ADVERTISEMENT

ಸುವರ್ಣದ ಸಂಭ್ರಮದಲ್ಲಿದೆ ಕೋದಂಡರಾಮ ಸಮಿತಿ

ಹಲವು ಮಂಪಟಗಳನ್ನು ಮುನ್ನಡೆಸಲಿವೆ ಕಲಾತಂಡಗಳು

ಕೆ.ಎಸ್.ಗಿರೀಶ್
Published 11 ಅಕ್ಟೋಬರ್ 2024, 5:15 IST
Last Updated 11 ಅಕ್ಟೋಬರ್ 2024, 5:15 IST
ಕಳೆದ ವರ್ಷ ಕೋದಂಡರಾಮ ದೇಗುಲವು ಮಣಿಕಂಠನಿಂದ ಮಹಿಷಿಯ ಶಾಪ ವಿಮೋಚನೆಯ ಪ್ರಸಂಗವನ್ನು ಮಂಟಪದಲ್ಲಿ ಅದ್ದೂರಿಯಾಗಿ ಪ್ರದರ್ಶಿಸಿ ಗಮನ ಸೆಳೆದಿತ್ತು.
ಕಳೆದ ವರ್ಷ ಕೋದಂಡರಾಮ ದೇಗುಲವು ಮಣಿಕಂಠನಿಂದ ಮಹಿಷಿಯ ಶಾಪ ವಿಮೋಚನೆಯ ಪ್ರಸಂಗವನ್ನು ಮಂಟಪದಲ್ಲಿ ಅದ್ದೂರಿಯಾಗಿ ಪ್ರದರ್ಶಿಸಿ ಗಮನ ಸೆಳೆದಿತ್ತು.   

ಮಡಿಕೇರಿ: ತನ್ನ 50ನೇ ವರ್ಷದ ಮಂಟಪೋತ್ಸವದಲ್ಲಿ ಭಾಗಿಯಾಗುತ್ತಿರುವ ನಗರದ ಕೋದಂಡರಾಮ ದೇವಾಲಯ ಸಮಿತಿಯು ಈ ಬಾರಿ ‘ರಾಮನಿಂದ ರಾವಣನ ಸಂಹಾರ’ದ ಕಥಾವಸ್ತುವನ್ನು ಮಂಟಪದಲ್ಲಿ ಪ್ರದರ್ಶಿಸಲಿದೆ. ಇದಕ್ಕಾಗಿ ಭರದ ಸಿದ್ಧತೆಯಲ್ಲಿ ತೊಡಗಿದೆ.

‘ಒಟ್ಟು ₹ 25 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಮಂಟಪದಲ್ಲಿ 22 ಕಲಾಕೃತಿಗಳನ್ನು ಬಳಕೆ ಮಾಡಲಾಗುತ್ತಿದೆ. ದಿಂಡಿಗಲ್‌ನಿಂದ ಲೈಟಿಂಗ್ ಬೋರ್ಡ್‌ ತರಿಸಲಾಗುತ್ತಿದೆ. ಮೈಸೂರಿನ ಉದ್ಬೂರಿನ ಮಹದೇವಪ್ಪ ಅಂಡ್ ಸನ್ಸ್‌ನವರು ಹಾಗೂ ಸಮಿತಿ ಸದಸ್ಯರು ಕಲಾಕೃತಿಗಳನ್ನು ರಚಿಸುತ್ತಿದ್ದಾರೆ. ಕಳೆದ ಬಾರಿ ಮೊದಲ ಬಹುಮಾನ ಪಡೆದಿದ್ದು, ಈ ಬಾರಿಯೂ ಮೊದಲ ಬಹುಮಾನಕ್ಕೆ ಪೈಪೋಟಿ ನೀಡುತ್ತಿದ್ದೇವೆ’ ಎಂದು ಸಮಿತಿಯ ಅಧ್ಯಕ್ಷ ಎಸ್.ಕುಶಾಲ್ ‘ಪ್ರಜಾವಾಣಿ’ಗೆ ತಿಳಿಸಿದರು.

ಈ ಬಾರಿ ಮೆರವಣಿಗೆಗೆ ಮಂಗಳೂರಿನ ವಾದ್ಯಗೋಷ್ಠಿಯನ್ನು ಕರೆಸುತ್ತಿರುವುದು ವಿಶೇಷ ಎನಿಸಿದೆ. ಇದು ಮಂಟಪವನ್ನು ಮುನ್ನಡೆಸಲಿದೆ.

ADVERTISEMENT

ಸುವರ್ಣ ಮಹೋತ್ಸವದ ಅಂಗವಾಗಿ ಸಮಿತಿಯು ದೇವಾಲಯದಲ್ಲಿರುವ ಎಲ್ಲ ಮೂರ್ತಿಗಳಿಗೆ ಬೆಳ್ಳಿಯ ಹೊದಿಕೆಯನ್ನು ಹೊದಿಸಿದೆ. ಸೀತಾತಾಯಿಯ ಮೂರ್ತಿಗೆ ಚಿನ್ನದ ಹಾರ ಸಮರ್ಪಿಸಿದೆ. ಮಾತ್ರವಲ್ಲ, 50ನೇ ವರ್ಷದಲ್ಲಿ ಮಂಟಪೋತ್ಸವ ಸಮಿತಿ ಹಾದು ಬಂದ ವಿಷಯ ಕುರಿತು ಸ್ಮರಣ ಸಂಚಿಕೆಯನ್ನೂ ಹೊರತಂದಿದೆ.

ಕಳೆದ ವರ್ಷ ಕೋಟೆ ಮಾರಿಯಮ್ಮ ದೇಗುಲವು ತನ್ನ ಮಂಟಪದಲ್ಲಿ ಪಂಚಮುಖಿ ಆಂಜನೇಯನಿಂದ ಅಹಿರಾವಣ ಮಹಿರಾವಣರ ವಧೆ ಪ್ರಸಂಗವನ್ನು ಅದ್ದೂರಿಯಾಗಿ ಪ್ರದರ್ಶಿಸಿತ್ತು
ಕಳೆದ ವರ್ಷ ಕೋಟೆ ಮಹಾಗಣಪತಿ ದೇಗುಲವು ತನ್ನ ಮಂಪಟದಲ್ಲಿ ಮಹಾ ಗಣಪತಿಯಿಂದ ಶತಮಾಹಿಷೆಯ ಸಂಹಾರ ಕಥಾನಕವನ್ನು ವಿಜೃಂಭಣೆಯಿಂದ ಪ್ರಸ್ತುತಪಡಿಸಿತು
ಕಳೆದ ವರ್ಷ  ಕರವಲೆ ಭಗವತಿ ಮಹಿಷ ಮರ್ದಿಣಿ ದೇಗುಲ ಮಂಟಪವು ಉಗ್ರ ನರಸಿಂಹನಿಂದ ಹಿರಣ್ಯಕಶ್ಯಪನ ಸಂಹಾರ ಕಥಾಪ್ರಸಂಗವನ್ನು ರೋಚಕವಾಗಿ ಪ್ರಸ್ತುತಪಡಿಸಿತ್ತು

Highlights - ಕರವಲೆ ಭಗವತಿ ಮಂಟಪದಲ್ಲಿ ವಾಲಗ ಕೋದಂಡರಾಮ ಮಂಟಪದಲ್ಲಿ ಮಂಗಳೂರಿನ ವಾದ್ಯಗೋಷ್ಠಿ

ಕೋಟೆ ಮಾರಿಯಮ್ಮ ಮಂಟಪದಲ್ಲಿ ಕೃಷ್ಣನ ಬಾಲಲೀಲೆ

ದಸರಾ ದಶಮಂಟಪಗಳ ಶೋಭಾಯಾತ್ರೆಯಲ್ಲಿ 48 ವರ್ಷಗಳನ್ನು ಪೂರೈಸಿ 49ನೇ ವರ್ಷಕ್ಕೆ ಕಾಲಿಡುತ್ತಿರುವ ಇಲ್ಲಿನ ಕೋಟೆ ಮಾರಿಯಮ್ಮ ದೇವಾಲಯ ದಸರಾ ಮಂಟಪ ಸಮಿತಿಯು ಈ ಬಾರಿ ತನ್ನ ಮಂಟಪದಲ್ಲಿ ಕೃಷ್ಣನ ಬಾಲಲೀಲೆ ಮತ್ತು ಕಂಸವಧೆ ಕಥಾಪ‍್ರಸಂಗವನ್ನು ಪ್ರದರ್ಶಿಸಲಿದೆ. ಇದಕ್ಕಾಗಿ ಭರದ ಸಿದ್ಧತೆಗಳು ನಡೆದಿವೆ. ಪೂಕೋಡ್‌ನ ವಾದ್ಯಗೋಷ್ಠಿಯನ್ನು ಕರೆಸುತ್ತಿರುವುದು ಈ ಬಾರಿ ವಿಶೇಷ ಎನಿಸಿದೆ. ‘₹ 25 ಲಕ್ಷ ವೆಚ್ಚದಲ್ಲಿ ಮಂಟಪವನ್ನು ಭವ್ಯವಾಗಿ ನಿರ್ಮಿಸಲಾಗುತ್ತಿದ್ದು 19 ಕಲಾಕೃತಿಗಳು ಮಂಟಪದಲ್ಲಿರಲಿವೆ. ಈ ಕಲಾಕೃತಿಗಳನ್ನು ಸಮಿತಿಯ ಆಲ್ವಿನ್ ರಾಕಿ ಮತ್ತು ಸದಸ್ಯರು ರಚಿಸುತ್ತಿದ್ದಾರೆ. ಕಲಾಕೃತಿಗಳಿಗೆ ಸಮಿತಿಯ ಪ್ರಸಾದ್ ಆಚಾರ್ಯ ಮನೋಜ್‌ ತಂಡ ಚಲನವಲನ ನೀಡುತ್ತಿದೆ. ದಿಂಡಿಗಲ್‌ನ ಕಳೆಯಗಂ ಲೈಟಿಂಗ್ ಬೋರ್ಡ್ ಅಳವಡಿಸುತ್ತಿದೆ. ಬೆಂಗಳೂರಿನ ಆಲ್ಫಾ ಈವೆಂಟ್ ತಂಡ ವಿಶೇಷ ಎಫೆಕ್ಟ್‌ ನೀಡುತ್ತಿದೆ’ ಎಂದು ಸಮಿತಿಯ ಅಧ್ಯಕ್ಷ ಕೂಪದಿರ ಅಯ್ಯಪ್ಪ ‘ಪ್ರಜಾವಾಣಿ’ಗ ತಿಳಿಸಿದರು. ಕಳೆದ ಬಾರಿ ದ್ವಿತೀಯ ಸ್ಥಾನ ಪಡೆದಿದ್ದ ಈ ಮಂಟಪ ಸಮಿತಿಯು ಈ ಬಾರಿ ಮೊದಲ ಬಹುಮಾನಕ್ಕಾಗಿ ಬಿರುಸಿನ ಪ್ರಯತ್ನ ನಡೆಸುತ್ತಿದೆ ಎಂದು ಅವರು ಹೇಳಿದರು.

ಕೋಟೆ ಮಹಾಗಣಪತಿ; ದೈತ್ಯರ ಸಂಹಾರ ಪ್ರಸ್ತುತಿ

ದಸರಾ ದಶಮಂಟಪೋತ್ಸವದಲ್ಲಿ ತನ್ನ 48ನೇ ವರ್ಷಾಚರಣೆಯಲ್ಲಿರುವ ಇಲ್ಲಿನ ಕೋಟೆ ಮಹಾಗಣಪತಿ ದೇವಾಲಯ ದಸರಾ ಮಂಟಪ ಸಮಿತಿಯು ಈ ಬಾರಿ ‘ಮಹಾಗಣಪ‍ತಿಯಿಂದ ಅಜಗರ– ಶಲಭಾಸುರ ದೈತ್ಯರ ಸಂಹಾರ’ ಕಥಾಪ್ರಸಂಗವನ್ನು ತನ್ನ ಮಂಟಪದಲ್ಲಿ ಪ್ರದರ್ಶಿಸಲಿದೆ. ‘ಒಟ್ಟು ₹ 27.75 ಲಕ್ಷ ವೆಚ್ಚದಲ್ಲಿ ನಿರ್ಮಿಸುತ್ತಿರುವ ಭವ್ಯ ಮಂಟಪದಲ್ಲಿ 21 ಕಲಾಕೃತಿಗಳು ಇರಲಿವೆ. ಮುಂಬೈ ತಂಡವೊಂದು ಮಂಟಪಕ್ಕೆ ವಿಶೇಷ ಎಫೆಕ್ಟ್ ನೀಡಲಿದೆ. ಕಳೆದ ಬಾರಿ 2ನೇ ಬಹುಮಾನ ಪಡೆದಿದ್ದ ಸಮಿತಿಯು ಈ ಬಾರಿ ಮೊದಲ ಬಹುಮಾನಕ್ಕೆ ಬಿರುಸಿನ ಪೈಪೋಟಿ ನೀಡುತ್ತಿದೆ’ ಎಂದು ಸಮಿತಿ ಅಧ್ಯಕ್ಷ ಬಿ.ಎ.ಅರವಿಂದ್ ‘ಪ್ರಜಾವಾಣಿ’ಗೆ ತಿಳಿಸಿದರು.

ಕರವಲೆ ಭಗವತಿ ಮಂಟಪದಲ್ಲಿ ಕೊಲ್ಲೂರು ಮೂಕಾಂಬಿಕೆ ಮಹಿಮೆ

ದಸರಾ ದಶಮಂಟಪಗಳ ಶೋಭಾಯಾತ್ರೆಯಲ್ಲಿ ಸತತ 28 ವರ್ಷಗಳ ಕಾಲ ಭಾಗವಹಿಸಿ 29ನೇ ವರ್ಷಕ್ಕೆ ‍ಪಾದಾರ್ಪಣೆ ಮಾಡುತ್ತಿರುವ ನಗರದ ಕರವಲೆ ಭಗವತಿ ಮಹಿಷ ಮರ್ಧಿನಿ ದೇವಾಲಯ ದಸರಾ ಮಂಟಪ ಸಮಿತಿಯು ಈ ಬಾರಿ ಕೊಲ್ಲೂರು ಮೂಕಾಂಬಿಕೆ ಮಹಿಮೆ ಕಥಾಪ್ರಸಂಗವನ್ನು ಪ್ರದರ್ಶನಕ್ಕೆ ಆಯ್ಕೆ ಮಾಡಿಕೊಂಡಿದೆ. ‘ಒಟ್ಟು ₹ 22 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಭವ್ಯ ಮಂಟಪದಲ್ಲಿ 20 ಕಲಾಕೃತಿಗಳು ಸೂಜಿಗಲ್ಲಿನಂತೆ ಸೆಳೆಯಲಿವೆ. 2 ಟ್ರಾಕ್ಟರ್‌ಗಳನ್ನು ಬಳಕೆ ಮಾಡಲಾಗುತ್ತಿದ್ದು ಬೆಂಗಳೂರಿನ ತಂಡವೊಂದು ಫೈರ್‌ ಎಫೆಕ್ಟ್ ಮಾಡಲಿದೆ. ಕಳೆದ ವರ್ಷ 3ನೇ ಬಹುಮಾನ ಪಡೆದಿದ್ದು ಈ ಬಾರಿ ಮೊದಲ ಬಹುಮಾನಕ್ಕೆ ಬಿರುಸಿನ ಪೈಪೋಟಿ ನಡೆಸಲಾಗುತ್ತಿದೆ’ ಎಂದು ಸಮಿತಿಯ ಅಧ್ಯಕ್ಷ ಮುದ್ದಂಡ ಚಂಗಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು. ಈ ವರ್ಷ ವಾಲಗ ತಂಡವೂ ಮೆರವಣಿಗೆಯಲ್ಲಿ ಭಾಗವಹಿಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.