ADVERTISEMENT

ಕುಶಾಲನಗರ: ವಿಜೃಂಭಣೆಯ ಕಾವೇರಿ ಸಂಕ್ರಮಣ ಹಬ್ಬ

ಬಾರವಿ ಕಾವೇರಿ ಕನ್ನಡ ಸಂಘ ವತಿಯಿಂದ 12ನೇ ವರ್ಷದ ಅಚರಣೆ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2024, 14:27 IST
Last Updated 18 ಅಕ್ಟೋಬರ್ 2024, 14:27 IST
ಕುಶಾಲನಗರ ಟೋಲ್ ಗೇಟ್ ಬಳಿ ಇರುವ ಕಾವೇರಿ ಪ್ರತಿಮೆಗೆ ಕಾವೇರಿ ಸಂಕ್ರಮಣದ ಅಂಗವಾಗಿ ವಿವಿಧ ಪುಷ್ಪಗಳಿಂದ ವಿಶೇಷವಾಗಿ ಅಲಂಕಾರ ಮಾಡಿ ಶುಕ್ರವಾರ ವಿಶೇಷ ಪೂಜೆ ಸಲ್ಲಿಸಲಾಯಿತು
ಕುಶಾಲನಗರ ಟೋಲ್ ಗೇಟ್ ಬಳಿ ಇರುವ ಕಾವೇರಿ ಪ್ರತಿಮೆಗೆ ಕಾವೇರಿ ಸಂಕ್ರಮಣದ ಅಂಗವಾಗಿ ವಿವಿಧ ಪುಷ್ಪಗಳಿಂದ ವಿಶೇಷವಾಗಿ ಅಲಂಕಾರ ಮಾಡಿ ಶುಕ್ರವಾರ ವಿಶೇಷ ಪೂಜೆ ಸಲ್ಲಿಸಲಾಯಿತು   

ಕುಶಾಲನಗರ: ತಾಲ್ಲೂಕಿನ ಬಾರವಿ ಕಾವೇರಿ ಕನ್ನಡ ಸಂಘದ ವತಿಯಿಂದ ‌ಟೋಲ್ ಗೇಟ್ ಬಳಿ ಇರುವ ಕಾವೇರಿ ಪ್ರತಿಮೆ ಆವರಣದಲ್ಲಿ ಶುಕ್ರವಾರ  12ನೇ ವರ್ಷದ ಕಾವೇರಿ ಸಂಕ್ರಮಣ ಹಬ್ಬ, ತೀರ್ಥ ವಿತರಣೆ ಮತ್ತು ಅನ್ನಸಂತರ್ಪಣೆ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು.

ಕಾವೇರಿ ಸಂಕ್ರಮಣದ ಅಂಗವಾಗಿ ಕಾವೇರಿ ಪ್ರತಿಮೆಗೆ ವಿವಿಧ ಪುಷ್ಪಗಳಿಂದ ವಿಶೇಷವಾಗಿ ಅಲಂಕಾರ ಮಾಡಿ ವಿಶೇಷ ಪೂಜೆ ಸಲ್ಲಿಸಲಾಯಿತು. ಸಂಕ್ರಮಣ ಹಬ್ಬದ ಅಂಗವಾಗಿ ಕಾವೇರಿ ಪ್ರತಿಮೆಗೆ ಹಾಲು, ತುಪ್ಪ, ಅರಿಸಿನ, ಕುಂಕುಮಗಳಿಂದ ಅಭಿಷೇಕ ಮಾಡಲಾಯಿತು. ಮಂಟಪವನ್ನು ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಶೃಂಗಾರಿಸಲಾಯಿತು.

ತಹಶೀಲ್ದಾರ್ ಕಿರಣ್ ಗೌರಯ್ಯ ಮತ್ತು ಉದ್ಯಮಿ ಎಸ್.ಎಲ್.ಎನ್.ವ್ಯವಸ್ಥಾಪಕ ನಿರ್ದೇಶಕ ಸಾತಪ್ಪನ್ ಕಾವೇರಿ ಮಾತೆಗೆ ಪೂಜೆ ಸಲ್ಲಿಸುವ ‌ಮೂಲಕ‌ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ADVERTISEMENT

ಕನ್ನಡ ಸಂಘದ ರವೀಂದ್ರ ಪ್ರಸಾದ್ ಮಾತನಾಡಿ, ‘ನಾಡಿನ‌ ಜೀವನದಿ ಹಾಗೂ ಕೊಡಗಿನ ಕುಲದೈವ ಕಾವೇರಿ ಸಂಕ್ರಮಣದ ಅಂಗವಾಗಿ ಪ್ರತೀ ವರ್ಷದಂತೆ ಈ ವರ್ಷವೂ ಕೊಡಗು ಹಾಗೂ ಮೈಸೂರು ಜಿಲ್ಲೆಯ ಭಕ್ತರಿಗೆ ಹತ್ತು ಸಾವಿರ ಬಾಟಲಿಗಳಷ್ಟು ಕಾವೇರಿ ತೀರ್ಥವನ್ನು ವಿತರಿಸಲಾಗುತ್ತಿದೆ. 138 ಹುಣ್ಣಿಮೆ ಪೂಜೆಗಳನ್ನು ಯಶಸ್ವಿಯಾಗಿ ನಡೆಸಿ ಇಂದು ಕಾವೇರಿ ಸಂಕ್ರಮಣ ಹಬ್ಬವನ್ನು ಭಕ್ತರೊಂದಿಗೆ ಸೇರಿ ಶ್ರದ್ಧಾಭಕ್ತಿಯಿಂದ ಆಚರಿಸಲಾಗುತ್ತಿದೆ. ಜೊತೆಗೆ, ದಾನಿಗಳ ಸಹಕಾರದಿಂದ ಸುಮಾರು 8 ಸಾವಿರಕ್ಕೂ ಅಧಿಕ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನೆರವೇರಿಸಲಾಗುತ್ತಿದೆ’ ಎಂದರು.

ಬಾರವಿ ಕಾವೇರಿ ಕನ್ನಡ ಸಂಘದ ಅಧ್ಯಕ್ಷ ಬಬೀಂದ್ರ ಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ಅರ್ಚಕ ಕೃಷ್ಣಮೂರ್ತಿ ಭಟ್ ನೇತೃತ್ವದಲ್ಲಿ ವಿವಿಧ ಪೂಜಾ ಕೈಂಕಾರ್ಯಗಳು ನಡೆದವು.

ಈ ವೇಳೆ ಬಾರವಿ ಕಾವೇರಿ ಕನ್ನಡ ಸಂಘದ ಪದಾಧಿಕಾರಿಗಳಾದ ವಿಜೇಂದ್ರ ಪ್ರಸಾದ್, ಕಾವೇರಿ ಮಹಾ ಆರತಿ ಬಳಗದ ಸಂಚಾಲಕ ಚಂದ್ರಮೋಹನ್, ಗಣಪತಿ ದೇವಾಲಯ ಸಮಿತಿ ಸದಸ್ಯ ಚಂದ್ರು, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಮಹದೇವ್, ಅಡುಗೆ ರುದ್ರ ಪಾಲ್ಗೊಂಡಿದ್ದರು.

ತಲಕಾವೇರಿ ಸನ್ನಿಧಿಯಿಂದ ಕಾವೇರಿ ತೀರ್ಥವನ್ನು ತಂದು ವಿಶೇಷ ಪೂಜೆ ಸಲ್ಲಿಸಿ ನಂತರ ನೆರೆದಿದ್ದ ಭಕ್ತರಿಗೆ ವಿತರಣೆ ಮಾಡಲಾಯಿತು. ಜೊತೆಗೆ, ಸಂಕ್ರಮಣ ಹಬ್ಬದ ಅಂಗವಾಗಿ ಅನ್ನಸಂತರ್ಪಣೆ ನೆರವೇರಿಸಿದರು.

ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಮುಳ್ಳುಸೋಗೆ, ಗುಮ್ಮನಕೊಲ್ಲಿ, ಕೊಪ್ಪ, ಆವೃತ್ತಿ, ಚಿಕ್ಕಹೊಸೂರು, ಬೈಲುಕುಪ್ಪೆಯಿಂದ ನೂರಾರು ಭಕ್ತರು ಆಗಮಿಸಿ, ಕಾವೇರಿ ಮಾತೆಗೆ ಪೂಜೆ ಸಲ್ಲಿಸಿದರು.

ಕುಶಾಲನಗರ ಕಾವೇರಿ ಪ್ರತಿಮೆ ಆವರಣದಲ್ಲಿ ಸಂಕ್ರಮಣ ಹಬ್ಬದ ಅಂಗವಾಗಿ ಭಕ್ತರಿಗೆ ಏರ್ಪಡಿಸಿದ್ದ ಅನ್ನಸಂತರ್ಪಣೆಯಲ್ಲಿ ತಹಶೀಲ್ದಾರ್ ಕಿರಣ್ ಗೌರಯ್ಯ ಪ್ರಸಾದ ವಿತರಣೆ ಮಾಡಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.