ಮಡಿಕೇರಿ: ಸರ್ಕಾರದಿಂದ ಹೆಚ್ಚಿನ ಅನುದಾನ ಬೇಕು, ನಗರದೊಳಗಿನ ಎಲ್ಲ ರಸ್ತೆಗಳ ಗುಂಡಿಗಳನ್ನು ಮುಚ್ಚಿ ಉತ್ತಮ ರಸ್ತೆ ನಿರ್ಮಿಸಿಕೊಡಬೇಕು ಎಂಬ ಒತ್ತಾಯ ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು ಅವರ ಅಧ್ಯಕ್ಷತೆಯಲ್ಲಿ ನಡೆದ ಮಡಿಕೇರಿ, ಗೋಣಿಕೊಪ್ಪಲು ದಸರಾ ಪೂರ್ವಸಿದ್ಧತಾ ಸಭೆಯಲ್ಲಿ ವ್ಯಕ್ತವಾಯಿತು.
ಒತ್ತಾಯಗಳಿಗೆ ಸ್ಪಂದಿಸಿದ ಸಚಿವ ಎನ್.ಎಸ್.ಭೋಸರಾಜು, ‘ದಸರೆಗೆ ಅನುದಾನದಲ್ಲಿ ಯಾವುದೇ ಕೊರತೆಯಾಗದಂತೆ ನೋಡಿಕೊಳ್ಳಲಾಗುವುದು. ಜಿಲ್ಲಾಧಿಕಾರಿಯವರೇ ರಸ್ತೆ ಗುಂಡಿಗಳನ್ನು ಯಾವುದಾದರೂ ಅನುದಾನದಲ್ಲಿ ಮುಚ್ಚಿಸುವ ಕೆಲಸ ಮಾಡಿಸಬೇಕು’ ಎಂದು ತಿಳಿಸಿದರು. ಜೊತೆಗೆ, ಕಳೆದ ಬಾರಿಯಂತೆಯೇ ದಸರಾ ಆಚರಿಸಬೇಕು ಹಾಗೂ ಅಹಿತಕರ ಘಟನೆಗಳು ಆಗದಂತೆ ಎಲ್ಲರೂ ಎಚ್ಚರ ವಹಿಸಬೇಕು ಎಂದೂ ಸೂಚಿಸಿದರು.
ಹೆಚ್ಚು ಖರ್ಚು ಮಾಡಿದರೆ ಮಾತ್ರವೇ ಯಶಸ್ಸು ಸಿಗುವುದಿಲ್ಲ. ಎಲ್ಲರ ಒಳಗೊಳ್ಳುವಿಕೆಯಿಂದ ಮಾತ್ರ ಯಶಸ್ಸು ಸಾಧ್ಯ. ಕಳೆದ ವರ್ಷ ಮುಂಚಿನ ವರ್ಷಗಳಿಗಿಂತ ಹೆಚ್ಚು ಅನುದಾನ ಕೊಟ್ಟಿದ್ದೆವು. ಈ ಬಾರಿಯೂ ಹೆಚ್ಚಿನ ಅನುದಾನ ತರಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.
ಇದಕ್ಕೂ ಮುನ್ನ ನಡೆದ ಸಭೆಯಲ್ಲಿ ಮಾತನಾಡಿದ ಬಹುತೇಕ ಮಂದಿ ಅನುದಾನದ ಕೊರತೆ, ಶಾಶ್ವತ ವೇದಿಕೆ ಹಾಗೂ ರಸ್ತೆಗುಂಡಿಗಳ ಕುರಿತು ಗಮನ ಸೆಳೆದರು.
ಜಿಲ್ಲಾಧಿಕಾರಿ ವೆಂಕಟ್ ರಾಜಾ ಪ್ರತಿಕ್ರಿಯಿಸಿ, ‘ಶಾಶ್ವತ ವೇದಿಕೆ ನಿರ್ಮಾಣ ಕುರಿತು ಚರ್ಚೆಗಳು ನಡೆದಿವೆ. ಸದ್ಯದಲ್ಲೇ ಈ ಕುರಿತ ಯೋಜನೆ ಮಾಡುತ್ತೇವೆ’ ಎಂದು ಭರವಸೆ ನೀಡಿದರು.
ಹಬ್ಬದ ಆಚರಣೆಗೆ ಸ್ವಂತ ಇತಿಮಿತಿ ಇರಬೇಕು. ರಸ್ತೆಗಳನ್ನು ನೋಡಿ ಮಂಟಪ ತಯಾರಿಸಬೇಕು. ರಸ್ತೆ ದುರಸ್ತಿಯನ್ನು ಬೇಗನೇ ಮಾಡಲಾಗುವುದು. ಜಿಎಸ್‌ಟಿ ಬಿಲ್ ಕೊಟ್ಟರೆ ತಕ್ಷಣವೇ ಹಣ ಬಿಡುಗಡೆಯಾಗುತ್ತದೆ. ಕಾನೂನಾತ್ಮಕ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ ಎಂದರು.
ಸೆ. 17ರಂದು ಬೆಳಿಗ್ಗೆ 11 ಗಂಟೆಗೆ ದಸರಾ ಸಮಿತಿಯವರ ಸಭೆ ಕರೆಯಲಾಗಿದೆ. ಈ ಬಾರಿ ಸಮಿತಿಯಿಂದ ವಂತಿಗೆ ಸಂಗ್ರಹದ ಬದಲಿಗೆ ಪ್ರಾಯೋಜಿತ ಕಾರ್ಯಕ್ರಮಕ್ಕೆ ಆದ್ಯತೆ ನೀಡಲಾಗುವುದು. ಮೊದಲ ದಿನ ಸೌಹಾರ್ದಯುತ ಕ್ರಿಕೆಟ್ ಪಂದ್ಯಾವಳಿಯ ಆಯೋಜನೆ ಕುರಿತೂ ನಿರ್ಧರಿಸಲಾಗಿದೆ ಎಂದು ಹೇಳಿದರು.
ದಸರಾ ಸಮಿತಿ ಉಪಾಧ್ಯಕ್ಷ ರಾಕೇಶ್ ಮಾತನಾಡಿ, ‘ದಸರೆಗೆ ಇನ್ನು ಕೇವಲ 20 ದಿನಗಳಷ್ಟೇ ಉಳಿದಿದೆ. ಯಾವ ಕೆಲಸವೂ ಆಗಿಲ್ಲ. ಮಹದೇವಪೇಟೆಯ ಮುಖ್ಯರಸ್ತೆಗೆ ಡಾಂಬರು ಬೇಕು. ಧ್ವನಿವರ್ಧಕಕ್ಕೆ ಅವಕಾಶ ಮಾಡಿಕೊಡಬೇಕು. ಕಳೆದ ಬಾರಿ ಪ್ರಕರಣ ಸಹ ದಾಖಲಿಸಿದ್ದಾರೆ. ಜನರಿಗೆ ಶೌಚಾಲಯ ಮತ್ತು ನೀರಿನ ವ್ಯವಸ್ಥೆ ಕಲ್ಪಿಸಬೇಕು’ ಎಂದು ಒತ್ತಾಯಿಸಿದರು.
ಗೋಣಿಕೊಪ್ಪಲು ದಸರಾ ಸಮಿತಿಯ ಪ್ರಮೋದ್ ಮಾತನಾಡಿ, ‘ಗೋಣಿಕೊಪ್ಪಲಿನಲ್ಲಿ ಬೆಳಿಗ್ಗೆ ಮತ್ತು ರಾತ್ರಿ ಎರಡೂ ವೇಳೆಯೂ ದಸರೆ ನಡೆಯುತ್ತದೆ. ಹೆಚ್ಚಿನ ಅನುದಾನ ನೀಡಬೇಕು’ ಎಂದು ಮನವಿ ಮಾಡಿದರು.
ನಗರಸಭೆ ಸದಸ್ಯ ಅರುಣ್‌ಶೆಟ್ಟಿ ಮಾತನಾಡಿ, ಎಲ್ಲ ರಸ್ತೆ ಹಾಳಾಗಿದೆ. ಬೀದಿ ನಾಯಿಗಳ ಹಾವಳಿ ಮಿತಿ ಮೀರಿದೆ. ಈ ಕುರಿತು ಗಮನ ಹರಿಸಬೇಕು’ ಎಂದು ಕೋರಿದರು.
ಮಡಿಕೇರಿ ದಸರಾ ಸಮಿತಿ ಕಾರ್ಯಾಧ್ಯಕ್ಷ ಪ್ರಕಾಶ್ ಆಚಾರ್ಯ ಮಾತನಾಡಿ, ‘ಈ ಬಾರಿ ದಸರೆಗೆ ₹3 ಕೋಟಿ ಕೊಡಿಸಬೇಕು’ ಎಂದು ಮನವಿ ಮಾಡಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಉಪವಿಭಾಗಾಧಿಕಾರಿ ವಿನಾಯಕ ನಾರ್ವಡೆ ಭಾಗವಹಿಸಿದ್ದರು.
ನಗರದೊಳಗೆ ಮಾತ್ರವಲ್ಲ ಹೊರಗಿನ ರಸ್ತೆಗಳ ಅಭಿವೃದ್ದಿ ಆಗಬೇಕು. ಗಿಡಗಳನ್ನು ಕತ್ತರಿಸಬೇಕು .ಎಂ.ಬಿ.ದೇವಯ್ಯ ಹಿರಿಯ ಮುಖಂಡರು
ಇನ್ನೂ ಗುಂಡಿ ಮುಚ್ಚಿಲ್ಲ. ಮಂಟಪಗಳಿಗೆ ಕೊಡುತ್ತಿರುವ ಹಣ ಸಾಕಾಗುತ್ತಿಲ್ಲ. ಇನ್ನಷ್ಟು ಹೆಚ್ಚಿನ ಅನುದಾನ ನೀಡಬೇಕುಜಿ.ಸಿ. ಜಗದೀಶ್ ದಶಮಂಟಪ ಸಮಿತಿ ಅಧ್ಯಕ್ಷ.
₹1 ಕೋಟಿ ಅನುದಾನ ಏನೇನೂ ಸಾಲುವುದಿಲ್ಲ. ₹ 2 ಕೋಟಿಯಾದರೂ ಬೇಕು. ರಸ್ತೆ ಅಭಿವೃದ್ಧಿಗೆ ಪ್ರತ್ಯೇಕ ಅನುದಾನ ನೀಡಬೇಕುಕೆ.ಎಸ್.ರಮೇಶ್ ನಗರಸಭೆಯ ಸದಸ್ಯ.
ಸರ್ಕಾರದಿಂದ ಹೆಚ್ಚಿನ ಅನುದಾನ ಬೇಕು. ಸಾರ್ವಜನಿಕ ವಂತಿಗೆ ಸಂಗ್ರಹ ಮಾಡಬಾರದು ಸರ್ಕಾರಿ ಹಣದಿಂದಲೇ ದಸರಾ ಮಾಡಬೇಕುಮಹೇಶ್ ಜೈನಿ ನಗರಸಭೆ ಸದಸ್ಯ.
ಕಳೆದ ಬಾರಿ ₹ 95 ಲಕ್ಷ ಕೊಟ್ಟಿದ್ದು ಸಾಕಾಗಿಲ್ಲ. ಕಲಾವಿದರಿಗೆ ಕಡಿಮೆ ಸಂಭಾವನೆ ಕೊಡುತ್ತಿದ್ದೇವೆ. ಅನುದಾನ ಹೆಚ್ಚಿಸಿಕೊಡಿ.ಅನಿತಾ ಪೂವಯ್ಯ ನಗರಸಭೆ ಸದಸ್ಯೆ.
ಸುಪ್ರೀಂಕೋರ್ಟ್ ಆದೇಶ ಗೌರವಿಸಬೇಕು. ರೋಗಿಗಳಿಗೆ ತೊಂದರೆ ಆಗದಂತೆ ದಸರೆ ಆಚರಿಸಿ ಅಧಿಕಾರಿಗಳು ಹೆಚ್ಚು ಹಸ್ತಕ್ಷೇಪ ಮಾಡಬೇಡಿ.ಎ.ಎಸ್.ಪೊನ್ನಣ್ಣ ಶಾಸಕ.
ಈ ವರ್ಷದಿಂದ ಮಡಿಕೇರಿ ದಸರೆಗೆ ಕಾಫಿ ದಸರೆ ಸೇರ್ಪಡೆಯಾಗಲಿದೆ. ಈ ಕುರಿತು ಸಭೆಯಲ್ಲಿ ಮಾಹಿತಿ ನೀಡಿದ ಮಡಿಕೇರಿ ದಸರಾ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಎಚ್.ಟಿ.ಅನಿಲ್ ‘ಶಾಸಕ ಡಾ.ಮಂತರ್ ಗೌಡ ಪ್ರಯತ್ನದ ಫಲವಾಗಿ ಈ ವರ್ಷದಿಂದ ಮಡಿಕೇರಿ ದಸರಾ ಉತ್ಸವಕ್ಕೆ ಕಾಫಿ ದಸರಾ ಸೇರ್ಪಡೆ ಆಗಿದೆ. ಕಾಫಿ ಕೃಷಿಕರಿಗೆ ಸೂಕ್ತ ಮಾಹಿತಿ ಕಾಫಿಯ ಪ್ರಯೋಜನ ತೋಟಗಾರಿಕಾ ಕೃಷಿ ಮಾಹಿತಿ ಸಂಬಂಧಿತ 20 ಮಳಿಗೆಗಳು ಕಾಫಿ ದಸರಾದಲ್ಲಿ ಇರುತ್ತವೆ’ ಎಂದರು. ಕರ್ನಾಟಕ ಬೆಳೆಗಾರರ ಒಕ್ಕೂಟ ಕೊಡಗು ಪ್ಲಾಂಟರ್ಸ್ ಅಸೋಸಿಯೇಷನ್ ಕಾಫಿ ಮಂಡಳಿ ಸಹಕಾರವನ್ನು ಕೋರಲಾಗುತ್ತದೆ. ಅ. 6 ಮತ್ತು 7ರಂದು ಈ ಕಾರ್ಯಕ್ರಮ ಆಯೋಜಿತ ಆಗಿದೆ. ಮಕ್ಕಳ ದಸರಾ 11 ವರ್ಷ ಮಹಿಳಾ ದಸರಾ 7 ವರ್ಷ ಜನಪದ ದಸರಾ 5 ವರ್ಷ ಪೂರೈಸುತ್ತಿದ್ದು ಮಡಿಕೇರಿ ದಸರಾಕ್ಕೆ ಮತ್ತೊಂದು ಪ್ರಯತ್ನವಾಗಿ ಕಾಫಿ ದಸರಾ ಸೇರ್ಪಡೆಯಾಗುತ್ತಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.