ADVERTISEMENT

‘ದ್ರೋಣ’ನ ಸಾವಿಗೆ ಕಾರಣವಾಯಿತೇ ನಿರ್ಲಕ್ಷ್ಯ?

ಅರಣ್ಯಾಧಿಕಾರಿಗಳ ವಿರುದ್ಧ ವನ್ಯಪ್ರಾಣಿ ಪ್ರಿಯರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2019, 20:13 IST
Last Updated 27 ಏಪ್ರಿಲ್ 2019, 20:13 IST
   

ಗೋಣಿಕೊಪ್ಪಲು (ಕೊಡಗು ಜಿಲ್ಲೆ): ಮತ್ತಿಗೋಡು ಸಾಕಾನೆ ಶಿಬಿರದಲ್ಲಿ ಶುಕ್ರವಾರ ಮೃತಪಟ್ಟ ಮೈಸೂರು ದಸರಾದ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುತ್ತಿದ್ದ ಆನೆ ‘ದ್ರೋಣ’ನ ಸಾವಿಗೆ ಅರಣ್ಯಾಧಿಕಾರಿಗಳ ನಿರ್ಲಕ್ಷ್ಯವೇ ಕಾರಣವಾಯಿತೇ ಎಂಬ ದೂರುಗಳು ಈಗ ಕೇಳಿಬರುತ್ತಿವೆ.

’ದ್ರೋಣ’ ಆನೆಯು ಶುಕ್ರವಾರ ಮುಂಜಾನೆಯಿಂದಲೇ ಅನಾರೋಗ್ಯದಿಂದ ನಡುಗುತ್ತಿತ್ತು. ಅದನ್ನು ಗಮನಿಸಿದ್ದ ಮತ್ತಿಗೋಡು ಸಾಕಾನೆ ಶಿಬಿರದ ಮಾವುತರು ಹಾಗೂ ಕಾವಾಡಿಗಳು ಅರಣ್ಯಾಧಿಕಾರಿಗಳ ಗಮನಕ್ಕೆ ತಂದರೂ, ಈ ಬಗ್ಗೆ ಎಚ್ಚರ ವಹಿಸದ ಕಾರಣಕ್ಕೆ ಆನೆ ಸಾವನ್ನಪ್ಪಿದೆ ಎಂದು ವನ್ಯಪ್ರಾಣಿ ಪ್ರಿಯರು ದೂರುತ್ತಿದ್ದಾರೆ.

ಆನೆ ಆರೋಗ್ಯ ತಪ್ಪಿದಾಗಲೇ ಚಿಕಿತ್ಸೆ ನೀಡಿದ್ದರೆ ಆನೆ ಬದುಕುತ್ತಿತ್ತು ಎಂದು ಹೆಸರು ಹೇಳಲು ಇಚ್ಛಿಸದ ಶಿಬಿರದ ಸಿಬ್ಬಂದಿಯೊಬ್ಬರು ಹೇಳುತ್ತಾರೆ.

ADVERTISEMENT

ಆನೆ ನಡುಗುತ್ತಾ ಕುಸಿದು ಬೀಳುತ್ತಿರುವ ದೃಶ್ಯ, ಅದನ್ನು ಆರೈಕೆ ಮಾಡಲು ಮಾವುತರ ತಂಡ ಶ್ರಮಿಸುತ್ತಿರುವ ಮೊಬೈಲ್‌ ದೃಶ್ಯಾವಳಿಯೊಂದು ಹರಿದಾಡುತ್ತಿದ್ದು ಮನಕಲಕುತ್ತಿದೆ. ಆನೆ ಅಷ್ಟು ಒದ್ದಾಡುತ್ತಿದ್ದರೂ ಕಾಲಿಗೆ ಕಟ್ಟಿದ್ದ ಸರಪಳಿಯನ್ನು ಮಾತ್ರ ಯಾರೂ ಬಿಚ್ಚಿರಲಿಲ್ಲ. ಸರಪಳಿಯೊಂದಿಗೆ ಕೊನೆಯಲ್ಲಿ ಪ್ರಾಣಬಿಟ್ಟಿದೆ.

ಬೆಳಿಗ್ಗೆಯಿಂದಲೇ ಆನೆ ನಿಂತಲ್ಲಿಯೇ ಯಾತನೆ ಪಡುತ್ತಿತ್ತು. ಮಾವುತರು ಆನೆಗೆ ನೀರು ಎರಚಿ ಆರೈಕೆ ಮಾಡಿದ್ದರು. ಆದರೂ, ಆನೆ ನಿಂತುಕೊಳ್ಳಲಾಗದೇ ಬಿದ್ದುಬಿಟ್ಟಿತು. ಸ್ವಲ್ಪ ಸಮಯದ ಬಳಿಕ ಅಸುನೀಗಿತು. ಇದರಿಂದ ಅತ್ಯಂತ ದೃಢಕಾಯವಾಗಿದ್ದ ಕೇವಲ 37 ಹರೆಯದ ಆನೆ ಜೀವ ಕಳೆದುಕೊಳ್ಳಬೇಕಾಗಿ ಬಂತು. ಮೂರು ಬಾರಿ ಮೈಸೂರು ದಸರಾದಲ್ಲಿ ಪಾಲ್ಗೊಂಡು, ಅತ್ಯಂತ ಜಾಣ್ಮೆಯಿಂದ ತನ್ನ ಜವಾಬ್ದಾರಿ ನಿರ್ವಹಿಸಿದ್ದ ‘ದ್ರೋಣ’ ಇನ್ನಿಲ್ಲವಾದ ಎಂಬುದು ಶಿಬಿರದ ನಿವಾಸಿಗಳ ಅಳಲು.

ಇದಕ್ಕೆ ಪುಷ್ಟಿ ನೀಡುವಂತೆ ಎರಡು ತಿಂಗಳ ಹಿಂದೆ ಬಸ್ ಅಪಘಾತದಲ್ಲಿ ಜೀವ ಕಳೆದುಕೊಂಡಿದ್ದ ‘ರಂಗ’ ಎಂಬ ಆನೆಯೂ ಶಿಬಿರದ ಉಸ್ತುವಾರಿ ಹೊತ್ತಿರುವ ವಲಯ ಅರಣ್ಯಾಧಿಕಾರಿಗಳ ನಿರ್ಲಕ್ಷ್ಯದಿಂದಲೇ ನಡೆಯಿತು ಎಂದೂ ಹೇಳಲಾಗುತ್ತಿದೆ. ಅದಾದ ಬಳಿಕ ಹೆದ್ದಾರಿಯಲ್ಲಿ ಹಂಪ್ಸ್‌ ಅಳವಡಿಸಲಾಗಿದೆ.

ಆನೆಯನ್ನು ಮೇಯಲು ಬಿಟ್ಟಮೇಲೆ ಮರಳಿ ಸುರಕ್ಷಿತವಾಗಿ ಶಿಬಿರಕ್ಕೆ ಕರೆತರುವುದು ಮಾವುತರ ಮತ್ತು ಕಾವಾಡಿಗಳ ಜವಾಬ್ದಾರಿ. ಇದನ್ನು ಶಿಬಿರದ ಅಧಿಕಾರಿಗಳು ಮಾವುತರಿಗೆ ಕಟ್ಟುನಿಟ್ಟಾಗಿ ಸೂಚಿಸಬೇಕಾಗಿದೆ. ಆದರೆ, ಆನೆಗಳ ಬಗ್ಗೆ ತೀವ್ರ ನಿರ್ಲಕ್ಷ್ಯ ಧೋರಣೆ ತಾಳಿರುವ ಶಿಬಿರದ ಅರಣ್ಯಾಧಿಕಾರಿಗಳ ಬೇಜವಾಬ್ದಾರಿ ತನದಿಂದ ಮತ್ತಿಗೋಡು ಶಿಬಿರದ ಒಂದೊಂದೇ ಆನೆಗಳು ಜೀವ ಕಳೆದುಕೊಳ್ಳುತ್ತಿವೆ ಎಂಬ ಮಾತುಗಳು ಕೇಳಿಬರುತ್ತಿವೆ.

‘ದ್ರೋಣ’ ಆನೆ ಹೃದಯಾಘಾತದಿಂದ ಮೃತಪಟ್ಟಿದೆ ಎಂದು ವೈದ್ಯಾಧಿಕಾರಿ ನಾಗರಾಜ್ ಹಾಗೂ ಮುಜೀಬ್ ರೆಹಮಾನ್ ಹೇಳಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕ ಸತ್ಯಾಂಶ ತಿಳಿಯಲಿದೆ. ಆನೆಗೆ ಆರೋಗ್ಯ ಕೆಟ್ಟ ಕೇವಲ 15 ನಿಮಿಷದಲ್ಲಿಯೇ ವೈದ್ಯಾಧಿಕಾರಿಗಳನ್ನು ಕರೆಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಫಲಕಾರಿಯಾಗಲಿಲ್ಲ ಎಂದು ಶಿಬಿರದ ಆರ್‌ಎಫ್‌ಒ ಶಿವಾನಂದ್ ನಿಂಗಾಣಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಶಿಬಿರದಲ್ಲಿ ಆನೆಗಳ ಸಂಖ್ಯೆ 20ಕ್ಕೆ ಇಳಿಕೆ

ಎರಡು ವರ್ಷಗಳ ಹಿಂದೆ ಮತ್ತಿಗೋಡು ಶಿಬಿರದಲ್ಲಿ 43 ಆನೆಗಳಿದ್ದವು. ಅವುಗಳೆಲ್ಲ ವಿಶಾಲವಾದ ಶಿಬಿರದಲ್ಲಿ ಓಡಾಡಿಕೊಂಡು ನೋಡುಗರ ಮನ ಸೆಳೆಯುತ್ತಿದ್ದವು. ಈಗ ಕೇವಲ 20 ಆನೆಗಳಿವೆ. ಕೆಲವು ಆನೆಗಳು ಮೃತಪಟ್ಟಿದ್ದರೆ, ಮತ್ತೆ ಕೆಲವು ಆನೆಗಳನ್ನು ಹೊರ ರಾಜ್ಯಗಳಿಗೆ ಕಳುಹಿಸಿಕೊಡಲಾಗಿದೆ. ಇರುವ ಆನೆಗಳನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂಬ ದೂರು ವ್ಯಾಪಕವಾಗಿ ಕೇಳಿ ಬರುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.