ADVERTISEMENT

ಸೋಮವಾರಪೇಟೆ | ರಾಜ್ಯ ಹೆದ್ದಾರಿ ನಿರ್ವಹಣೆ ಕೊರತೆ: ಹೈರಣಾಗುತ್ತಿರುವ ವಾಹನ ಸವಾರರು

ಡಿ.ಪಿ.ಲೋಕೇಶ್
Published 18 ನವೆಂಬರ್ 2024, 7:32 IST
Last Updated 18 ನವೆಂಬರ್ 2024, 7:32 IST
ಸೋಮವಾರಪೇಟೆ ತಾಲ್ಲೂಕಿನ ಕೂತಿ ಗ್ರಾಮದ ಮೂಲಕ ಹಾದುಹೋಗುವ ರಾಜ್ಯ ಹೆದ್ದಾರಿ ಗುಂಡಿಮಯವಾಗಿರುವುದು
ಸೋಮವಾರಪೇಟೆ ತಾಲ್ಲೂಕಿನ ಕೂತಿ ಗ್ರಾಮದ ಮೂಲಕ ಹಾದುಹೋಗುವ ರಾಜ್ಯ ಹೆದ್ದಾರಿ ಗುಂಡಿಮಯವಾಗಿರುವುದು   

ಸೋಮವಾರಪೇಟೆ: ಬೈಂದೂರಿನಿಂದ ಮಾಗಡಿಗೆ ತೆರಳುವ ರಾಜ್ಯ ಹೆದ್ದಾರಿ ನಿರ್ವಹಣೆ ಇಲ್ಲದೇ ವಾಹನ ಸವಾರರಿಗೆ ತೊಂದರೆಯಾಗಿದೆ.

ತೋಳೂರುಶೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಲೋಕೋಪಯೋಗಿ ಇಲಾಖೆ ರಸ್ತೆ ನಿರ್ವಹಣೆ ಮಾಡದಿರುವ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಲ್ಲಿನ ಅಲಕಟ್ಟೆಯಿಂದಲೇ ರಸ್ತೆಯಲ್ಲಿ ಸಾಕಷ್ಟು ಗುಂಡಿಗಳಾಗಿದ್ದು, ವಾಹನ ಸವಾರರು ಪರದಾಡುವಂತಾಗಿದೆ. ಕೆಲವೆಡೆ ಗುಂಡಿಗಳನ್ನು ತಪ್ಪಿಸಿ ಸಂಚರಿಸಲು ಸಾಧ್ಯವೇ ಇಲ್ಲದಂತಾಗಿದೆ. ಇದೇ ರಸ್ತೆಯಲ್ಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸಂಚರಿಸುತ್ತಿದ್ದರೂ, ರಸ್ತೆ ಸರಿಪಡಿಸಲು ಮುಂದಾಗುತ್ತಿಲ್ಲ. ರಿಪೇರಿ ಮಾಡಿಸುವ ಭರವಸೆಯನ್ನು ಮಾತ್ರವೇ ಅವರು ನೀಡುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ADVERTISEMENT

ಗುಂಡಿಗೆ ಜಲ್ಲಿ ತುಂಬಿಸಿದರೂ, ಕೆಲವೇ ದಿನಗಳಲ್ಲಿ ಮತ್ತೆ ಅಲ್ಲಿ ಗುಂಡಿಗಳು ನಿರ್ಮಾಣವಾಗುತ್ತಿದೆ. ಕೂಡಲೇ ರಸ್ತೆಯನ್ನು ಶಾಶ್ವತವಾಗಿ ಉಳಿಯುವಂತೆ ಸರಿಪಡಿಸಲು ಒತ್ತಾಯಿಸಿದ್ದಾರೆ.

ಈ ರಸ್ತೆ ತೀರಾ ಇಕ್ಕಟ್ಟಾಗಿದ್ದು, ಸಾಕಷ್ಟು ಗುಂಡಿ ಬಿದ್ದಿದೆ. ಒಂದು ವಾಹನ ಮಾತ್ರ ರಸ್ತೆಯಲ್ಲಿ ಸಂಚರಿಸಲು ಅವಕಾಶ ಇದ್ದು, ಎದುರಿನಿಂದ ಮತ್ತೊಂದು ವಾಹನ ಬಂದಲ್ಲಿ ರಸ್ತೆಯ ಬದಿಗೆ ಇಳಿಸಿ ನಿಲ್ಲಿಸಬೇಕಾದ ಪರಿಸ್ಥಿತಿ ಇದೆ. ಕಿರಿದಾದ ರಸ್ತೆಯಲ್ಲಿ ಈಗಾಗಲೇ ಸಾಕಷ್ಟು ಅಪಘಾತಗಳು ನಡೆಯುತ್ತಿದ್ದರೂ, ಹಲವು ವರ್ಷಗಳಿಂದ ರಸ್ತೆ ನಿರ್ವಹಣೆ ಮಾಡುವಂತೆ ಲೋಕೋಪಯೋಗಿ ಇಲಾಖೆಯವರನ್ನು ಒತ್ತಾಯಿಸಿದರೂ, ಇಂದಿಗೂ ರಸ್ತೆ ಸುಸ್ಥಿತಿಗೆ ತಲುಪಿಸಲು ಇಲಾಖೆಗೆ ಸಾಧ್ಯವಾಗಿಲ್ಲ.

ಇದರೊಂದಿಗೆ ಕಲ್ಕಂದೂರು ಗ್ರಾಮದಿಂದ ಕೂತಿ ಗ್ರಾಮದವರೆ 13 ಕಿ.ಮೀವರೆಗೂ ಸರಿಯಾದ ಚರಂಡಿ ನಿರ್ಮಿಸದೆ, ಕಾಟಾಚಾರಕ್ಕೆ ರಸ್ತೆ ನಿರ್ವಹಣೆ ಮಾಡಲಾಗುತ್ತಿದೆ. ವರ್ಷದಲ್ಲಿ ಮಳೆಗಾಲಕ್ಕೂ ಮುನ್ನ ಮತ್ತು ಮಳೆಗಾಲದ ನಂತರ ಎರಡು ಬಾರಿ ರಸ್ತೆ ಬದಿಯ ಕಾಡು ಕಡಿಯುವುದು, ಚರಂಡಿ ನಿರ್ಮಾಣ ಮಾಡಿ, ಗುಂಡಿ ಮುಚ್ಚಿಸುವ ಕೆಲಸ ಇಲಾಖೆ ಮಾಡಿಸಬೇಕಿದೆ. ಅದಾವುದು ಇಲ್ಲಿ ಆಗುತ್ತಿಲ್ಲ. ರಸ್ತೆಯ ಎರಡೂ ಬದಿಯಲ್ಲಿ ಸರಿಯಾಗಿ ಚರಂಡಿ ಮಾಡದಿರುವುದರಿಂದ ರಸ್ತೆಯ ಮೇಲೆ ನೀರಿನೊಂದಿಗೆ ಕೆಸರು ಸಂಗ್ರಹವಾಗಿ ವಾಹನಗಳು ಸಂಚರಿಸಲು ಸಾಧ್ಯವಾಗುತ್ತಿಲ್ಲ. ಎದುರಿನಿಂದ ವಾಹನಗಳು ಬಂದ ಸಂದರ್ಭ ದ್ವಿಚಕ್ರ ವಾಹನಗಳು ಸಾಕಷ್ಟು ಭಾರಿ ಬಿದ್ದು ಗಾಯ ಮಾಡಿಕೊಂಡಿದ್ದಾರೆ ಎಂದು ಸ್ಥಳೀಯರಾದ ಕೂತಿ ವಿನಯ್, ಮೋಹನ್ ದೂರಿದರು.

ಈ ರಸ್ತೆಯಲ್ಲಿ ಸೋಮವಾರಪೇಟೆ ಪಟ್ಟಣದ ಶಿಕ್ಷಣ ಸಂಸ್ಥೆಗಳ ಭಾಗಕ್ಕೆ ಶಾಲಾ ವಾಹನ ಹಾಗೂ ಸರ್ಕಾರಿ ಬಸ್ ಸಂಚಾರ ಮಾಡುತ್ತಿದ್ದು, ಬೆಳಿಗ್ಗೆ ಮತ್ತು ಸಂಜೆ ವಾಹನಗಳು ಹೆಚ್ಚಾಗಿರುತ್ತವೆ. ಇವುಗಳೊಂದಿಗೆ ಹೊರ ಊರುಗಳಿಂದ ಪಿಕ್ಅಪ್ ವಾಹನಗಳಲ್ಲಿ ಕೆಲಸಕ್ಕೆ ಕಾರ್ಮಿಕರನ್ನು ತುಂಬಿಸಿಕೊಂಡು ವೇಗವಾಗಿ ಇದೇ ರಸ್ತೆಯಲ್ಲಿ ಬರುತ್ತಿದ್ದು, ವಾಹನ ಸವಾರರಿಗೆ ರಕ್ಷಣೆ ಇಲ್ಲದಂತಾಗಿದೆ. ಇಲಾಖಾಧಿಕಾರಿಗಳನ್ನು ಕೇಳಿದರೆ, ಸಿದ್ಧ ಉತ್ತರ ನೀಡುತ್ತಾರೆ. ಆದರೆ, ಸ್ಥಳಕ್ಕೆ ಬಂದು ಶಾಶ್ವತ ಪರಿಹಾರ ಮಾಡುತ್ತಿಲ್ಲ ಎಂದು ಹೊಸಬೀಡು, ತೋಳುರುಶೆಟ್ಟಳ್ಳಿ, ಕೂತಿ ಗ್ರಾಮಸ್ಥರು ಆರೋಪಿಸಿದರು.

ಸಮಸ್ಯೆಗಳನ್ನು ಕೂಡಲೇ ಲೋಕೋಪಯೋಗಿ ಇಲಾಖೆಯವರು ಪರಿಹರಿಸಬೇಕು. ರಸ್ತೆಯಲ್ಲಿನ ಗುಂಡು ಮುಚ್ಚಿಸಿ, ರಸ್ತೆಯ ಬದಿ ಚರಂಡಿ ವ್ಯವಸ್ಥೆ ಕಲ್ಪಿಸಿ, ರಸ್ತೆಯ ಮೇಲೆ ಹರಿಯುತ್ತಿರುವ ನೀರು, ಬದಿಯಲ್ಲಿ ಹರಿಯುವಂತೆ ಮಾಡಬೇಕು. ತಪ್ಪಿದಲ್ಲಿ ಗ್ರಾಮಸ್ಥರೊಂದಿಗೆ ರಸ್ತೆಗೆ ಬಾಳೆ ಗಿಡ ನೆಟ್ಟು ಪ್ರತಿಭಟನೆ ನಡೆಸಲಾಗುವುದು ಎಂದು ತೋಳೂರುಶೆಟ್ಟಳ್ಳಿ ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಮಾಚಯ್ಯ ಎಚ್ಚರಿಸಿದರು.

ಸೋಮವಾರಪೇಟೆ ತಾಲ್ಲೂಕಿನ ಕೂತಿ ಗ್ರಾಮದ ಬಳಿಯಲ್ಲಿ ರಸ್ತೆ ಬದಿಯಲ್ಲಿ ಬೆಳೆದಿರುವ ಗಿಡಗಳು
ಸೋಮವಾರಪೇಟೆ ತಾಲ್ಲೂಕಿನ ರಾಜ್ಯ ಹೆದ್ದಾರಿಯ ಕಾಡು ಕಡಿಯದೆ ಸಂಚಾರಕ್ಕೆ ತೊಡಕಾಗಿರುವುದು.
ರಸ್ತೆಯ ಎರಡೂ ಬದಿಯಲ್ಲಿ ಕಾಡು ಬೆಳೆದಿದ್ದು ಅನಾಹುತ ನಡೆಯುವ ಮುನ್ನ ರಸ್ತೆ ಬದಿಯ ಕಾಡನ್ನು ಕಡಿದು ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು
ಲಕ್ಷ್ಮೀಕಾಂತ ಕೂತಿ ಗ್ರಾಮ
ಕೂತಿ ಗ್ರಾಮದ ಮೂಲಕ ಹಾದುಹೋಗಿರುವ ರಸ್ತೆ ನಿರ್ಮಾಣಕ್ಕೆ ಈಗಾಗಲೇ ಸರ್ಕಾರದಿಂದ ₹ 20 ಕೋಟಿ ಹಣ ಬಿಡುಗಡೆಯಾಗಿದೆ. ಮುಂದಿನ ದಿನಗಳಲ್ಲಿ ಕಾಮಗಾರಿ ಪ್ರಾರಂಭಿಸಲಾಗುವುದು
ವೆಂಕಟೇಶ್ ನಾಯಕ ಲೋಕೋಪಯೋಗಿ ಇಲಾಖೆಯ ಎಇಇ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.