ನಾಪೋಕ್ಲು (ಕೊಡಗು): ನೆಲ್ಲಮಕ್ಕಡ ಮತ್ತು ಚೇಂದಂಡ ತಂಡಗಳು ಸಮೀಪದ ಚೆರಿಯಪರಂಬುವಿನ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ‘ಕುಂಡ್ಯೋಳಂಡ ಕಪ್’ ಕೊಡವ ಕೌಟುಂಬಿಕ ಹಾಕಿ ಟೂರ್ನಿಯ ಫೈನಲ್ ಪ್ರವೇಶಿಸಿದವು.
ಫೈನಲ್ ಪಂದ್ಯ ಭಾನುವಾರ ನಡೆಯಲಿದೆ.
ಸೆಮಿಫೈನಲ್ ಪಂದ್ಯದಲ್ಲಿ ನೆಲ್ಲಮಕ್ಕಡ ತಂಡವು ಕುಪ್ಪಂಡ (ಕೈಕೇರಿ) ತಂಡವನ್ನು 4–2ರ ಅಂತರದಿಂದ ಮಣಿಸಿತು. ನೆಲ್ಲಮಕ್ಕಡ ತಂಡದ ಪ್ರಧಾನ ಚಂಗಪ್ಪ, ಪ್ರಧಾನ ಅಯ್ಯಪ್ಪ ಮೊದಲಿಗೆ ಒಂದೊಂದು ಗಳಿಸಿ ಮುನ್ನಡೆ ಕಾಯ್ದುಕೊಂಡರು. ಪ್ರಬಲ ಪೈಪೋಟಿ ನೀಡಿದ ಕುಪ್ಪಂಡ (ಕೈಕೇರಿ) ತಂಡವು ತನ್ನ ಆಟಗಾರ ಕುಪ್ಪಂಡ ಸೋಮಯ್ಯ ಅವರು ಗಳಿಸಿದ ಸತತ 2 ಗೋಲುಗಳ ನೆರವಿನಿಂದ ಸಮಬಲ ಸಾಧಿಸಿತು. ಬಳಿಕ, ನೆಲ್ಲಮಕ್ಕಡ ತಂಡದ ಸೋಮಯ್ಯ ಹಾಗೂ ನೆಲ್ಲಮಕ್ಕಡ ಅಯ್ಯಪ್ಪ ಗಳಿಸಿದ ಒಂದೊಂದು ಗೋಲುಗಳ ನೆರವಿನಿಂದ ತಂಡವು ಜಯದ ನಗೆ ಬೀರಿತು. ಕಳೆದ ಬಾರಿಯ ಚಾಂಪಿಯನ್ ಕುಪ್ಪಂಡ (ಕೈಕೇರಿ) ತಂಡವು ನಿರಾಶೆಯಿಂದ ಟೂರ್ನಿಯಿಂದ ಹೊರಬಿತ್ತು.
ಮತ್ತೊಂದು ಸೆಮಿಫೈನಲ್ ಪಂದ್ಯದಲ್ಲಿ ಚೇಂದಂಡ ತಂಡವು ಕುಲ್ಲೇಟಿರ ವಿರುದ್ಧ 3–1 ಅಂತರದಿಂದ ಜಯ ಸಾಧಿಸಿತು. ಚೇಂದಂಡ ತಂಡದ ಮೋಕ್ಷಿತ್ ಉತ್ತಪ್ಪ ಗೋಲು ಗಳಿಸಿ ಆರಂಭದಲ್ಲೇ ತಂಡಕ್ಕೆ ಮುನ್ನಡೆ ತಂದು ಕೊಟ್ಟರು. ನಿಖಿನ್ ತಿಮ್ಮಯ್ಯ ಸತತ 2 ಗೋಲುಗಳನ್ನು ಗಳಿಸಿ ತಂಡವನ್ನು ಗೆಲುವಿನ ದಡಕ್ಕೆ ತಲುಪಿಸಿದರು. ಕುಲ್ಲೇಟಿರ ತಂಡದ ಶುಭಂ ಒಂದು ಗೋಲು ಗಳಿಸಿದರು. ಇದರೊಂದಿಗೆ, ಹೋದ ವರ್ಷ ಅಂತಿಮ ಹಂತ ತಲುಪಿದ್ದ ಕುಲ್ಲೇಟಿರ ತಂಡ ಈ ಬಾರಿ ಸೆಮಿಫೈನಲ್ ಹಂತದಲ್ಲೇ ಮುಗ್ಗರಿಸಿತು.
ಹೈಕೋರ್ಟ್ ನ್ಯಾಯಮೂರ್ತಿ ಚೆಪ್ಪುಡಿರ ಮೊಣ್ಣಪ್ಪ ಪೂಣಚ್ಚ ಸೆಮಿಫೈನಲ್ ಪಂದ್ಯದ ಸಭಾ ಕಾರ್ಯಕ್ರಮ ಉದ್ಘಾಟಿಸಿ, ‘ಕೊಡವ ಜನಾಂಗದಲ್ಲಿ ಹಾಕಿಯು ರಕ್ತಗತವಾಗಿದೆ. ಇಂದು ಕೊಡವ ಜನಾಂಗದವರು ಎಲ್ಲಾ ಕ್ಷೇತ್ರಗಳಲ್ಲೂ ಸಾಧನೆ ಮಾಡುತ್ತಿದ್ದಾರೆ. ಶಿಸ್ತು ಮತ್ತು ಬದ್ಧತೆಯಿಂದ ಇದೆಲ್ಲವೂ ಸಾಧ್ಯವಾಗುತ್ತಿದೆ’ ಎಂದು ಹೇಳಿದರು.
ಒಲಿಂಪಿಯನ್ ಬಾಳೆಯಡ ಕೆ.ಸುಬ್ರಮಣಿ, ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷ ಪಾಂಡಂಡ ಕೆ.ಬೋಪಣ್ಣ, ಡಾ.ಕಲಿಯಾಟಂಡ ಚಿಣ್ಣಪ್ಪ, ಮಾಜಿ ಸೈನಿಕರ ಸಂಘದ ಅಧ್ಯಕ್ಷ ಮೇಜರ್ ಜನರಲ್ ಬಾಚಮಂಡ ಎ.ಕಾರ್ಯಪ್ಪ ಭಾಗವಹಿಸಿದ್ದರು.
ಪುರುಷರಿಗಾಗಿ ನಡೆದ ದಪ್ಪ ಮೀಸೆಯ ಸ್ಪರ್ಧೆ ಮತ್ತು ಮಹಿಳೆಯರಿಗೆ ನಡೆದ ಉದ್ದ ಜಡೆಯ ಸ್ಪರ್ಧೆ ಗಮನ ಸೆಳೆಯಿತು. ಇದಕ್ಕೂ ಮುನ್ನ ಕಕ್ಕಬ್ಬೆ ಪಟ್ಟಣದಿಂದ ನಾಪೋಕ್ಲುವರೆಗೆ ನಡೆದ ರಿಲೆ ಸ್ಪರ್ಧೆಯಲ್ಲಿ ನೂರಾರು ಮಂದಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.