ADVERTISEMENT

ಮಡಿಕೇರಿ: ಬಗೆಬಗೆ ಮಾವುಗಳ ರಸದೌತಣ

ಹಾಪ್‌ಕಾಮ್ಸ್‌ ಆವರಣದಲ್ಲಿ ಮಾವು ಮತ್ತು ಹಲಸು ಮೇಳಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 25 ಮೇ 2024, 4:53 IST
Last Updated 25 ಮೇ 2024, 4:53 IST
ಮಡಿಕೇರಿಯಲ್ಲಿ ಹಾಪ್‌ಕಾಮ್ಸ್‌ ಆವರಣದಲ್ಲಿ ಮಾವು ಮತ್ತು ಹಲಸು ಮೇಳಕ್ಕೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಶುಕ್ರವಾರ ಚಾಲನೆ ನೀಡಿದರು
ಮಡಿಕೇರಿಯಲ್ಲಿ ಹಾಪ್‌ಕಾಮ್ಸ್‌ ಆವರಣದಲ್ಲಿ ಮಾವು ಮತ್ತು ಹಲಸು ಮೇಳಕ್ಕೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಶುಕ್ರವಾರ ಚಾಲನೆ ನೀಡಿದರು   

ಮಡಿಕೇರಿ: ಅದೊ ರಸಪೂರಿ, ಇದೋ ಬಾದಾಮಿ, ಅರೆರೆ ಅಪರೂಪದ ಸಕ್ಕರೆಗುತ್ತಿ...! ಈ ಬಗೆಯ ಸಂಭಾಷಣೆ ಇಲ್ಲಿನ  ಹಾಪ್‌ಕಾಮ್ಸ್‌ ಆವರಣದಲ್ಲಿ ಶುಕ್ರವಾರ ಆರಂಭವಾದ ಮಾವು ಮತ್ತು ಹಲಸು ಮೇಳದಲ್ಲಿ ಸಾರ್ವಜನಿಕರಿಂದ ಕೇಳಿ ಬಂತು.

ತೋಟಗಾರಿಕೆ ಇಲಾಖೆಯ ಅಂಗ ಸಂಸ್ಥೆಯಾದ ಕೊಡಗು ಜಿಲ್ಲಾ ಹಾಪ್ ಕಾಮ್ಸ್ ಸಂಸ್ಥೆ ವತಿಯಿಂದ ನಗರದ ಅಂಚೆ ಕಚೇರಿಯ ಎದುರು ಇರುವ ಹೈಟೆಕ್ ಮಾರಾಟ ಮಳಿಗೆಯ ಆವರಣದಲ್ಲಿ ಆಯೋಜಿಸಿರುವ ಈ ಮೇಳದಲ್ಲಿ ಒಂದೇ ಸೂರಿನಡಿ 11 ವಿವಿಧ  ತಳಿಗಳ ಮಾವುಗಳು ಮಾರಾಟಕ್ಕೆ ಲಭ್ಯವಿದೆ.

ಒಟ್ಟು ಇಲ್ಲಿರುವ 15 ಮಳಿಗೆಗಳಲ್ಲಿ ರಾಮನಗರ, ಶ್ರೀನಿವಾಸಪುರ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಬಂದಿರುವ ರೈತರು ಯಾವು ಬೆಳೆದ ಮಾವುಗಳನ್ನು ಮಾರಾಟಕ್ಕಿರಿಸಿದ್ದಾರೆ. ಕರಿಯಪ್ಪ ಎಂಬುವವರು ಹಲಸುಹಣ್ಣುಗಳನ್ನು ಮಾರಾಟಕ್ಕಿರಿಸಿದ್ದಾರೆ.

ADVERTISEMENT

ಜಿಲ್ಲಾಧಿಕಾರಿ ಚಾಲನೆ

ಮೇ, 26 ರವರೆಗೆ ನಡೆಯುವ ‘ಮಾವು ಮತ್ತು ಹಲಸು ಮೇಳ’ಕ್ಕೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಶುಕ್ರವಾರ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ‘ಮಲ್ಲಿಕಾ, ಸಿಂಧೂರ, ಬಾದಾಮಿ, ರಸಪುರಿ, ತೋತಾಪುರಿ ಸೇರಿದಂತೆ ವಿವಿಧ ರೀತಿಯ ಮಾವು ಮತ್ತು ಹಲಸು ಮಾರಾಟಕ್ಕೆ ಇವೆ’ ಎಂದರು.

ಮಾವು ಮತ್ತು ಹಲಸು ಪ್ರಿಯರಿಗೆ ಆರೋಗ್ಯದಾಯಕ ಹಣ್ಣುಗಳನ್ನು ಖರೀದಿಸಲು ಸೂಕ್ತ ವ್ಯವಸ್ಥೆ ಕಲ್ಪಿಸುವುದು ಮಾವು ಮೇಳದ ಉದ್ದೇಶ ಎಂದು ತಿಳಿಸಿದರು.

ಮಾವು ಮತ್ತು ಹಲಸು ಬೆಳೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ವಿವಿಧ ಜಿಲ್ಲೆಗಳಲ್ಲಿ ಮಾವು ಮತ್ತು ಹಲಸು ಮೇಳವನ್ನು ಹಮ್ಮಿಕೊಳ್ಳಲಾಗಿದೆ. ಮಾವು ಮೇಳದಲ್ಲಿ ರಾಮನಗರ, ಕೋಲಾರ ಮತ್ತಿತರ ಜಿಲ್ಲೆಗಳಿಂದ ಮಾವು ಮತ್ತು ಹಲಸು ಹಣ್ಣು ಮಾರಾಟಗಾರರು ಆಗಮಿಸಿದ್ದಾರೆ ಎಂದು ಅವರು ಹೇಳಿದರು.

ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಎಚ್.ಆರ್.ಯೋಗೇಶ್ ಮಾತನಾಡಿ, ‘ಮಾವು ಮತ್ತು ಹಲಸು ಮೇಳದಲ್ಲಿ ಮಾವು, ಹಲಸು, ಸಪೋಟ, ನಿಂಬೆ, ಸೀಬೆ ಮತ್ತಿತರ ಗಿಡಗಳನ್ನು ಮಾರಾಟಕ್ಕೆ ಇಡಲಾಗಿದ್ದು, ಸಾರ್ವಜನಿಕರು ವಿವಿಧ ರೀತಿಯ ಗಿಡಗಳನ್ನು ಕೊಳ್ಳಬಹುದು’ ಎಂದು ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಕೊಡಗು ಜಿಲ್ಲಾ ಹಾಪ್‍ಕಾಮ್ಸ್ ಅಧ್ಯಕ್ಷ ಬಿದ್ದಾಟಂಡ ರಮೇಶ್ ಚಂಗಪ್ಪ, ಉಪಾಧ್ಯಕ್ಷ ಮಲ್ಲಂಡ ಮಧುದೇವಯ್ಯ, ನಿರ್ದೇಶಕರಾದ ನಾಗೇಶ್ ಕುಂದಲ್ಪಾಡಿ, ಕಾಂಗೀರ ಸತೀಶ್, ಬಿ.ಎ.ಹರೀಶ್, ಎಸ್.ಪಿ.ಪೊನ್ನಪ್ಪ, ಬೇಬಿ ಪೂವಯ್ಯ, ಲೀಲಾ ಮೇದಪ್ಪ, ಎಂ.ಮನೋಹರ್, ಪೂವಪ್ಪ ನಾಯಕ, ಉಮೇಶ್‍ರಾಜ ಅರಸ್, ಸುಧೀರ್, ಹಾಪ್‍ಕಾಮ್ಸ್ ಸಿಇಒ ರೇಷ್ಮಾ ಗಿರೀಶ್, ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಮುತ್ತಪ್ಪ ಭಾಗವಹಿಸಿದ್ದರು.

ಮಡಿಕೇರಿಯ ಹಾಪ್‌ಕಾಮ್ಸ್‌ ಅವರಣದಲ್ಲಿ ಶುಕ್ರವಾರ ಮಾವು ಮತ್ತು ಹಲಸಿನ ಮೇಳಕ್ಕೆ ಚಾಲನೆ ನೀಡಿದ ಬಳಿಕ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ಮಾವಿನಹಣ್ಣಿನ ಘಮಳನ್ನು ಆಘ್ರಾಣಿಸಿದರು
ಮೇಳದಲ್ಲಿ ಪ್ರದರ್ಶನಕ್ಕಿಟ್ಟಿರುವ ಬಗೆಬಗೆ ತಳಿಯ ಮಾವು

ಮಳಿಗೆಗಳಿಗೆ ಚಾವಣಿ ವ್ಯವಸ್ಥೆ ಗಮನ ಸೆಳೆಯುವ ಸ್ವಾಗತ ಕಮಾನು ಹಲವು ಬಗೆಯ ಸಸಿಗಳೂ ಇಲ್ಲಿ ಲಭ್ಯ

ಮಾವುಮೇಳದಲ್ಲಿ ಲಭ್ಯ ಇರುವ ತಳಿಗಳು ಆಲ್ಫೋನ್ಸಾ ಬಾಕ್ಸ್ ಆಲ್ಫೋನ್ಸಾ ರಸಪೂರಿ ಸಿಂಧೂರಾ ಸಕ್ಕರೆಗುತ್ತಿ ಮಲಗೋವಾ ದಶೇರಿ ಆಮ್ರಪಾಲಿ ಮಲ್ಲಿಕಾ ತೋತಾಪುರಿ ಇಮಾಮ್ ಪಸಂದ್

‘ಕಾರ್ಬೈಡ್ ಮುಕ್ತ ಹಣ್ಣುಗಳು’

ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಎಚ್.ಆರ್.ಯೋಗೇಶ್ ಮಾತನಾಡಿ ‘ನೈಸರ್ಗಿಕವಾಗಿ ಮಾಗಿಸಿದ ಕಾರ್ಬೈಡ್ ಮುಕ್ತ ಹಣ್ಣುಗಳನ್ನು ರೈತರಿಂದ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುವುದು ಮಾವು ಮೇಳದ ಉದ್ದೇಶ’ ಎಂದು ತಿಳಿಸಿದರು. ಮಾವು ಮೇಳದಲ್ಲಿ ಮಲಗೋವಾ ಸಿಂಧೂರಿ ರಸಪೂರಿ ತೋತಾಪುರಿ ಬಾದಾಮಿ ಮಲ್ಲಿಕಾ ದಸೇರಿ ಹಣ್ಣುಗಳನ್ನು ನೈಸರ್ಗಿಕವಾಗಿ ಮಾಗಿಸಿ ರೈತರಿಂದ ಗ್ರಾಹಕರಿಗೆ ಯೋಗ್ಯ ಬೆಲೆಗೆ ನೇರ ಮಾರಾಟ ಮಾಡಲಾಗುತ್ತದೆ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.