ADVERTISEMENT

ಮಡಿಕೇರಿ ದಸರಾ ಜನೋತ್ಸವ: ಪ್ರತಿ ವರ್ಷ ಕೊನೆ ಗಳಿಗೆಯಲ್ಲೇ ಸಿದ್ಧತೆ!

8 ದಿನಗಳಿರುವಾಗ ಪ್ರಾಯೋಜಕತ್ವಕ್ಕೆ ಆಹ್ವಾನ, ಟೆಂಡರ್‌ ಸಹ ಕೊನೆ ಘಟ್ಟದಲ್ಲೇ...

ಕೆ.ಎಸ್.ಗಿರೀಶ್
Published 25 ಸೆಪ್ಟೆಂಬರ್ 2024, 7:15 IST
Last Updated 25 ಸೆಪ್ಟೆಂಬರ್ 2024, 7:15 IST
ಮಡಿಕೇರಿ ನಗರದಲ್ಲಿ ಕರಗೋತ್ಸವ ಹಾಗೂ ದಶಮಂಟಪಗಳ ಶೋಭಾಯಾತ್ರೆ ಸಂಚರಿಸುವ ಕಡೆ ಶಾಸಕ ಡಾ.ಮಂತರ್‌ಗೌಡ ಅವರು ಈಚೆಗೆ ಪರಿಶೀಲನೆ ನಡೆಸಿ ಸಲಹೆ, ಸೂಚನೆ ನೀಡಿದ್ದರು
ಮಡಿಕೇರಿ ನಗರದಲ್ಲಿ ಕರಗೋತ್ಸವ ಹಾಗೂ ದಶಮಂಟಪಗಳ ಶೋಭಾಯಾತ್ರೆ ಸಂಚರಿಸುವ ಕಡೆ ಶಾಸಕ ಡಾ.ಮಂತರ್‌ಗೌಡ ಅವರು ಈಚೆಗೆ ಪರಿಶೀಲನೆ ನಡೆಸಿ ಸಲಹೆ, ಸೂಚನೆ ನೀಡಿದ್ದರು   

ಮಡಿಕೇರಿ: ಮಡಿಕೇರಿ ದಸರಾ ಜನೋತ್ಸವಕ್ಕೆ ಸಿದ್ಧತೆಗಳನ್ನು ಗಮನಿಸಿದರೆ ‘ಯುದ್ಧ ಕಾಲದಲ್ಲಿ ಶಸ್ತ್ರಾಭ್ಯಾಸ’ ಎಂಬ ಮಾತು ನೆನಪಿಗೆ ಬರುತ್ತದೆ. ದಸರೆಗೆ ಬೆರಳೆಣಿಕೆಯಷ್ಟು ದಿನಗಳಿವೆ ಎನ್ನುವಾಗ ದಿಗ್ಗನೆದ್ದು ಕುಳಿತುಕೊಳ್ಳುವ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ತಡಬಡನೇ ಸಿದ್ಧತೆಗಳನ್ನು ಆರಂಭಿಸುತ್ತಾರೆ. ಇದರಿಂದ ಬಹಳಷ್ಟು ಕೊರತೆಗಳು ದಸರೆಯಲ್ಲಿ ಕಾಣಸಿಗುವಂತಾಗುತ್ತಿವೆ.

ಇದಕ್ಕೆ ದ್ಯೋತಕ ಎಂಬಂತೆ ನೆನ್ನೆಯಷ್ಟೇ ಜಿಲ್ಲಾಡಳಿತವು ಪ್ರಾಯೋಜಕತ್ವಕ್ಕೆ ಆಹ್ವಾನ ನೀಡಿದೆ. ಅ. 3ರಿಂದ 12ರವರೆಗೆ ನಡೆಯಲಿರುವ ಉತ್ಸವಕ್ಕೆ ಪ್ರಾಯೋಜಕತ್ವ ವಹಿಸಿ ಎಂದು ಉದ್ಯಮಿಗಳು, ಸಂಘ, ಸಂಸ್ಥೆಗಳು, ಕಂಪನಿಗಳು ಹಾಗೂ ಸಾರ್ವಜನಿಕರನ್ನು ಆಹ್ವಾನಿಸಿರುವುದು ಸೆ. 23ರಂದು. ಅಂದರೆ ಕೇವಲ 10 ದಿನಗಳು ಇರುವಾಗ ಈ ಆಹ್ವಾನ ನೀಡಿದೆ.

ಇದರಲ್ಲಿ ಪ್ಲಾಟಿನಂ ಪ್ರಾಯೋಜಕತ್ವ (₹ 4 ಲಕ್ಷ ಮತ್ತು ಅದಕ್ಕಿಂತಲೂ ಹೆಚ್ಚು), ಗೋಲ್ಡ್ ಪ್ರಾಯೋಜಕತ್ವ (₹ 2 ಲಕ್ಷದಿಂದ ₹ 4 ಲಕ್ಷದವರೆಗೆ), ಬೆಳ್ಳಿ ಪ್ರಾಯೋಜಕತ್ವ (₹ 2 ಲಕ್ಷಕ್ಕಿಂತ ಕಡಿಮೆ)  ಹೀಗೆ ನಾನಾ ವಿಭಾಗಗಳಿವೆ. ಪ್ರಾಯೋಜಕತ್ವ ವಹಿಸುವವರು ಈ ಕುರಿತು ಚರ್ಚಿಸಲು, ಅಂತಿಮ ತೀರ್ಮಾನ ಕೈಗೊಳ್ಳಲು ಜಿಲ್ಲಾಡಳಿತ ಕೊಟ್ಟಿರುವ ಸೆ. 30 ಅಂದರೆ ಕೇವಲ 7 ದಿನಗಳ ಕಾಲಾವಕಾಶ ಸಾಕಾಗುವುದಿಲ್ಲ. ಸಾಕಷ್ಟು ಮೊದಲೇ ಈ ಅವಕಾಶ ನೀಡಬೇಕಿತ್ತು ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.

ADVERTISEMENT

ಇನ್ನು ದಸರಾ ಉತ್ಸವದ ವಿವಿಧ ಕಾರ್ಯಗಳಿಗೆ ಈಗಷ್ಟೇ ಟೆಂಡರ್ ಕರೆಯಲಾಗಿದೆ. ಇದು ಅಂತಿಮಗೊಂಡು ಕೆಲಸಕ್ಕೆ ಕಾರ್ಯಾದೇಶ ಕೊಡುವಷ್ಟರಲ್ಲಿ ದಸರೆಗೆ ಒಂದೆರಡು ದಿನಗಳಷ್ಟೇ ಉಳಿದಿರುತ್ತದೆ. ಟೆಂಡರ್‌ ಪಡೆದವರೂ ತರಾತುರಿಯಲ್ಲಿ ಕೆಲಸ ಮಾಡಬೇಕಾದ ಒತ್ತಡಕ್ಕೆ ಸಿಲುಕುತ್ತಾರೆ. ಸಮರ್ಪಕವಾಗಿ ಕೆಲಸವೂ ಆಗುವುದಿಲ್ಲ. ಈ ಪ್ರಕ್ರಿಯೆ ಸಾಕಷ್ಟು ಮೊದಲೇ ಆಗಬೇಕಿತ್ತು ಎಂಬ ಅಭಿಪ್ರಾಯವೂ ಟೆಂಡರ್‌ದಾರರಿಂದ ವ್ಯಕ್ತವಾಗಿದೆ.

ಇದುವರೆಗೂ ದಸರಾ ಉಪಸಮಿತಿಯಗಳ 3 ಸಭೆಗಳು ನಡೆದಿದ್ದರೂ, ಇನ್ನೂ ದಸರಾ ಮುಖ್ಯ ಸಮಿತಿಯ ಸಭೆ ನಡೆದಿಲ್ಲ. ಮುಖ್ಯ ಸಮಿತಿಯ ಮೊದಲ ಸಭೆ ದಸರೆಗೆ 8 ದಿನಗಳಿರುವಾಗ (ಸೆ. 25) ನಿಗದಿಯಾಗಿದೆ.

ಕಳೆಗಟ್ಟದ ಕಾರ್ಯಕ್ರಮಗಳು!

ದಸರೆಗೆ ಎಷ್ಟು ಅನುದಾನ ನೀಡಬೇಕು ಎನ್ನುವ ವಿಚಾರ ಮಂಗಳವಾರವೂ ಅಂತಿಮಗೊಂಡಿಲ್ಲ. ಇದರಿಂದ ದಸರಾ ಸಾಂಸ್ಕೃತಿಕ ಸಮಿತಿಯವರಿಗೂ ಯಾವ ಯಾವ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಷ್ಟು ಸಂಭಾವನೆ ಪಡೆಯುವ ಕಲಾವಿದರನ್ನು ಕರೆಸಬೇಕು ಎಂಬ ಕುರಿತು ಸ್ಪಷ್ಟತೆ ಸಿಕ್ಕಿಲ್ಲ. ಇನ್ನು ಉಳಿದಿರುವ ಉಪಸಮಿತಿಯವರಿಗೂ ಎಷ್ಟು ಅನುದಾನ ಸಿಗುತ್ತದೆ ಎಂಬ ಕುರಿತು ಖಚಿತತೆ ಇಲ್ಲದೇ ಇರುವುದರಿಂದ ಅವರೂ ಗೊಂದಲದಲ್ಲೇ ಸಿಲುಕಿದ್ದಾರೆ. ದೊಡ್ಡ ಬಜೆಟ್‌ನ ಹಾಗೂ ಬಹುಬೇಡಿಕೆಯ ಕಲಾವಿದರಲ್ಲಿ ಬಹುತೇಕ ಮಂದಿ ಮುಂಗಡ ಹಣ ಕೇಳುತ್ತಾರೆ.

ಅನುದಾನ ಮೊದಲೇ ಬಿಡುಗಡೆಯಾಗಿದ್ದರೆ ಸುಲಭವಾಗಿ ಮುಂಗಡ ಹಣ ನೀಡಿ ಅವರ ಕಾರ್ಯಕ್ರಮವನ್ನು ಖಚಿತಪಡಿಸಿಕೊಳ್ಳಬಹುದಿತ್ತು. ಆದರೆ ಅನುದಾನ ಬಿಡುಗಡೆಯ ಮಾತಿರಲಿ ಇನ್ನೂ ಅನುದಾನ ಎಷ್ಟು ಎಂಬುದೇ ಘೋಷಣೆಯಾಗದಿರುವಾಗ ಕಲಾವಿದರಿಗೆ ಮುಂಗಡ ಹಣ ನೀಡುವವರು ಯಾರು? ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಇಂತಹ ಕೊನೆಗಳಿಗೆಯ ಸಿದ್ಧತೆಯಿಂದಾಗಿಯೇ ಪ್ರಸಿದ್ಧ ಕಲಾವಿದರನ್ನು ಕರೆತರಲು ಸಾಧ್ಯವಾಗದೇ ಮಡಿಕೇರಿ ದಸರೆಯ ಸಾಂಸ್ಕೃತಿಕ ಕಾರ್ಯಕ್ರಮಗಳು ಕಳೆಗಟ್ಟುತ್ತಿಲ್ಲ ಎಂದು ಹೆಸರು ಬಹಿರಂಗಪಡಿಸಲು ಬಯಸದ ಸಮಿತಿಯ ಸದಸ್ಯರೊಬ್ಬರು ಹೇಳುತ್ತಾರೆ. ದಸರೆಯ ದಿನಾಂಕ ಮೊದಲೇ ನಿಶ್ಚಯವಾಗಿರುವಾಗ ಅನುದಾನದ ಘೋಷಣೆ ಹಂಚಿಕೆ ಬಿಡುಗಡೆ ಮೊದಲೇ ಮಾಡಬಾರದೇಕೆ? ಪ್ರಾಯೋಜಕತ್ವಕ್ಕೆ ಆಹ್ವಾನ ಟೆಂಡರ್‌ ಕರೆಯುವಿಕೆಯಂತಹ ಕಾರ್ಯಗಳನ್ನು ಸಾಕಷ್ಟು ಮುಂಚಿತವಾಗಿಯೇ ಮಾಡಬಾರದೇಕೆ? ಎಂಬ ಪ್ರಶ್ನೆಗಳು ಪ್ರತಿ ವರ್ಷವೂ ಪ್ರಶ್ನೆಗಳಾಗಿಯೇ ಇಲ್ಲಿನ ದಸರಾ ಪ್ರಿಯರನ್ನು ಕಾಡುತ್ತಿವೆ.

ಸಾಕಷ್ಟು ಮೊದಲೇ ಸಿದ್ಧತೆ ನಡೆಸಿದ್ದೇವೆ: ಎಚ್.ಟಿ.ಅನಿಲ್

ನಾವು ಈ ಮೊದಲಿನ ಬಜೆಟ್‌ನಡಿಯೇ ಕಾರ್ಯಕ್ರಮಗಳನ್ನು ಆಯೋಜಿಸಲು ಸಿದ್ಧತೆ ನಡೆಸಿದ್ದೇವೆ. ಆದರೆ ಕಲಾವಿದರಿಗೆ ನೀಡುವ ಸಂಭಾವನೆ ಕುರಿತು ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ. ಆಗಸ್ಟ್ 16ರಂದೇ ಮೊದಲ ಸಭೆ ನಡೆಸಿ ದಸರಾ ಸಾಂಸ್ಕೃತಿಕ ಸಂಬಂಧಿತ ಕಾರ್ಯಚಟುವಟಿಕೆಗಳನ್ನು ಆರಂಭಿಸಿದ್ದೆವು. ಹೀಗಾಗಿ ಯಾವುದೇ ಗೊಂದಲ ಇಲ್ಲದಂತೆ ಅಂತಿಮ ಹಂತದ ಸಿದ್ಧತೆ ಮಾಡಿಕೊಂಡಿದ್ದೇವೆ. ಎಚ್.ಟಿ.ಅನಿಲ್ ದಸರಾ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.