ADVERTISEMENT

ಕೊಡವ ಕೌಟುಂಬಿಕ ಹಾಕಿ ಟೂರ್ನಿ | ಹಾಕಿ, ರಿಲೇ, ದಪ್ಪಮೀಸೆ, ಉದ್ದಜಡೆಯ ಸ್ಪರ್ಧೆ...!

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2024, 4:32 IST
Last Updated 28 ಏಪ್ರಿಲ್ 2024, 4:32 IST
ನಾಪೋಕ್ಲು ಸಮೀಪದ ಚೆರಿಯಪರಂಬುವಿನ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಶನಿವಾರ ಕುಂಡ್ಯೋಳಂಡ ಕಪ್ ಹಾಕಿ ಟೂರ್ನಿಯ  ಸೆಮಿಫೈನಲ್ ಸ್ಪರ್ಧಾ ಕಾರ್ಯಕ್ರಮವನ್ನು ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಚೆಪ್ಪುಡಿರ ಮೊಣ್ಣಪ್ಪ ಪೂಣಚ್ಚ ಉದ್ಘಾಟಿಸಿದರು
ನಾಪೋಕ್ಲು ಸಮೀಪದ ಚೆರಿಯಪರಂಬುವಿನ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಶನಿವಾರ ಕುಂಡ್ಯೋಳಂಡ ಕಪ್ ಹಾಕಿ ಟೂರ್ನಿಯ  ಸೆಮಿಫೈನಲ್ ಸ್ಪರ್ಧಾ ಕಾರ್ಯಕ್ರಮವನ್ನು ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಚೆಪ್ಪುಡಿರ ಮೊಣ್ಣಪ್ಪ ಪೂಣಚ್ಚ ಉದ್ಘಾಟಿಸಿದರು   

ನಾಪೋಕ್ಲು: ಒಂದೆಡೆ ಹಾಕಿ, ಮತ್ತೊಂದೆಡೆ ರಿಲೇ, ಮೊಗದೊಂದು ಕಡೆ ದಪ್ಪಮೀಸೆಯ, ಉದ್ದ ಜಡೆಯ ಸ್ಪರ್ಧೆ... ಹೀಗೆ ವೈವಿಧ್ಯಮಯ ಸ್ಪರ್ಧಾ ಚಟುವಟಿಕೆಗಳು ಇಲ್ಲಿ ಚೆರಿಯಪರಂಬುವಿನ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೊಡವ ಕೌಟುಂಬಿಕ ಹಾಕಿ ಟೂರ್ನಿ ಕುಂಡ್ಯೋಳಂಡ ಕಪ್‌ನಲ್ಲಿ ಶನಿವಾರ ಕಂಡು ಬಂದವು.

ಇದಕ್ಕೆ ಅಂಕುರ್ ಪಬ್ಲಿಕ್ ಶಾಲಾ ವಿದ್ಯಾರ್ಥಿಗಳಿಂದ ಬ್ಯಾಂಡ್ ಡಿಸ್ ಪ್ಲೇ ಕಾರ್ಯಕ್ರಮ ರಂಗು ತುಂಬಿತು. ಕಳಸ ಪ್ರಾಯ ಎನಿಸಿದ ಗಣ್ಯರಾದಿಯಾಗಿ ಸಾವಿರಾರು ಮಂದಿ ಈ ಅಪರೂಪದ ಕ್ರೀಡಾ ಚಟುವಟಿಕೆಗಳನ್ನು ಕಣ್ತುಂಬಿಕೊಂಡರು. ಉರಿಯುವ ಬಿಸಿಲನ್ನು ಲೆಕ್ಕಿಸದೇ ಸೇರಿದ್ದ ಅಪಾರ ಕ್ರೀಡಾಭಿಮಾನಿಗಳಿಗೆ ಭರಪೂರ ರಂಜನೆಯೇ ದಕ್ಕಿತು. ‌

ಸೆಮಿಫೈನಲ್‌ ಪಂದ್ಯದಲ್ಲಿ ನೆಲ್ಲಮಕ್ಕಡ ತಂಡ ಮತ್ತು ಕುಪ್ಪಂಡ (ಕೈಕೇರಿ) ತಂಡದ ನಡುವಿನ ಪಂದ್ಯದಲ್ಲಿ ನೋಡುಗರನ್ನು ತುದಿಗಾಲ ಮೇಲೆರಿಸಿತು. ಒಂದು ಹಂತದಲ್ಲಿ ಸಮಬಲದ ಆಟ ಎರಡೂ ಕಡೆಯೂ ಕಂಡು ಬಂತು ಅಂತಿಮವಾಗಿ  4–2ರ ನೆಲ್ಲಮಕ್ಕಡ ತಂಡ ಜಯದ ನಗೆ ಬೀರಿತು. ಮತ್ತೊಂದು ಪಂದ್ಯದಲ್ಲಿ ಚೇಂದಂಡ ತಂಡವು ಕುಲ್ಲೇಟಿರ ವಿರುದ್ಧ 3–1 ಅಂತರದಿಂದ ಜಯ ಸಾಧಿಸಿತು.

ADVERTISEMENT

ಇದಕ್ಕೂ ಮುನ್ನ ನಡೆದ ಕೊಡವ ಕುಟುಂಬಗಳ ನಡುವಿನ 2.50x4 ಕಿ.ಮೀ ದೂರದ ಓಟ ಸ್ಪರ್ಧೆ ‘ಫ್ಯಾಮಿಲಿ ರಿಲೇ’ಯಲ್ಲಿ ನೂರಾರು ಮಂದಿ ಭಾಗವಹಿಸಿದ್ದರು. ಕಕ್ಕಬ್ಬೆಯಿಂದ ನಾಪೋಕ್ಲುವರೆಗಿನ ದೂರವನ್ನು ಕೊಡವ ಕುಟುಂಬಗಳ ನಾಲ್ವರು ಸದಸ್ಯರು ಹಂತಹಂತವಾಗಿ ಕ್ರಮಿಸಿದರು.

ಇನ್ನು ದಪ್ಪ ಮೀಸೆಯ ಮತ್ತು ಉದ್ದ ಜಡೆಯ ಸ್ಪರ್ಧೆಯೂ ಕ್ರೀಡಾಸಕ್ತರನ್ನು ಬಹುವಾಗಿ ಸೆಳೆಯಿತು. ಈ ಸ್ಪರ್ಧೆಗೂ ಸ್ಪರ್ಧಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

ಸೆಮಿಫೈನಲ್‌ ಪಂದ್ಯದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಂಡ್ಯೋಳಂಡ ಕುಟುಂಬದ ಪಟ್ಟೆದಾರ ಕುಂಡ್ಯೋಳಂಡ ಎ.ನಾಣಯ್ಯ ವಹಿಸಿದ್ದರು. ಹೈಕೋರ್ಟ್ ನ್ಯಾಯಮೂರ್ತಿ ಚೆಪ್ಪುಡಿರ ಮೊಣ್ಣಪ್ಪ ಪೂಣಚ್ಚ ಉದ್ಘಾಟಿಸಿದರು. ಒಲಂಪಿಯನ್‌ಗಳಾದ ಬಾಳೆಯಡ ಕೆ.ಸುಬ್ರಮಣಿ, ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷ ಪಾಂಡಂಡ ಕೆ.ಬೋಪಣ್ಣ , ಡಾ.ಕಲಿಯಾಟಂಡ ಚಿಣ್ಣಪ್ಪ, ಮಾಜಿ ಸೈನಿಕರ ಸಂಘದ ಅಧ್ಯಕ್ಷ ಮೇ.ಜ.ಬಾಚಮಂಡ ಎ.ಕಾರ್ಯಪ್ಪ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಕ್ರೀಡಾಪಟುಗಳು, ಪಂದ್ಯಾವಳಿಯಲ್ಲಿ ಕಾರ್ಯನಿರ್ವಹಿಸಿದ ಅಂಪೈರ್‌ಗಳು, ತಾಂತ್ರಿಕವರ್ಗ ಮತ್ತು ಸಹಕಾರ ನೀಡಿದ ಎಲ್ಲರನ್ನೂ ಗೌರವಿಸಲಾಯಿತು.

ಉದ್ದ ಜಡೆಯ ಸ್ಪರ್ಧೆಯ ಬಾಲಕಿಯರ ವಿಭಾಗದಲ್ಲಿ ಬಿದ್ದಾಟಂಡ ದೀಕ್ಷಾ ಪೂಣಚ್ಚ ಪ್ರಥಮ, ಮಂಡೇಡ ಸಿಂಚನಾ ಮುತ್ತಪ್ಪ ದ್ವಿತೀಯ ಹಾಗೂ ಬಿಟ್ಟಿರ ನಿಮಿಷ ಭೋಜಮ್ಮ ತೃತೀಯ ಸ್ಥಾನ ಪಡೆದರು.

ಮಹಿಳೆಯರ ವಿಭಾಗದಲ್ಲಿ ಚಾಮೇರ ಮಾನಸ ಪ್ರಥಮ, ಬಾಚಿನಡಂಡ ಶೀತಲ್ ಪೊನ್ನಪ್ಪ ದ್ವಿತೀಯ, ಕಾಳೆಯಂಡ ಅನಿತಾ ತೃತೀಯ ಸ್ಥಾನ ಪಡೆದರು.

ನಾಪೋಕ್ಲು ಸಮೀಪದ ಚೆರಿಯಪರಂಬುವಿನ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಶನಿವಾರ ಕುಂಡ್ಯೋಳಂಡ ಕಪ್ ಹಾಕಿ ಟೂರ್ನಿಯ  ಅಂಗವಾಗಿ ನಡೆದ ದಪ್ಪ ಮೀಸೆಯ ಸ್ಪರ್ಧೆಯಲ್ಲಿ ಪಾಲ್ಗೊಂಡ  ಕೊಡವ ಪುರುಷರು

ಉದ್ದ ಮೀಸೆಯ ಸ್ಪರ್ಧೆಯಲ್ಲಿ ಚೆಪ್ಪುಡಿರ ರವಿ ಕರಂಬಯ್ಯ ಪ್ರಥಮ, ಕಾಳೆಯಂಡ ರವಿ ತಮ್ಮಯ್ಯ ದ್ವಿತೀಯ, ಹಾಗೂ ಬೊಟೋಳಂಡ ನಂದ ಕಾರ್ಯಪ್ಪ ತೃತೀಯ ಸ್ಥಾನ ಪಡೆದರು.

ನಾಪೋಕ್ಲು ಸಮೀಪದ ಚೆರಿಯಪರಂಬುವಿನ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಶನಿವಾರ ಕುಂಡ್ಯೋಳಂಡ ಕಪ್ ಹಾಕಿ ಟೂರ್ನಿಯ  ಸೆಮಿಫೈನಲ್ ಸ್ಪರ್ಧೆಗೆ ಅತಿಥಿಗಳನ್ನು ಕೊಡವ ಹಾಕಿ ಅಕಾಡೆಮಿಯ ಪದಾಧಿಕಾರಿಗಳು ಸ್ವಾಗತಿಸಿದರು

ಹಾಕಿ ಉತ್ಸವದ ಫೈನಲ್ ಇಂದು

ಏ. 28ರಂದು ಬೆಳಿಗ್ಗೆ 9 ಗಂಟೆಗೆ 3 ಮತ್ತು 4ನೇ ಸ್ಥಾನಕ್ಕಾಗಿ ಕುಲ್ಲೇಟಿರ ಮತ್ತು ಕುಪ್ಪಂಡ(ಕೈಕೇರಿ) ತಂಡಗಳ ನಡುವೆ ಪೈಪೋಟಿ ನಡೆಯಲಿದೆ. 10.30 ಕ್ಕೆ ನಡೆಯಲಿರುವ ಕುಂಡ್ಯೋಳಂಡ ಕಪ್ ಹಾಕಿ ಫೈನಲ್ ಪಂದ್ಯಾವಳಿಯಲ್ಲಿ ಮುಖ್ಯ ಅತಿಥಿಗಳಾಗಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಅಜ್ಜಿಕುಟ್ಟೀರ ಎಸ್.ಪೊನ್ನಣ್ಣ ಪಾಲ್ಗೊಳ್ಳಲಿದ್ದು ಕೊಡವ ಹಾಕಿ ಅಕಾಡೆಮಿಯ ಅಧ್ಯಕ್ಷ ಪಾಂಡಂಡ ಕೆ.ಬೋಪಣ್ಣ ಭಾಗವಹಿಸುವರು. ಅತಿಥಿಯಾಗಿ ಸಂಸದ ಪ್ರತಾಪಸಿಂಹ ಹೈದರಾಬಾದ್ ವಿದೇಶಿ ತನಿಖಾ ಘಟಕದ ಉಪ ನಿರ್ದೇಶಕ ಮುಕ್ಕಾಟಿರ ಪುನಿತ್ ಕುಟ್ಟಯ್ಯ ಉದ್ಯಮಿ ಕೊಡಂಗಡ ರವಿ ಕರುಂಬಯ್ಯ ಐಆರ್‌ಎಸ್ ಜಾರಿ ನಿರ್ದೇಶನಾಲಯದ ಉಪ ನಿರ್ದೇಶಕ ಡಾ.ಕೊಟ್ಟಂಗಡ ಪೆಮ್ಮಯ್ಯ ನಾರಾಯಣ ಆರೋಗ್ಯ ಸಮೂಹದ ಮುಖ್ಯ ವೈದ್ಯಕೀಯ ನಿರ್ದೇಶಕ ಡಾ.ಪುಚ್ಚಿಮಾಡ ಎಂ.ಉತ್ತಪ್ಪ (ಸಂತೋಷ್) ಪಾಂಡಂಡ ಲೀಲಾ ಕುಟ್ಟಪ್ಪ ಒಲಂಪಿಯನ್ ಡಾ.ಅಂಜಪರವಂಡ ಬಿ.ಸುಬ್ಬಯ್ಯ ಭಾಗವಹಿಸುವರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.