ನಾಪೋಕ್ಲು: ಇಲ್ಲಿನ ಕರ್ನಾಟಕ ಪಬ್ಲಿಕ್ ಶಾಲೆಯ ಕ್ರೀಡಾಂಗಣದಲ್ಲಿ ಏಪ್ರಿಲ್ 18ರಿಂದ ನಡೆಯುತ್ತಿದ್ದ ಕೊಡವ ಕುಟುಂಬಗಳ ನಡುವಿನ ಹಗ್ಗಜಗ್ಗಾಟ ಟೂರ್ನಿ ಬೊಟ್ಟೋಳಂಡ ಕಪ್‌ಗೆ ಸಂಭ್ರಮದ ತೆರೆ ಬಿತ್ತು. 3ನೇ ವರ್ಷದ ಈ ಸ್ಪರ್ಧೆಯಲ್ಲಿ 236 ತಂಡಗಳು ಭಾಗಿಯಾಗಿ ತಮ್ಮ ಶಕ್ತಿ ಪ್ರದರ್ಶಿಸಿದ್ದು ವಿಶೇಷವಾಗಿತ್ತು.
ಪುರುಷರ ವಿಭಾಗದ ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಮಾಚಿಮಂಡ ತಂಡವನ್ನು ಸೋಲಿಸಿ, ಮಾಲೇಟಿರ (ಕುಕ್ಲೂರು)ತಂಡ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. ಮಹಿಳಾ ವಿಭಾಗದಲ್ಲಿ ಅಜ್ಜಮಾಡ ತಂಡವನ್ನು ಸೋಲಿಸಿ ಕಾಂಡಂಡ ತಂಡವು ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. ವಿಜೇತ ತಂಡಕ್ಕೆ ₹ 50 ಸಾವಿರ ನಗದು ಹಾಗೂ ಟ್ರೋಫಿಯನ್ನು ವಿತರಿಸಲಾಯಿತು. ದ್ವಿತೀಯ ಸ್ಥಾನ ಪಡೆದ ತಂಡಕ್ಕೆ ₹ 30 ಸಾವಿರ ಹಾಗೂ ಹಾಗೂ ಟ್ರೋಫಿಯನ್ನು ವಿತರಿಸಲಾಯಿತು.
ಪುರುಷರ ವಿಭಾಗದಲ್ಲಿ ಚೀಯಕಪೂವಂಡ, ಪಟ್ರಪಂಡ ಹಾಗೂ ಬಾದುಮಂಡ ತಂಡಗಳು ಕ್ರಮವಾಗಿ 3, 4 ಮತ್ತು 5ನೇ ಸ್ಥಾನಗಳನ್ನು ಪಡೆದುಕೊಂಡವು. ಮಹಿಳಾ ವಿಭಾಗದಲ್ಲಿ ನಾಪಂಡ, ಚೀಯಕ ಪೂವಂಡ, ಚಟ್ಟಂಡ ತಂಡಗಳು ಕ್ರಮವಾಗಿ 3, 4 ಹಾಗೂ 5ನೇ ಸ್ಥಾನಗಳನ್ನು ಗಳಿಸಿದವು. ಈ ತಂಡಗಳಿಗೆ ತಲಾ ₹ 20 ಸಾವಿರ, ₹ 10 ಸಾವಿರ, ₹ 5 ಸಾವಿರ ನಗದು ಮತ್ತು ಟ್ರೋಫಿಯನ್ನು ವಿತರಿಸಲಾಯಿತು.
ಸಮಾರೋಪ ಸಮಾರಂಭದಲ್ಲಿ ಮುಖ್ಯಮಂತ್ರಿಯ ಕಾನೂನು ಸಲಹೆಗಾರ ಮತ್ತು ಶಾಸಕ ಎ.ಎಸ್.ಪೊನ್ನಣ್ಣ ಮಾತನಾಡಿ, ‘ಹಾಕಿ ಮಾತ್ರವಲ್ಲ ಎಲ್ಲಾ ಕ್ರೀಡೆಗಳನ್ನು ಗ್ರಾಮೀಣ ಪ್ರದೇಶದ ಪ್ರತಿಭೆಗಳು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಯುವಂತಾಗಬೇಕು. ಆ ಪ್ರತಿಭೆಗಳಿಗೆ ಸೂಕ್ತ ಅವಕಾಶ ಕಲ್ಪಿಸುವುದು ಅಗತ್ಯ’ ಎಂದರು.
ಕರ್ನಾಟಕ ಸರ್ಕಾರದ ಚೀಫ್ ಎಲೆಕ್ಟ್ರಿಕಲ್ ಇನ್‌ಸ್ಪೆಕ್ಟರ್ ತೀತೀರ ಅಪ್ಪಚ್ಚು ಮಾತನಾಡಿ, ‘ಹಾಕಿ, ಕ್ರಿಕೆಟ್, ಹಗ್ಗ ಜಗ್ಗಾಟ ಮುಂತಾದ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸುವುದರಿಂದ ಗ್ರಾಮೀಣ ಪ್ರತಿಭೆಗಳು ಹೊರಬರಲು ಸಾಧ್ಯ. ಹಗ್ಗ ಜಗ್ಗಾಟ ಕೇವಲ ದೈಹಿಕ ಸಾಮರ್ಥ್ಯದ ಪ್ರದರ್ಶನ ಮಾತ್ರವಲ್ಲ, ಮನೋವಿಕಾಸಕ್ಕೂ ಕಾರಣವಾಗಲಿದೆ’ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೊಟ್ಟೋಳಂಡ ಕುಟುಂಬದ ಕ್ರೀಡಾ ಸಮಿತಿ ಅಧ್ಯಕ್ಷ ಬೊಟ್ಟೋಳಂಡ ಬಿ. ಗಣೇಶ್ ಗಣಪತಿ ವಹಿಸಿದ್ದರು.
ಕುಟುಂಬದ ಪಟ್ಟೆದಾರ ಬೊಟ್ಟೋಳಂಡ ಪೂಣಚ್ಚ, ಟೂರ್ನಮೆಂಟ್ ಡೈರೆಕ್ಟರ್ ಪೊನ್ನೋಲತಂಡ ಕಿರಣ್ ಪೊನ್ನಪ್ಪ, ಚೆಟ್ಟಂಗಡ ಕುಟುಂಬದ ಕಾರ್ಯದರ್ಶಿ ಚೆಟ್ಟಂಗಡ ರವಿ ಸುಬ್ಬಯ್ಯ, ಕ್ರೀಡಾ ಸಮಿತಿ ಸಂಚಾಲಕ ಬೊಟ್ಟೋಳಂಡ ಮಿಟ್ಟು ಪೂಣಚ್ಚ, ಪ್ರಭಾರ ಉಪ ಪ್ರಾಂಶುಪಾಲರಾದ ಎಂ.ಎಸ್.ಶಿವಣ್ಣ, ರೈತ ಸಂಘದ ಮುಖಂಡ ಕಾಡ್ಯಮಾಡ ಮನುಸೋಮಯ್ಯ, ಕೊಡವ ಸಮಾಜದ ಮಾಜಿ ಅಧ್ಯಕ್ಷ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ, 2025ರ ಹಗ್ಗ ಜಗ್ಗಾಟ ಸ್ಪರ್ಧಾ ಆಯೋಜಕರಾದ ಬಾಳೆಕುಟ್ಟಿರ ಮಂದಣ್ಣ ಭಾಗವಹಿಸಿದ್ದರು. ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಮನಸೆಳೆದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.