ಗೋಣಿಕೊಪ್ಪಲು: ಇಲ್ಲಿನ ಕಾವೇರಿ ದಸರಾ ಸಮಿತಿ ದಸರಾ ಜನೋತ್ಸವದ ಅಂಗವಾಗಿ ಆಯೋಜಿಸಿದ್ದ ಕಬಡ್ಡಿ ಕ್ರೀಡಾಕೂಟವನ್ನು ಶಾಸಕ ಎ.ಎಸ್.ಪೊನ್ನಣ್ಣ ಕಬ್ಬಡಿ ಆಡುವ ಮೂಲಕ ಚಾಲನೆ ನೀಡಿದರು.
ದಸರಾ ಮೈದಾನದಲ್ಲಿ ಇದೇ ಮೊದಲ ಬಾರಿಗೆ ಕಾವೇರಿ ದಸರಾ ಸಮಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಶಿವಾಜಿ ಸೇನೆಯ ಸಂಯುಕ್ತ ಆಶ್ರಯದಲ್ಲಿ 2 ದಿನಗಳ ಕಾಲ ಆಯೋಜಿಸಿರುವ ಕಬಡ್ಡಿ ಟೂರ್ನಿಯನ್ನು ಉದ್ಘಾಟಿಸಿದ ಶಾಸಕ ಎ.ಎಸ್.ಪೊನ್ನಣ್ಣ, ‘ಯುವಕರಲ್ಲಿ ಕ್ರೀಡಾ ಮನೋಭಾವ ಬೆಳೆಸಿ ಆರೋಗ್ಯಕರ ಮನಸ್ಥಿತಿ ಬೆಳೆಸಲು ಎಲ್ಲ ಬಗೆಯ ಕ್ರೀಡೆಗಳು ಸಹಕಾರಿಯಾಗುತ್ತವೆ. ಯುವಕರು ತಮಗೆ ಆಸಕ್ತಿ ಇರುವ ಕ್ರೀಡೆಗಳ ಕಡೆಯಲ್ಲಿ ತೊಡಗಿಸಿಕೊಂಡು ಉತ್ತಮ ಸಾಧನೆ ಮಾಡಿ’ ಎಂದು ಕಿವಿ ಮಾತು ಹೇಳಿದರು.
ಇದಕ್ಕೂ ಮೊದಲು ನಡೆದ ಸೈಕಲ್ ರೇಸ್ ಮತ್ತು ಹಗ್ಗಜಗ್ಗಾಟ ಸ್ಪರ್ಧೆ ರೋಚಕವಾಗಿತ್ತು. 14 ವರ್ಷದೊಪಳಗಿನ ಸೈಕ್ಲೋಥಾನ್ ಸ್ಪರ್ಧೆಯಲ್ಲಿ ಎಂ.ವಿ.ಅಜ್ಮತ್ ಪ್ರಥಮ, ವಿವನ್ ದ್ವಿತೀಯ, ಸುಮಿತ್ ತೃತೀಯ ಸ್ಥಾನ ಗಳಿಸಿದರು.
14ರಿಂದ 18 ವರ್ಷದೊಳಗಿನವರ ಸ್ಪರ್ಧೆಯಲ್ಲಿ ಪೂದ್ರಿಮಾಡ ನಮನ್ ಪ್ರಥಮ, ಎಚ್.ಕೃತಿಕ ಮಿತಿ ದ್ವಿತೀಯ ಸ್ಥಾನ ಪಡೆದರು. 18 ವರ್ಷದೊಳಗಿನವರ ಸ್ಪರ್ಧೆಯಲ್ಲಿ ನಿಕಿಲ್ ಪ್ರಥಮ, ಎಚ್.ಎಂ.ಅಭಿಷೇಕ್ ದ್ವಿತೀಯ, ಸಚಿನ್ ತೃತೀಯ ಬಹುಮಾನ ಗಳಿಸಿದರು.
ಬಾಲಕಿರ ವಿಭಾಗದಲ್ಲಿ ವೇದಪ್ರಿಯ ಪಾಟೀಲ್ ಪ್ರಥಮ ಟಿ.ಎಂ.ವಂದನಾ ದ್ವಿತೀಯ ಸ್ಥಾನ ಪಡೆದರು. ಹಗ್ಗಜಗ್ಗಾಟ ಸ್ಪರ್ಧೆಯ ಬಾಲಕಿಯರ ವಿಭಾಗದಲ್ಲಿ ಗೋಣಿಕೊಪ್ಪಲಿನ ಕಾವೇರಿ ಕಾಲೇಜು ಪ್ರಥಮ, ವಿದ್ಯಾನಿಕೇತನ ಪಿಯು ಕಾಲೇಜು ದ್ವಿತೀಯ ಸ್ಥಾನ ಪಡೆಯಿತು. ಗ್ರಾಮ ಪಂಚಾಯಿತಿ ಸದಸ್ಯ ಹಾಗೂ ಕಾವೇರಿ ದಸರಾ ಸಮಿತಿ ಉಪಾಧ್ಯಕ್ಷ ಶರತ್ ಕಾಂತ್ ಸ್ಪರ್ಧೆ ನಡೆಸಿಕೊಟ್ಟರು.
ದಸರಾ ಸಮಿತಿ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ, ಪ್ರಧಾನ ಕಾರ್ಯದರ್ಶಿ ಕಂದ ದೇವಯ್ಯ, ಶಿವಾಜಿ ಸೇನೆ ಅಧ್ಯಕ್ಷ ಬಿ.ಎಲ್.ಅಣ್ಣಪ್ಪ, ಕಾರ್ಯಕ್ರಮ ಸಂಯೋಜಕ ಚಂದನ್ ಕಾಮತ್, ಮುಖಂಡರಾದ ಸುರೇಶ್ ರೈ, ಸುಧಾಕರ್ ರೈ ಮೊದಲಾದವರು ಹಾಜರಿದ್ದರು.
ದಸರಾ ಸಭಾಂಗಣದಲ್ಲಿ ಶುಕ್ರವಾರ ರಾತ್ರಿ ನಡೆದ ಮೈಸೂರಿನ ಶೋಭಾ ರಾಜ್ ಕುಮಾರ್ ಅವರ ‘ಮಾತನಾಡುವ ಬೊಂಬೆ’, ವಿರಾಜಪೇಟೆ ನಾಟ್ಯಮಯೂರಿ ನೃತ್ಯ ಶಾಲೆಯ ಭರತನಾಟ್ಯ, ಮಂಗಳೂರಿನ ನಂದ ಗೋಕುಲ ಕಲಾವಿದರ ನೃತ್ಯ ವೈವಿಧ್ಯ ಗಮನ ಸೆಳೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.