ಸೋಮವಾರಪೇಟೆ: ತಾಲ್ಲೂಕಿನ ಮುಟ್ಲು ಗ್ರಾಮದಲ್ಲಿನ ಮುಟ್ಲು ಜಲಪಾತ ಬೆಳ್ನೊರೆಯೊಂದಿಗೆ ಧುಮ್ಮಿಕ್ಕಿ ಹರಿಯುವ ಮೂಲಕ ಪರಿಸರ ಪ್ರಿಯರಿಗೆ ರಸದೌತಣ ನೀಡುತ್ತಿದೆ.
ಪಶ್ಚಿಮಘಟದ ಬೊಟ್ಲಪ್ಪ ಈಶ್ವರ ದೇವಾಲಯದ ಬಳಿ ಹರಿಯುವ ನದಿ, ಮಳೆ ಪ್ರಾರಂಭವಾದೊಡನೆ ತನ್ನ ಹರಿವನ್ನು ಪ್ರಾರಂಭಿಸುತ್ತದೆ. ಹಾಗೆ ಹರಿಯುತ್ತಾ ಸಾಗಿ ಹಲವಾರು ಜಲಪಾತಗಳನ್ನು ಸೃಷ್ಟಿಸಿ, ನೋಡುಗರ ಮನ ಸೂರೆಗೊಳಿಸುತ್ತಿದೆ.
ಅದೇ ರೀತಿಯಲ್ಲಿ ಇಲ್ಲಿನ ಜಲಪಾತವ 35 ಅಡಿಗಳ ಮೇಲಿಂದ ವಿಶಾಲವಾದ ಬಂಡೆಯ ಮೇಲಿನಿಂದ ಧುಮ್ಮಿಕ್ಕುತ್ತದೆ. ಈ ಹೊಳೆಯು ಸುತ್ತಲೂ ಕಾಡು, ಕಾಫಿ ತೋಟ, ಭತ್ತದ ಗದ್ದೆಗಳಿಂದ ಆವೃತ್ತವಾಗಿದ್ದು, ಜಲಪಾತ ಸೊಬಗನ್ನು ಮತ್ತಷ್ಟು ಹೆಚ್ಚಿಸುತ್ತಿವೆ. ಇದಕ್ಕೂ ಮೇಲೆ ಬೃಹತ್ತಾದ ಸುಂದರ ಜಲಪಾತ ಇದ್ದು, ಮಳೆಗಾಲದಲ್ಲಿ ಅಲ್ಲಿಗೆ ತೆರಳಲು ಕಷ್ಟಸಾಧ್ಯವಾಗಿದೆ.
ತಾಲ್ಲೂಕಿನ ಗಡಿ ಭಾಗದಲ್ಲಿರುವ ಈ ಜಲಪಾತಕ್ಕೆ ಸೋಮವಾರಪೇಟೆ ಮೂಲಕ ಶಾಂತಳ್ಳಿ, ಗರ್ವಾಲೆ ಮೂಲಕ ತೆರಳಬಹುದಾಗಿದ್ದು, ಪಟ್ಟಣದಿಂದ ಸುಮಾರು 26 ಕಿಲೋ ಮೀಟರ್ ದೂರವಿದೆ.
ಮತ್ತೊಂದೆಡೆ ಮಡಿಕೇರಿಯಿಂದ ಮಾದಾಪುರಕ್ಕೆ ಬಂದು ಅಲ್ಲಿಂದ ಶಾಂತಳ್ಳಿ ಮಾರ್ಗವಾಗಿ ಗರ್ವಾಲೆಗೆ ತೆರಳಿ ಜಲಪಾತವನ್ನು ತಲುಪಬಹುದು. ಜಲಪಾತದ ಬಳಿಯಲ್ಲಿ ಯಾವುದೇ ವ್ಯವಸ್ಥೆಗಳಿರುವುದಿಲ್ಲ. ಇಲ್ಲಿಗೆ ತೆರಳುವ ಮಾರ್ಗ ಮದ್ಯೆ ಅಲ್ಲಲ್ಲಿ ಹೋಮ್ ಸ್ಟೇಗಳಿರುವುದರಿಂದ ಮೊದಲೇ ತಿಳಿಸಿ ಹೋದಲ್ಲಿ ಊಟದ ವ್ಯವಸ್ಥೆಯಾಗುತ್ತದೆ. ಗರ್ವಾಲೆ ಗ್ರಾಮದ ಕೊಡವ ಸಮಾಜದ ಬಳಿಯಲ್ಲಿ ಎಡಭಾಗಕ್ಕೆ ತಿರುಗಿ 4 ಕಿಲೋ ಮೀಟರ್ ನಡೆದು ಬೊಟ್ಲಪ್ಪ ಈಶ್ವರ ದೇವಾಲಯಕ್ಕೆ ತೆರಳುವ ಮಾರ್ಗದಲ್ಲಿ ಈ ಜಲಪಾತ ಸಿಗುತ್ತದೆ. ಇದು ಇಂದಿಗೂ ಸ್ಥಳಿಯರು ಮಾತ್ರ ವೀಕ್ಷಣೆ ಮಾಡುತ್ತಿದ್ದು, ಪ್ರಚಾರಕ್ಕೆ ಇನ್ನೂ ಬಂದಿಲ್ಲ.
ಮಳೆ ಹೆಚ್ಚಾದಂತೆ ಸ್ಥಳೀಯರೊಂದಿಗೆ ಕೆಲವು ಯುವಕರ ತಂಡ ಇಲ್ಲಿ ಆಗಮಿಸಿ ಜಲಪಾತದ ವೈಭವವನ್ನು ಸವಿಯುತ್ತಾರೆ. ಈ ಸಂದರ್ಭ ಹೊಳೆಯಲ್ಲಿ ಮೀನು ಹಿಡಿಯುವುದು, ಏಡಿ ಬೇಟೆ ಸೇರಿದಂತೆ ಮಧ್ಯಾಹ್ನದ ಊಟಕ್ಕೆ ವ್ಯವಸ್ಥೆ ಮಾಡಿಕೊಳ್ಳುತ್ತಾರೆ.
‘ಮುಟ್ಲು ಗ್ರಾಮದ ಈ ಜಲಪಾತಕ್ಕೆ ಸಂಬಂಧಿಸಿದ ಇಲಾಖೆಯವರು ಜನರಿಗೆ ಪರಿಚಯ ಮಾಡಿಕೊಡುವ ಕೆಲಸ ಮಾಡಬೇಕು. ಇಲ್ಲಿಗೆ ಬಂದು ಹೋಗಲು ಸಾರಿಗೆ ವ್ಯವಸ್ಥೆ ಮಾಡಿದಲ್ಲಿ ಜನರು ಬಂದು ಹೋಗಲು ಅನುಕೂಲವಾಗುವುದು. ಇಲ್ಲಿ ಯಾವುದೇ ಅನಾಹುತ ಸಂಭವಿಸಿದರೂ, ಹೇಳುವವರು ಮತ್ತು ಕೇಳುವವರು ಇರುವುದಿಲ್ಲ. ಮೂಲಸೌಕರ್ಯದೊಂದಿಗೆ ಜಲಪಾತದ ಪರಿಚಯ ಜನರಿಗಾಗಬೇಕು’ ಎಂದು ಸ್ಥಳೀಯರಾದ ಗಣಪತಿ ತಿಳಿಸಿದರು.
35 ಅಡಿಗಳಷ್ಟು ಎತ್ತರದಿಂದ ಧುಮ್ಮಿಕ್ಕುವ ಜಲಧಾರೆ ಹೊರಜಗತ್ತಿಗೆ ಅಷ್ಟಾಗಿ ತಿಳಿಯದ ಜಲಪಾತ ಮೂಲಸೌಕರ್ಯದ ಕೊರತೆಯಿಂದ ಬಳಲುತ್ತಿರುವ ತಾಣ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.