ಮಡಿಕೇರಿ: ‘ದುಡಿ’ಯ ಬಡಿತ, ‘ಉರುಟ್ಟಿಕೊಟ್ ಪಾಟ್’ ನೃತ್ಯ, ಕಂಚಿನ ಕಂಠದಿಂದ ಹೊರಹೊಮ್ಮುವ ಹಾಡುಗಳನ್ನು ಕೇಳುತ್ತಾ ಕುಳಿತರೆ ಬೆಳಕರಿಯುವುದು ಗೊತ್ತೇ ಆಗುವುದಿಲ್ಲ. ರಾತ್ರಿ ಇಡೀ ಹಾಡಿದರೂ, ಕುಣಿದರೂ ಇವರಿಗೆ ದಣಿವು ಎನ್ನುವುದು ಹತ್ತಿರವೂ ಸುಳಿಯುವುದಿಲ್ಲ. ಭಾಷೆ, ಜನಾಂಗ, ಧರ್ಮ, ಜಾತಿ ಎಲ್ಲ ಬಗೆಯ ಕಂದಕಗಳನ್ನು ದಾಟಿ, ಎಲ್ಲರ ಮನಸ್ಸಿಗೆ ತಟ್ಟುತ್ತದೆ ಈ ಜನಪದ ಕುಣಿತ, ಹಾಡು. ಹೃದಯದಲ್ಲಿ ಅಚ್ಚಳಿಯದೇ ಉಳಿದು, ಮತ್ತೆ ಮತ್ತೆ ಕೇಳಬೇಕು, ನೋಡಬೇಕು ಅನ್ನಿಸುತ್ತದೆ ಎಲ್ಲರ ಮನಸ್ಸು...
ಹೀಗೆ ಕೊಡಗಿನ ಸಾಂಪ್ರದಾಯಿಕ, ಜನಪದದ ಬಗೆಗೆ ಹೇಳುತ್ತಾ ಹೋದರೆ ಪದಗಳು ಸಾಕಾಗುವುದಿಲ್ಲ. ಇಂತಹ ವೈವಿಧ್ಯಮಯದ ಜನಪದ ಖಜಾನೆಯನ್ನೇ ಹೊಂದಿರುವ ಕೊಡಗಿನಲ್ಲಿ ಅತಿ ವಿಶಿಷ್ಟ ಎನಿಸುವ ಕುಣಿತಗಳು, ವಾದ್ಯಗಳು, ಹಾಡುಗಳು ಲೆಕ್ಕವಿಲ್ಲದಷ್ಟಿವೆ. ಅವುಗಳಲ್ಲಿ ಕುಡಿಯರ ಉರುಟ್ಟಿಕೊಟ್ಟ್ ಪಾಟ್ ಅತಿ ಪ್ರಮುಖವಾದುದು.
ಇಂತಹ ಅಪರೂಪದ ಕಲೆಯನ್ನು ಕರಗತ ಮಾಡಿಕೊಂಡವರು ವಿರಾಜಪೇಟೆ ತಾಲ್ಲೂಕಿನ ತೋರ ಗ್ರಾಮದ ಕೆ.ಸಿ. ದೇವಕಿ. ಇವರು ಕೇವಲ ಉರುಟ್ಟಿಕೊಟ್ಟ್ ಪಾಟ್ ಮಾತ್ರವಲ್ಲ, ದುಡಿ ಬಾರಿಸುವುದರಲ್ಲಿ, ಜನಪದ ಗೀತೆಗಳನ್ನು ಹಾಡುವುದರಲ್ಲಿ ಸಿದ್ಧಹಸ್ತರು.
ಈಗಾಗಲೇ ಇವರು ಕೊಡಗಿನ ಈ ಅತಿ ವಿಶಿಷ್ಟ ಎನಿಸುವ ಕಲೆಗಳನ್ನು 12 ಜನರ ತಂಡವೊಂದನ್ನು ಕಟ್ಟಿಕೊಂಡು ರಾಜ್ಯದ ಅನೇಕ ಭಾಗಗಳಲ್ಲಿ ಹರಡಿದ್ದಾರೆ. ಬಾಗಲಕೋಟೆ, ದಾಂಡೇಲಿ ಮಾತ್ರವಲ್ಲ ತಮಿಳುನಾಡು ಹಾಗೂ ಕೇರಳ ರಾಜ್ಯಗಳಲ್ಲೂ ಹಲವು ಪ್ರದರ್ಶನ ನೀಡಿ ಅಲ್ಲಿನ ಜನರ ಮೆಚ್ಚುಗೆ ಗಳಿಸಿದ್ದಾರೆ.
ಇವರು ತಮ್ಮ ತಂದೆ ಮತ್ತು ತಾಯಿಯಿಂದ ಈ ಕಲೆಗಳನ್ನು ಕಲಿತರು. ಕೇವಲ 5ನೇ ತರಗತಿವರೆಗೆ ಮಾತ್ರ ವ್ಯಾಸಂಗ ಮಾಡಿದ್ದರೂ, ಇವರು ಕಲಿತ ಕಲೆಯನ್ನು ಅನೇಕ ಮಂದಿಗೆ ಕಲಿಸಿದ್ದಾರೆ.
ಈ ಕುರಿತು ‘ಪ್ರಜಾವಾಣಿ’ ಜೊತೆ ಮಾತಿಗಿಳಿದ ದೇವಕಿ, ‘ಈ ನಮ್ಮ ಕಲೆ ಮುಂದಿನ ತಲೆಮಾರಿಗೆ ಉಳಿಯಬೇಕಿದೆ. ಈಗ ಕಲೆ ಗೊತ್ತಿರುವ ಕೆಲವು ಮಂದಿ ಮನೆಯಲ್ಲೇ ಉಳಿದಿದ್ದಾರೆ. ಎಲ್ಲರೂ ಬೆಳಕಿಗೆ ಬರಬೇಕು. ಮುಂದೆಯೂ ಕಲೆ ಉಳಿಯಬೇಕು’ ಎಂದು ಹೇಳಿದರು.
ಇವರನ್ನು ಗುರುತಿಸಿರುವ ಕರ್ನಾಟಕ ಜಾನಪದ ಅಕಾಡೆಮಿಯು 2023ನೇ ಸಾಲಿನ ಪ್ರಶಸ್ತಿ ನೀಡಿದೆ.
ಓದಿರುವುದು ಕೇವಲ 5ನೇ ತರಗತಿ ಕಲೆಯಲ್ಲಿ ಸಿದ್ಧಹಸ್ತರಾದ ದೇವಕಿ ಕಲೆ ಉಳಿಸುತ್ತಿರುವ ಅಪರೂಪದ ಸಾಧಕಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.