ಮಡಿಕೇರಿ: ‘ಕೋವಿಡ್ ಕಾರಣದಿಂದ ಮಡಿಕೇರಿಯಲ್ಲೂ ಈ ವರ್ಷ ದಸರಾವನ್ನು ಸರಳವಾಗಿ ಆಚರಿಸಲು ಚಿಂತಿಸಲಾಗಿದೆ’ ಎಂದು ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಹೇಳಿದರು.
‘ಕರಗೋತ್ಸವ ಸಮಿತಿ, ದಶಮಂಟಗಳ ಸಮಿತಿಯ ಸಭೆ ನಡೆಸಿ, ಅಂತಿಮ ತೀರ್ಮಾನ ಕೈಗೊಳ್ಳುತ್ತೇವೆ’ ಎಂದು ತಿಳಿಸಿದರು.
ಮೈಸೂರು ದಸರಾವನ್ನು ಸರಳವಾಗಿ ನಡೆಸಲು ಸರ್ಕಾರ ತೀರ್ಮಾನಿಸಿದ್ದು ಮಡಿಕೇರಿಯಲ್ಲೂ ಈ ಬಾರಿ ದಸರಾ ಕಳೆಗುಂದಲಿದೆ. ಭೂಕುಸಿತದಿಂದ 2018ರಲ್ಲೂ ಮಡಿಕೇರಿ, ಗೋಣಿಕೊಪ್ಪಲು ದಸರಾ ಸರಳವಾಗಿ ನಡೆದಿತ್ತು. ಕಳೆದ ವರ್ಷ ಮಾತ್ರ ನವರಾತ್ರಿ ರಂಗು ಪಡೆದುಕೊಂಡಿತ್ತು.
ಮೈಸೂರಿನಲ್ಲಿ ಜಂಬೂ ಸವಾರಿ ಮುಕ್ತಾಯವಾದ ಮೇಲೆ ಅಂದೇ ರಾತ್ರಿ ಮಂಜಿನ ನಗರಿಯಲ್ಲೂ ದಶಮಂಟಪಗಳ ಶೋಭಾಯಾತ್ರೆ ನಡೆಯುತ್ತಿತ್ತು. ಮೈಸೂರಿನಿಂದ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಮಡಿಕೇರಿಗೆ ಬಂದು ಶೋಭಾಯಾತ್ರೆ ಕಣ್ತುಂಬಿಕೊಳ್ಳುತ್ತಿದ್ದರು. ಪ್ರವಾಸಿ ತಾಣಗಳಲ್ಲೂ ಪ್ರವಾಸಿಗರ ಕಲರವ ಇರುತ್ತಿತ್ತು.
‘ಮಕ್ಕಳ ದಸರಾ, ಮಹಿಳಾ ದಸರಾ, ಮಕ್ಕಳ ಸಂತೆ, ಶ್ವಾನ ಪ್ರದರ್ಶನ, ಫಲಪುಷ್ಪ ಪ್ರದರ್ಶನ, ಯುವ ದಸರಾ ನಡೆಯುವುದು ಅನುಮಾನ. ಸರ್ಕಾರದ ಮಾರ್ಗಸೂಚಿ ಪಾಲಿಸಲಾಗುವುದು’ ಎಂದು ದಸರಾ ಸಮಿತಿ ಕಾರ್ಯಾಧ್ಯಕ್ಷ ರಾಬಿನ್ ದೇವಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು.
ಕರಗೋತ್ಸವಕ್ಕೆ ಸೀಮಿತ:ನಾಲ್ಕು ಶಕ್ತಿದೇವತೆಗಳಾದ ಕಂಚಿ ಕಾಮಾಕ್ಷಿಯಮ್ಮ, ಕೋಟೆ ಮಾರಿಯಮ್ಮ, ಕುಂದೂರು ಚೌಟಿ ಮಾರಿಯಮ್ಮ, ದಂಡಿನ ಮಾರಿಯಮ್ಮನ ಕರಗೋತ್ಸವವನ್ನು ಸ್ಥಗಿತ ಮಾಡುವಂತಿಲ್ಲ. ಸಂಪ್ರದಾಯದಂತೆ ಕರಗೋತ್ಸವ ಹೊರಡಿಸಲೇಬೇಕು ಎಂದು ಪದಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.