಯಿಗಳನ್ನು ಕೋಯ್ದು ತೆಗೆದುಕೊಂಡು ಹೋಗುತ್ತಿದ್ದಾರೆ. ಬೇಸಿಗೆ ಕಾಲದಲ್ಲಿ ಸರಿಯಾದ ಸಮಯಕ್ಕೆ ಬಾರದ ಮಳೆಯಿಂದಾಗಿ ಹಲಸಿನ ಕಾಯಿ ಗಾತ್ರವು ಜೂನ್ ತಿಂಗಳಿನಲ್ಲಿ ಉತ್ತಮವಾಗಿರಲಿಲ್ಲ. ಆದರೆ, ಇದೀಗ ಉತ್ತಮ ಮಳೆಯಾಗಿರುವುದರಿಂದ ಹಲಸಿನಕಾಯಿಗಳು ಉತ್ತಮ ಗಾತ್ರಕ್ಕೆ ಬೆಳೆದಿವೆ. ಇದರಿಂದ ಉತ್ತಮ ಬೆಲೆಯೂ ಸಿಗುತ್ತಿದೆ.

ಇನ್ನು ಕಾಡಂಚಿನ ತೋಟಗಳಲ್ಲಿ ಹಲಸಿನಕಾಯಿಗಳನ್ನು ಅರಸಿ ಬರುವ ಕಾಡಾನೆ ಮತ್ತು ಕಾಡುಕೋಣಗಳ ಹಾವಳಿಯನ್ನು ತಪ್ಪಿಸಲು ಹಲಸಿನಕಾಯಿ ಮಾರಾಟ ಮಾಡುವುದು ಸೂಕ್ತ ಎನ್ನುತ್ತಿದ್ದಾರೆ ರೈತರು.

ಈ ವೇಳೆಯಲ್ಲಿ ಹಲಸಿನ ಮರ ಏರಲು ದೊಡ್ಡ ಸಾಹಸವನ್ನೇ ಮಾಡಿದಂತಾಗುತ್ತದೆ. ಹಾಗೆಯೇ ಉತ್ತಮ ರೀತಿಯಲ್ಲಿ ಹಣ್ಣನ್ನು ಮರದಿಂದ ಕೋಯ್ದು ಅದನ್ನು ಜತನದಿಂದ ಬೆಂಗಳೂರಿನ ಹೊಸೂರು ಮಾರುಕಟ್ಟೆಗೆ ತೆಗೆದುಕೊಂಡು ಮಾರಾಟ ಮಾಡಲಾಗುತ್ತಿದೆ.

ಬೆಂಗಳೂರಿನ ಹೊಸೂರು ರಸ್ತೆಯಲ್ಲಿರುವ ಚಂದಾಪುರ ಮಾರುಕಟ್ಟೆಯಲ್ಲಿ ಪ್ರತಿ ಹಲಸಿನಕಾಯಿಗೆ ₹ 300 ರಿಂದ ₹ 500 ರೂಪಾಯಿಗಳವರೆಗೆ ಬೆಲೆ ಸಿಗುತ್ತಿದೆ ಎಂದು ವ್ಯಾಪಾರಸ್ಥರು ಹೇಳುತ್ತಾರೆ. ಈಗ ಹಲಸಿನಕಾಯಿಗೆ ಬೇಡಿಕೆ ಬಂದಿರುವುದರಿಂದ ರೈತರಿಗೆ ಅವರ ತೋಟಗಳಲ್ಲಿ ಹಲಸಿನ ಮರವನ್ನು ಬೆಳೆಸುವ ಆಸಕ್ತಿ ಬರುವ ಸಾಧ್ಯತೆ ಹೆಚ್ಚಿದೆ. ಹಲಸಿನ ಮರಗಳಿಗೆ ಕಾಳುಮೆಣಸು ಬಳ್ಳಿಯು ಕೂಡ ಉತ್ತಮವಾಗಿ ಹಬ್ಬುವ ಕಾರಣ ಉತ್ತಮವಾದ ಕಾಳುಮೆಣಸು ಫಸಲು ಕೂಡ ಹಲಸಿನ ಮರದಿಂದ ದೊರೆಯುತ್ತಿದೆ. ಇದನ್ನು ಅರಿತ ರೈತರು ಹಲಸಿನ ಮರಕ್ಕೆ ಬೆಳೆಸಲು ಹೆಚ್ಚು ಒತ್ತು ನೀಡುತ್ತಿದ್ದಾರೆ.

ಶನಿವಾರಸಂತೆಯ ಗೌಡಳ್ಳಿ, ಹೆಗ್ಗಳ, ನಂದಿಗುಂದ, ಮಾದ್ರೆ, ಕಿರುಬಿಳಹ, ಹಂಡ್ಲಿ, ಮೂದರವಳ್ಳಿ ಸೇರಿದಂತೆ ಈ ಭಾಗದ ಹಳ್ಳಿಗಳಲ್ಲಿ ಹಲಸಿನ ಕಾಯಿಯ ಮಾರಾಟ ನಡೆದಿದೆ.

ಕಳೆದ ವರ್ಷ ಇದೇ ಹಲಸಿನಕಾಯಿಗಳನ್ನು ರೈತರು ಉಚಿತವಾಗಿ ದಾವಣಗೆರೆ ಹಾಗೂ ಬೆಂಗಳೂರು ಕಡೆಯಿಂದ ಬಂದಂತಹ ಸರಕು ಸಾಗಣೆ ವಾಹನಗಳು ಹಿಂತಿರುಗಿ ಹೋಗುವಾಗ ಚಾಲಕರಿಗೆ ಉಚಿತವಾಗಿ ಹಲಸಿನಕಾಯಿಯನ್ನು ಕಡಿದುಕೊಂಡು ಹೋಗಲು ಹೇಳುತ್ತಿದ್ದರು. ಈ ಹಲಸಿನಕಾಯಿಗಳನ್ನು ಆ ಭಾಗಗಳಲ್ಲಿ ಒಂದಕ್ಕೆ ₹ 100ರಂತೆ ಮಾರಾಟ ಮಾಡಿ ಚಾಲಕರಿಗೂ ಆದಾಯವಾಗಿತ್ತು.

ನಗರ ಪ್ರದೇಶದಲ್ಲಿ ಕೈಗಾರಿಕೆಗಳು ಹಲಸಿನ ಕಾಯಿಗಳನ್ನು ಖರೀದಿಸಿ ಹಲಸಿನ ಚಿಪ್ಸ್, ಹಪ್ಪಳ, ಉಪ್ಪಿನಕಾಯಿ, ಸಾಂಬಾರು ಪದಾರ್ಥಗಳಿಗೆ ಬಳಸಲು ಹಲಸಿನಕಾಯಿಗಳನ್ನು ಖರೀದಿಸುತ್ತಿದ್ದಾರೆ. ಈ ವರ್ಷ ಮಳೆಯ ಹಿನ್ನೆಲೆಯಲ್ಲಿ ಈ ಸಮಯದಲ್ಲಿ ಬೇಡಿಕೆ ಬಂದಿರುವುದು ರೈತರಿಗೆ ಹರ್ಷ ತಂದಿರುವ ಜೊತೆಯಲ್ಲಿ ಆದಾಯವೂ ದೊರೆತಿದೆ.

ಕಾಫಿ ತೋಟಗಳಲ್ಲಿ ನಾವೇ ಹಲಸಿನಕಾಯಿಗಳನ್ನು ಕೋಯ್ದು ಬೆಂಗಳೂರಿನ ಹೊಸೂರು ಮಾರುಕಟ್ಟೆಗೆ ಸರಬರಾಜು ಮಾಡಿ ಮಾರಾಟ ಮಾಡುತ್ತಿದ್ದೇವೆ. ರೈತರಿಗೆ ಇದರಿಂದ ಆದಾಯವು ಕೂಡ ಹೆಚ್ಚಾಗಿದೆ.
–ತೀರ್ಥ ಪ್ರಸಾದ್ ವ್ಯಾಪಾರಗಾರ ಗೌಡಳ್ಳಿ ಶನಿವಾರಸಂತೆ
ಇಲ್ಲಿನ ಹಲಸಿನಕಾಯಿಗೆ ಬೇಡಿಕೆ ಬಂದಿರುವುದು ಹರ್ಷ ತಂದಿದೆ. ಇದೇ ರೀತಿ ಬೇಡಿಕೆ ಬಂದರೆ ರೈತರು ಹಲಸಿನ ಮರಗಳನ್ನು ಬೆಳೆಸಲು ಆಸಕ್ತಿ ಹೊಂದುತ್ತಾರೆ.
–ವಸಂತ್ ಕುಮಾರ್ ಕೃಷಿಕ ಕೊಡ್ಲಿಪೇಟೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.