ADVERTISEMENT

ವನ್ಯಪ್ರಾಣಿ ಹಾವಳಿ ನಿಯಂತ್ರಣ; ಹಲವು ಸಲಹೆ ನೀಡಿದ ವನ್ಯಜೀವಿ ತಜ್ಞರು

ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸುದೀರ್ಘ ಚರ್ಚೆ

​ಪ್ರಜಾವಾಣಿ ವಾರ್ತೆ
Published 16 ಜೂನ್ 2024, 4:54 IST
Last Updated 16 ಜೂನ್ 2024, 4:54 IST
ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ವನ್ಯಜೀವಿ ತಜ್ಞರೊಂದಿಗೆ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ವೆಂಕಟ್ ರಾಜಾ ಮಾತನಾಡಿದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವರ್ಣಿತ್ ನೇಗಿ ಹಾಗೂ ಎಎಸ್‌ಪಿ ಸುಂದರ್ ರಾಜ್ ಭಾಗವಹಿಸಿದ್ದರು
ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ವನ್ಯಜೀವಿ ತಜ್ಞರೊಂದಿಗೆ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ವೆಂಕಟ್ ರಾಜಾ ಮಾತನಾಡಿದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವರ್ಣಿತ್ ನೇಗಿ ಹಾಗೂ ಎಎಸ್‌ಪಿ ಸುಂದರ್ ರಾಜ್ ಭಾಗವಹಿಸಿದ್ದರು   

ಮಡಿಕೇರಿ: ಕಾಡಾನೆಗಳ ಹಾವಳಿ ತಡೆಯಲು ಅರಣ್ಯ ಇಲಾಖೆ ಇನ್ನಷ್ಟು ವೈಜ್ಞಾನಿಕ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಅಭಿಪ್ರಾಯ ಇಲ್ಲಿ ಶನಿವಾರ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ನಡೆಸಿದ ಸಭೆಯಲ್ಲಿ ವನ್ಯಜೀವಿ ತಜ್ಞರಿಂದ ವ್ಯಕ್ತವಾಯಿತು. ಸ್ವತಃ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ವೈಜ್ಞಾನಿಕವಾದ ಕಾರ್ಯಕ್ರಮಗಳನ್ನು ರೂಪಿಸುವಂತೆ ಸೂಚಿಸಿದರು.

ಪರಿಸರವಾದಿಗಳಾದ ಕರ್ನಲ್ ಸಿ.ಪಿ.ಮುತ್ತಣ್ಣ ಹಾಗೂ ಸಂಜಯ್ ಗುಬ್ಬಿ ಅವರು, ‘ಈಗ ಕೈಗೊಳ್ಳುತ್ತಿರುವ ಕ್ರಮಗಳ ಜೊತೆಗೆ ಇನ್ನೂ ಹಲವು ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ಸಲಹೆಗಳನ್ನು ಮುಂದಿಟ್ಟರು.

ಪ್ರಮುಖವಾಗಿ ಮುತ್ತಣ್ಣ ಅವರು, ಕಾಡಾನೆಗಳ ಚಲನವಲನಗಳನ್ನು ಕುರಿತು ಸ್ಥಳೀಯರಿಗೆ ಮಾಹಿತಿ ನೀಡುವ ವ್ಯವಸ್ಥೆ ರೂಪಿಸುವ ಕುರಿತು ಮಾತನಾಡಿದರು.

ADVERTISEMENT

ಸ್ಥಳೀಯರಿಗೆ ಎಸ್‌ಎಂಎಸ್ ಮೂಲಕ ಮಾಹಿತಿ ನೀಡುವ ವ್ಯವಸ್ಥೆ ಜಾರಿಗೆ ಬಂದರೆ ಅನೇಕ ಜೀವಗಳನ್ನು ರಕ್ಷಿಸಬ ಹುದು ಎಂದು ಪ್ರತಿಪಾದಿಸಿದರು.

‘ಹೆಚ್ಚು ತೊಂದರೆ ಕೊಡುವಂತಹ ಕಾಡಾನೆಗಳನ್ನು ಹಿಡಿದು ಬೇರೆಡೆಗೆ ಸ್ಥಳಾಂತರ ಮಾಡಬೇಕು. ಅರಣ್ಯ ಪ್ರದೇಶದಲ್ಲಿ ಹೆಚ್ಚು ಹೆಚ್ಚು ಗಿಡ, ಮರಗಳನ್ನು ನೆಡಬೇಕು. ಕಾಡಿನಲ್ಲಿ ವನ್ಯಜೀವಿ ಗಳಿಗೆ ಕುಡಿಯುವ ನೀರಿಗೆ ತೊಂದರೆಯಾಗದಂತೆ ನೋಡಿಕೊಳ್ಳ ಬೇಕು’ ಎಂದು ಮನವಿ ಮಾಡಿದರು.

ಇದರೊಂದಿಗೆ, ಕಾಡಾನೆ ಹಾವಳಿ ನಿಯಂತ್ರಿಸುವ ಸಂಬಂಧ ಸೋಲಾರ್ ತಂತಿ ಬೇಲಿ ಅಳವಡಿಸುವುದು, ಕಂದಕ ಗಳ ನಿರ್ಮಾಣ, ರೈಲ್ವೆ ಬ್ಯಾರಿಕೇಡ್ ಅಳವಡಿಕೆ ಸೇರಿ ಹಲವು ಕ್ರಮಗಳನ್ನೂ ಕೈಗೊಳ್ಳಬಹುದು ಎಂದರು.

‘ವನ್ಯಪ್ರಾಣಿಗಳು ಹೆಚ್ಚಾಗಿರುವ ಪ್ರದೇಶಗಳಲ್ಲಿನ ಹಾಡಿಗಳಲ್ಲಿ ಶೌಚಾಲಯ ಸೇರಿದಂತೆ ಕನಿಷ್ಠ ಮೂಲ ಸೌಲಭ್ಯ ಕಲ್ಪಿಸಬೇಕಿದೆ. ಇದರಿಂದ ಶೌಚಕ್ಕಾಗಿ ಹಾಡಿ ಜನರು ಹೊರಗೆ ಹೋಗಿ ವನ್ಯಜೀವಿಗಳ ದಾಳಿಗೆ ಬಲಿಯಾಗುವುದು ತಪ್ಪಲಿದೆ’ ಎಂದೂ ಅವರು ಅಭಿಪ್ರಾಯಪಟ್ಟರು.

ವನ್ಯಜೀವಿ ತಜ್ಞ ಸಂಜಯ್ ಗುಬ್ಬಿ ಮಾತನಾಡಿ, ‘ವನ್ಯಪ್ರಾಣಿಗಳಿಗೆ ಕುಡಿಯುವ ನೀರು ಮತ್ತು ಮೇವು ಅತೀ ಮುಖ್ಯ. ಆದ್ದರಿಂದ ಅರಣ್ಯ ಪ್ರದೇಶದಲ್ಲಿ ಹೆಚ್ಚಿನ ಮೇವು ಮತ್ತು ಕುಡಿಯುವ ನೀರು ಲಭ್ಯವಾಗುವಂತೆ ಮಾಡಬೇಕು. ಜೊತೆಗೆ, ಮಲೆನಾಡು ಭಾಗದಲ್ಲಿ ಆನೆಗಳ ಚಲನವಲನಗಳ ಬಗ್ಗೆ ಮಾಹಿತಿ ನೀಡಿದರು.

‘ಕೊಡಗು ಜಿಲ್ಲೆಯಲ್ಲಿ ಕಾಡಾನೆ ಸೇರಿದಂತೆ ವನ್ಯಪ್ರಾಣಿಗಳ ಹಾವಳಿಯು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದ್ದು, ಇವುಗಳ ನಿಯಂತ್ರಣ ಅಗತ್ಯ’ ಎಂದು ಕೂರ್ಗ್ ವೈಲ್ಡ್ ಲೈಪ್ ಸೊಸೈಟಿಯ ಹಲವು ಮಂದಿ ಅಭಿಪ್ರಾಯ ವ್ಯಕ್ತಪಡಿಸಿದರು.

ಜಿಲ್ಲಾ ಪಂಚಾಯಿತಿ ಸಿಇಒ ವರ್ಣಿತ್ ನೇಗಿ, ಎಎಸ್‌ಪಿ ಸುಂದರರಾಜ್ ಭಾಗವಹಿಸಿದ್ದರು.

ಸಭೆಯಲ್ಲಿ ಪರಿಸರವಾದಿ ಕರ್ನಲ್ ಸಿ.ಪಿ.ಮುತ್ತಣ್ಣ ಹಲವು ಸಲಹೆಗಳನ್ನು ನೀಡಿದರು
ಕಾಡಾನೆ ಸಂಚರಿಸುವ ಮಾರ್ಗದಲ್ಲಿ ಬೆಳಗಿನ ಜಾವ ಮತ್ತು ಹೆಚ್ಚು ಮಂಜು ಆವರಿಸಿದಾಗ ಜನರ ಓಡಾಟ ತಪ್ಪಿಸಬೇಕು. ಇದರಿಂದ ಸಾಕಷ್ಟು ಜೀವಗಳನ್ನು ಉಳಿಸಬಹುದು
–ಭಾಸ್ಕರ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಮಡಿಕೇರಿ
ಅರಣ್ಯ ಪ್ರದೇಶದಲ್ಲಿ ವಾಸಿಸುವ ಜನರಿಗೆ ಇಲಾಖೆಯಿಂದ ಸೋಲಾರ್ ದೀಪ ಮತ್ತಿತರ ಸೌಲಭ್ಯ ಕಲ್ಪಿಸಬಹುದು.
–ಎನ್.ಎಚ್.ಜಗನ್ನಾಥ್, ವಿರಾಜಪೇಟೆ ಉಪ ಅರಣ್ಯ ಸಂರಕ್ಷಣಾಧಿಕಾರಿ.
ಕಾಡಾನೆ ಹಾವಳಿ ತಪ್ಪಿಸುವಲ್ಲಿ ಅರಣ್ಯ ಇಲಾಖೆಯಿಂದ ಸಾಕಷ್ಟು ಪ್ರಯತ್ನ ನಡೆದಿದೆ. ಆ ನಿಟ್ಟಿನಲ್ಲಿ ಮತ್ತಷ್ಟು ಕ್ರಮ ಕೈಗೊಳ್ಳಲಾಗುವುದು
–ಹರ್ಷಕುಮಾರ್, ನಾಗರಹೊಳೆ ಹುಲಿಯೋಜನೆ ನಿರ್ದೇಶಕ

‘ಆನೆ ಕಾರಿಡಾರ್ ನಿರ್ಮಿಸಿ ರೇಡಿಯೊ ಕಾಲರ್ ಅಳವಡಿಸಿ’

ಪ‍ರಿಸರವಾದಿ ಕರ್ನಲ್ ಸಿ.ಪಿ.ಮುತ್ತಣ್ಣ ಮಾತನಾಡಿ ‘ನಾಗರಹೊಳೆ-ಬ್ರಹ್ಮಗಿರಿ ವ್ಯಾಪ್ತಿಯ ಕುಟ್ಟ ಬಳಿ ಆನೆ ಕಾರಿಡಾರ್ ನಿರ್ಮಿಸಿದಲ್ಲಿ ನಾಡಿಗೆ ಬರುವ ಕಾಡಾನೆಗಳನ್ನು ತಡೆಯಬಹುದು’ ಎಂದು ಅಭಿಪ್ರಾಯಪಟ್ಟರು.

ವಯಸ್ಸಾದ ಹಾಗೂ ಗಾಯಗೊಂಡಿರುವ ಹುಲಿಗಳನ್ನು ಗುರುತಿಸಿ ಅಂತಹ ಹುಲಿಗಳಿಗೆ ಕಾಲರ್‌ಗಳನ್ನು ಅಳವಡಿಸಬೇಕು. ಇದರಿಂದ ಜನ-ಜಾನುವಾರುಗಳ ರಕ್ಷಣೆ ಮಾಡಬಹುದು ಎಂದೂ ಸಲಹೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.