ವಿರಾಜಪೇಟೆ: 2 ವರ್ಷದ ಮಗು ಹತ್ಯೆ ಮಾಡಿದ ಪ್ರಕರಣದ ಆರೋಪಿಗೆ ಇಲ್ಲಿನ 2ನೇ ಜಿಲ್ಲಾ ಸತ್ರ ನ್ಯಾಯಾಲಯವು ಜೀವಾವಧಿಯ ಶಿಕ್ಷೆ ಹಾಗೂ ₹55 ಸಾವಿರ ದಂಡ ವಿಧಿಸಿದೆ.
ಮಗು ಹತ್ಯೆ ಮಾಡಿದ ಆರೋಪದಡಿ ಪಣಿ ಎರವರ ರವಿ (ಮಣಿಕಂಠ) ಎಂಬಾತನಿಗೆ ವಿರಾಜಪೇಟೆಯ 2ನೇ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಎಸ್.ಸುಜಾತ ಅವರು ಆರೋಪ ಸಾಬಿತಾದ ಹಿನ್ನೆಲೆಯಲ್ಲಿ ಶಿಕ್ಷೆ ವಿಧಿಸಿದ್ದಾರೆ. ದಂಡ ಪಾವತಿಗೆ ತಪ್ಪಿದರೆ ಒಂದು ವರ್ಷದ ಸಾದಾ ಸಜೆ ಅನುಭವಿಸುವಂತೆ ತೀರ್ಪು ನೀಡಿದ್ದಾರೆ.
ಈಸ್ಟ್ ನೆಮ್ಮಾಲೆಯ ತೋಟದಲ್ಲಿನ ಲೈನ್ ಮನೆಯಲ್ಲಿ ವಾಸವಾಗಿದ್ದ ದಂಪತಿಗಳಾದ ಜೇನು ಕುರುಬರ ಗೀತಾ ಹಾಗೂ ಸುಬ್ರಮಣಿ ಅವರು ಬೇರ್ಪಟ್ಟು ಜೀವನ ನಡೆಸುತ್ತಿದ್ದರು. ದಂಪತಿಯ ಮಗಳು ತಂದೆ ಸುಬ್ರಮಣಿಯೊಂದಿಗೆ ಹಾಗೂ 2 ವರ್ಷ ಗಂಡು ಮಗು ತಾಯಿ ಗೀತಾ ಅವರೊಂದಿಗೆ ವಾಸವಾಗಿದ್ದರು.
ಈ ಸಂದರ್ಭ ಗೀತಾ ಅವರಿಗೆ ಪಣಿ ಎರವರ ರವಿ ಅಲಿಯಾಸ್ ಮಣಿಕಂಠ ಎಂಬುವವರ ಪರಿಚಯವಾಗಿ ಜೊತೆಯಲ್ಲಿ ವಾಸಿಸುತ್ತಿರುತ್ತಾರೆ. ಆದರೆ ರವಿ ಗೀತಾ ಅವರ 2 ವರ್ಷ ಮಗುವನ್ನು ಪತಿ ಬಳಿಗೆ ಕಳುಹಿಸು ಎಂದು ಒತ್ತಾಯಿಸಿ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ.
ಈ ವಿಚಾರವಾಗಿ 2020 ಡಿ.21ರಂದು ಗೀತಾ ಅವರೊಂದಿಗೆ ಜಗಳವಾಡಿ ಮಗುವನ್ನು ಕಳುಹಿಸದಿದ್ದರೆ ಕೊಲ್ಲುವುದಾಗಿ ಹೇಳಿ ಮಗುವಿನ ಮೇಲೆ ಮಾರಾಣಾಂತಿಕ ಹಲ್ಲೆ ನಡೆಸಿದ್ದಾನೆ. ಹಲ್ಲೆಯಿಂದ ಮಗು ಮೃತಪಟ್ಟಿರುವ ಕುರಿತು ಗೀತಾ ಅವರು ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ತನಿಖಾಧಿಕಾರಿ ಪರಶಿವಮೂರ್ತಿ ಈ ಕುರಿತು ತನಿಖೆ ನಡೆಸಿ, ಈ ಕುರಿತು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.