ADVERTISEMENT

ವಿರಾಜಪೇಟೆ | 'ದೇಶ ರಕ್ಷಣೆ ಪ್ರತಿಯೊಬ್ಬರ ಕರ್ತವ್ಯ'

ಹೊಂಬೆಳಕು ಕಾರ್ಯಕ್ರಮದಲ್ಲಿ ನಾರಾಯಣ ಶಾಸ್ತ್ರಿ ಸಲಹೆ

​ಪ್ರಜಾವಾಣಿ ವಾರ್ತೆ
Published 7 ಮೇ 2024, 6:26 IST
Last Updated 7 ಮೇ 2024, 6:26 IST
ವಿರಾಜಪೇಟೆ ಸಮೀಪದ ಅರಮೇರಿ ಕಳಂಚೇರಿ ಮಠದದಲ್ಲಿ ಭಾನುವಾರ ನಡೆದ ಹೊಂಬೆಳಕು ಕಾರ್ಯಕ್ರಮಕ್ಕೆ ಪೀಠಾಧಿಪತಿ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಕೃಷಿಕ ಎಚ್.ಎಸ್.ತಿಮ್ಮಪ್ಪಯ್ಯ ಚಾಲನೆ ನೀಡಿದರು
ವಿರಾಜಪೇಟೆ ಸಮೀಪದ ಅರಮೇರಿ ಕಳಂಚೇರಿ ಮಠದದಲ್ಲಿ ಭಾನುವಾರ ನಡೆದ ಹೊಂಬೆಳಕು ಕಾರ್ಯಕ್ರಮಕ್ಕೆ ಪೀಠಾಧಿಪತಿ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಕೃಷಿಕ ಎಚ್.ಎಸ್.ತಿಮ್ಮಪ್ಪಯ್ಯ ಚಾಲನೆ ನೀಡಿದರು   

ವಿರಾಜಪೇಟೆ: ‘ಕೊಡಗಿನ ಯುವಕರು ಇನ್ನಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಸೇನೆಗೆ ಸೇರ್ಪಡೆಯಾಗುವ ಮೂಲಕ ದೇಶ ಸೇವೆಗೆ ಮುಂದಾಗಬೇಕು’ ಎಂದು ಸಿಆರ್‌ಪಿಎಫ್‌ ಸಬ್‌ಇನ್‌ಸ್ಪೆಕ್ಟರ್‌ ಸಿ.ಎಂ.ನಾರಾಯಣ ಶಾಸ್ತ್ರಿ ತಿಳಿಸಿದರು.

ಇಲ್ಲಿನ ಅರಮೇರಿ ಕಳಂಚೇರಿ ಮಠದ ಲಿಂಗರಾಜೇಂದ್ರ ಭವನದಲ್ಲಿ ಭಾನುವಾರ ಮಾಸಿಕ ತತ್ತ್ವ ಚಿಂತನಾಗೋಷ್ಠಿಯಾದ ಹೊಂಬೆಳಕು ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

‘ಈಚಿನ ದಿನಗಳಲ್ಲಿ ಇತರ ರಾಜ್ಯದ ಯುವಕರು ಹೆಚ್ಚಾಗಿ ಸೇನೆಗೆ ಸೇರುತ್ತಿದ್ದು, ಕೊಡಗಿನ ಯುವಕರ ಸಂಖ್ಯೆ ಸೇನೆಯಲ್ಲಿ ಇಳಿಮುಖ ವಾಗುತ್ತಿರುವುದು ಕಂಡು ಬರುತ್ತಿದೆ. ಹಿಂದಿನ ದಿನಗಳಲ್ಲಿ ಸೇನೆಯಲ್ಲಿ ಕೆಲಸ ಮಾಡುವುದು ಅತ್ಯಂತ ಕಷ್ಟಕರವಾಗಿತ್ತು. ಆದರೆ ಈಚೆಗೆ ಸೇನೆಗೆ ಸಾಕಷ್ಟು ಸೌಲಭ್ಯಗಳನ್ನು ಒದಗಿಸಲಾಗಿದೆ. ದೇಶ ರಕ್ಷಣೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯ’ ಎಂದರು.

ADVERTISEMENT

ಚೆಟ್ಟಳ್ಳಿ ಗ್ರಾಮದ ಕೃಷಿಕ ಎಚ್.ಎಸ್.ತಿಮ್ಮಪ್ಪಯ್ಯ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ‘ಹೊಂಬೆಳಕು ಕಾರ್ಯಕ್ರಮವು ನಮ್ಮೆಲ್ಲರ ಮನದಲ್ಲಿನ ಚಿಂತೆಗಳನ್ನು ದೂರ ಮಾಡುವ ಮೂಲಕ ಮನ ಪರಿವರ್ತನೆಗೆ ಕಾರಣವಾಗುತ್ತಿದೆ’ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಳಂಚೇರಿ ಮಠದ ಪೀಠಾಧಿಪತಿ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ‘ಜಗತ್ತಿಗೆ ಬೆಳಕು ನೀಡುವ ಉತ್ತಮ ಸಂಸ್ಕಾರ ಹಾಗೂ ದೇಶ ಪ್ರೇಮದ ಬಗ್ಗೆ ಪೋಷಕರು ಮಕ್ಕಳಲ್ಲಿ ಜಾಗೃತಿ ಮೂಡಿಸಬೇಕು. ಯುವಕರು ಸಾಧನೆಗಳನ್ನು ಮಾಡುವ ಮೂಲಕ ಉತ್ತಮ ಪ್ರಜೆಗಳಾಗಬೇಕು’ ಎಂದರು.

ಕಾರ್ಯಕ್ರಮದಲ್ಲಿ ಪಕ್ಷಿತಜ್ಞ ಡಾ.ಎಸ್.ವಿ.ನರಸಿಂಹನ್, ಭಾರತಿಯ ಸೇನೆ ನಿವೃತ್ತ ಮೇಜರ್ ಎಸ್.ಕೆ.ವೆಂಕಟಗಿರಿ, ಸ್ಟೇಟ್ ಬ್ಯಾಂಕ್ ಇಂಡಿಯಾದ ನಿವೃತ್ತ ಅಧಿಕಾರಿ ಕೆ.ಕೆ.ಶ್ಯಾಮ್, ಕೃಷಿಕರಾದ ಗಿರೀಶ್ ಕಿಗ್ಗಾಲು, ನಿವೃತ್ತ ಶಿಕ್ಷಕ ಲಕ್ಷ್ಮಿನಾರಾಯಣ ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.