ADVERTISEMENT

ಕುಶಾಲನಗರ ಪಟ್ಟಣ ಪಂಚಾಯಿತಿ: ಕುತೂಹಲ ಘಟ್ಟಕ್ಕೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ

ಚುಕ್ಕಾಣಿ ಯಾರಿಗೆ?

ರಘು ಹೆಬ್ಬಾಲೆ
Published 25 ಸೆಪ್ಟೆಂಬರ್ 2024, 7:18 IST
Last Updated 25 ಸೆಪ್ಟೆಂಬರ್ 2024, 7:18 IST
ಕುಶಾಲನಗರ ಪಟ್ಟಣ ಪಂಚಾ‌ಯಿತಿ (ಪುರಸಭೆ) ಕಚೇರಿ
ಕುಶಾಲನಗರ ಪಟ್ಟಣ ಪಂಚಾ‌ಯಿತಿ (ಪುರಸಭೆ) ಕಚೇರಿ   

ಕುಶಾಲನಗರ: ಸ್ಥಳೀಯ ಪಟ್ಟಣ ಪಂಚಾಯಿತಿಯ ಅಧ್ಯಕ್ಷ, ಉಪಾಧ್ಯಕ್ಷರ ಸ್ಥಾನಗಳಿಗೆ ಬುಧವಾರ (ಸೆ.25) ಚುನಾವಣೆ ನಡೆಯಲಿದ್ದು, ಯಾವ ಪಕ್ಷ ಅಧಿಕಾರ ಚುಕ್ಕಾಣಿ ಹಿಡಿಯಲಿದೆ ಎಂಬುದು ತೀವ್ರ ಕುತೂಹಲ ಮೂಡಿಸಿದೆ.

ಪಟ್ಟಣ ಪಂಚಾಯಿತಿಯ 2ನೇ ಅವಧಿಗೆ ಅಧ್ಯಕ್ಷ ಸ್ಥಾನ‌ ಸಾಮಾನ್ಯ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿಗೆ ಮೀಸಲಾಗಿದೆ. ಒಟ್ಟು 16 ಸದಸ್ಯರ ಪೈಕಿ 6 ಕಾಂಗ್ರೆಸ್, 6 ಬಿಜೆಪಿ, 4 ಜೆಡಿಎಸ್ ಸದಸ್ಯರಿದ್ದಾರೆ. ಜೊತೆಗೆ, ಇಬ್ಬರು ನಾಮನಿರ್ದೇಶಿತ ಹೆಚ್ಚುವರಿ ಸದಸ್ಯರು, ಸಂಸದರು, ಶಾಸಕರಿಗೆ ಮತದಾನಕ್ಕೆ ಅವಕಾಶ ನೀಡಲಾಗಿದೆ.

ಕಾಂಗ್ರೆಸ್ ಪಕ್ಷದಿಂದ ಅಧ್ಯಕ್ಷ ಸ್ಥಾನಕ್ಕೆ ಜಯಲಕ್ಷ್ಮಿ ಚಂದ್ರು, ಉಪಾಧ್ಯಕ್ಷ ಸ್ಥಾನಕ್ಕೆ ಪುಟ್ಟಲಕ್ಷ್ಮಮ್ಮ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಬಿಜೆಪಿಯಿಂದ ಅಧ್ಯಕ್ಷ ಸ್ಥಾನಕ್ಕೆ ರೂಪಾ ಉಮಾಶಂಕರ್ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಬಿ.ಜೈವರ್ಧನ್ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಎರಡೂ ಪಕ್ಷಗಳ ಮುಖಂಡರು ಪಟ್ಟಣ ಪಂಚಾಯಿತಿಯ ಅಧಿಕಾರ ಗದ್ದುಗೆ ಹಿಡಿಯಲು ಇನ್ನಿಲ್ಲದ ರಾಜಕೀಯ ಕಸರತ್ತು ನಡೆಸುತ್ತಿದ್ದಾರೆ.

ADVERTISEMENT

ಈ ಮಧ್ಯೆ ಸರ್ಕಾರ ಮುಳ್ಳುಸೋಗೆ ಗ್ರಾಮ ಪಂಚಾಯಿತಿಯ ಸದಸ್ಯರಾಗಿದ್ದ ಜಗದೀಶ್ ಹಾಗೂ ಪದ್ಮಾವತಿ ಅವರನ್ನು ಹೆಚ್ಚುವರಿ ಸದಸ್ಯರಾಗಿ ನಾಮನಿರ್ದೇಶನ ಮಾಡಿ ಆದೇಶ ಹೊರಡಿಸಿರುವುದು ಕಾಂಗ್ರೆಸ್ ಪಾಲಿಗೆ ವರವಾಗಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿಯ ಪುರಸಭೆ ಸದಸ್ಯರು, ಮುಖಂಡರು ತಹಶೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ನಾಮನಿರ್ದೇಶಿತ ಸದಸ್ಯರಿಗೆ ಮತದಾನದ ಹಕ್ಕು ನೀಡಬಾರದು ಎಂದು ಒತ್ತಾಯಿಸಿದ್ದರು. ಜೊತೆಗೆ, ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಕೂಡ ಭೇಟಿ ನೀಡಿ ಪಟ್ಟಣ ಪಂಚಾಯಿತಿ ಮತ್ತು ಪುರಸಭೆ ಕಾಯ್ದೆ ಯಡಿ ನಾಮನಿರ್ದೇಶಿತ ಸದಸ್ಯರಿಗೆ ಮತದಾನದ ಹಕ್ಕು ಇಲ್ಲ. ಕಾನೂನು ಉಲ್ಲಂಘಿಸಬಾರದು ಎಂದು ತಹಶೀಲ್ದಾರ್ ಕಿರಣ್ ಗೌರಯ್ಯ ಅವರಿಗೆ ಎಚ್ಚರಿಕೆಯನ್ನು ನೀಡಿ ಹೋಗಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ಎರಡು ಪಕ್ಷಗಳಲ್ಲೂ ರಾಜಕೀಯ ಚಟುವಟಿಕೆ ಗರಿಗೆದರಿದ್ದು, ರೆಸಾರ್ಟ್ ರಾಜಕೀಯಕ್ಕೆ ಮೊರೆ ಹೋಗಿದ್ದಾರೆ.

ಈಗಾಗಲೇ ಕಾಂಗ್ರೆಸ್ ಸದಸ್ಯರೊಂದಿಗೆ ಬಹಿರಂಗವಾಗಿ ಜೆಡಿಎಸ್ ಸದಸ್ಯರು ಗುರುತಿಸಿಕೊಂಡಿದ್ದು, ಕೆಲವು ಸದಸ್ಯರು ಎರಡು ಪಕ್ಷದ ಮುಖಂಡರೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ತಿಳಿದು ಬಂದಿದೆ. ಕೊನೆ ಕ್ಷಣದಲ್ಲಿ ಯಾವ ರೀತಿ ರಾಜಕೀಯ ತಿರುವು ಪಡೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ. ಕಾಂಗ್ರೆಸ್ ಎರಡೂ ಸ್ಥಾನದಲ್ಲಿ ಜಯಗಳಿಸುವ ವಿಶ್ವಾಸದಲ್ಲಿದ್ದು, ಬಿಜೆಪಿಯಿಂದ ಕೂಡ ಅಧಿಕಾರ ಹಿಡಿಯುವ ಪ್ರಯತ್ನ ನಡೆದಿದೆ.

ಕುಶಾಲನಗರ ಪಟ್ಟಣ ಪಂಚಾಯಿತಿಯಲ್ಲಿ ಬಿಜೆಪಿ ಮತ್ತು ಜೆಡಿಎಸ್‌ ಮೈತ್ರಿ ಮಾಡಿಕೊಂಡು ಅಧಿಕಾರ ಹಿಡಿಯಲು ಸಂಘಟಿತ ಪ್ರಯತ್ನ ಮಾಡಿದ್ದೇವೆ.
–ಎಂ.ಎಂ.ಚರಣ್, ಅಧ್ಯಕ್ಷ ಬಿಜೆಪಿ ನಗರ ಘಟಕ.
ಸದಸ್ಯರ ಬೆಂಬಲದೊಂದಿಗೆ ಪಟ್ಟಣ ಪಂಚಾಯಿತಿ ಅಧಿಕಾರವನ್ನು ಕಾಂಗ್ರೆಸ್ ಪಕ್ಷ ಹಿಡಿಯಲಿದೆ.
–ವಿ.ಪಿ.ಶಶಿಧರ್, ಅಧ್ಯಕ್ಷ ಬ್ಲಾಕ್ ಕಾಂಗ್ರೆಸ್ ಕುಶಾಲನಗರ
ಮುಳ್ಳುಸೋಗೆ ಗ್ರಾಮ ಪ್ರತಿನಿಧಿಗಳಾಗಿ ಜಗದೀಶ್ ಮತ್ತು ಪದ್ಮಾವತಿ ಅವರನ್ನು ನಾಮನಿರ್ದೇಶನ ಮಾಡಲಾಗಿದೆ. ಚುನಾವಣೆಯಲ್ಲಿ ಪಾಲ್ಗೊಳ್ಳುವಂತೆ ನೋಟಿಸ್ ನೀಡಲಾಗಿದೆ.
–ಕಿರಣ್ ಗೌರಯ್ಯ, ತಹಶೀಲ್ದಾರ್ ಕುಶಾಲನಗರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.