ಕುಶಾಲನಗರ: ಯುಗಾದಿ ಹೊಸ ಸಂವತ್ಸರದ ಮೊದಲ ದಿನ. ರೈತರಿಗೆ ಅದು ಹೊಸ ವರ್ಷದ ಬೇಸಾಯದ ಆರಂಭದ ಶುಭ ದಿನ. ಉತ್ತರ ಕೊಡಗಿನ ಗಡಿ ಗ್ರಾಮಗಳಲ್ಲಿ ಯುಗಾದಿಯ ದಿನ ರೈತರು ಹೊನ್ನಾರು ಉತ್ಸವದ ಹೆಸರಿನಲ್ಲಿ ಬೇಸಾಯದ ಕೆಲಸ ಆರಂಭಿಸುತ್ತಾರೆ.
ಏ. 6ರಂದು (ಶನಿವಾರ) ಚಂದ್ರಮಾನ ಯುಗಾದಿಯಂದು ಹೊಸ ವರುಷದ ಪ್ರಯುಕ್ತ ಆಚರಿಸುವ ಜನಪದ ಸಂಸ್ಕೃತಿಯ ಪ್ರತೀಕವಾದ ‘ಹೊನ್ನಾರು ಉತ್ಸವ’ವು ರೈತರ ಪಾಲಿಗೆ ಸಡಗರದ ದಿನ. ಆದರೆ, ಈ ವರ್ಷ ವರುಣನ ಅವಕೃಪೆಗೆ ಒಳಗಾಗಿದ್ದು, ಇದುವರೆಗೂ ಮಳೆಯಾಗದ ಕಾರಣ ಬಿಸಿಲಿನ ಧಗೆಗೆ ಜಲಮೂಲಗಳು ಬತ್ತಿಹೋಗಿವೆ. ಗಿಡಮರಗಳು ಒಣಗಿ ನಿಂತಿವೆ.
ಇಂತಹ ಪರಿಸ್ಥಿತಿಯಲ್ಲಿ ರೈತಾಪಿ ಜನ ತಮ್ಮ ಆತಂಕವನ್ನು ದೂರ ಮಾಡು ಎಂದು ದೇವರಲ್ಲಿ ಪ್ರಾರ್ಥಿಸುವ ಮೂಲಕ ಹೊನ್ನಾರು ಉತ್ಸವವನ್ನು ಆಚರಿಸಲು ಸಿದ್ಧತಾ ಕಾರ್ಯದಲ್ಲಿ ತೊಡಗಿದ್ದಾರೆ.
ಕೊಡಗು, ಮೈಸೂರು ಹಾಗೂ ಹಾಸನ ಜಿಲ್ಲೆಗಳ ರೈತರು ಬೇಸಾಯ ಸಂಬಂಧಿ ಆಚರಣೆ, ಸಂಪ್ರದಾಯಗಳನ್ನು ಬಹಳ ಹಿಂದಿನಿಂದಲೂ ಆಚರಿಸಿಕೊಂಡು ಬರುತ್ತಿದ್ದಾರೆ. ಸೋಮವಾರಪೇಟೆ ತಾಲ್ಲೂಕಿನ ಬಯಲುಸೀಮೆ ಪ್ರದೇಶವಾದ ಹಾರಂಗಿ ಬಯಲು ಪ್ರದೇಶದ ಹೆಬ್ಬಾಲೆ, ಶಿರಂಗಾಲ, ತೊರೆನೂರು, ಹುಲುಸೆ, ಕೂಡಿಗೆ, ಭುವನಗಿರಿ, ಸೀಗೆಹೊಸೂರು, ನಲ್ಲೂರು, ಮಣಜೂರು ಮೊದಲಾದ ಹಳ್ಳಿಗಳಲ್ಲಿ ರೈತರು ತಮ್ಮ ಪೂರ್ವಿಕರ ಕಾಲದಿಂದಲೂ ಯುಗಾದಿ ಹಬ್ಬದಂದು ಹೊನ್ನಾರು ಉಳುಮೆಯ ಮೂಲಕ ವೈಶಿಷ್ಟಪೂರ್ಣವಾಗಿ ಆಚರಿಸಿಕೊಂಡು ಬರುತ್ತಿದ್ದಾರೆ.
ಜನಪದ ಸಂಸ್ಕೃತಿಯ ಪ್ರತೀಕವಾದ ಹೊನ್ನಾರು ಉತ್ಸವ (ಚಿನ್ನದ ಉಳುಮೆ)ವನ್ನು ಸಡಗರದಿಂದ ಆಚರಿಸಿಕೊಂಡು ಬರುತ್ತಿರುವ ರೈತಾಪಿ ಜನ ಹೊಸ ಪಂಚಾಂಗದ ಪ್ರಕಾರ ಹೊನ್ನಾರು ಉತ್ಸವವನ್ನು ಸಾಂಪ್ರದಾಯಿಕವಾಗಿ ಆಚರಿಸುವುದು ಹಿಂದಿನ ಕಾಲದಿಂದಲೂ ನಡೆಸಿಕೊಂಡು ಬರುತ್ತಿರುವ ಪದ್ಧತಿ ಎಂದು ಹೆಬ್ಬಾಲೆ ಬಸವೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಜಯಮಾನ್ ಬಸವರಾಜು ಹೇಳಿದ್ದಾರೆ.
ಯುಗಾದಿ ಹಬ್ಬದ ಅಂಗವಾಗಿ ರೈತರು ತಮ್ಮ ಮನೆಗಳು ಹಾಗೂ ಇಡೀ ಹಳ್ಳಿಗಳನ್ನು ತಳಿರು–ತೋರಣಗಳಿಂದ ಸಿಂಗರಿಸಿ ರಂಗೋಲಿಯ ಚಿತ್ತಾರ ಬಿಡಿಸಿ ಅಲಂಕಾರಗೊಳಿಸುವರು.
ಬೆಳಗಿನ ಜಾವ ತಮ್ಮ ಎತ್ತು ಹಾಗೂ ದನಕರುಗಳನ್ನು ನದಿಗೆ ಕರೆದೊಯ್ದು, ನೀರಿನಿಂದ ತೊಳೆದು ಅವುಗಳಿಗೆ ಗವುಸು ಹಾಗೂ ವಸ್ತ್ರಾಲಂಕಾರದಿಂದ ಸಿಂಗರಿಸಿ ವಿಶೇಷ ಪೂಜೆ ಸಲ್ಲಿಸುತ್ತಾರೆ ಎಂದು ರೈತ ಗಣೇಶ್ ತಿಳಿಸಿದ್ದಾರೆ.
ಹೊಸ ಪಂಚಾಂಗದ ಪ್ರಕಾರ ಯಾರ ಹೆಸರಿನಲ್ಲಿ ಹೊನ್ನಾರು ಹೂಡಲು ಬರುತ್ತದೆಯೋ ಆ ಹೆಸರಿನ ರೈತನೇ ನೇಗಿಲು ಮತ್ತು ಭೂಮಿಗೆ ಪೂಜೆ ಸಲ್ಲಿಸಿ ಹೊನ್ನಾರು (ಚಿನ್ನದ ಉಳುಮೆ) ಹೂಡಿ ವರ್ಷಧಾರೆ ಉಳುಮೆಗೆ ಆರಂಭಿಸುವುದು ಪದ್ಧತಿ ಆಗಿದೆ ಎನ್ನುತ್ತಾರೆ ಗ್ರಾಮದ ಹಿರಿಯರು.
ದೇವಸ್ಥಾನದಿಂದ ಮಂಗಳವಾದ್ಯ ಗಳೊಂದಿಗೆ ಹೊರಟ ಹೊನ್ನಾರು ಮೆರವಣಿಗೆ ಗ್ರಾಮದಲ್ಲಿ ಸಂಚರಿಸಿ ಉಳುಮೆ ಆರಂಭಿಸಿ ಈ ವರ್ಷ ಉತ್ತಮ ಮಳೆ ಬೆಳೆಯಾಗಲಿ ಎಂದು ಪ್ರಕೃತಿಯನ್ನು ಪೂಜಿಸಿ ಪ್ರಾರ್ಥನೆ ಸಲ್ಲಿಸುವರು.
ಗ್ರಾಮೀಣ ಪ್ರದೇಶದ ರೈತರು ಬಹಳ ಹಿಂದಿನಿಂದಲೂ ಸಾಂಪ್ರದಾಯಿಕವಾಗಿ ಆಚರಿಸಿಕೊಂಡು ಬರುತ್ತಿರುವ ಗ್ರಾಮೀಣ ಸಂಸ್ಕೃತಿಯ ಪ್ರತೀಕವಾದ ಹೊನ್ನಾರು ಉತ್ಸವವು ಇಂದಿನ ಆಧುನೀಕತೆ ಹಾಗೂ ಜಾಗತೀಕರಣದ ಪ್ರಭಾವದ ನಡುವೆಯೂ ಗ್ರಾಮೀಣ ಜನಪದ ಸೊಗಡಾಗಿಯೇ ಉಳಿದಿದೆ ಎನ್ನುತ್ತಾರೆ ಶಿರಂಗಾಲ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಸ್.ಎಸ್.ಚಂದ್ರಶೇಖರ್.
ಹೊನ್ನಾರು ಉಳುಮೆಗೆ ಚಾಲನೆ
ಹೊಸ ಉಡುಗೆ ಧರಿಸುವ ರೈತರು ತಮ್ಮ ಕೃಷಿ ಪರಿಕರಗಳಾದ ನೇಗಿಲು, ನೋಗ, ಎತ್ತಿನಗಾಡಿ ಇತ್ಯಾದಿ ಹತ್ಯಾರುಗಳನ್ನು ಒಪ್ಪವಾಗಿ ಜೋಡಿಸಿ ಪೂಜೆ ಸಲ್ಲಿಸಿ ಹೊನ್ನಾರು ಉಳುಮೆಗೆ ಸಿದ್ಧರಾಗುತ್ತಾರೆ. ಉತ್ಸವದ ಅಂಗವಾಗಿ ಸಿದ್ಧಪಡಿಸುವ ಹೋಳಿಗೆ, ಪಾಯಸ ಮತ್ತಿತರ ಭಕ್ಷ್ಯಗಳನ್ನು ಜಾನುವಾರುಗಳಿಗೆ ತಿನ್ನಿಸಿ ಸಂತಸ ಪಡುತ್ತಾರೆ. ಮನೆಮಂದಿಯೆಲ್ಲ ಬೇವು– ಬೆಲ್ಲ ತಿಂದು ಪರಸ್ಪರ ಹೊಸ ವರ್ಷದ ಶುಭಾಶಯ ವಿನಮಯ ಮಾಡಿಕೊಳ್ಳುತ್ತಾರೆ.
ಗ್ರಾಮದ ಎಲ್ಲ ರೈತರು ಹಾಗೂ ಗ್ರಾಮಸ್ಥರೆಲ್ಲ ಸೇರಿ ಗ್ರಾಮದ ದೇವಸ್ಥಾನದ ಬಳಿ ಸೇರಿಕೊಂಡು ಜಾನುವಾರುಗಳಿಗೆ ಸಾಮೂಹಿಕ ಪೂಜೆ ಸಲ್ಲಿಸುವ ಮೂಲಕ ಈಡುಗಾಯಿ ಹಾಕಿ ಹೊನ್ನಾರು ಉಳುಮೆಗೆ ಚಾಲನೆ ನೀಡುವರು.
*
ಆಧುನೀಕತೆ ಹಾಗೂ ಜಾಗತೀಕರಣದ ಪ್ರಭಾವದ ನಡುವೆಯೂ ‘ಹೊನ್ನಾರು ಉತ್ಸವ’ ಗ್ರಾಮೀಣ ಜನಪದ ಸೊಗಡಾಗಿಯೇ ಉಳಿದಿದೆ
-ಎಸ್.ಎಸ್. ಚಂದ್ರಶೇಖರ್, ಅಧ್ಯಕ್ಷ, ಕೃಷಿಪತ್ತಿನ ಸಹಕಾರ ಸಂಘ, ಶಿರಂಗಾಲ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.