ADVERTISEMENT

ಕೊಡಗು | ಬೆಳೆ ವಿಮೆಯನ್ನು ಆದ್ಯತೆಯಾಗಿ ಪರಿಗಣಿಸಿ: ಡಾ.ಎನ್.ವಿ.ಪ್ರಸಾದ್

ಕೃಷಿ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎನ್.ವಿ.ಪ್ರಸಾದ್ ಸೂಚನೆ

​ಪ್ರಜಾವಾಣಿ ವಾರ್ತೆ
Published 19 ಜೂನ್ 2024, 5:05 IST
Last Updated 19 ಜೂನ್ 2024, 5:05 IST
<div class="paragraphs"><p>ಬೆಳೆ ವಿಮೆ ಕುರಿತ ಭಿತ್ತಿ ಪತ್ರವನ್ನು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎನ್.ವಿ.ಪ್ರಸಾದ್ ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬಿಡುಗಡೆ ಮಾಡಿದರು. </p></div>

ಬೆಳೆ ವಿಮೆ ಕುರಿತ ಭಿತ್ತಿ ಪತ್ರವನ್ನು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎನ್.ವಿ.ಪ್ರಸಾದ್ ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬಿಡುಗಡೆ ಮಾಡಿದರು.

   

ಮಡಿಕೇರಿ: ಬೆಳೆ ವಿಮೆಗೆ ಹೆಚ್ಚು ರೈತರು ನೋಂದಾಯಿಸಿಕೊಳ್ಳುವಂತೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಎನ್.ವಿ.ಪ್ರಸಾದ್ ಕೃಷಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ನಡೆದ ಪ್ರಗತಿ ಪರಿಶೀಲನಾ ಸಭೆಯ ವೇಳೆ ಅವರು ಬೆಳೆ ವಿಮೆ ವಿಷಯವನ್ನು ಆದ್ಯತೆಯ ವಿಷಯವನ್ನಾಗಿ ಪರಿಗಣಿಸಿ, ವಿಸ್ತೃತವಾಗಿ ಚರ್ಚೆ ನಡೆಸಿದರು.

ADVERTISEMENT

ಅಂಕಿ ಅಂಶಗಳನ್ನು ಗಮನಿಸಿದ ಅವರು, ಕಳೆದ ವರ್ಷ 150 ಮಂದಿಯಷ್ಟೇ ನೋಂದಣಿಯಾಗಿದ್ದರು. ಈ ವರ್ಷ ಕೇವಲ ಇಬ್ಬರೇ ನೋಂದಣಿಯಾಗಿದ್ದಾರೆ. ಈ ವಿಷಯವನ್ನು ಹೆಚ್ಚು ಆದ್ಯತೆಯನ್ನಾಗಿ ಪರಿಗಣಿಸಿ, ಬೆಳೆ ವಿಮೆಗೆ ನೋಂದಣಿಯಾಗುವಂತೆ ರೈತರಲ್ಲಿ ಅರಿವು ಮೂಡಿಸಬೇಕು ಎಂದರು.

ಮಳೆ ಹದವಾಗಿ ಸುರಿದರೆ ಯಾವುದೇ ನಷ್ಟವಾಗದು. ಆದರೆ, ಮೇ ತಿಂಗಳಿನಲ್ಲಿ ಧಾರಾಕಾರವಾಗಿ ಸುರಿದ ಮಳೆ ಜೂನ್‌ನಲ್ಲಿ ಶೇ 22ರಷ್ಟು ಕಡಿಮೆಯಾಗಿದೆ. ಮುಂದೆ ಮಳೆ ಕೊರತೆಯಾಗಿ ಅಥವಾ ಹೆಚ್ಚಾಗಿ ಹಾನಿಯಾದರೆ ಬೆಳೆ ವಿಮೆ ಮಾಡಿಸಿಕೊಂಡಲ್ಲಿ ಪರಿಹಾರ ದೊರಕುತ್ತದೆ ಎಂಬ ಮಾಹಿತಿಯನ್ನು ರೈತರಿಗೆ ನೀಡಬೇಕು ಎಂದು ಸೂಚಿಸಿದರು.

ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಸೋಮಸುಂದರ ಮಾತನಾಡಿ, ‘ಜಿಲ್ಲೆಯಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ(ವಿಮಾ) ಯೋಜನೆಯನ್ನು ಹೋಬಳಿ ಮಟ್ಟ ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಅನುಷ್ಠಾನಗೊಳಿಸಲು ಮಂಜೂರಾತಿ ನೀಡಲಾಗಿದೆ. ಭತ್ತ ಮತ್ತು ಮುಸುಕಿನ ಜೋಳದ ಬೆಳೆಗಳನ್ನು ಬೆಳೆವಿಮೆ ಯೋಜನೆಯಡಿ ಅಧಿಸೂಚಿತಗೊಂಡಿವೆ ಕೊಡಗು ಜಿಲ್ಲೆಗೆ ಓರಿಯಂಟಲ್ ಸಾಮಾನ್ಯ ವಿಮಾ ಕಂಪನಿಯನ್ನು 2024-25 ಮತ್ತು 2025-26 ನೇ ಸಾಲಿಗೆ ಅನುಷ್ಠಾನ ಸಂಸ್ಥೆಯನ್ನಾಗಿ ಆಯ್ಕೆ ಮಾಡಲಾಗಿದೆ. ಭತ್ತದ (ನೀರಾವರಿ ಮತ್ತು ಮಳೆಯಾಶ್ರಿತ) ಬೆಳೆಗೆ ಆಗಸ್ಟ್ 16 ಮತ್ತು ಮುಸುಕಿನ ಜೋಳದ ಬೆಳೆಗೆ ಜುಲೈ 31 ರವರೆಗೆ ವಿಮೆ ಯೋಜನೆಯಡಿ ರೈತರು ಹೆಸರು ನೋಂದಾಯಿಸಿಕೊಳ್ಳಲು ಅವಕಾಶವಿದೆ’ ಎಂದು ಮಾಹಿತಿ ನೀಡಿದರು.

ಜೂನ್ ತಿಂಗಳಿನಲ್ಲಿ ಶೇ 22ರಷ್ಟು ಮಳೆ ಕಡಿಮೆಯಾಗಿದೆ. ಇದರ ಮಧ್ಯೆ ಮುಸುಕಿನ ಜೋಳ ಬಿತ್ತನೆ ಕಾರ್ಯ ನಡೆದಿದೆ.  ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ ಇದ್ದು, ಈಗ ಉತ್ತಮ ಮಳೆಯಾದಲ್ಲಿ ಸಸಿಮಡಿ ಕಾರ್ಯ ಆರಂಭವಾಗಲಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿನ ಕೆರೆಗಳನ್ನು ಅಭಿವೃದ್ಧಿಪಡಿಸಿ ಮೀನುಗಾರಿಕೆಗೆ ಉತ್ತೇಜನ ನೀಡಬೇಕು. ಇದಕ್ಕಾಗಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಮೀನುಗಾರಿಕೆ ಇಲಾಖೆಯ ಅಧಿಕಾರಿಗಳು ಜಂಟಿಯಾಗಿ, ಸಮನ್ವಯದಿಂದ ಕಾರ್ಯನಿರ್ವಹಸಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಕಟ್ಟುನಿಟ್ಟಿನ ಸೂಚನೆ ನೀಡಿದರು. 

6 ತಿಂಗಳಿನಿಂದ ಪಡಿತರ ಪಡೆಯದವರ ಮಾಹಿತಿ ಕೊಡಿ

ಕಳೆದ 6 ತಿಂಗಳಿನಿಂದ ಸತತವಾಗಿ ಬಿಪಿಎಲ್‍ನಡಿ ಪಡಿತರ ಪಡೆಯದಿರುವವರ ಮಾಹಿತಿಯನ್ನು ಆಹಾರ ಇಲಾಖೆಯ ಆಯುಕ್ತಾಲಯಕ್ಕೆ ಕಳುಹಿಸಬೇಕು ಎಂದು ಸೂಚಿಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ವೆಂಕಟ್ ರಾಜಾ, ಈ ಸಂಬಂಧ ಸಮೀಕ್ಷೆ ನಡೆಸಿ ವರದಿ ನೀಡಲಾಗುವುದು ಎಂದು ಹೇಳಿದರು.

ಕೊಡವ ಹೆರಿಟೇಜ್ ಸಂಬಂಧಿಸಿದಂತೆ ಮುಂದುವರಿದ ಕಾಮಗಾರಿಗೆ 5 ಕೋಟಿ ರೂ. ಬಿಡುಗಡೆಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಈ ಸಂಬಂಧ ಅನುದಾನ ಬಿಡುಗಡೆಯಾಗಬೇಕಿದೆ. ಹಾಗೆಯೇ ಕುಶಾಲನಗರದಲ್ಲಿ ಮಿನಿ ವಿಧಾನಸೌಧ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಬೇಕಿದೆ ಎಂದು ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಸಿದ್ದೇಗೌಡ ಅವರು ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ನಟರಾಜು ಅವರು ಜಿಲ್ಲೆಯಲ್ಲಿರುವ 883 ಅಂಗನವಾಡಿ ಕೇಂದ್ರಗಳ ಪೈಕಿ 22 ಅಂಗನವಾಡಿಗಳಿಗೆ ನಿವೇಶನ ಬೇಕಿದೆ’ ಎಂದು ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಎನ್.ವೀಣಾ, ಉಪ ವಿಭಾಗಾಧಿಕಾರಿ ವಿನಾಯಕ ನರ್ವಾಡೆ, ಜಿಲ್ಲಾ ಪ‍ಂಚಾಯಿತಿ ಉಪ ಕಾರ್ಯದರ್ಶಿ ಧನರಾಜ್, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಶೇಖರ್, ಐಟಿಡಿಪಿ ಇಲಾಖೆ ಅಧಿಕಾರಿ ಹೊನ್ನೇಗೌಡ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಧಿಕಾರಿ ದಿವಾಕರ, ಸೆಸ್ಕ್ ಕಾರ್ಯನಿರ್ವಾಹಕ ಎಂಜಿನಿಯರ್ ಅನಿತಾ ಬಾಯಿ, ಜಿಲ್ಲಾ ಪಂಚಾಯಿತಿ ಎಂಜಿನಿಯರ್‌ಗಳಾದ ಸುರೇಶ್ ಕುಮರ್, ಮುತ್ತುರಾಜ್, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಯೋಗಿಶ್, ತಹಶೀಲ್ದಾರರಾದ ಪ್ರವೀಣ್ ಕುಮಾರ್, ಕಿರಣ್ ಗೌರಯ್ಯ, ರಾಮಚಂದ್ರ, ನವೀನ್ ಕುಮಾರ್, ಮೋಹನ್ ಕುಮಾರ್, ಪಶುಪಾಲನಾ ಇಲಾಖೆ ಉಪನಿರ್ದೇಶಕ ಲಿಂಗರಾಜ ದೊಡ್ಡಮನಿ, ಜಿಲ್ಲಾ ಆಯುಷ್ ಅಧಿಕಾರಿ ಡಾ.ರೇಣುಕಾದೇವಿ ಭಾಗವಹಿಸಿದ್ದರು.

‘ಪ್ರಜಾವಾಣಿ’ಯ ‘ನಮ್ಮ ಜನ ನಮ್ಮ ಧ್ವನಿ’ ಅಂಕಣದಲ್ಲಿ ಸೋಮವಾರವಷ್ಟೇ ಶಿಥಿಲ ಶಾಲೆಗಳ ಕುರಿತು ವಿಸ್ತೃತವಾದ ವರದಿ ಪ್ರಕಟಗೊಂಡಿತ್ತು.

ಹಲವು ತಿಂಗಳ ಬಳಿಕ ಪ್ರಗತಿ ಪರಿಶೀಲನೆ ವಿವಿಧ ಇಲಾಖೆಗಳ ಪ್ರಗತಿ ಬಗ್ಗೆ ಮಾಹಿತಿ ಪಡೆದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅಭಿವೃದ್ಧಿಗೆ ವೇಗ ನೀಡಲು ಸೂಚನೆ

ಸಭೆಯಲ್ಲಿ ನೀಡಲಾಗಿರುವ ನಿರ್ದೇಶನವನ್ನು ಚಾಚೂ ತಪ್ಪದೇ ಅಧಿಕಾರಿಗಳು ಪಾಲಿಸಬೇಕು. ಮುಂದಿನ ಸಭೆಯಲ್ಲಿ ಕೆಲಸಗಳು ಆಗಿರಬೇಕು

-ವೆಂಕಟ್ ರಾಜಾ ಜಿಲ್ಲಾಧಿಕಾರಿ.

ಮಹಾತ್ಮ ಗಾಂಧಿ ಗ್ರಾಮೀಣ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಲ್ಲಿ ಗುರಿ ತಲುಪಲಾಗಿದೆ. ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ.

- ವರ್ಣಿತ್ ನೇಗಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ

ಪ‍್ರಜಾವಾಣಿ ವರದಿ ಪರಿಣಾಮ

ಸೋರುವ ಶಾಲೆಗಳ ಪಟ್ಟಿ ಕೊಡಿ ಕೊಡಗು ಜಿಲ್ಲೆಯಲ್ಲಿ ಸರ್ಕಾರಿ ಶಾಲೆಗಳ ಸ್ಥಿತಿಗತಿ ಬಗ್ಗೆ ದೂರುಗಳು ಕೇಳಿಬರುತ್ತಿವೆ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಎಷ್ಟು ಶಾಲೆಗಳು ಸೋರುತ್ತಿವೆ ಎಂಬ ಬಗ್ಗೆ ಕೂಡಲೇ ಪಟ್ಟಿ ಮಾಡಿ ವರದಿ ನೀಡಬೇಕು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕರಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎನ್.ವಿ.ಪ್ರಸಾದ್ ಅವರು ನಿರ್ದೇಶನ ನೀಡಿದರು. ಸೋಮವಾರವಷ್ಟೇ ‘ಪ್ರಜಾವಾಣಿ’ಯ ‘ನಮ್ಮ ಜನ ನಮ್ಮ ಧ್ವನಿ’ ಅಂಕಣದಲ್ಲಿ ‘ಶಾಲಾ ದುರಸ್ತಿಗೆ ಬೇಕಿದೆ ₹ 1.05 ಕೋಟಿ’ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಗೊಂಡಿತ್ತು. ಇದರಲ್ಲಿ ಶಿಥಿಲಾವಸ್ಥೆಯಲ್ಲಿರುವ ಶಾಲೆಗಳ ಪಟ್ಟಿಯನ್ನೂ ನೀಡಲಾಗಿತ್ತು.

ಸಭೆಯಲ್ಲಿ ನೀಡಿದ ಇನ್ನಿತರ ಸೂಚನೆಗಳು * ಕೊಡಗು ಜೇನಿಗೆ ನಂಜನಗೂಡು ರಸಬಾಳೆ ಮಾದರಿಯಲ್ಲಿ ಪ್ರಾಶಸ್ತ್ಯ ದೊರೆಯುವಂತಾಗಲು ಅಗತ್ಯ ಯೋಜನೆ ರೂಪಿಸಬೇಕು * ಅಂಗನವಾಡಿಗಳಿಗೆ ಕೂಡಲೇ ತಹಶೀಲ್ದಾರರು ಜಾಗ ಒದಗಿಸಬೇಕು.  * ಸರ್ಕಾರದ ಹಂತದಲ್ಲಿ ಆಗಬೇಕಿರುವ ಕೆಲಸಗಳ ಬಗ್ಗೆ ಗಮನಹರಿಸಿ * ಸಮಾಜ ಕಲ್ಯಾಣ ಹಿಂದುಳಿದ ವರ್ಗಗಳ ಕಲ್ಯಾಣ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗಳಿಗೆ ನಿವೇಶನ ಬೇಕಿದ್ದಲ್ಲಿ ಜಿಲ್ಲಾಡಳಿತಕ್ಕೆ ಮನವಿ ಮಾಡಿರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.