ADVERTISEMENT

ಲೋಕಸಭಾ ಚುನಾವಣೆ | ಕೊಡಗು ಜಿಲ್ಲೆಯಲ್ಲಿ ಯದುವೀರ್ ಮಿಂಚಿನ ಸಂಚಾರ

ತಲಕಾವೇರಿಯಲ್ಲಿ ಪೂಜೆ, ಚೇರಂಗಾಲ, ಮೂರ್ನಾಡು, ಸಂಪಾಜೆ ಭಾಗದಲ್ಲಿ ಕಾರ್ಯಕರ್ತರೊಂದಿಗೆ ಸಭೆ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2024, 5:57 IST
Last Updated 23 ಮಾರ್ಚ್ 2024, 5:57 IST
ಮೈಸೂರು– ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ತಲಕಾವೇರಿಯಲ್ಲಿ ಶುಕ್ರವಾರ ಪೂಜೆ ಸಲ್ಲಿಸಿದರು
ಮೈಸೂರು– ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ತಲಕಾವೇರಿಯಲ್ಲಿ ಶುಕ್ರವಾರ ಪೂಜೆ ಸಲ್ಲಿಸಿದರು   

ಮಡಿಕೇರಿ: ಮೈಸೂರು– ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಶುಕ್ರವಾರ ತಲಕಾವೇರಿಯಲ್ಲಿ ಪೂಜೆ ಸಲ್ಲಿಸಿ ಕೊಡಗು ಜಿಲ್ಲೆಯಲ್ಲಿನ ತಮ್ಮ ಪ್ರಚಾರ ಅಭಿಯಾನಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿದರು.

ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೂ ಸುಡುವ ಬಿಸಿಲಿನಲ್ಲಿ ಅವರು ತಾಲ್ಲೂಕಿನ ವಿವಿಧ ಕಡೆ ನಡೆದ ಕಾರ್ಯಕರ್ತರ ಸಭೆಗಳಲ್ಲಿ ಭಾಗವಹಿಸಿ, ಬೆಂಬಲ ಯಾಚಿಸಿದರು.

‘ನಾನು ಮಹಾರಾಜ ಜನಸಾಮಾನ್ಯರಿಗೆ ಸಿಗುವುದಿಲ್ಲ ಎಂಬ ಮಾತು ಸುಳ್ಳು’ ಎಂದು ಹೇಳುತ್ತಲೇ ಅವರು ಕಾರ್ಯಕರ್ತರೊಂದಿಗೆ ಮಧ್ಯಾಹ್ನದ ಊಟ ಮಾಡಿ ಗಮನ ಸೆಳೆದರು.

ADVERTISEMENT

ಚೇರಂಬಾಣೆ, ಮೂರ್ನಾಡು ಹಾಗೂ ಸಂಪಾಜೆ ಭಾಗದ ಬಿಜೆಪಿ ಕಾರ್ಯಕರ್ತರಲ್ಲಿ ಹೊಸ ಹುರುಪು ತಂಬಿದರು. ನೂರಾರು ಕಾರ್ಯಕರ್ತರು ಯದುವೀರ್‌ ಅವರಿಗೆ ಜಯಕಾರ ಹಾಕಿ ಬೆಂಬಲ ವ್ಯಕ್ತಪಡಿಸಿದರು.

ಈ ವೇಳೆ ವಿವಿಧ ಕಾರ್ಯಕರ್ತರ ಸಭೆಗಳಲ್ಲಿ ಮಾತನಾಡಿದ ಅವರು, ‘ನಾನು ಮಹಾರಾಜ ಜನಸಾಮಾನ್ಯರಿಗೆ ಸಿಗುವುದಿಲ್ಲ ಎಂಬ ಮಾತು ಸುಳ್ಳು’ ಎಂದು ಪದೇ ಪದೇ ಹೇಳಿದರು.

‘ನಾನು ರಾಜ ಎಂಬ ಕಾರಣಕ್ಕೆ ಕಾರ್ಯಕರ್ತರಲ್ಲಿ ಅಂಜಿಕೆ ಬೇಡ. ರಾಜಪ್ರಭುತ್ವ ಸ್ವಾತಂತ್ರ್ಯಪೂರ್ವದಲ್ಲೇ ಹೊರಟು ಹೋಗಿದ್ದು, ಈಗ ಪ್ರಜಾಪ್ರಭುತ್ವ ಇದೆ. ನಾನು ಜನಸಾಮಾನ್ಯರಲ್ಲಿ ಒಬ್ಬ’ ಎಂದು ಹೇಳುವ ಮೂಲಕ ಕಾರ್ಯಕರ್ತರೊಂದಿಗೆ ಬೆರೆತರು.

‘ರಾಜನೆಂಬ ಕಾರಣಕ್ಕೆ ಕಾರ್ಯಕರ್ತರು ಅಂತರ ಕಾಯ್ದುಕೊಳ್ಳಬೇಕಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯ ವಿರುದ್ಧ ಯಾರೂ ನಡೆಯಲಾಗದು. ನಾನು ರಾಜ ಗೌರವವನ್ನು ವಿಸರ್ಜಿಸಿ ಜನರೊಂದಿಗೆ ಇದ್ದೇನೆ. ಕಾರ್ಯಕರ್ತರ ಶ್ರಮ ಇದ್ದರೆ ಮಾತ್ರ ನನ್ನ ಗೆಲುವು’ ಎಂದು ತಿಳಿಸಿದರು.

‘ಸಂಸದರ ಕಚೇರಿಯನ್ನು ತೆರೆಯುತ್ತೇನೆ. ಅದರಲ್ಲಿ ಪಕ್ಷದ ಕಾರ್ಯಕರ್ತರೇ ಇರುತ್ತಾರೆ. ಕಾರ್ಯಕರ್ತರು ಮಾತ್ರವಲ್ಲ ಸಾರ್ವಜನಿಕರಿಗೂ ಸ್ಪಂದಿಸುವೆ’ ಎಂದು ಭರವಸೆ ನೀಡಿದರು.

ಹಾಲಿ ಸಂಸದ ಪ್ರತಾಪಸಿಂಹ ಅವರು 10 ವರ್ಷದ ಅವಧಿಯಲ್ಲಿ ಬಿಜೆಪಿಗೆ ಭದ್ರವಾದ ಬುನಾದಿ ಹಾಕಿದ್ದಾರೆ. ಅವರು ಮಾಡಿರುವ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸಿಕೊಂಡು ಹೋಗುವೆ. ಮೈಸೂರಿನಲ್ಲಿ ಈಗಾಗಲೇ ಪ್ರಚಾರಕಾರ್ಯಕ್ಕೆ ಅವರು ಜೊತೆಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಕೊಡಗಿನಲ್ಲಿ ನಡೆಯುವ ಪ್ರಚಾರ ಕಾರ್ಯದಲ್ಲಿ ಅವರೂ ಭಾಗಿಯಾಗುವರು ಎಂಬ ವಿಶ್ವಾಸ ಇದೆ ಎಂದರು.

ಮೈಸೂರು– ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಕೊಡಗಿನಲ್ಲಿ ಪಕ್ಷದ ಕಾರ್ಯಕರ್ತರು ಮುಖಂಡರೊಂದಿಗೆ ಊಟ ಮಾಡಿದರು

‘ಕಾಂಗ್ರೆಸ್‌ ಅಭ್ಯರ್ಥಿ ಎಂ.ಲಕ್ಷ್ಮಣ್ ಅವರನ್ನು ಎದುರಿಸುತ್ತೇನೆ. ಜನರು ನಮ್ಮ ನಮ್ಮ ಯೋಗ್ಯತೆಗೆ ಅನುಸಾರ ಮತ ನೀಡುತ್ತಾರೆ’ ಎಂದು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ಬಿಜೆಪಿಯ ಹಿರಿಯ ಮುಖಂಡ ಕೆ.ಜಿ.ಬೋಪಯ್ಯ ಮಾತನಾಡಿ, ‘ಭಾರತ ವಿಶ್ವಗುರು ಸ್ಥಾನದಲ್ಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯವೈಖರಿಯನ್ನು ಜನಮೆಚ್ಚಿದ್ದಾರೆ. ಹಿಂದಿನ ಸಂಸದ ಪ್ರತಾಪ್ ಸಿಂಹ ಅವರು ಜನಪರ ಕಾರ್ಯಕ್ರಮ ಜಾರಿಗೊಳಿಸಿ ಕ್ಷೇತ್ರಕ್ಕೆ ಅಭ್ಯುಧಯಕ್ಕೆ ಶ್ರಮಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಗೆಲುವಿಗೆ ಕಾರ್ಯಕರ್ತರು ಶ್ರಮಿಸಬೇಕು. ಉದಾಸೀನ ತೋರದೆ ಕೇಂದ್ರ ಹಾಗೂ ಈ ಹಿಂದೆ ರಾಜ್ಯದಲ್ಲಿದ್ದ ಬಿಜೆಪಿ ಸರ್ಕಾರದ ಜನಪರ ಯೋಜನೆಗಳನ್ನು ತಲುಪಿಸುವ ಕೆಲಸ ಮಾಡಬೇಕು’ ಎಂದು ಕರೆ ನೀಡಿದರು.

ಮೈಸೂರು– ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಚೇರಂಬಾಣೆಯಲ್ಲಿ ಶುಕ್ರವಾರ ನಡೆದ ಪಕ್ಷದ ಕಾರ್ಯಕರ್ತರು ಸಭೆಯಲ್ಲಿ ಮಾತನಾಡಿದರು

ವಿಧಾನ ಪರಿಷತ್ತಿನ ಸದಸ್ಯ ಸುಜಾ ಕುಶಾಲಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿಕಾಳಪ್ಪ, ಪ್ರಧಾನ ಕಾರ್ಯದರ್ಶಿಗಳಾದ ಮಹೇಶ್ ಜೈನಿ, ನೆಲ್ಲೀರ ಚಲನ್ ಕುಮಾರ್, ವಕ್ತಾರರಾದ ತಳೂರು ಕಿಶೋರ್ ಕುಮಾರ್, ಬಿ.ಕೆ.ಅರುಣ್ ಕುಮಾರ್, ಸುಬ್ರಮಣ್ಯ ಉಪಾಧ್ಯಾಯ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ, ಹಿಂದುಳಿದ ವರ್ಗಗಳ ಮೋರ್ಚಾದ ಜಿಲ್ಲಾಧ್ಯಕ್ಷ ಅಫ್ರು ರವೀಂದ್ರ, ರೈತ ಮೋರ್ಚಾ ಜಿಲ್ಲಾಧ್ಯಕ್ಷ ನಾಗೇಶ್ ಕುಂದಲ್ಪಾಡಿ, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ ಭಾಗಮಂಡಲ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಹೊಸೂರು ಸತೀಶ್, ಮಡಿಕೇರಿ ನಗರ ಬಿಜೆಪಿ ಅಧ್ಯಕ್ಷ ಉಮೇಶ್ ಸುಬ್ರಮಣಿ ಭಾಗವಹಿಸಿದ್ದರು.

ಸಂಪಾಜೆ ಸಭೆಯಲ್ಲಿ ಕಾರ್ಯಕರ್ತರಿಗೆ ಕೈ ಮುಗಿದ ಯದುವೀರ್

ಮೈಸೂರು– ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಚೇರಂಬಾಣೆಯಲ್ಲಿ ಶುಕ್ರವಾರ ನಡೆಸಿದ ಸಭೆಯಲ್ಲಿ ಪಕ್ಷದ ಕಾರ್ಯಕರ್ತರ ಸೇರಿದ್ದರು

ಸಂಪಾಜೆಯಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ್ದ ಪ್ರತಿಯೊಬ್ಬರ ಬಳಿಯೂ ಹೋದ ಯದುವೀರ್ ಕೈಮುಗಿದು ನಮಸ್ಕರಿಸಿದ್ದು ವಿಶೇಷ ಎನಿಸಿತ್ತು. ಪ್ರತಿಯಾಗಿ ಕಾರ್ಯಕರ್ತರೂ ಅತ್ಯಂತ ಗೌರವದಿಂದ ಕೈ ಮುಗಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.