ADVERTISEMENT

ಬತ್ತಿವೆ ಕೊಡಗಿನ ನೀರಿನ ಸೆಲೆಗಳು!

ಮಡಿಕೇರಿಯಲ್ಲಿ ನೀರಿನ ಅಭಾವ ಸೃಷ್ಟಿಯಾದದ್ದಾದರೂ ಏಕೆ?

ಕೆ.ಎಸ್.ಗಿರೀಶ್
Published 12 ಏಪ್ರಿಲ್ 2023, 10:58 IST
Last Updated 12 ಏಪ್ರಿಲ್ 2023, 10:58 IST
ಮಡಿಕೇರಿಯ ಪಂಪಿನಕೆರೆಯಲ್ಲಿ ನೀರು ತಳ ಸೇರಿರುವುದರಿಂದ ನೀರನ್ನು ಪಂಪ್ ಮಾಡಲು ಸಾಧ್ಯವಾಗುತ್ತಿಲ್ಲ.
ಮಡಿಕೇರಿಯ ಪಂಪಿನಕೆರೆಯಲ್ಲಿ ನೀರು ತಳ ಸೇರಿರುವುದರಿಂದ ನೀರನ್ನು ಪಂಪ್ ಮಾಡಲು ಸಾಧ್ಯವಾಗುತ್ತಿಲ್ಲ.   

ಮಡಿಕೇರಿ: ಮಂಜಿನ ನಗರಿಯಲ್ಲಿ ಸದಾ ಉಕ್ಕುತ್ತಿದ್ದ ನೈಸರ್ಗಿಕ ನೀರಿನ ಸೆಲೆಗಳೆಲ್ಲ ಬಿರು ಬೇಸಿಗೆಯ ತಾಪಕ್ಕೆ ಬತ್ತಿ ಹೋಗಿದ್ದು ಕುಡಿಯುವ ನೀರಿನ ಸಮಸ್ಯೆ ಬಿಗಡಾಯಿಸಿದೆ.

ಸಹಜ ನೀರಿನ ಸೆಲೆಯನ್ನೇ ಸಂಗ್ರಹಿಸಿ ಬಡಾವಣೆಗಳಿಗೆ ಸರಬರಾಜು ಮಾಡಬೇಕಿದ್ದು, ನಗರಕ್ಕೆ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತಿದೆ.

ಮುಖ್ಯವಾಗಿ, ಇಲ್ಲಿನ ಪಂಪಿನಕೆರೆ, ಎಲೆಪೇಟೆ, ಜಯನಗರ, ರೋಷನಾರ್‌ನಗರ, ಪುಟಾಣಿ ನಗರ ಸೇರಿದಂತೆ ಹಲವು ಬಡಾವಣೆಗಳಿಗೆ ಸಹಜ ನೀರಿನ ಬುಗ್ಗೆಗಳಿಂದಲೇ ಪೂರೈಸಲಾಗುತ್ತಿತ್ತು. ಸಾಮಾನ್ಯವಾಗಿ ಬೇಸಿಗೆಗೂ ಮುನ್ನವೇ ಮಡಿಕೇರಿಯಲ್ಲಿ ಮಳೆ ಸುರಿಯುತ್ತಿತ್ತು. ಬೇಸಿಗೆಯಲ್ಲೂ ಆಗಾಗ್ಗೆ ಬಿರುಸಿನಿಂದ ಸುರಿಯುತ್ತಿದ್ದ ಮಳೆಯಿಂದ ಇಂತಹ ನೀರಿನ ಸೆಲೆಗಳಲ್ಲಿನ ನೀರಿನ ಪ್ರಮಾಣ ಕಡಿಮೆಯಾದರೂ ಬತ್ತುತ್ತಿರಲಿಲ್ಲ. ಆದರೆ, ಈ ಬಾರಿ ಈ ವರ್ಷದಲ್ಲಿ ಒಂದು ಹನಿಯೂ ಮಳೆ ಸುರಿಯದೇ ಇರುವುದರಿಂದ ನೀರಿನ ಸೆಲೆಗಳೆಲ್ಲವೂ ಬತ್ತಿವೆ. ಈಗ ಈ ಸೆಲೆಗಳಿಂದ ನೀರು ಪೂರೈಸುತ್ತಿದ್ದ ಬಡಾವಣೆಗಳಿಗೆ ಕೂಟುಹೊಳೆಯಿಂದಲೇ ನೀರು ಪೂರೈಸಲಾಗುತ್ತಿದೆ.

ADVERTISEMENT

ಚೇನ್‌ಗೇಟ್, ರಾಜೇಂದ್ರ ದೇವಸ್ಥಾನ, ಮಂಗಳೂರು ರಸ್ತೆ, ಸಂಪಿಗೆಕಟ್ಟೆ, ದಾಸವಾಳ ಸೇರಿ ನಗರದ 37 ಕೊಳವೆಬಾವಿಗಳ ಪೈಕಿ 10 ಬತ್ತಿವೆ. ಉಳಿದ ಕೊಳವೆ ಬಾವಿಗಳಲ್ಲಿ ನೀರು ಕಡಿಮೆಯಾಗಿದೆ. ಹೀಗಾಗಿ ನೀರು ಪೂರೈಸುತ್ತಿದ್ದ ಕಡೆಯೂ ಕೊರತೆ ಎದುರಾಗಿದೆ.

ಕೂಟುಹೊಳೆಯಲ್ಲಿ ದಿನದಿಂದ ದಿನಕ್ಕೆ ನೀರಿನ ಹರಿವು ಕಡಿಮೆಯಾಗುತ್ತಿದೆ. ನಿತ್ಯವೂ ಹೊಳೆ ಒಣಗುತ್ತಿದೆ. ಹೊಂಡಗಳಲ್ಲಿ
ಇರುವ ನೀರೂ ಬತ್ತುತ್ತಿದೆ. 15 ದಿನಗಳಲ್ಲಿ ಮಳೆ ಸುರಿಯದಿದ್ದರೆ ಸಮಸ್ಯೆ ಬಿಗಡಾಯಿಸಲಿದೆ.

ಈಗಲೇ ಕೆಲವೆಡೆ ಟ್ಯಾಂಕಿಗೆ ನೀರು ಹತ್ತುತ್ತಿಲ್ಲ. ದಿನ ಬಿಟ್ಟು ನೀರು ಪೂರೈಕೆ ನಡೆದಿದೆ. ಸ್ವಂತವಾಗಿಯೇ ತೆಗೆಸಿದ್ದ ಕೊಳವೆಬಾವಿಗಳಲ್ಲಿ ನೀರು ಕಡಿಮೆಯಾಗಿದೆ. ತೆರೆದ ಬಾವಿಗಳು ಬತ್ತಿವೆ. ಅಗತ್ಯವಿರುವಷ್ಟು ನೀರು ಸಿಗುತ್ತಿಲ್ಲ. ಸದ್ಯ ಮಳೆ ಸುರಿಯಲಿ ಎಂಬುದು ಎಲ್ಲರ ಬಯಕೆ.

ವಾರ್ಡ್ ಸಂಖ್ಯೆ 4ರ ನಗರಸಭಾ ಸದಸ್ಯ ಮನ್ಸೂರ್ ಪ್ರತಿಕ್ರಿಯಿಸಿ, ‘10 ವರ್ಷಗಳಲ್ಲಿ ಇಂಥ ಸಮಸ್ಯೆ ಸೃಷ್ಟಿಯಾಗಿರಲಿಲ್ಲ. ರಾಜರಾಜೇಶ್ವರಿ ನಗರದ ಕೊಳವೆಬಾವಿ, ಉಕ್ಕುಡದ 2 ಬಾವಿಗಳಲ್ಲಿ ನೀರು ಕಡಿಮೆಯಾಗಿದೆ. ಪಂಪಿನಕೆರೆ ಬರಿದಾಗಿದೆ. ಮಳೆ ಬರದಿದ್ದರೆ ಸಮಸ್ಯೆ ಬಿಗಡಾಯಿಸಲಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.