ಮಡಿಕೇರಿ: ಕೊಡಗು ಜಿಲ್ಲೆಗೆ ಪ್ರತ್ಯೇಕ ಲೋಕಸಭಾ ಸ್ಥಾನ ಹಾಗೂ 3 ವಿಧಾನಸಭಾ ಕ್ಷೇತ್ರಗಳ ಅಗತ್ಯವಿದ್ದು, ಇದಕ್ಕಾಗಿ ಪಕ್ಷದ ನಾಯಕರು ಈಗಿನಿಂದಲೇ ಹೋರಾಟ ಆರಂಭಿಸಬೇಕು ಎಂದು ಕೆಪಿಸಿಸಿ ಸತ್ಯಶೋಧನಾ ಸಮಿತಿ ಜಿಲ್ಲಾ ನಾಯಕರಿಗೆ ಸೂಚಿಸಿತು.
ಇಲ್ಲಿನ ಕ್ರಿಸ್ಟಲ್‌ಕೋರ್ಟ್ ಹೋಟೆಲ್‌ನಲ್ಲಿ ಭಾನುವಾರ ಕೆಪಿಸಿಸಿ ಉಪಾಧ್ಯಕ್ಷರಾದ ವಿ.ಆರ್.ಸುದರ್ಶನ್, ಸೂರಜ್ ಹೆಗ್ಡೆ ಹಾಗೂ ವೆಂಕಟರಮಣಯ್ಯ ಅವರನ್ನು ಒಳಗೊಂಡ ಸತ್ಯಶೋಧನಾ ಸಮಿತಿಯು ಪಕ್ಷದ ಜಿಲ್ಲಾಮಟ್ಟದ ಎಲ್ಲ ನಾಯಕರು, ಇಬ್ಬರು ಶಾಸಕರೊಂದಿಗೆ ಸಭೆ ನಡೆಸಿ, ಹಲವು ಸೂಚನೆಗಳನ್ನು ನೀಡಿತು.
ಕ್ಷೇತ್ರ ಪುನರ್‌ವಿಂಗಡನೆಯ ಚಟುವಟಿಕೆಗಳು ಆರಂಭವಾಗುವುದು ಸನ್ನಿಹಿತವಾಗುತ್ತಿದೆ. ಈಗಿನಿಂದಲೇ ಪಕ್ಷದ ನಾಯಕರು ಕೊಡಗಿಗೆ ಪ್ರತ್ಯೇಕ ಲೋಕಸಭಾ ಕ್ಷೇತ್ರಕ್ಕಾಗಿ ಹಾಗೂ ಹಿಂದೆ ಇದ್ದಂತೆ 3 ವಿಧಾನಸಭಾ ಕ್ಷೇತ್ರಕ್ಕಾಗಿ ಒತ್ತಡ ಹೇರುವ ಪ್ರಕ್ರಿಯೆಯನ್ನು ಆರಂಭಿಸಬೇಕು ಎಂದು ಸುದರ್ಶನ್ ಹೇಳಿದರು.
ಕೊಡಗು ವಿಶಿಷ್ಟವಾದ ಸಂಸ್ಕೃತಿ, ಪರಂಪರೆಯನ್ನು ಹೊಂದಿದೆ. ಇಲ್ಲಿಗೆ ಪ್ರತ್ಯೇಕ ಲೋಕಸಭಾ ಸ್ಥಾನ ಬೇಕೇ ಬೇಕು. ಈಗಾಗಲೇ ಈಶಾನ್ಯ ರಾಜ್ಯಗಳಲ್ಲಿ ಕೆಲವೊಂದು ಕಡೆ ಜನಸಂಖ್ಯೆ ಕಡಿಮೆ ಇದ್ದರೂ ಲೋಕಸಭಾ ಸ್ಥಾನ ನೀಡಲಾಗಿದೆ. ಅದರಂತೆ, ಬೆಟ್ಟಗುಡ್ಡ ಪ್ರದೇಶವಾದ ಹಾಗೂ ವಿಶಿಷ್ಟವಾದ ಶ್ರೀಮಂತ ಸಂಸ್ಕೃತಿಯನ್ನು ಹೊಂದಿರುವ ಕೊಡಗಿಗೆ ಪ್ರತ್ಯೇಕ ಲೋಕಸಭಾ ಸ್ಥಾನ ನೀಡಬೇಕು ಎಂದು ಅವರು ಪ್ರತಿಪಾದಿಸಿದರು.
ಪ್ರತಿ ಮುಖಂಡರೊಂದಿಗೆ ಪ್ರತ್ಯೇಕ ಮಾತುಕತೆ: ಕೊಡಗು ಜಿಲ್ಲೆಯ ಎರಡೂ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ನ ಶಾಸಕರೇ ಇದ್ದಾಗ್ಯೂ ಲೋಕಸಭಾ ಚುನಾವಣೆಯಲ್ಲಿ ಸೋತಿದ್ದು ಹೇಗೆ ಎಂಬ ವಿಚಾರ ಕುರಿತು ಸತ್ಯಶೋಧನಾ ಸಮಿತಿಯು ಜಿಲ್ಲೆಯ ಪ್ರತಿ ಮುಖಂಡರೊಂದಿಗೆ ಪ್ರತ್ಯೇಕವಾಗಿ ಮಾತನಾಡಿ ಅವರ ಹೇಳಿಕೆಗಳನ್ನು ದಾಖಲಿಸಿಕೊಂಡಿತು.
ಕೊಡಗು ಜಿಲ್ಲೆಯಲ್ಲೇ ಹೆಚ್ಚಿನ ಲೀಡ್ ಬಿಜೆಪಿಗೆ ಸಿಕ್ಕಿರುವುದಕ್ಕೂ ಸಮಿತಿ ಅಸಮಾಧಾನ ವ್ಯಕ್ತಪಡಿಸಿತು. ಯಾವ ಹಂತದಲ್ಲಿ ಏನು ಸಮಸ್ಯೆಯಾಗಿದೆ, ಪಕ್ಷ ವಿರೋಧಿ ಚಟುವಟಿಕೆಗಳನ್ನು ನಡೆಸಲಾಗಿದೆಯೇ, ಪಕ್ಷದ ಮುಖಂಡರು ಕೆಲಸ ಮಾಡದೇ ತಟಸ್ಥರಾಗಿ ಉಳಿದರೇ, ಹೀಗೆ ಹಲವು ಪ್ರಶ್ನೆಗಳತ್ತ ಸಮಿತಿ ಬೊಟ್ಟು ಮಾಡಿತು. ಸುಮಾರು 150 ಮಂದಿ ಪ್ರತ್ಯೇಕವಾಗಿ ತಮ್ಮ ಹೇಳಿಕೆಗಳನ್ನು ನೀಡಿದರು. ಬರೋಬರಿ 6 ಗಂಟೆಗಳಿಗೂ ಹೆಚ್ಚು ಕಾಲ ಸಮಿತಿ ಗಂಭೀರವಾಗಿ ಈ ವಿಚಾರವನ್ನೇ ಎಲ್ಲರೊಂದಿಗೆ ಪ್ರತ್ಯೇಕವಾಗಿ ಚರ್ಚಿಸಿದ್ದು ವಿಶೇಷವಾಗಿತ್ತು.
ಶಾಸಕರಾದ ಎ.ಎಸ್.ಪೊನ್ನಣ್ಣ, ಡಾ.ಮಂತರ್‌ಗೌಡ, ಕೆಪಿಸಿಸಿ ಕಾರ್ಯದರ್ಶಿಗಳಾದ ಎಂ.ಲಕ್ಷ್ಮಣ, ಕೆ.ಪಿ.ಚಂದ್ರಕಲಾ, ಜಿಲ್ಲಾ ಘಟಕದ ಅಧ್ಯಕ್ಷ ಧರ್ಮಜ ಉತ್ತಪ್ಪ, ಮುಖಂಡರಾದ ಟಿ.ಪಿ.ರಮೇಶ್, ಚಂದ್ರಮೌಳಿ, ವೀಣಾ ಅಚ್ಚಯ್ಯ, ಮುನಿರ್ ಅಹಮ್ಮದ್, ಮಂಜುನಾಥ್ ಸೇರಿದಂತೆ ಪಕ್ಷದ ಎಲ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಮುಂಚೂಣಿ ಘಟಕದ ಅಧ್ಯಕ್ಷರು, ಪ್ರಮುಖ ನಾಯಕರು ಸಭೆಯಲ್ಲಿದ್ದರು.
ಪ್ರತಿ 5 ಜಿಲ್ಲೆಗೆ 1 ಸಮಿತಿ; ಇಂದು ಮೈಸೂರಿನಲ್ಲಿ ಸಭೆ: ಲೋಕಸಭಾ ಚುನಾವಣೆಯಲ್ಲಿ ಹಿನ್ನಡೆಯಾಗಿರುವ ಕುರಿತು ಕೆಪಿಸಿಸಿ ಪ್ರತಿ 5 ಜಿಲ್ಲೆಗಳಿಗೆ ಒಂದೊಂದು ಸತ್ಯಶೋಧನಾ ಸಮಿತಿಯನ್ನು ರಚಿಸಿದೆ. ಅದರಂತೆ, ವಿ.ಆರ್.ಸುದರ್ಶನ, ಸೂರಜ್ ಹೆಗ್ಡೆ ಹಾಗೂ ವೆಂಕಟರಮಣಯ್ಯ ಅವರ ನೇತೃತ್ವದ ಸಮಿತಿಗೆ ಕೊಡಗು, ಮೈಸೂರು, ಹಾಸನ, ಮಂಡ್ಯ ಹಾಗೂ ಚಾಮರಾಜನಗರ ಜಿಲ್ಲೆಗಳನ್ನು ನೀಡಲಾಗಿದೆ. ಆ. 26ರಂದು ಮೈಸೂರಿನಲ್ಲಿ ಸಮಿತಿಯು ಸಭೆ ನಡೆಸಲಿದೆ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.