ADVERTISEMENT

ಮಡಿಕೇರಿ ದಸರಾ: ವೇದಿಕೆ ನಿರ್ಮಾಣವೇ ಆರಂಭವಾಗಿಲ್ಲ!

ಕಡೆ ಗಳಿಗೆಯಲ್ಲಿ ಕರೆದಿದ್ದ ಟೆಂಡರ್ ಸಹ ವಿಫಲ, ಸರ್ಕಾರಿ ಏಜೆನ್ಸಿ ಮೊರೆ ಹೋದ ನಗರಸಭೆ

ಕೆ.ಎಸ್.ಗಿರೀಶ್
Published 29 ಸೆಪ್ಟೆಂಬರ್ 2024, 6:39 IST
Last Updated 29 ಸೆಪ್ಟೆಂಬರ್ 2024, 6:39 IST
<div class="paragraphs"><p>ಮಡಿಕೇರಿಯ ಗಾಂಧಿ ಮೈದಾನದ ಸ್ಥಿತಿ ಹೀಗಿದೆ</p><p></p></div>

ಮಡಿಕೇರಿಯ ಗಾಂಧಿ ಮೈದಾನದ ಸ್ಥಿತಿ ಹೀಗಿದೆ

   

ಮಡಿಕೇರಿ: ಮಡಿಕೇರಿ ದಸರಾ ಜನೋತ್ಸವಕ್ಕೆ ಇರುವುದು ಇನ್ನು ಐದೇ ದಿನ. ಆದರೂ, ವೇದಿಕೆ ಇನ್ನೂ ಸಿದ್ಧಗೊಂಡಿಲ್ಲ. ಕನಿಷ್ಠ ಪಕ್ಷ ವೇದಿಕೆ ನಿರ್ಮಾಣದ ಜವಾಬ್ದಾರಿಯನ್ನೂ ನೀಡಲಾಗಿಲ್ಲ. ಕರಗೋತ್ಸವಕ್ಕಿರುವುದು ಇನ್ನು ನಾಲ್ಕೇ ದಿನ. ಆದಾಗ್ಯೂ, ಅನುದಾನ ಎಷ್ಟು ಎಂಬುದು ಮಾತ್ರ ಘೋಷಣೆಯಾಗಿಲ್ಲ. ಇದು ಮಡಿಕೇರಿ ದಸರೆ ಮತ್ತು ಕರಗೋತ್ಸವದ ಪ್ರಸ್ತುತ ಸ್ಥಿತಿ.

ADVERTISEMENT

ನಾಡಿನ ಸಾಂಸ್ಕೃತಿಕ ಇತಿಹಾಸದಲ್ಲಿ ಸ್ಥಾನ ಪಡೆದಿರುವ ಕರಗೋತ್ಸವ ಅ. 3ರಂದು ಆರಂಭವಾಗಲಿದೆ. ಆದರೂ, ರಸ್ತೆ ಗುಂಡಿ ಮುಚ್ಚುವ ಕಾರ್ಯ ನಡೆದಿಲ್ಲ. ಅ. 4ರಂದು ಮಡಿಕೇರಿ ದಸರಾ ಜನೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳು ಆರಂಭವಾಗಲಿವೆ. ಅದು ನಡೆಯುವ ಗಾಂಧಿ ಮೈದಾನವು ಕೆಸರುಮಯವಾಗಿಯೇ ಇದೆ. ಕಾರ್ಯಕ್ರಮಗಳು ನಡೆಯಬೇಕಾದ ವೇದಿಕೆ ನಿರ್ಮಾಣ ಕುರಿತು ಇನ್ನೂ ಅಂತಿಮ ತೀರ್ಮಾನವೇ ಆಗಿಲ್ಲ.

ಕೊನೆ ಗಳಿಗೆಯಲ್ಲಿ ವೇದಿಕೆ ನಿರ್ಮಾಣಕ್ಕೆ ಟೆಂಡರ್ ಕರೆದ ಪರಿಣಾಮ ಹಾಕಿದವರು ಕೇವಲ ಇಬ್ಬರು ಮಾತ್ರ. ಅವರು ನಮೂದಿಸಿರುವ ಹಣವು ಕಳೆದ ವರ್ಷ ಖರ್ಚಾಗಿದ್ದಕ್ಕಿಂತ ದುಪ್ಪಟ್ಟು ಎಂಬ ಕಾರಣಕ್ಕೆ ಇವರಿಗೆ ನೀಡದಿರಲು ತೀರ್ಮಾನಿಸಲಾಗಿದೆ. ಹಾಗಾಗಿ, ಇದೀಗ ನಗರಸಭೆ ಸರ್ಕಾರಿ ಏಜೆನ್ಸಿಯೊಂದರ ಮೊರೆ ಹೋಗಿದೆ.

ಬೆಂಗಳೂರಿನಿಂದ ಬಂದ ಏಜೆನ್ಸಿಯವರು ವೇದಿಕೆ ನಿರ್ಮಾಣದ ಜಾಗ ಮೊದಲಾದ ಅಂಶಗಳನ್ನು ಪರಿಶೀಲಿಸಿ ತೆರಳಿದ್ದಾರೆ. ಅವರು ಎಷ್ಟು ಖರ್ಚಾಗುತ್ತದೆ ಎಂದು ಪ್ರಸ್ತಾವ ಕೊಟ್ಟಿದ್ದಾರೆ ಎಂಬುದು ಮಾತ್ರ ಗೊತ್ತಾಗಿಲ್ಲ.

‘ಸರ್ಕಾರಿ ಏಜೆನ್ಸಿ ಕೊಟ್ಟಿರುವ ಪ್ರಸ್ತಾವ ಕುರಿತು ಜಿಲ್ಲಾಧಿಕಾರಿಯೊಂದಿಗೆ ಚರ್ಚಿಸಿ ಸೆ.29ರಂದು ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ಪೌರಾಯುಕ್ತ ರಮೇಶ್ ಹೇಳುತ್ತಾರೆ.

ಮತ್ತೊಂದೆಡೆ, ಆಮೆಗತಿಯ ಈ ಕಾರ್ಯಚಟುವಟಿಕೆಗಳಿಗೆ ದಸರೆಯ ಬಹುತೇ ಎಲ್ಲ ಸಮಿತಿಗಳ ಸದಸ್ಯರು ಅಸಮಾಧಾನ ವ್ಯಕ್ತಪಡಿಸುತ್ತಾರೆ.

‘ಸರ್ಕಾರ ಅನುದಾನ ಘೋಷಣೆಯನ್ನೇ ಮಾಡಿಲ್ಲ. ಹೀಗಿರುವಾಗ, ವೇದಿಕೆಗೆ ಎಷ್ಟು, ಮಹಿಳಾ ದಸರಾ, ಜಾನಪದ ದಸರಾ, ಮಕ್ಕಳ ದಸರಾ, ಕವಿಗೋಷ್ಠಿ, ಕಾಫಿ ದಸರಾ ಹೀಗೆ ವಿವಿಧ ದಸರಾ ಸಮಿತಿಗಳಿಗೆ ಎಷ್ಟು ಅನುದಾನ ಎಂಬುದು ಅಂತಿಮವಾಗಿಲ್ಲ. ಹೀಗಾಗಿ, ಕಾರ್ಯಕ್ರಮದ ರೂಪುರೇಷೆಗಳನ್ನು ರೂಪಿಸುವುದೂ ಅಂತಿಮವಾಗಿಲ್ಲ. ಒಂದು ಬಗೆಯಲ್ಲಿ ಈ ಬಾರಿಯ ದಸರೆ ಗೊಂದಲದ ಗೂಡಾಗಿದೆ’ ಎಂದು ಹೆಸರು ಬಹಿರಂಗ ಪಡಿಸಲು ಬಯಸದ ಸಮಿತಿಯೊಂದರ ಅಧ್ಯಕ್ಷರು ‘‍ಪ‍್ರಜಾವಾಣಿ’ಗೆ ತಿಳಿಸಿದರು.

ಕರಗ ನಡೆಯುವ ದಿನಾಂಕ, ದಸರೆ ನಡೆಯುವ ದಿನಾಂಕ ವರ್ಷಕ್ಕೂ ಮುಂಚೆಯೇ ನಿರ್ಧಾರವಾದರೂ, ಇದರ ಸಿದ್ಧತೆ ಬೆರಳೆಣಿಕೆಯಷ್ಟು ದಿನಗಳು ಉಳಿದಿರುವಾಗಲೂ ಪೂರ್ಣವಾಗದೇ ಇರುವುದು ಸಾರ್ವಜನಿಕರ ಅತೃಪ್ತಿಗೂ ಕಾರಣವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.