ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಸಂತಸ, ಸಂಭ್ರಮಗಳಿಂದ ಸಂಕ್ರಾಂತಿ ಹಬ್ಬವನ್ನು ಸೋಮವಾರ ಜನರು ಆಚರಿಸಿದರು. ಮಕ್ಕಳು, ಯುವತಿಯರಿಗೆ ಎಳ್ಳು ಬೆಲ್ಲ ಬೀರುವ ಸಂಭ್ರಮ ಒಂದೆಡೆ, ಮಹಿಳೆಯರಿಗೆ ಸಿಹಿ ಅಡುಗೆ ತಯಾರಿಸುವ ಸಡಗರ ಮತ್ತೊಂದೆಡೆ, ಧಾರ್ಮಿಕ ಶ್ರದ್ಧೆಯುಳ್ಳವರಿಗೆ ವಿವಿಧ ದೇವಾಲಯಗಳಿಗೆ ಭೇಟಿ ನೀಡಿ ದೇವರ ದರ್ಶನ ಪಡೆಯುವ ಧಾವಂತ...
ಇವೆಲ್ಲವೂ ಮುಪ್ಪುರಿಗೊಂಡಂತೆ ಕಂಡು ಬಂದಿದ್ದು ಕೊಡಗು ಜಿಲ್ಲೆಯ ಸಂಕ್ರಾಂತಿ ಸಂಭ್ರಮದಲ್ಲಿ.
ಕುಶಾಲನಗರ, ಸೋಮವಾರಪೇಟೆ, ಶನಿವಾರಸಂತೆ, ಕೊಡ್ಲಿಪೇಟೆ ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ಕೆಲವು ಯುವತಿಯರು, ಮಕ್ಕಳು ಎಳ್ಳು ಬೆಲ್ಲ ಬೀರಿ ಹಬ್ಬ ಆಚರಿಸಿದರು. ಮನೆಯ ಮುಂದೆ ಆಕರ್ಷಕವಾದ ರಂಗೋಲಿ ಹಾಕಿದ್ದು ಬಹುತೇಕ ಕಡೆ ಕಂಡು ಬಂತು. ಸಂಜೆಯಾಗುತ್ತಿದ್ದಂತೆ ಹೊಸ ಬಟ್ಟೆ ತೊಟ್ಟ ಮಕ್ಕಳು, ಯುವತಿಯರು ಅಕ್ಕಪಕ್ಕದ ಮನೆಯವರಿಗೆ, ಸಂಬಂಧಿಕರು ಹಾಗೂ ಸ್ನೇಹಿತರ ಮನೆಗಳಿಗೆ ಹೋಗಿ ಎಳ್ಳು, ಬೆಲ್ಲ, ಸಕ್ಕರೆ ಅಚ್ಚು ಹಾಗೂ ಕಬ್ಬುಗಳನ್ನು ನೀಡಿ ಶುಭ ಹಾರೈಸಿದರು.
ಮನೆಗಳಲ್ಲಿ ಸಿಹಿ ಪೊಂಗಲ್, ಕಿಚಡಿ, ಪಾಯಸ ಸೇರಿದಂತೆ ವಿವಿಧ ಬಗೆಯ ವಿಶೇಷ ಅಡುಗೆಗಳನ್ನು ತಯಾರಿಸಿ, ಸವಿದರು. ಜತೆಗೆ, ಬಂಧು, ಬಾಂಧವರನ್ನೂ ಆಹ್ವಾನಿಸಿ ಔತಣ ನೀಡಿದರು.
ಇನ್ನು ದೇವಾಲಯಗಳಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನಡೆದವು. ಅಯ್ಯಪ‍್ಪಸ್ವಾಮಿ ದೇಗುಲಗಳಲ್ಲಿ ವಿಶೇಷ ಆರಾಧನೆಗಳು ಜರುಗಿದವು.
ಮಡಿಕೇರಿಯ ಮುತ್ತಪ್ಪ ದೇವಾಲಯದ ಆವರಣದಲ್ಲಿರುವ ಅಯ್ಯಪ‍್ಪ ದೇವಾಲಯವನ್ನು ವಿಶೇಷವಾಗಿ ಸಿಂಗರಿಸಲಾಗಿತ್ತು. ಸೋಮವಾರ ಬೆಳಿಗ್ಗೆಯಿಂದಲೇ ನಿರ್ಮಾಲ್ಯ ವಿಸರ್ಜನೆ, ಉಷಾ ಪೂಜೆ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ನಡೆದವು. ನಂತರ, ಮುತ್ತಪ್ಪ ಹಾಗೂ ಸುಬ್ರಹ್ಮಣ್ಯ ದೇವರ ಪೂಜೆಗಳೊಂದಿಗೆ ವಿವಿಧ ಅಭಿಷೇಕಗಳು ಜರುಗಿದವು. ನಂತರ, ಕುಟ್ಟಿಚಾತನ್, ಮುತ್ತಪ್ಪ, ಗುಳಿಗ ದೇವರ ವೆಳ್ಳಾಟಂ ವಿಜೃಂಭಣೆಯಿಂದ ನಡೆಯಿತು. ಅಯ್ಯಪ್ಪ ದೇವರ ಅಲಂಕಾರ ಪೂಜೆ, ಉತ್ಸವ ಮೂರ್ತಿಯ ಕ್ಷೇತ್ರ ಪ್ರದಕ್ಷಿಣೆ ನಡೆದು, ಮಹಾಮಂಗಳಾರತಿ, ಪ್ರಸಾದ ವಿತರಣೆಗಳು ನಡೆದವು. ಈ ಬಾರಿ ತುಲಾಭಾರ ಸೇವೆ ಏರ್ಪಡಿಸಿದ್ದು ವಿಶೇಷ ಎನಿಸಿದೆ. ಸಂಜೆ ಭಜನೆ, ಅಲಂಕಾರ ಪೂಜೆ, ಪಡಿಪೂಜೆ, ದೀಪಾರಾಧನೆಗಳ ಬಳಿಕ ಪ್ರಸಾದ ವಿತರಣೆ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.