ಗೋಣಿಕೊಪ್ಪಲು: ಕೃಷಿಯಲ್ಲಿ ಉತ್ಪಾದನೆಯ ಜತೆಗೆ ಗುಣಮಟ್ಟವನ್ನು ಕಾಪಾಡಿಕೊಳ್ಳಬೇಕು ಎಂದು ಸಕಲೇಶಪುರದ ಪ್ರಗತಿಪರ ಕಾಫಿ ಬೆಳೆಗಾರ ಹಾಗೂ ರಾಷ್ಟ್ರೀಯ ಕೃಷಿ ಪ್ರಶಸ್ತಿ ಪುರಸ್ಕೃತ ಧರ್ಮರಾಜ್ ಹೇಳಿದರು.
ಇಲ್ಲಿನ ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರ, ಪೊನ್ನಂಪೇಟೆ ತಾಲ್ಲೂಕು ಕೃಷಿ ಇಲಾಖೆ ಜಂಟಿಯಾಗಿ ಬುಧವಾರ ಆಯೋಜಿಸಿದ್ದ ‘ಮಣ್ಣಿನ ಫಲವತ್ತತೆ ಹಾಗೂ ಕೊಡಗಿನ ಬೆಳೆಗಳಲ್ಲಿ ಸಮಗ್ರ ಪೋಷಕಾಂಶಗಳ ನಿರ್ವಹಣೆ’ ಕುರಿತ ರೈತರ ತರಬೇತಿ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.
‘ಯೂರಿಯ ರಸಗೊಬ್ಬರ ಮಣ್ಣಿನ ಫಲವತ್ತತೆ ಹಾಳು ಮಾಡುದವುದರ ಜತೆಗೆ ಸೂಕ್ಷ್ಮಾಣು ಜೀವಿಗಳನ್ನು ನಾಶಪಡಿಸುತ್ತದೆ. ರೈತರು ಯೂರಿಯ ಬಳಕೆಯನ್ನು ಸಾಧ್ಯವಾದಷ್ಟು ಮಟ್ಟಿಗೆ ಕಡಿಮೆ ಮಾಡಬೇಕು. ಅಪಾಯಕಾರಿ ಕೀಟನಾಶಕ ಮತ್ತು ಕಳೆ ನಾಶಕಗಳ ಬಳಕೆ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು. ಇಲ್ಲದಿದ್ದರೆ ಮಣ್ಣಿನ ಗುಣಮಟ್ಟ ಹಾಳಾಗಲಿದೆ’ ಎಂದು ಎಚ್ಚರಿಸಿದರು.
‘ಯಾವುದೇ ಕೃಷಿ ಕೈಗೊಳ್ಳುವ ಮುನ್ನ ತಳಿ ಆಯ್ಕೆ ಬಹಳ ಮುಖ್ಯ. ಉತ್ತಮ ತಳಿಯನ್ನು ರೈತರೇ ಆಯ್ಕೆ ಮಾಡಿಕೊಳ್ಳಬೇಕು. ಮಾರುಕಟ್ಟೆಯಲ್ಲಿ ಕೊಳ್ಳುವುದಕ್ಕಿಂತ ತಾವೇ ತಮ್ಮಲ್ಲಿರುವ ತಳಿಯನ್ನು ಸಂರಕ್ಷಿಸಿಕೊಂಡು ಸುಧಾರಿತ ಬೀಜೋಪಚಾರ ಕೃಷಿ ಕೈಗೊಂಡರೆ ಗುಣಮಟ್ಟದ ಇಳುವರಿಗೆ ಜತೆಗೆ ವೆಚ್ಚವೂ ಕಡಿಮೆಯಾಗಲಿದೆ’ ಎಂದು ತಿಳಿಸಿದರು.
‘ಸಮಗ್ರ ಕೃಷಿ ಕೈಗೊಳ್ಳುವುದರಿಂದ ಕೃಷಿಯಲ್ಲಾಗುವ ನಷ್ಟವನ್ನು ತಡೆಗಟ್ಟಬಹುದು. ಗುಣಮಟ್ಟದ ಗೊಬ್ಬರ ಬಳಕೆಯಿಂದ ಇಳುವರಿಯಲ್ಲಿ ಸುಧಾರಣೆ ಕಾಣಬಹುದು. ಕಾಫಿ ತೋಟಕ್ಕೆ ನೀರು ಹಾಯಿಸುವಾಗ ಪೋಲು ಮಾಡಬಾರದು. ತೋಟದಲ್ಲಿನ ಕಾಫಿ ಹೂ ಅರಳಲು 80 ಸೆಂಟ್‌ನಷ್ಟು ನೀರು ಕೊಟ್ಟರೆ ಸಾಕು. ಬಳಿಕ 20 ದಿನ ಬಿಟ್ಟು ಮತ್ತೆ 40 ಸೆಂಟ್ ನಷ್ಟು ನೀರು ಹಾಯಿಸಿದರೆ ಕಾಫಿ ಹೂ ಕಾಯಿಕಟ್ಟಲು ಸಹಕಾರಿಯಾಗಲಿದೆ’ ಎಂದು ತಿಳಿಸಿದರು.
ನೀರಿನ ಬಳಕೆ ಮತ್ತು ಕಾಫಿ ತೋಟದಲ್ಲಿನ ನೆರಳನ್ನೂ ಸೂಕ್ತವಾಗಿ ನಿರ್ವಹಿಸಬೇಕು. ಇದರಿಂದ ಕೃಷಿಯಲ್ಲಿ ಸುಸ್ಥಿರತೆಯನ್ನು ಕಾಪಾಡಿಕೊಳ್ಳಲು ಸಹಕಾರಿಯಾಗಲಿದೆ. ಕಾಫಿ ತೋಟವನ್ನು ಎಷ್ಟು ಎಕರೆಯಲ್ಲಿ ಮಾಡಿದ್ದೇವೆ ಎಂಬುದು ಮುಖ್ಯವಲ್ಲ. ಎಷ್ಟು ಗಿಡಗಳಿವೆ. ಅವುಗಳಲ್ಲಿ ಎಷ್ಟು ಪ್ರಮಾಣದ ಫಸಲು ಲಭಿಸುತ್ತದೆ ಎಂಬುದು ಮುಖ್ಯ. ಆರೋಗ್ಯಕರವಾದ ಒಂದು ಕಾಫಿ ಗಿಡದಲ್ಲಿ 25ರಿಂದ 30 ಕಿಲೋನಷ್ಟು ಇಳುವರಿ ತೆಗೆಯಬಹುದು ಎಂದು ಹೇಳಿ ತಾವು ಸಕಲೇಶಪುರದಲ್ಲಿ ನಿರ್ವಹಿಸುತ್ತಿರುವ ತಮ್ಮದೇ ಕಾಫಿ ತೋಟದ ಚಿತ್ರವನ್ನು ಪ್ರಾತ್ಯಕ್ಷಿಕೆ ಮೂಲಕ ತೋರಿಸಿ ವಿವರಿಸಿದರು.
ಅಡಿಕೆ, ತೆಂಗಿಗೆ ಸಹಾಯ ಬೇಡ:
‘ಅಡಿಕೆ ಮತ್ತು ತೆಂಗಿನ ಮರಗಳಿಗೆ ಹೆಚ್ಚಿನ ಸಹಾಯ ಬೇಡ. ಅವು ಪ್ರಕೃತಿಯಲ್ಲಿ ಹೊಂದಿಕೊಂಡು ಅವು ಸಹಜವಾಗಿಯೇ ಬೆಳೆಯುತ್ತಾ ಫಸಲು ನೀಡುತ್ತವೆ’ ಎಂದು ತಿಳಿಸಿದರು.
ಪೊನ್ನಂಪೇಟೆ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ಮೀರಾ, ಕೃಷಿ ವಿಜ್ಞಾನ ಕೇಂದ್ರದ ಯುವ ವಿಜ್ಞಾನಿಗಳಾದ ಮೃಣಾಲ, ಮೋಹನ್ ಹಾಜರಿದ್ದರು. ತರಬೇತಿಯಲ್ಲಿ 100ಕ್ಕೂ ಹೆಚ್ಚಿನ ಕೃಷಿಕರು ಪಾಲ್ಗೊಂಡು ಉಪನ್ಯಾಸ ಮತ್ತು ಸಂವಾದದ ಮೂಲಕ ಹಲವು ಮಾಹಿತಿ ಪಡೆದುಕೊಂಡರು.
ರೈತರಿಗೆ ಕಾಲಕಾಲಕ್ಕೆ ಅಗತ್ಯವಿರುವ ಮಾಹಿತಿ ನೀಡಲು ಕೃಷಿ ವಿಜ್ಞಾನ ಕೇಂದ್ರ ಸದಾ ಸಿದ್ಧವಿದೆ. ವಿಜ್ಞಾನ ಕೇಂದ್ರದೊಂದಿಗೆ ರೈತರು ಕೈ ಜೋಡಿಸಿದರೆ ಉತ್ತಮ ತಜ್ಞರನ್ನು ಕರೆಸಿ ಮಾಹಿತಿ ನೀಡಲಾಗುವುದುಭಾಕರ್ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ
‘ಭೂಮಿ ಮಾರಾಟದ ಹಕ್ಕು ನಮಗಿಲ್ಲ’
‘ದೇಶದ 144 ಕೋಟಿ ಜನರ ಪೈಕಿ ಕೆಲವರಲ್ಲಿ ಭೂಮಿ ಇದ್ದು ಇರುವ ಭೂಮಿಯಲ್ಲಿ ಆಹಾರ ಬೆಳೆದು ತಾವೂ ಊಟ ಮಾಡುವುದರ ಜತೆಗೆ ಇಲ್ಲದವರಿಗೂ ಆಹಾರ ನೀಡಬೇಕಾಗಿದೆ. ಭೂಮಿ ಇಟ್ಟುಕೊಂಡು ಸರ್ಕಾರದಿಂದ ಸಹಾಯಧನಕ್ಕೆ ಕೈಚಾಚಬಾರದು. ನಾವು ನಮ್ಮ ಹಕ್ಕನ್ನು ಕೇಳೋಣ. ಆದರೆ ಸಹಾಯವನ್ನಲ್ಲ. ಭೂಮಿಯನ್ನು ಮಾರಾಟ ಮಾಡುವ ಹಕ್ಕು ನಮಗಿಲ್ಲ. ಅದನ್ನು ನಮ್ಮ ಮಕ್ಕಳ ಮೂಲಕ ಮುಂದಿನ ಜನಾಂಗಕ್ಕೆ ವರ್ಗಾಯಿಸುವ ಹೊಣೆಗಾರಿಗೆ ನಮ್ಮೆಲ್ಲರ ಮೇಲಿದೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.