ADVERTISEMENT

ಮಡಿಕೇರಿ:ಎಲ್ಲೆಡೆ ಶಿವನಾಮ ಸ್ಮರಣೆ

ಶಿವಾಲಯಗಳಲ್ಲಿ ವಿಶೇಷ ಪೂಜೆ, ಹಲವೆಡೆ ಜಾತ್ರಾ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2023, 4:42 IST
Last Updated 19 ಫೆಬ್ರುವರಿ 2023, 4:42 IST
ಮಡಿಕೇರಿಯ ದಾಸವಾಳ ಬಡಾವಣೆಯಲ್ಲಿರುವ ವೀರಭದ್ರ ಮುನೇಶ್ವರ ದೇವಾಲಯದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಶಿವಲಿಂಗವನ್ನು ವಿಶೇಷವಾಗಿ ಹೂವಿನಿಂದ ಸಿಂಗರಿಸಲಾಗಿತ್ತು
ಮಡಿಕೇರಿಯ ದಾಸವಾಳ ಬಡಾವಣೆಯಲ್ಲಿರುವ ವೀರಭದ್ರ ಮುನೇಶ್ವರ ದೇವಾಲಯದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಶಿವಲಿಂಗವನ್ನು ವಿಶೇಷವಾಗಿ ಹೂವಿನಿಂದ ಸಿಂಗರಿಸಲಾಗಿತ್ತು   

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಶನಿವಾರ ಮಹಾಶಿವರಾತ್ರಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಎಲ್ಲಾ ಶಿವಾಲಯಗಳಲ್ಲೂ ವಿಶೇಷ ಪೂಜಾಕೈಂಕರ್ಯಗಳು ನಡೆದರೆ, ಹಲವೆಡೆ ಜಾತ್ರಾ ಮಹೋತ್ಸವಗಳೂ ಜರುಗಿದವು. ಎಲ್ಲೆಡೆ ಭಕ್ತರು ಪಾಲ್ಗೊಂಡು ಶಿವನಾಮ ಸ್ಮರಣೆ ಮಾಡಿದರು.

ಮಡಿಕೇರಿಗೆ ಹೊಂದಿಕೊಂಡಿರುವ ಕರ್ಣಂಗೇರಿಯ ರಾಜರಾಜೇಶ್ವರಿ ದೇಗುಲದಲ್ಲಿರುವ ಕಾಶಿ ವಿಶ್ವನಾಥ ದೇವಾಲಯದಲ್ಲಿ ದೇವರ ವಿಗ್ರಹಕ್ಕೆ ಹಾಲು, ನೀರು, ಜೇನು, ಎಳನೀರಿನ ಅಭಿಷೇಕಗಳ ಜತೆಗೆ ಫಲಪುಷ್ಪಗಳನ್ನು ಭಕ್ತರು ಸಮರ್ಪಿಸಿದರು. ಇಲ್ಲಿರುವ 52 ಅಡಿ ಎತ್ತರದ ಬೃಹತ್ ಶಿವಮೂರ್ತಿಗೆ ನಮಿಸಿದರು.

ಇಲ್ಲಿನ ದಾಸವಾಳ ಬಡಾವಣೆಯಲ್ಲಿರುವ ವೀರಭದ್ರ ಮುನೇಶ್ವರ ದೇವಾಲಯದಲ್ಲಿ ಪುನರ್ ಪ್ರತಿಷ್ಠಾಪನಾ ವಾರ್ಷಿಕೋತ್ಸವ ಹಾಗೂ ಮಹಾಶಿವರಾತ್ರಿ ಮಹೋತ್ಸವ ನಡೆಯಿತು. ನಗರದ ಗಣಪತಿ ಬೀದಿಯಿಂದ ಬನ್ನಿಮಂಟಪ, ಮಹದೇವಪೇಟೆ, ಖಾಸಗಿ ಬಸ್ ನಿಲ್ದಾಣ ವೃತ್ತದಿಂದ ಜೂನಿಯರ್ ಕಾಲೇಜು ರಸ್ತೆ ಮಾರ್ಗವಾಗಿ ದೇವಾಲಯಕ್ಕೆ ವೀರಭದ್ರ ಉತ್ಸವ ಮೂರ್ತಿಯ ಮೆರವಣಿಗೆ ನಡೆಯಿತು. ನಂತರ ಗಣಪತಿ ಹೋಮ, ಮಹಾಪೂಜೆ ಹಾಗೂ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನೆರವೇರಿತು.

ADVERTISEMENT

ಓಂಕಾರೇಶ್ವರ ದೇವಾಲಯದಲ್ಲಿ ಬೆಳಿಗ್ಗೆ ನಡೆದ ರುದ್ರಹೋಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ‍ಪಾಲ್ಗೊಂಡಿದ್ದರು. ಸಂಜೆಯ ನಂತರ ರಾತ್ರಿಯವರೆಗೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ದೇಗುಲಕ್ಕೆ ಭೇಟಿ ನೀಡಿದರು.

ಇಲ್ಲಿನ ಬ್ರಹ್ಮಕುಮಾರಿ ಲೈಟ್‍ಹೌಸ್‍ನಲ್ಲಿ ಶಿವರಾತ್ರಿಯ ಪ್ರಯುಕ್ತ ಶಿವಲಿಂಗಕ್ಕೆ ಪೂಜೆ ಸಲ್ಲಿಸಲಾಯಿತು. ಪೂಜೆಯ ನಂತರ ಸೇರಿದ್ದ ಭಕ್ತಾದಿಗಳಿಗೆ ಪ್ರಸಾದ ವಿತರಿಸಲಾಯಿತು.

ಇಲ್ಲಿನ ಬಸವೇಶ್ವರ ದೇಗುಲ, ಚೌಡೇಶ್ವರಿ ದೇಗುಲ, ವಾಸವಿ ದೇವಾಲಯ, ಗಣಪತಿ ದೇವಾಲಯ ಸೇರಿದಂತೆ ಬಹುತೇಕ ಎಲ್ಲ ದೇಗುಲಗಳಲ್ಲೂ ವಿಶೇಷ ಪೂಜಾ ಕೈಂಕರ್ಯಗಳು ನಡೆದವು.

ಆಲೂರು– ಸಿದ್ದಾಪುರದ ಮಾಲಂಬಿ ಗ್ರಾಮದ ಮಳೆ ಮಲ್ಲೇಶ್ವರ ಬೆಟ್ಟ, ಭಾಗಮಂಡಲದ ಭಗಂಡೇಶ್ವರ ದೇಗುಲ ಸೇರಿದಂತೆ ಹಲವು ದೇಗುಲಗಳಲ್ಲಿ ಜಾತ್ರೆಯೋಪಾದಿಯಲ್ಲಿ ಜನರು ಸೇರಿದ್ದು ಕಂಡು ಬಂತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.