ADVERTISEMENT

ಮಹಿಳೆಯರಿಂದ ಮಸಾಜ್ ಆಮಿಷ; 8 ಮಂದಿ ಬಂಧನ

ಕುಶಾಲನಗರ ಠಾಣೆಯ ಪೊಲೀಸರಿಂದ ಮಹತ್ವದ ಕಾರ್ಯಾಚರಣೆ, ಬೆಂಗಳೂರಿನಲ್ಲಿ ಸೆರೆ ಸಿಕ್ಕ ಆರೋಪಿಗಳು

​ಪ್ರಜಾವಾಣಿ ವಾರ್ತೆ
Published 9 ಜುಲೈ 2024, 6:10 IST
Last Updated 9 ಜುಲೈ 2024, 6:10 IST

ಕುಶಾಲನಗರ: ಮಹಿಳೆಯರಿಂದ ಮಸಾಜ್ ಮಾಡಿಸುವ ಆಮಿಷವೊಡ್ಡಿ ಹಣ ಕೀಳುತ್ತಿದ್ದ 7 ಮಂದಿ ಆರೋಪಿಗಳನ್ನು ಕುಶಾಲನಗರ ನಗರ ಠಾಣೆಯ ಪೊಲೀಸರು ಸೋಮವಾರ ಬಂಧಿಸಿದ್ದಾರೆ.

‘ಬಂಧಿತರೆಲ್ಲರೂ ಹಾಸನ ಜಿಲ್ಲೆಯವರಾಗಿದ್ದು, ಬೆಂಗಳೂರಿನಿಂದ ಕಾರ್ಯಾಚರಣೆ ನಡೆಸುತ್ತಿದ್ದರು’ ಎಂದು ಪೊಲೀಸರು ತಿಳಿಸಿದ್ದಾರೆ.

ಮಂಜುನಾಥ್ (29), ಸಿ.ಎಸ್.ಸಂದೀಪ್‌ ಕುಮಾರ್ (25), ಸಿ.ಬಿ.ರಾಕೇಶ್ (24), ಕೆ.ಜಯಲಕ್ಷ್ಮೀ (29), ಎಸ್.ಸಹನಾ (19), ಪಲ್ಲವಿ (30), ಅಭಿಷೇಕ್ (24) ಬಂಧಿತರು.

ADVERTISEMENT

‘ಇವರು ಮೊಬೈಲ್‌ ಆ್ಯಪ್‌ವೊಂದರಲ್ಲಿ ‘ಕುಶಾಲನಗರ ಟಾಪ್ ಮಾಡೆಲ್ ಸೆಕ್ಸಿ ಆಂಟೀಸ್ ಸರ್ವೀಸ್ ಅವೆಲೆಬೆಲ್ ಕುಶಾಲನಗರ–23’ ಎಂಬ ಲಿಂಕ್‌ವೊಂದನ್ನು ಸೃಷ್ಟಿಸಿ ಅದರಲ್ಲಿ ಕುಶಾಲನಗರದಲ್ಲಿ ಮಹಿಳೆಯರಿಂದ ಮಸಾಜ್ ಮಾಡಿಸಲಾಗುತ್ತದೆ. ಒಂದು ಗಂಟೆಗೆ ₹1,500, ಒಂದು ರಾತ್ರಿ ₹4 ಸಾವಿರ ಎಂಬ ಜಾಹೀರಾತು ನೀಡಿದ್ದರು. ಇದನ್ನು ನೋಡಿದ ವ್ಯಕ್ತಿಗಳು ಸಂಪರ್ಕಿಸಿದಾಗ ಹಣವನ್ನು ತಮ್ಮ ಖಾತೆಗೆ ಮೊದಲು ಹಾಕಿಸಿಕೊಳ್ಳುತ್ತಿದ್ದರು. ನಂತರ, ಕುಶಾಲನಗರದ ಹೋಟೆಲ್‌ವೊಂದಕ್ಕೆ ಬರಲು ಹೇಳುತ್ತಿದ್ದರು. ಆದರೆ, ಹೋಟೆಲ್‌ಗೆ ತೆರಳಿದಾಗ ತಾವು ಮೋಸ ಹೋಗಿರುವುದು ಗೊತ್ತಾಗುತ್ತಿತ್ತು. ಮರ್ಯಾದೆಗೆ ಅಂಜಿ ಯಾರೂ ದೂರು ಕೊಡಲು ಮುಂದಾಗುತ್ತಿರಲಿಲ್ಲ’ ಎಂದು ಪೊಲೀಸರು ತಿಳಿಸಿದ್ದಾರೆ.

ಆದರೆ, ಆರೋಪ‍ಗಳು ಯಾರೂ ಕುಶಾಲನಗರದಲ್ಲಿ ಇರುತ್ತಿರಲಿಲ್ಲ. ಬೆಂಗಳೂರಿನಿಂದಲೇ ನಕಲಿ ಜಿಪಿಎಸ್‌ ಲೊಕೇಶ್‌ನ ಕಳುಹಿಸಿ ನಂಬಿಸುತ್ತಿದ್ದರು. ಮತ್ತಷ್ಟು ನಂಬಿಕೆ ಬರಿಸಲು ಮಹಿಳೆಯರಿಂದಲೂ ಫೋನ್‌ ಮೂಲಕ ಮಾತನಾಡಿಸುತ್ತಿದ್ದರು. ವ್ಯಕ್ತಿಯೊಬ್ಬರು ನೀಡಿದ ದೂರನ್ನು ಆಧರಿಸಿ, ಅವರ ಮೊಬೈಲ್‌ ನಂಬರ್‌ನ ನಿಜವಾದ ಲೊಕೇಶನ್‌ ಪತ್ತೆ ಮಾಡಲಾಯಿತು. ಎಲ್ಲರೂ ಬೆಂಗಳೂರಿನ ನೆಲಮಂಗಲದಲ್ಲಿ ಇದ್ದುದ್ದು ಗೊತ್ತಾಗಿ, 2 ತಂಡಗಳನ್ನು ರಚಿಸಿಕೊಂಡು, ಹಗಲು ರಾತ್ರಿ ಆರೋಪಿಗಳ ಮನೆ ಬಳಿ ಕಾದು ಕೊನೆಗೂ ಬಂಧಿಸಲಾಯಿತು ಎಂದು ಹೇಳಿದರು.

ಡಿವೈಎಸ್‌ಪಿ ಗಂಗಾಧರಪ್ಪ, ಇನ್‌ಸ್ಪೆಕ್ಟರ್ ಬಿ.ಜಿ.ಪ್ರಕಾಶ್, ಪಿಎಸ್‌ಐಗಳಾದ ಎಚ್.ವಿ.ಚಂದ್ರಶೇಖರ್, ಎಚ್.ಟಿ.ಗೀತಾ, ಸಿಬ್ಬಂದಿಯಾದ ರಂಜಿತ್, ಬಾಬು, ಉದಯ್, ರಮೇಶ್, ಸುನಿಲ್, ಶನಂತ್ ಸೇರಿದಂತೆ ತಾಂತ್ರಿಕ ವಿಭಾಗದ ಸಿಬ್ಬಂದಿ ಕಾರ್ಯಾಚರಣೆ ತಂಡದಲ್ಲಿದ್ದರು.

ಮಹಿಳೆಯರಿಂದ ಮಸಾಜ್, ವೇಶ್ಯಾವಾಟಿಕೆ ಲಭ್ಯ ಎಂಬುದಾಗಿ ಮೊಬೈಲ್ ಸಂಖ್ಯೆಯನ್ನು ನೀಡಿ ಕರೆ ಮಾಡುವಂತೆ ಸೃಷ್ಟಿಸಿರುವ ವೆಬ್‌ಸೈಟ್‌ಗಳನ್ನು ನೋಡಿ ವಂಚನೆಗೆ ಒಳಗಾಗಬಾರದು. ಹೋಂಸ್ಟೇ, ರೆಸಾರ್ಟ್, ವಸತಿ ಗೃಹಗಳಲ್ಲಿ ಯಾವುದಾದರೂ ಅನೈತಿಕ ಚಟುವಟಿಕೆಗಳು ನಡೆಯುತ್ತಿದ್ದರೆ 112ಗೆ ಕರೆ ಮಾಡಿ ಮಾಹಿತಿ ನೀಡಬೇಕು ಎಂದು ಪೊಲೀಸರು ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.