ವಿರಾಜಪೇಟೆ: ‘ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿಯ ಕುರಿತು ಯಾವುದೇ ಗೊಂದಲ ಬೇಡ. ಅದು ಪಕ್ಷದ ವರಿಷ್ಠರ ತೀರ್ಮಾನವಾಗಿದ್ದು, ಇಲ್ಲಿನ ಸಂಸದರು ಕಳೆದ 10 ವರ್ಷಗಳಲ್ಲಿ ಉತ್ತಮವಾಗಿ ಜನಪರ ಕೆಲಸ ಮಾಡಿದ್ದಾರೆ’ ಎಂದು ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಉಸ್ತುವಾರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಹೇಳಿದರು.
ಪಟ್ಟಣದ ಸೆರಿನಿಟಿ ಸಭಾಂಗಣದಲ್ಲಿ ಗುರುವಾರ ನಡೆದ ಬಿಜೆಪಿ ವಿರಾಜಪೇಟೆ ಮಂಡಲದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಅವರು ಮಾತನಾಡಿದರು.
‘ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಳೆದ 10 ವರ್ಷಗಳ ಅವಧಿಯಲ್ಲಿ ಅಭಿವೃದ್ಧಿ ಹಾಗೂ ಜನಪರವಾಗಿ ಕೆಲಸ ಮಾಡಿದೆ. ದೇಶವನ್ನು ವಿಶ್ವಗುರುವಾಗಿಸುವ ಗುರಿ ಇಟ್ಟು ಕೊಂಡಿದೆ. ಮೋದಿ ಎಂದರೆ ಅದು ನಮ್ಮ ಅಭಿಮಾನವಾಗಿದ್ದು, ಇದನ್ನು ಉಳಿಸಬೇಕಿದೆ. ಅದಕ್ಕಾಗಿ ಅವರನ್ನು ಮತ್ತೆ ಅಧಿಕಾರಕ್ಕೆ ತರಬೇಕು’ ಎಂದು ಹೇಳಿದರು.
‘ಲೋಕಸಭಾ ಚುನಾವಣೆಯಲ್ಲಿ ಈ ಬಾರಿ ಕೊಡಗಿನಿಂದ ಕನಿಷ್ಠ ಅಂದರೂ ಒಂದೂವರೆ ಲಕ್ಷ ಮತ ಬರುವಂತೆ ಮಾಡಬೇಕಿದೆ. ಪಕ್ಷದ ಕುರಿತು ಹಾದಿಬೀದಿಯಲ್ಲಿ ಚರ್ಚೆ ಮಾಡಿದರೆ ವಿರೋಧಿಗಳಿಗೆ ಅವಕಾಶ ನೀಡಿದಂತಾಗುತ್ತದೆ. ಈ ರೀತಿ ಅವಕಾಶ ನೀಡದೇ ಪಕ್ಷದ ಸಂಘಟನೆಗೆ ಪ್ರಾಮುಖ್ಯತೆ ನೀಡಬೇಕು’ ಎಂದು ಅವರು ಕರೆ ನೀಡಿದರು.
ಸಂಸದ ಪ್ರತಾಪಸಿಂಹ ಮಾತನಾಡಿ, ‘ವಾಜಪೇಯಿ ಅವರ ಉತ್ತಮ ಆಡಳಿತದಿಂದಾಗಿ 2004ರಲ್ಲಿ ಗೆಲುವು ನಿಶ್ಚಿತ ಎಂದೇ ಭಾವಿಸಲಾಗಿತ್ತು. ಆದರೆ, ಅವರ ಅಭಿವೃದ್ಧಿ ಕೆಲಸವನ್ನು ಕಾರ್ಯಕರ್ತರು ಜನರಿಗೆ ಮುಟ್ಟಿಸುವಲ್ಲಿ ವಿಫಲವಾದ ಕಾರಣ ಪಕ್ಷಕ್ಕೆ ಸೋಲಾಯಿತು. ಆದ್ದರಿಂದ ಅತಿಯಾದ ಆತ್ಮವಿಶ್ವಾಸದಿಂದ ಮೈಮರೆಯದೆ ಕಾರ್ಯಕರ್ತರು ಕೇಂದ್ರ ಸರ್ಕಾರದ ಸಾಧನೆಗಳ ಕುರಿತು ಜನತೆಗೆ ಅರಿವು ಮೂಡಿಸಬೇಕು’ ಎಂದು ಹೇಳಿದರು.
‘ಕೊಡಗಿನಲ್ಲಿ ವೈದ್ಯಕೀಯ ಕಾಲೇಜು ಸೇರಿದಂತೆ ಹಲವು ಶೈಕ್ಷಣಿಕ ಸಂಸ್ಥೆಗಳ ಸ್ಥಾಪನೆ, ಕೊಡಗಿನ ದಸರಾ, ರಸ್ತೆ, ಹೀಗೆ ಹಲವು ಅಭಿವೃದ್ಧಿ ಕೆಲಸಗಳಿಗೆ ಅನುದಾನ ನೀಡಲಾಗಿದೆ. ಮುಂದಿನ 15 ತಿಂಗಳಲ್ಲಿ ಮೈಸೂರು- ಕುಶಾಲನಗರ ನಡುವಿನ ನಾಲ್ಕು ಪಥದ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು. ಹಿಂದಿನ ಚುನಾವಣೆಗಳಲ್ಲಿ ಬೆಂಬಲ ನೀಡಿದಂತೆ ಈ ಬಾರಿಯೂ ಕೊಡಗಿನ ಜನತೆ ಬೆಂಬಲಿಸುತ್ತಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿಯ ಹಿರಿಯ ಮುಖಂಡರಾದ ಕೆ.ಜಿ.ಬೋಪಯ್ಯ, ಸುನಿಲ್ ಸುಬ್ರಮಣಿ, ಜಿಲ್ಲಾ ಘಟಕದ ಅಧ್ಯಕ್ಷ ನಾಪಂಡ ರವಿ ಕಾಳಪ್ಪ, ವಿರಾಜಪೇಟೆ ಮಂಡಲದ ನೂತನ ಅಧ್ಯಕ್ಷ ಮಾಚಿಮಂಡ ಸುವಿನ್ ಗಣಪತಿ ಮಾತನಾಡಿದರು.
ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ ನೆಲ್ಲಿರ ಚಲನ್ ಕುಮಾರ್, ವಿ.ಕೆ.ಲೋಕೇಶ್, ಮಹೇಶ್ ಜೈನಿ, ಮಂಡಲದ ಪ್ರಧಾನ ಕಾರ್ಯದರ್ಶಿ ಅಜಿತ್ ಕರುಂಬಯ್ಯ, ಮಡಿಕೇರಿ ನಗರಸಭೆ ಅಧ್ಯಕ್ಷೆ ಅನಿತಾ ಪೂವಯ್ಯ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬಾಂಡ್ ಗಣಪತಿ, ಒಬಿಸಿ ಘಟಕದ ಜಿಲ್ಲಾ ಅಧ್ಯಕ್ಷ ಅಪ್ರು ರವೀಂದ್ರ, ರಾಜ್ಯ ಶಿಸ್ತು ಸಮಿತಿಯ ರೀನಾ ಪ್ರಕಾಶ್, ವಿರಾಜಪೇಟೆ ನಗರ ಘಟಕದ ಅಧ್ಯಕ್ಷ ಟಿ.ಪಿ.ಕೃಷ್ಣ, ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಪಳೇಯಂಡ ರಾಬಿನ್ ದೇವಯ್ಯ ಹಾಗೂ ಭಾರತೀಶ್ ಭಾಗವಹಿಸಿದ್ದರು.
ಪದಗ್ರಹಣ ಕಾರ್ಯಕ್ರಮದ ಅಂಗವಾಗಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪಕ್ಷದ ಕಾರ್ಯಕರ್ತರಿಂದ ಬೈಕ್ ಜಾಥಾ ಹಾಗೂ ಸಭಾಂಗಣದಲ್ಲಿ ರಕ್ತದಾನ ಶಿಬಿರಗಳು ನಡೆದವು.
ಸೈರನ್ ಹಾಕಿಕೊಂಡು ಓಡಾಡಿದ್ದೇ ಕಾಂಗ್ರೆಸ್ ಶಾಸಕರ ಸಾಧನೆ. ಈಗ ಜಿಲ್ಲೆಯಲ್ಲಿ ನಡೆಯುತ್ತಿರುವ ಕಾಮಗಾರಿಗಳಿಗೆ ಅನುದಾನ ನೀಡಿದ್ದು ಹಿಂದಿನ ಸರ್ಕಾರ. ಜಿಲ್ಲೆಗೆ ಕುಡಿಯುವ ನೀರಿಗೆ ₹ 149 ಕೋಟಿಯ ಅಮೃತ್ ಯೋಜನೆ ಕೇಂದ್ರದ್ದು. ಈಗಿನ ಸರ್ಕಾರದ ಕೊಡುಗೆ ಶೂನ್ಯ-ಪ್ರತಾಪಸಿಂಹ ಸಂಸದ.
ಮೂಲಸೌಕರ್ಯದ ಜೊತೆಗೆ ದೇಶದ ಹಿತಾಸಕ್ತಿಯು ಮುಖ್ಯ ನರೇಂದ್ರ ಮೋದಿ ಅವರೇ 3ನೇ ಬಾರಿ ಪ್ರಧಾನಿಯಾಗಬೇಕಿದೆ. ಲೋಕಸಭಾ ಚುನಾವಣೆಯನ್ನು ಗೆಲ್ಲಲೇಬೇಕಿದೆ. ಅತಿಯಾದ ಆತ್ಮವಿಶ್ವಾಸ ಬೇಡ ಹೋರಾಟವಿರಲಿಕೆ.ಜಿ.ಬೋಪಯ್ಯ ವಿರಾಜಪೇಟೆಯ ನಿಕಟಪೂರ್ವ ಶಾಸಕ.
‘ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಯಾದಿಯಾಗಿ ಸರ್ಕಾರದ ಎಲ್ಲರೂ ರಾಜೀನಾಮೆ ನೀಡಬೇಕು’ ಎಂದು ಶಾಸಕ ಡಾ.ಸಿ.ಎನ್.ಅಶ್ವತ್ಥನಾರಾಯಣ ಒತ್ತಾಯಿಸಿದರು. ಈ ಪ್ರಕರಣದಿಂದ ಕಾಂಗ್ರೆಸ್ ದೊಡ್ಡ ಮುಜುಗರದಲ್ಲಿ ಸಿಲುಕಿದೆ. ಅದಕ್ಕಾಗಿ ಈಗ ಸುಳ್ಳನ್ನು ಸತ್ಯ ಮಾಡಲು ಕಾಂಗ್ರೆಸ್ ನಾಯಕರು ಹೊರಟಿದ್ದಾರೆ. ಈಗಿನ ಕಾಂಗ್ರೆಸ್‌ನವರು ದೇಶವಿರೋಧಿಗಳಾಗಿದ್ದಾರೆ. ಕೂಡಲೇ ನಾಸಿರ್ ಹುಸೇನ್ ಅವರನ್ನು ವಜಾಗೊಳಿಸಬೇಕು ಎಂದು ಅವರು ಇಲ್ಲಿ ಗುರುವಾರ ಸುದ್ದಿಗಾರರಿಗೆ ಹೇಳಿದರು. ಸಂಸದ ಪ್ರತಾಪಸಿಂಹ ಮಾತನಾಡಿ ‘ನಾನು ಹಿಂದೆಯೇ ಕಾಂಗ್ರೆಸ್ ಸರ್ಕಾರ ಬಂದರೆ ಅದು ಕನ್ನಡಿಗರ ಸರ್ಕಾರ ಆಗುವುದಿಲ್ಲ. ಅದು ತಾಲಿಬಾನ್ ಸರ್ಕಾರವಾಗುತ್ತದೆ ಎಂದು ಹೇಳಿದ್ದೆ. ಅದು ಈಗ ನಿಜವಾಗುತ್ತಿದೆ. ವಿಧಾನಸೌಧದೊಳಗೆ ಪಾಕಿಸ್ತಾನ ಪರ ಘೋಷಣೆಯಾಗಿದೆ. ಇದು ಕೇವಲ ‘ಟ್ರೈಲರ್’ ಅಷ್ಟೆ. ಮುಂದೆ ವಿಧಾನಸೌಧದ ಮೇಲಿನ ಗೋಪುರದ ಜಾಗದಲ್ಲಿ ಗುಂಬಸ್ ಬಂದರೂ ಅಚ್ಚರಿ ಇಲ್ಲ. ಕಾಂಗ್ರೆಸ್‌ನವರನ್ನು ಮುಂದುವರೆಯಲು ಬಿಟ್ಟರೆ ಮುಂದೆ ಅಲ್ಲಿ ಅಜಾನ್ ಕೂಡ ಕೇಳುತ್ತದೆ’ ಎಂದು ಹೇಳಿದರು. ಪಾಕಿಸ್ತಾನದ ಪರ ಘೋಷಣೆ ಕೂಗಿದ್ದನ್ನು ತೋರಿಸಿದವರು ಮಾಧ್ಯಮದವರು. ಈಗ ಅದು ನಿಜನಾ ಎಂದು ಕೇಳಿದರೆ ಮಾಧ್ಯಮದವರ ಮೇಲೆಯೇ ಅನುಮಾನ ವ್ಯಕ್ತಪಡಿಸಿದಂತಾಗುತ್ತದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.