ADVERTISEMENT

ಮಡಿಕೇರಿ: ಸಂಚಾರ ಆರಂಭಿಸದ ಮಕ್ಕಳ ರೈಲು

ಕೆ.ಎಸ್.ಗಿರೀಶ್
Published 14 ನವೆಂಬರ್ 2024, 7:08 IST
Last Updated 14 ನವೆಂಬರ್ 2024, 7:08 IST
   

ಮಡಿಕೇರಿ: ರೈಲು ಸಂಪರ್ಕವೇ ಇಲ್ಲದ ಜಿಲ್ಲೆಯಾದ ಕೊಡಗಿನಲ್ಲೂ ರೈಲು ನಿಲ್ದಾಣವೊಂದಿತ್ತು. ರೈಲು ಹಳಿಗಳಿದ್ದವು, ಅವುಗಳ ಮೇಲೆ ರೈಲೊಂದು ಓಡುತ್ತಿತ್ತು, ನಿಲ್ದಾಣದಲ್ಲಿ ನಿಲ್ಲುತ್ತಿತ್ತು. ಚುಕುಬುಕು ರೈಲಿನ ಶಬ್ದ ಕೇಳಿ ಮಕ್ಕಳು ಮಾತ್ರವಲ್ಲ ಹಿರಿಯರ ಚಿತ್ತವೂ ಉಲ್ಲಾಸಿತಗೊಳ್ಳುತ್ತಿತ್ತು. ಈಗ ಇದೆಲ್ಲವೂ ಇತಿಹಾಸದ ಪುಟಗಳನ್ನು ಸೇರಿದೆ.

ನಗರದ ರಾಜಾಸೀಟ್‌ ಉದ್ಯಾನದಲ್ಲಿದ್ದ ಮಕ್ಕಳ ರೈಲು ನಿಂತು ವರ್ಷಗಳೇ ಉರುಳಿವೆ. ಈಗಲೂ ರೈಲಿನ ಅವಶೇಷಗಳನ್ನು ಉದ್ಯಾನದಲ್ಲಿ ಕಾಣಬಹುದು. ಇವುಗಳನ್ನು ‌ಕಂಡಾಗ ಮಕ್ಕಳ ಮನಸ್ಸು ಮಾತ್ರವಲ್ಲ, ಹಿರಿಯ ಮನಸ್ಸೂ ಮಮ್ಮಲ ಮರುಗದೇ ಇರದು.

ರೈಲ್ವೆ ಸಂಪರ್ಕವನ್ನೇ ಕಾಣದ ಕೊಡಗಿನ ಮಕ್ಕಳು ರೈಲಿನ ಸಂಚಾರದ ಅನುಭವ ಪಡೆಯಬೇಕೇಂದರೆ ಮೈಸೂರಿಗೆ ಹೋಗಬೇಕಿದೆ. ಇಲ್ಲಿನ ಮಕ್ಕಳೂ ರೈಲು ಸಂಚಾರದ ಖುಷಿ ಅನುಭವಿಸಲು ಇದ್ದ ಏಕೈಕ ರೈಲು ಈಗ ಮೂಲೆ ಸೇರಿದೆ. ಇಲ್ಲಿಯ ಜನಪ್ರತಿನಿಧಿಗಳು, ಅಧಿಕಾರಿಗಳ ನಿರ್ಲಕ್ಷ್ಯದಿಂದ ಮಕ್ಕಳ ರೈಲು ಇತಿಹಾಸದ ಪುಟ ಸೇರಿದೆ. ಇದಕ್ಕೆ ಸಮಾನಂತರವಾಗಿ ಹೇಳುವುದಾದರೆ, ಇತ್ತೀಚಿನ ವರ್ಷಗಳಲ್ಲಿ ಮೈಸೂರಿನ ರೈಲ್ವೆ ವಸ್ತು ಸಂಗ್ರಹಾಲಯದಲ್ಲಿ ಮಕ್ಕಳ ರೈಲನ್ನು ಅಭಿವೃದ್ಧಿಪಡಿಸಲಾಗಿದ್ದು, ಅದೀಗ ಮಕ್ಕಳನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ.

ADVERTISEMENT

ಹಿರಿಯ ಮುತ್ಸದ್ದಿ ಎಂ.ಸಿ.ನಾಣಯ್ಯ ಅವರು ತಾವು ಶಾಸಕರಾಗುವುದಕ್ಕೂ ಮುನ್ನ ಪುರಸಭೆ ಅಧ್ಯಕ್ಷರಾಗಿದ್ದಾಗ ಬ್ರಿಟಿಷರ ಸಮಾಧಿಗಳನ್ನು ಸ್ಥಳಾಂತರ ಮಾಡಿ ನಿರ್ಮಿಸಿದ ಈ ಉದ್ಯಾನವನ್ನು ಮತ್ತೆ ಅವರೇ 1998ರ‌ಲ್ಲಿ ಅಭಿವೃದ್ಧಿಪಡಿಸಿದರು. ಅಂದು ಕೊಡಗಿನ ಉಸ್ತುವಾರಿ ಸಚಿವರಾಗಿದ್ದ ಅವರು, ಈ ಉದ್ಯಾನಕ್ಕೊಂದು ಕಾಯಕಲ್ಪ ನೀಡಿದ್ದರು. ಸ್ವಾತಂತ್ರ್ಯದ ಸುವರ್ಣ ಮಹೋತ್ಸವದ ನಿಮಿತ್ತ ಮಕ್ಕಳು ಆಟವಾಡುವುದಕ್ಕೆಂದೇ ವಿಶೇಷ ಆಟಿಕೆಗಳ ಪರಿಕರಗಳನ್ನು ಅವರು ಇಲ್ಲಿ ಅಳವಡಿಸಿದ್ದರು. ಒಂದೆಡೆ ಪೋಷಕರು ರಾಜಾಸೀಟ್‌ ಗುಡ್ಡದ ಮೇಲೆ ನಿಂತು ಪ್ರಕೃತಿಯ ಸೌಂದರ್ಯವನ್ನು ಆಸ್ವಾದಿಸುತ್ತಿದ್ದರೆ, ಮತ್ತೊಂದೆಡೆ ಮಕ್ಕಳು ಇಲ್ಲಿ ಆಟವಾಡುತ್ತಿದ್ದರು. ಈಗ ಆ ಅವಕಾಶಗಳೆಲ್ಲವೂ ಇಲ್ಲದಾಗಿದೆ.

ಗ್ರೇಟರ್ ರಾಜಾಸೀಟ್‌ ನಿರ್ಮಾಣವಾದ ಮೇಲೆ ಮಕ್ಕಳಿಗಾಗಿ ಸಾಹಸ ಕ್ರೀಡೆಗಳಿಗೆ ಬೇಕಾದ ಪರಿಕರಗಳನ್ನು ಅಳವಡಿಸಲಾಗಿದ್ದರೂ, ಅವು ಹಣ ಇದ್ದವರಿಗಷ್ಟೇ ಮೀಸಲಾಗಿವೆ. ಬಡ ಮಕ್ಕಳು ಈ ಆಟಗಳನ್ನು ಕೇವಲ ನೋಡಿಯೇ ಆನಂದಿಸುವ ಸನ್ನಿವೇಶ ಇದೆ.

ರೈಲ್ವೆ ಇಲಾಖೆಗೆ ಪ್ರಸ್ತಾವ

ರಾಜಾಸೀಟ್ ಉದ್ಯಾನದಲ್ಲಿ ಮಕ್ಕಳ ರೈಲನ್ನು ಪುನರ್ ಆರಂಭಿಸಲು ರೈಲ್ವೆ ಇಲಾಖೆಗೆ ಪ್ರಸ್ತಾವ ಸಲ್ಲಿಸಲಾಗಿದೆ. ಮುಖ್ಯವಾಗಿ, ಪುನರ್‌ ಆರಂಭಕ್ಕೆ ರೈಲ್ವೆ ಇಲಾಖೆ ಅನುಮತಿ ಕೊಡಬೇಕಿದೆ. ಮಾತ್ರವಲ್ಲ, ತಾಂತ್ರಿಕ ನೆರವನ್ನೂ ನೀಡಬೇಕಿದೆ. ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕ ಯೋಗೇಶ್‌, ‘ಮಕ್ಕಳ ರೈಲನ್ನು ‍ಪುನರ್‌ ಆರಂಭಿಸಲು ರೈಲ್ವೆ ಇಲಾಖೆಗೆ ಪ್ರಸ್ತಾವ ಸಲ್ಲಿಸಲಾಗಿದೆ. ಹಳಿಗಳನ್ನು, ಬೋಗಿಗಳನ್ನೂ ರೈಲ್ವೆ ಇಲಾಖೆಯೇ ಪೂರೈಸಬೇಕಿದೆ. ಇದಕ್ಕಾಗಿ ಒಂದು ಯೋಜನಾ ವರದಿ ನೀಡುವಂತೆ ಇಲಾಖೆಯನ್ನು ಕೇಳಿದ್ದೇವೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.