ಮಡಿಕೇರಿ: ‘ನಮ್ಮ ಭೂಮಿ ನಮ್ಮ ಹಕ್ಕು’ ಎಂಬ ಘೋಷವಾಕ್ಯದೊಡನೆ ನ.22ರಂದು ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ನಗರದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ರವಿ ಕಾಳಪ್ಪ ತಿಳಿಸಿದರು.
‘ನಗರದ ಚೌಡೇಶ್ವರಿ ದೇಗುಲದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ, ಸಂಜೆ 5ರವರೆಗೆ ಪ್ರತಿಭಟಿಸಲಾಗುವುದು’ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
‘ವಕ್ಫ್ ವಿಚಾರದಲ್ಲಿ ಸರ್ಕಾರದ ನಡೆ ಮೇರೆ ಮೀರಿದೆ. ಕಾಂಗ್ರೆಸ್‌ನ ಒಂದು ವರ್ಗದ ತುಷ್ಟೀಕರಣ ನೀತಿಯ ವಿರುದ್ಧ ಹಾಗೂ ರೈತರ ಭೂಮಿ, ಮಠಮಾನ್ಯಗಳು, ದೇವಾಲಯಗಳ ಆಸ್ತಿಯನ್ನು ರಕ್ಷಿಸುವ ಸಲುವಾಗಿ ಈ ಪ್ರತಿಭಟನೆ ನಡೆಸಲಾಗುತ್ತಿದೆ’ ಎಂದು ತಿಳಿಸಿದರು.
‘ಸಿ ಮತ್ತು ಡಿ ಭೂಮಿಯನ್ನು ಕಾಯ್ದಿರಿಸಿದ ಅರಣ್ಯ ಎಂದು ಘೋಷಿಸಲು ಹೊರಟಿರುವ ರಾಜ್ಯ ಸರ್ಕಾರದ ಕ್ರಮದ ವಿರುದ್ಧವೂ ಹೋರಾಟ ನಡೆಸಲಾಗುವುದು’ ಎಂದರು.
ಬಿಜೆಪಿ ಪ್ರಧಾನ ಕಾರ್ಯದರ್ಶಿ ತಳೂರು ಕಿಶೋರ್‌ಕುಮಾರ್ ಮಾತನಾಡಿ, ‘ಜಿಲ್ಲೆಯಲ್ಲಿ ಗುಂಡಿ ಇಲ್ಲದ ರಸ್ತೆಯನ್ನು ಹುಡುಕಿಕೊಟ್ಟವರಿಗೆ ಬಹುಮಾನ ಘೋಷಣೆ ಮಾಡುವಂತಹ ಸ್ಥಿತಿ ಉದ್ಭವಿಸಿದೆ’ ಎಂದು ವ್ಯಂಗ್ಯವಾಡಿದರು.
ವಿಧಾನಪರಿಷತ್ತಿನ ಮಾಜಿ ಸದಸ್ಯ ಸುನಿಲ್ ಸುಬ್ರಮಣಿ ಮಾತನಾಡಿ, ‘ಉಪಚುನಾವಣೆ ಫಲಿತಾಂಶ ಬಂದ ನಂತರ ಸರ್ಕಾರ ಬೀಳುತ್ತದೆ. ಕುಮಾರಸ್ವಾಮಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿರುವ ಜಮೀರ್ ಅಹಮ್ಮದ್ ಖಾನ್ ಅವರನ್ನು ತಕ್ಷಣವೇ ಸಂಪುಟದಿಂದ ಕೈಬಿಡಬೇಕು’ ಎಂದು ಒತ್ತಾಯಿಸಿದರು.
ಪಕ್ಷದ ಜಿಲ್ಲಾ ಘಟಕದ ವಕ್ತಾರ ಬಿ.ಕೆ. ಅರುಣ್‌ಕುಮಾರ್ ಮಾತನಾಡಿ, ‘ರಾಜ್ಯ ಸರ್ಕಾರ ದಿವಾಳಿಯಾಗಿದ್ದು, ಹಗರಣಗಳ ಸುರಿಮಳೆಯೇ ನಡೆದಿದೆ’ ಎಂದು ದೂರಿದರು.
ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ್ ಜೈನಿ, ಕಾಂಗೀರ ಸತೀಶ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.