ADVERTISEMENT

ಅರಮಣಮಾಡ ಕೊಡವ ಕೌಟುಂಬಿಕ ಕ್ರಿಕೆಟ್ ಟೂರ್ನಿ: ರನ್‌ಗಳ ಹೊಳೆ ಹರಿಸಿದ ದೇಯಂಡ ತಂಡ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2024, 4:28 IST
Last Updated 28 ಏಪ್ರಿಲ್ 2024, 4:28 IST
ಗೋಣಿಕೊಪ್ಪಲು ಬಳಿಯ ಬಾಳೆಲೆಯಲ್ಲಿ ನಡೆಯುತ್ತಿರುವ ಅರಮಣಮಾಡ ಕ್ರಿಕೆಟ್ ಟೂರ್ನಿಯಲ್ಲಿ ಮಣವಟ್ಟೀರ ತಂಡದ ಆಟಗಾರ್ತಿ ಉತ್ತಮ ಬ್ಯಾಟಿಂಗ್ ನಡೆಸಿದರು
ಗೋಣಿಕೊಪ್ಪಲು ಬಳಿಯ ಬಾಳೆಲೆಯಲ್ಲಿ ನಡೆಯುತ್ತಿರುವ ಅರಮಣಮಾಡ ಕ್ರಿಕೆಟ್ ಟೂರ್ನಿಯಲ್ಲಿ ಮಣವಟ್ಟೀರ ತಂಡದ ಆಟಗಾರ್ತಿ ಉತ್ತಮ ಬ್ಯಾಟಿಂಗ್ ನಡೆಸಿದರು   

ಗೋಣಿಕೊಪ್ಪಲು: ಇಲ್ಲಿಗೆ ಸಮೀಪದ ಬಾಳೆಲೆ ವಿಜಯಲಕ್ಷ್ಮಿ ಪದವಿಪೂರ್ವ ಕಾಲೇಜಿನ ಮೈದಾನದಲ್ಲಿ ನಡೆಯುತ್ತಿರುವ ಅರಮಣಮಾಡ ಕೊಡವ ಕೌಟುಂಬಿಕ ಕ್ರಿಕೆಟ್ ಟೂರ್ನಿಯ ಶನಿವಾರದ ಪಂದ್ಯಗಳಲ್ಲಿ ಮಲ್ಲಮಾಡ, ಚಿಯಣಮಾಡ, ಪಟ್ಟಡ, ಪೋರಂಗಡ ತಂಡಗಳು ಜಯಗಳಿಸಿ ಮುಂದಿನ ಸುತ್ತಿಗೆ ಪ್ರವೇಶ ಪಡೆದವು.

ದೇಯಂಡ ತಂಡವಂತೂ ಕೋಣೇರಿರ ತಂಡದ ಎದುರು ರನ್‌ಗಳ ಹೊಳೆಯನ್ನೇ ಹರಿಸಿತು. ನಿಗದಿತ 8 ಓವರ್‌ಗಳಲ್ಲಿ ದೇಯಂಡ ಕೇವಲ 2 ವಿಕೆಟ್ ನಷ್ಟಕ್ಕೆ ಕಲೆ ಹಾಕಿದ್ದು 193 ರನ್‌. ಇದಕ್ಕುತ್ತರವಾಗಿ ಕೋಣೇರಿರ 99 ರನ್‌ಗಳನ್ನಷ್ಟೇ ಗಳಿಸಲು ಶಕ್ತವಾಯಿತು. ಬರೋಬರಿ 94 ರನ್‌ಗಳ ಗೆಲುವು ದೇಯಂಡ ತಂಡಕ್ಕೆ ದಕ್ಕಿತು.

ಚಿಯಣಮಾಡ ತಂಡವು ಕೊಕ್ಕೆಂಗಡ ವಿರುದ್ಧ 10 ವಿಕೆಟ್‌ಗಳ ಜಯ ಗಳಿಸಿತು. ಕೊಕ್ಕೆಂಗಡ ನೀಡಿದ 68 ರನ್‌ಗಳ ಗುರಿಯನ್ನು ಚಿಯಣಮಾಡ ತಂಡವು ಯಾವುದೇ ವಿಕೆಟ್ ಕಳೆದುಕೊಳ್ಳದೇ 7.3 ಓವರ್‌ಗಳಲ್ಲಿ ತಲುಪಿತು.

ADVERTISEMENT

ಮಲ್ಲಮಾಡ ತಂಡವು ಕುಂದಿರ ವಿರುದ್ಧ 8 ವಿಕೆಟ್‌ಗಳ ಜಯ ಗಳಿಸಿತು. ಕುಂದಿರ ನೀಡಿದ 78 ರನ್‌ಗಳ ಗುರಿಯನ್ನು ಮಲ್ಲಮಾಡ ಎರಡು ವಿಕೆಟ್‌ಗಳನ್ನು ಕಳೆದುಕೊಂಡು ಕೇವಲ 6.3 ಓವರ್‌ಗಳಲ್ಲಿಯೇ ತಲುಪಿತು.

ಪಟ್ಟಡ ತಂಡವು ಬಾಚೀರ ವಿರುದ್ಧ 7 ವಿಕೆಟ್‌ಗಳ ಜಯ ಗಳಿಸಿತು. ಬಾಚೀರ ನೀಡಿದ 90 ರನ್‌ಗಳ ಗುರಿಯನ್ನು ಪಟ್ಟಡ 3 ವಿಕೆಟ್‌ಗಳನ್ನು ಕಳೆದುಕೊಂಡು 6.4 ಓವರ್‌ಗಳಲ್ಲಿ ತಲುಪಿತು.

ಪೋರಂಗಡ ತಂಡವು ಮೋಟಂಡ ತಂಡವನ್ನು 8 ವಿಕೆಟ್‌ಗಳಿಂದ ಮಣಿಸಿತು. ಮೋಟಂಡ ನೀಡಿದ 58ರನ್‌ಗಳ ಸುಲಭ ಗುರಿಯನ್ನು ಪೋರಂಗಡ 2 ವಿಕೆಟ್‌ಗಳನ್ನು ಕಳೆದುಕೊಂಡು ಕೇವಲ 5.2 ಓವರ್‌ಗಳಲ್ಲಿ ತಲುಪಿತು.

ಮಲ್ಲೇoಗಡ ತಂಡವು ಚಿಯಾಂಡಿರ ವಿರುದ್ಧ 9 ವಿಕೆಟ್‌ಗಳ ಜಯ ಗಳಿಸಿತು. ಚಿಯಾಂಡಿರ ನೀಡಿದ 72 ರನ್‌ಗಳ ಗುರಿಯನ್ನು ಮಲ್ಲೇoಗಡ ಕೇವಲ 1 ವಿಕೆಟ್ ಕಳೆದುಕೊಂಡು 5.5 ಓವರ್‌ಗಳಲ್ಲಿಯೇ ತಲುಪಿತು.

ಮಾಚಂಗಡ ತಂಡಕ್ಕೆ ಬಾಚಮಾಡ ತಂಡದ ವಿರುದ್ಧ 11 ರನ್‌ಗಳ ರೋಚಕ ಜಯ ದಕ್ಕಿತು. ಮಾಚಂಗಡ ನೀಡಿದ 102 ರನ್‌ಗಳ ಬೃಹತ್ ಗುರಿಗೆ ಪ್ರತಿಯಾಗಿ ಬಾಚಮಾಡ 91 ರನ್‌ಗಳನ್ನಷ್ಟೇ ಗಳಿಸಲು ಶಕ್ತವಾಯಿತು.

ನಂದೇಟಿರ ತಂಡಕ್ಕೆ ಚಾರಿಮಂಡ ವಿರುದ್ಧ 10 ವಿಕೆಟ್‌ಗಳ ಭರ್ಜರಿ ಜಯ ದಕ್ಕಿತು. ಚಾರಿಮಂಡ ತಂಡ ನೀಡಿದ 58 ರನ್‌ಗಳ ಸುಲಭ ಗುರಿಯನ್ನು ನಂದೇಟಿರ ಕೇವಲ 3 ಓವರ್‌ಗಳಲ್ಲಿ ಯಾವುದೇ ವಿಕೆಟ್ ಕಳೆದುಕೊಳ್ಳದೇ ತಲುಪಿದ್ದು ವಿಶೇಷ ಎನಿಸಿತು. ನಂದೇಟಿರ ತಂಡದ ಸಿಡಿಲಬ್ಬರ ಬ್ಯಾಟಿಂಗ್ ನೋಡುಗರಿಗೆ ಭರಪೂರ ಖುಷಿ ನೀಡಿತು.

ಚಟ್ಟಂಡ ತಂಡವು ಅಮ್ಮಣಕುಟ್ಟಂಡ ವಿರುದ್ಧ 19 ರನ್‌ಗಳ ಜಯ ಗಳಿಸಿತು. ಚಟ್ಟಂಡ ನೀಡಿದ 133 ರನ್‌ಗಳಿಗೆ ಪ್ರತಿಯಾಗಿ ಅಮ್ಮಣಕುಟ್ಟಂಡ ಕೇವಲ 115 ರನ್‌ ಮಾತ್ರವೇ ಗಳಿಸಲು ಸಾಧ್ಯವಾಯಿತು.

ಕೈಬುಲಿರ ತಂಡವು ಪಾಡೇಟ್ಟಿರ ವಿರುದ್ಧ 9 ವಿಕೆಟ್‌ಗಳ ಜಯ ಸಾಧಿಸಿತು. ಪಾಡೇಟ್ಟಿರ ನೀಡಿದ 59 ರನ್‌ಗಳ ಗುರಿಯನ್ನು 1 ವಿಕೆಟ್ ಮಾತ್ರವೇ ಕಳೆದುಕೊಂಡ ಕೈಬುಲಿರ ಕೇವಲ 3.2 ಓವರ್‌ಗಳಲ್ಲಿ ತಲುಪಿದ್ದು ವಿಶೇಷ ಎನಿಸಿತು.

ಕಾಂಚೇರಿರ ತಂಡಕ್ಕೆ ಹೊಟ್ಟೇoಗಡ ವಿರುದ್ಧ 10 ವಿಕೆಟ್‌ಗಳ ಭರ್ಜರಿ ಗೆಲುವು ಒಲಿಯಿತು. ಹೊಟ್ಟೇoಗಡ ನೀಡಿದ 91 ರನ್‌ಗಳ ಗುರಿಯನ್ನು ಕಾಂಚೇರಿರ ಯಾವುದೇ ವಿಕೆಟ್ ಕಳೆದುಕೊಳ್ಳದೇ 4.5 ಓವರ್‌ಗಳಲ್ಲಿಯೇ ತಲುಪಿತು.

ಮಹಿಳೆಯರ ವಿಭಾಗ

ಮಹಿಳಾ ವಿಭಾಗದಲ್ಲಿ ನಂದೇಟೀರ ತಂಡಕ್ಕೆ ಕಟ್ಟೇರ (ಅರಮೇರಿ) ವಿರುದ್ಧ 2 ರನ್‌ಗಳ ರೋಚಕ ಜಯ ದಕ್ಕಿತು. ನಂದೇಟೀರ ನೀಡಿದ 33 ರನ್‌ಗಳ ಗುರಿಯನ್ನು ಬೆನ್ನತ್ತಿದ ಕಟ್ಟೇರ (ಅರಮೇರಿ) 31 ರನ್‌ಗಳಿಸಿ ಗೆಲುವಿನ ಹೊಸ್ತಿಲಲ್ಲಿ ಎಡವಿತು.

ಮಣವಟ್ಟಿರ ತಂಡವು ಅಚ್ಚಕಾಳೆರ ತಂಡವನ್ನು 32 ರನ್‌ಗಳಿಂದ ಮಣಿಸಿತು. ಮಣವಟ್ಟಿರ ನೀಡಿದ 62 ರನ್‌ಗಳ ಗುರಿಗೆ ಪ್ರತಿಯಾಗಿ ಅಚ್ಚಕಾಳೆರ ಗಳಿಸಿದ್ದು ಕೇವಲ 30 ರನ್‌ಗಳು.

ಮಾಪಣಮಾಡ ತಂಡವು ಕೊಕ್ಕೆಂಗಡ ವಿರುದ್ಧ 21 ರನ್‌ಗಳ ಗೆಲುವು ಪಡೆಯಿತು. ಮಾಪಣಮಾಡ ನೀಡಿದ 68 ರನ್‌ಗಳ ಗುರಿಗೆ ಪ್ರತಿಯಾಗಿ ಕೊಕ್ಕೆಂಗಡ ಗಳಿಸಿದ್ದು 47 ರನ್‌ ಮಾತ್ರ.

ಆತಿಥೇಯ ತಂಡ ಅರಮಣಮಾಡ ತಂಡವು ಕಡೇಮಾಡ ವಿರುದ್ಧ 18 ರನ್‌ಗಳ ಜಯ ಪಡೆಯಿತು. ಅರಮಣಮಾಡ ನೀಡಿದ 51 ರನ್‌ಗಳ ಗುರಿಗೆ ಪ್ರತಿಯಾಗಿ ಕಡೇಮಾಡ ಗಳಿಸಿದ್ದು ಕೇವಲ 32 ರನ್‌ಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.