ADVERTISEMENT

ಮಡಿಕೇರಿ: ಸಮೃದ್ಧ ಮಳೆಗೆ ಮೈದುಂಬಿದ ನದಿಗಳು

ನಿಲ್ಲದ ಗಾಳಿಯ ಆರ್ಭಟಕ್ಕೆ ಜನತೆ ತಲ್ಲಣ, ತಗ್ಗು ಪ್ರದೇಶಗಳಲ್ಲಿರುವವರಲ್ಲಿ ಆತಂಕ

​ಪ್ರಜಾವಾಣಿ ವಾರ್ತೆ
Published 16 ಜುಲೈ 2024, 4:58 IST
Last Updated 16 ಜುಲೈ 2024, 4:58 IST
ಸುಂಟಿಕೊಪ್ಪ ಸಮೀಪದ ಕಾನ್ ಬೈಲ್‌ ಗ್ರಾಮದಲ್ಲಿ ರಾತ್ರಿ ಬೀಸಿದ ಗಾಳಿಗೆ ನೆಲಕ್ಕುರುದ ವಿದ್ಯುತ್ ಕಂಬ ದುರಸ್ತಿ ಪಡಿಸುತ್ತಿರುವ ಸಿಬ್ಬಂದಿ
ಸುಂಟಿಕೊಪ್ಪ ಸಮೀಪದ ಕಾನ್ ಬೈಲ್‌ ಗ್ರಾಮದಲ್ಲಿ ರಾತ್ರಿ ಬೀಸಿದ ಗಾಳಿಗೆ ನೆಲಕ್ಕುರುದ ವಿದ್ಯುತ್ ಕಂಬ ದುರಸ್ತಿ ಪಡಿಸುತ್ತಿರುವ ಸಿಬ್ಬಂದಿ   

ಮಡಿಕೇರಿ: ಒಂದೆಡೆ ನಿಲ್ಲದ ಗಾಳಿಯ ಆರ್ಭಟಕ್ಕೆ ಜಿಲ್ಲೆಯ ಹಲವು ಭಾಗಗಳ ಜನತೆ ತಲ್ಲಣಿಸಿದ್ದರೆ, ಮತ್ತೊಂದೆಡೆ ಬೀಳುತ್ತಿರುವ ಸಮೃದ್ಧ ಮಳೆಗೆ ನದಿ, ತೊರೆಗಳು ಮೈದುಂಬಿ ಹರಿಯುತ್ತಿವೆ. ಭೋರ್ಗರೆಯುತ್ತಿರುವ ಜಲಪಾತಗಳು, ತುಂಬಿರುವ ಕೆರೆ, ಕಟ್ಟೆಗಳು, ತುಂಬಿ ಹರಿಯುತ್ತಿರುವ ನದಿ, ತೊರೆಗಳು ಪ್ರಕೃತಿಗೆ ಜಲವೈಭವವನ್ನು ತಂದಿವೆ. ಈ ದೃಶ್ಯಗಳು ಪ್ರಕೃತಿ ಪ್ರಿಯರ ಮನಸೂರೆಗೊಳ್ಳುತ್ತಿದ್ದರೆ, ತಗ್ಗುಪ್ರದೇಶದಲ್ಲಿ, ಮರಗಿಡಗಳ ಮಧ್ಯೆ, ನದಿ ದಂಡೆಯಲ್ಲಿ, ಅಪಾಯಕಾರಿ ಸ್ಥಳಗಳಲ್ಲಿ ವಾಸಿಸುತ್ತಿರುವ ಆತಂಕವನ್ನು ಹೆಚ್ಚಿಸುತ್ತಿದೆ.

ಪ‍ರಿಸ್ಥಿತಿಯ ಗಾಂಭೀರ್ಯತೆ ಅರಿತ ಅಧಿಕಾರಿಗಳು ಜಿಲ್ಲೆಯ ಎಲ್ಲ ಅಂಗನವಾಡಿಗಳು, ಪ್ರಾಥಮಿಕ, ಪ್ರೌಢಶಾಲೆಗಳು ಹಾಗೂ ಪಿಯು ಕಾಲೇಜುಗಳಿಗೆ ಸತತ 2ನೇ ದಿನವಾದ ಜುಲೈ 16ರಂದು ರಜೆ ಘೋಷಿಸಿದ್ದಾರೆ.

ಮಡಿಕೇರಿ ನಗರದಲ್ಲಿ ಭಾನುವಾರ ತಡರಾತ್ರಿ ಬೀಸಿದ ಅತಿಜೋರು ಗಾಳಿ ಹಲವರನ್ನು ನಿದ್ದೆಯಿಂದ ಎಚ್ಚರಿಸಿತು. ಮನೆಯ ಮುಂದಿನ ಹೂಕುಂಡಗಳು, ಇರಿಸಿದ್ದ ಪರಿಕರಗಳೆಲ್ಲವೂ ಗಾಳಿಗೆ ಚಿಲ್ಲಾಪಿಲ್ಲಿಯಾದವು. ಹಲವು ಮನೆಗಳ ಶೀಟ್‌ಗಳು ತರಗಲೆಗಳಂತೆ ಹಾರಿ ಹೋಗಿ, ಜನರಲ್ಲಿ ಆತಂಕವನ್ನು ದುಪ್ಪಟ್ಟುಗೊಳಿಸಿತು.

ADVERTISEMENT

ರಾತ್ರಿ ಇಡೀ ಬೀಸಿದ ಗಾಳಿ, ಬಿದ್ದ ಮಳೆಯು ಮತ್ತೆ ಸೋಮವಾರ ಇಡೀ ದಿನ ತನ್ನ ಅಬ್ಬರ ತೋರಿತು. ಸೂರ್ಯನ ಮುಖವನ್ನೇ ಕಾಣದಂತೆ ಮಾಡಿದ ದಟ್ಟ ಮೋಡಗಳು, ಆವರಿಸಿದ ಮಂಜು ಶೀತಮಯ ವಾತಾವರಣ ಸೃಷ್ಟಿಸಿ, ಜನರನ್ನು ನಡುಗಿಸಿತು. ಇಂತಹ ಪ್ರಕೃತಿಯ ವೈಚಿತ್ರ್ಯಗಳ ಮಧ್ಯೆಯೇ ಜನರು ತಮ್ಮ ತಮ್ಮ ದೈನಂದಿನ ಕೆಲಸಗಳಲ್ಲಿ ತೊಡಗಿದರು.

ತರಗಲೆಗಳಂತೆ ಹಾರಿ ಹೋದ ಶೀಟ್‌ಗಳು

ಸುಂಟಿಕೊಪ್ಪ ಸಮೀಪದ ಕೊಡಗರಹಳ್ಳಿ ಗ್ರಾಮ ಪಂಚಾಯಿತಿಗೆ ಸೇರಿದ ಅಂದಗೋವೆ- ಕಲ್ಲುಕೋರೆ ನಿವಾಸಿ ಕೆ.ಎಂ.ಅಬ್ಬಾಸ್ ಅವರ ಮನೆಯ 7 ಸೀಟುಗಳು ಗಾಳಿಯ ರಭಸಕ್ಕೆ ಹಾರಿ ಹೋಗಿವೆ. ಮನೆಯ ಒಳಭಾಗಕ್ಕೆ ನೀರು ಹರಿದು ಸಾಮಗ್ರಿಗಳು ಹಾನಿಯಾಗಿವೆ. ಸ್ಥಳಕ್ಕೆ ಗ್ರಾಮ ಪಂಚಾಯತಿ ಪಿಡಿಒ, ಸದಸ್ಯರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಶನಿವಾರಸಂತೆ ಸಮೀಪದ ಗೌಡಳ್ಳಿ ಗ್ರಾಮ ಪಂಚಾಯಿತಿಗೆ ಸೇರಿದ ಕೊರ್ಲಳ್ಳಿ ಗ್ರಾಮದಲ್ಲಿ ಆರ್.ಕೆ.ಲಲಿತಾ ಎಂಬುವವರಿಗೆ ಸೇರಿದ ಮನೆಯ ಮೇಲೆ ವಿದ್ಯುತ್ ಕಂಬ ಬಿದ್ದಿದೆ.

ಧರೆಗುರುಳಿದ ಮರಗಳು

ಮಡಿಕೇರಿ ಸಮೀಪದ ಕುಂಡಾಮೇಸ್ತ್ರಿಗೆ ಹೋಗುವ ದಾರಿಯಲ್ಲಿ ಮರಗಳು, ವಿದ್ಯುತ್ ಕಂಬಗಳು ಉರುಳಿದವು. ನಾಪೋಕ್ಲು ಹೋಬಳಿ ವ್ಯಾಪ್ತಿಯ ಮರಂದೋಡ ಗ್ರಾಮದ ಮಾಚಯ್ಯ ಎಂಬುವವರ ವಾಸದ ಮನೆಯ ಮೇಲೆ ಮರ ಬಿದ್ದು, ಶೀಟುಗಳು ಹಾನಿಯಾದವು. ಏಳನೇ ಹೊಸಕೋಟೆಯಿಂದ ಕಾವೇರಿ ಎಸ್ಟೇಟ್ ಮೂಲಕ ಮಂಜಿಕೆರೆಗೆ ತೆರಳುವ ಚೀಕಂಡ ಸನ್ನಿ ಅವರ ಮನೆಯ ಬಳಿ ರಸ್ತೆಗೆ ಅಡ್ಡಲಾಗಿ ಮರ ಬಿದ್ದಿದ್ದು, ವಿದ್ಯುತ್ ಕಂಬಗಳೂ ಧರೆಗುರುಳಿದವು.

ಸುಂಟಿಕೊಪ್ಪದಿಂದ ಮಂಜಿಕೆರೆ ತೆರಳುವ ಮಾರ್ಗ ಮಧ್ಯೆ ಜಯಣ್ಣ ಎಂಬುವವರ ಅಂಗಡಿ ಬಳಿ ಮರ ಬಿದ್ದ ಪರಿಣಾಮ ಜನ ಸಂಚಾರಕ್ಕೆ ಅಡ್ಡಿಯಾಗಿತ್ತು. ಏಳನೇ ಹೊಸಕೋಟೆಯಿಂದ ತೊಂಡೂರಿಗೆ ತೆರಳುವ ಮಾರ್ಗ ಮಧ್ಯ ಬೃಹತ್ ಗಾತ್ರದ ಮರವೊಂದು ಬಿದ್ದು ವಿದ್ಯುತ್ ತಂತಿಗಳು ನೆಲಕ್ಕೆ ಬಿದ್ದು‌ ವಿದ್ಯುತ್ ವ್ಯತ್ಯಯ ಉಂಟಾಗಿತ್ತು.

ವಿರಾಜಪೇಟೆ: ಉತ್ತಮ ಮಳೆ

ವಿರಾಜಪೇಟೆ: ಪಟ್ಟಣ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾನುವಾರ ರಾತ್ರಿಯಿಡಿ ಸುರಿದ ಮಳೆಯು ಸೋಮವಾರ ಬೆಳಿಗ್ಗೆ ಕೊಂಚ ಇಳಿಮುಖ ಕಂಡಿತಾದರೂ, ಮಧ್ಯಾಹ್ನದ ನಂತರ ಮತ್ತೆ ಕೊಂಚ ಬಿರುಸುಗೊಂಡಿತು. ಸಮೀಪದ ಕದನೂರು ಹೊಳೆ ಹಾಗೂ ಭೇತ್ರಿಯಲ್ಲಿ ಕಾವೇರಿ ಹೊಳೆಯ ನೀರಿನ ಮಟ್ಟದಲ್ಲು ಗಣನೀಯ ಏರಿಕೆ ಕಂಡು ಬಂದಿದೆ.

ಸಮೀಪದ ಗ್ರಾಮಗಳಾದ ಆರ್ಜಿ, ಬೇಟೋಳಿ, ಹೆಗ್ಗಳ, ರಾಮನಗರ, ಬಿಟ್ಟಂಗಾಲ, ಅಮ್ಮತ್ತಿ, ಒಂಟಿಯಂಗಡಿ, ಬಿಳುಗುಂದ, ಚೆಂಬೆಬೆಳ್ಳೂರು, ದೇವಣಗೇರಿ, ಕಾಕೋಟುಪರಂಬು ಗ್ರಾಮಗಳ ವ್ಯಾಪ್ತಿಯಲ್ಲು ಉತ್ತಮ ಮಳೆಯಾಗಿದೆ.

ಸುಂಟಿಕೊಪ್ಪಸಮೀಪದ‌ ಏಳನೇ‌ ಹೊಸಕೋಟೆಯಿಂದ ಮಂಜಿಕೆರೆಗೆ ತೆರಳುವ ಚೀಕಂಡ ಸನ್ನಿ ಅವರ ಮನೆಯ ಬಳಿ ರಸ್ತೆಗೆ ಅಡ್ಡಲಾಗಿ ಮರ ಬಿದ್ದಿರುವುದು
ಸುಂಟಿಕೊಪ್ಪ ಸಮೀಪದ ಕೊಡಗರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂದಗೋವೆ ಕಲ್ಲುಕೋರೆ ನಿವಾಸಿ ಕೆ.ಎಂ ಅಬ್ಬಾಸ್ ಎಂಬುವರ ಮನೆಯ ಸೀಟುಗಳು ಗಾಳಿಯ ರಭಸಕ್ಕೆ ಹಾರಿ ಹೋಗಿ ನಷ್ಟ ಉಂಟಾಗಿದೆ
ನಾಪೋಕ್ಲು ಸಮೀಪದ ಮರಂದೋಡ ಗ್ರಾಮದ ಮಾಚಯ್ಯ ಎಂಬವರ ವಾಸದ ಮನೆಯ ಮೇಲೆ ಮರ ಬಿದ್ದ ಪರಿಣಾಮ ಶೀಟುಗಳು ಹಾನಿಯಾಗಿವೆ
ಕುಶಾಲನಗರ ಸಮೀಪದ ಕಣಿವೆ ರಾಮಲಿಂಗೇಶ್ವರ ದೇವಾಲಯ ಸನ್ನಿಧಿಯ ತೂಗುಸೇತುವೆ ಬಳಿ ಹಾರಂಗಿ ಹಾಗೂ ಕಾವೇರಿ ನದಿಗಳು ಸಂಗಮಗೊಂಡು ಹರಿಯುತ್ತಿದ್ದು ನದಿಯ ನೀರಿನ ಮಟ್ಟದಲ್ಲಿ ಗಣನೀಯವಾಗಿ ಏರಿಕೆ ಕಂಡುಬಂದಿದೆ
ಸಿದ್ದಾಪುರ ಸಮೀಪದ ಚೆನ್ನಯ್ಯನಕೋಟೆ ಗ್ರಾಮದ ನಿವಾಸಿ ಹೆಚ್.ಕೆ ಉದಯ ಎಂಬವರ ಮನೆಯು ಗಾಳಿ ಮಳೆಗೆ ಸಿಲುಕಿ ಮನೆಯ ಗೋಡೆಗಳು ಸಂಪೂರ್ಣವಾಗಿ ಕುಸಿದಿದೆ
ಮಡಿಕೇರಿ ನಗರಸಭೆಯ ಮುಂಭಾಗ ಭಾರಿ ಮಳೆಯಿಂದ ಕೆರೆಯಂತಾಗಿದ್ದ ದೃಶ್ಯ ಸೋಮವಾರ ಕಂಡು ಬಂತು ಪ್ರಜಾವಾಣಿ ಚಿತ್ರ/ರಂಗಸ್ವಾಮಿ

ಬಿರುಸಿನಿಂದ ಸುರಿಯುತ್ತಿರುವ ಮಳೆ ಆತಂಕದಲ್ಲಿ ತಗ್ಗುಪ್ರದೇಶಗಳ ಜನತೆ ಇಂದು ಶಾಲಾ– ಕಾಲೇಜುಗಳಿಗೆ ರಜೆ ಘೋಷಣೆ

ಮನೆಗಳಿಗೆ ವ್ಯಾಪ‍ಕ ಹಾನಿ

ಸುಂಟಿಕೊಪ್ಪ: ಹೋಬಳಿ ವ್ಯಾಪ್ತಿಯಲ್ಲಿ ಕಳೆದೆರಡು ದಿನಗಳಿಂದ ಧಾರಾಕಾರವಾದ ಮಳೆ ಸುರಿಯುತ್ತಿದ್ದು ಹಲವು ಮರಗಳು ಮತ್ತು ವಿದ್ಯುತ್ ಕಂಬಗಳು ಧರೆಗುರುಳಿವೆ. ಸಮೀಪದ ಏಳನೇ ಹೊಸಕೋಟೆಯ ಪ್ರಾಥಮಿಕ ಶಾಲೆಯ ಮುಂಭಾಗದಲ್ಲಿರುವ ಬಾಬು ಆಚಾರಿ ಅವರ ಮನೆಯ ಮೇಲೆ‌ ಸೋಮವಾರ ಬೆಳಿಗ್ಗೆ ಮರವೊಂದು ವಾಲಿದ್ದು ಕೆಲ ಹೆಂಚುಗಳು ಮಾತ್ರ ಕೊಂಬೆ ತಗಲಿ ಹಾನಿಯಾಗಿದೆ. ಒಂದು ವೇಳೆ ಸಂಪೂರ್ಣ ಮರ ಮನೆಯ ಮೇಲೆ ಬಿದ್ದಿದ್ದರೆ ಅಪಾರ ಪ್ರಮಾಣದ ನಷ್ಟ ಉಂಟಾಗುತ್ತಿತ್ತು. ಗಾಳಿ ಮತ್ತು ಮಳೆಗೆ ಹೋಬಳಿ ವ್ಯಾಪ್ತಿಯಲ್ಲಿ ಸುಮಾರು 12 ಕಂಬಗಳು ನೆಲಕಚ್ಚಿವೆ. ಶಾಂತಿಗೇರಿ ಏಳನೇ ಹೊಸಕೋಟೆಕಾನ್ ಬೈಲ್ ಕಂಬಿಬಾಣೆ ಭಾಗದಲ್ಲಿ ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ ಎಂದು ಸೆಸ್ಕ್ ಕಿರಿಯ ಎಂಜಿನಿಯರ್ ಲವ ಮಾಹಿತಿ ನೀಡಿದರು. ಮಳೆ ಗಾಳಿಯ ನಡುವೆಯು ಸುಂಟಿಕೊಪ್ಪ ಸೆಸ್ಕ್ ಸಿಬ್ಬಂದಿಗಳು ವಿದ್ಯುತ್ ಕಂಬಗಳು ಮತ್ತು ತಂತಿಗಳನ್ನು ಸರಿ ಪಡಿಸುವ ಕಾರ್ಯದಲ್ಲಿ ತೊಡಗಿದರು.

ಸಿದ್ದಾಪುರ; ಗೋಡೆ ಕುಸಿತ

ಸಿದ್ದಾಪುರ: ಇಲ್ಲಿನ ಚೆನ್ನಯ್ಯನಕೋಟೆ ಗ್ರಾಮದ ನಿವಾಸಿ ಎಚ್.ಕೆ ಉದಯ ಎಂಬವರ ಮನೆಯು ಗಾಳಿ ಮಳೆಗೆ ಸಿಲುಕಿ ಮನೆಯ ಗೋಡೆಗಳು ಸಂಪೂರ್ಣವಾಗಿ ಕುಸಿದಿದ್ದು ಈ ಸಂದರ್ಭದಲ್ಲಿ ಮನೆಯ ಒಳಗಿದ್ದ ಮನೆ ಮಂದಿ ಪ್ರಾಣಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಅಮತ್ತಿ ಹೋಬಳಿ ಕಂದಾಯ ಪರಿವೀಕ್ಷಕ ಅನಿಲ್ ಕುಮಾರ್ ಹಾಗೂ ಗ್ರಾಮ ಆಡಳಿತ ಅಧಿಕಾರಿ ಪ್ರವೀಣ್ ಗ್ರಾಮ ಪಂಚಾಯಿತಿ ಸದಸ್ಯೆ ಶೀಲಾ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮನೆಯ ಒಳಗಿದ್ದ ಸಾಮಗ್ರಿಗಳು ಹಾನಿಯಾಗಿದೆ.

ಕುಶಾಲನಗರ: ಹಲವೆಡೆ ಹಾನಿ

ಕುಶಾಲನಗರ: ಸಮೀಪದ ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾದಪಟ್ಟಣದ ಬಸವರಾಜು ಎಂಬುವವರ ಮನೆಯ ಗೋಡೆ ಕುಸಿದು ತೀವ್ರ ಹಾನಿಯಾಗಿದೆ. ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಬಸವನತ್ತೂರು ಗ್ರಾಮದ ಲಕ್ಷ್ಮಿಮಣಿ ಎಂಬುವವರ ಮನೆಗೆ ಹಾನಿ ಉಂಟಾಗಿದೆ. ಜೊತೆಗೆ ವಿವಿಧ ಗ್ರಾಮಗಳಲ್ಲಿ 3 ಮನೆಗಳಿಗೆ ಸಣ್ಣಪುಟ್ಟ ಹಾನಿ ಸಂಭವಿಸಿದೆ ಎಂದು ಕಂದಾಯ ನಿರೀಕ್ಷಕ ಸಂತೋಷ್ ತಿಳಿಸಿದ್ದಾರೆ. ಕುಶಾಲನಗರ ಪಟ್ಟಣದ ನೀರಾವರಿ ಇಲಾಖೆಯ ತಡೆಗೋಡೆ ಮುರಿದು ಬಿದ್ದಿದೆ. ತಾಲ್ಲೂಕು ತಹಶೀಲ್ದಾರ್ ಕಿರಣ್ ಗೌರಯ್ಯ ಮತ್ತು ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ರುಕ್ಮಿಣಿ ಹಾಗೂ ಅಭಿವೃದ್ಧಿ ಅಧಿಕಾರಿ ಸುಮೇಶ್ ಹಾಗೂ ಸದಸ್ಯರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದರು. ಮಳೆಹಾನಿ ಪರಿಹಾರ ಯೋಜನೆಯಡಿ ಸೂಕ್ತ ಪರಿಹಾರ ಒದಗಿಸಿಕೊಡಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು. ಈ ವೇಳೆ ಕುಶಾಲನಗರ ನಾಡುಕಚೇರಿಯ ಕಂದಾಯ ನಿರೀಕ್ಷಕ ಸಂತೋಷ್ ಗ್ರಾಮ ಲೆಕ್ಕಾಧಿಕಾರಿ ಗೌತಮ್ ಸಚಿನ್ ಗುಡ್ಡೆಹೊಸೂರು ಪಂಚಾಯತಿ ಸದಸ್ಯರಾದ ಶಿವಪ್ಪ ಪ್ರವೀಣ್ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.