ADVERTISEMENT

ಮಡಿಕೇರಿ: ಶತಮಾನೋತ್ಸವ ಸಂಭ್ರಮದಲ್ಲಿ ಮಾಯಮುಡಿ ಶಾಲೆ

ಖಾಸಗಿ ಶಾಲೆಗಳನ್ನು ಮೀರಿಸುವಂತಿದೆ ಕಟ್ಟಡ, ವಾಹನ ಸೌಲಭ್ಯ

ಕೆ.ಎಸ್.ಗಿರೀಶ್
Published 15 ಜೂನ್ 2024, 7:22 IST
Last Updated 15 ಜೂನ್ 2024, 7:22 IST
ಶತಮಾನೋತ್ಸವ ಆಚರಿಸಿಕೊಳ್ಳುತ್ತಿರುವ ಮಾಯಮುಡಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
ಶತಮಾನೋತ್ಸವ ಆಚರಿಸಿಕೊಳ್ಳುತ್ತಿರುವ ಮಾಯಮುಡಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ   

ಮಡಿಕೇರಿ: ಕನ್ನಡ ಶಾಲೆಗಳು ಕಣ್ಮುಚ್ಚುತ್ತಿರುವ ಹೊತ್ತಿನಲ್ಲಿ ಇಲ್ಲೊಂದು ಸರ್ಕಾರಿ ಕನ್ನಡ ಶಾಲೆ ನೂರು ವಸಂತಗಳನ್ನು ಕಂಡಿದೆ. ಮಾತ್ರವಲ್ಲ, ವಿದ್ಯಾರ್ಥಿಗಳ ಸಂಖ್ಯೆಯಲ್ಲೂ ಶತಕ ಪೂರೈಸಿ, ಖಾಸಗಿ ಆಂಗ್ಲ ಮಾಧ್ಯಮದ ಶಾಲೆಗಳಿಗೆ ಸೆಡ್ಡು ಹೊಡೆದಿದೆ. ಕಾಡಂಚಿನಲ್ಲಿರುವ ಈ ಶಾಲೆ ಪಟ್ಟಣ ಪ್ರದೇಶಗಳಲ್ಲಿರುವ ಶಾಲೆಗಳನ್ನೂ ನಾಚಿಸುವಂತಿದೆ.

ಪೊನ್ನಂಪೇಟೆ ತಾಲ್ಲೂಕಿನ ಮಾಯಮುಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯೇ ಅಂತಹದ್ದೊಂದು ಅಪರೂಪದ ಶಾಲೆ ಎನಿಸಿದೆ. ಖಾಸಗಿ ಶಾಲೆಗಳಂತೆ ವಿದ್ಯಾರ್ಥಿಗಳನ್ನು ಕರೆದುಕೊಂಡು ಬರಲು, ಮತ್ತು ಮನೆಗೆ ಬಿಡಲು ಸ್ವಂತ ವಾಹನ ಸೌಲಭ್ಯ ಹೊಂದಿದೆ. ಇಂತಹದ್ದೊಂದು ಶಾಲಾ ವಾಹನ ಸೌಲಭ್ಯ ಹೊಂದಿರುವ ಜಿಲ್ಲೆಯ ಏಕೈಕ ಸರ್ಕಾರಿ ಶಾಲೆ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.

ಹುಲ್ಲು ಗುಡಿಸಲಿನಲ್ಲಿ 1924ರಲ್ಲಿ ಆರಂಭವಾದ ಶಾಲೆ ಊರಿನವರ ಪ್ರಯತ್ನದ ಫಲವಾಗಿ 1958ರಲ್ಲಿ ಕಟ್ಟಡದ ಭಾಗ್ಯ ಕಂಡಿತು. ನಂತರ, ಸಂಪೂರ್ಣ ಶಿಥಿಲಾವಸ್ಥೆ ತಲುಪಿ, ವೃದ್ಧಾಪ್ಯದ ದಿನಗಳನ್ನು ಎಣಿಸುತ್ತಿದ್ದು, ಇನ್ನೇನೂ ಕಣ್ಮುಚ್ಚಬಹುದೇನೋ ಎಂದುಕೊಳ್ಳುತ್ತಿರುವಾಗಲೆ ನೆರವಿಗೆ ಬಂದಿದ್ದು, ‘ಓಸಾಟ್’ (ಒನ್ ಸ್ಕೂಲ್ ಅಟ್‌ ಎ ಟೈಮ್ – ಓಎಸ್‌ಎಎಟಿ) ಎಂಬ ಸರ್ಕಾರೇತರ ಸಂಸ್ಥೆ.

ADVERTISEMENT

ಈ ಸಂಸ್ಥೆಯು ₹ 40 ಲಕ್ಷ ವೆಚ್ಚದಲ್ಲಿ 2019ರಲ್ಲಿ ಸುಸಜ್ಜಿತವಾದ ಕಟ್ಟಡವನ್ನು ಕಟ್ಟಿಸಿಕೊಂಡಿತು. ಶಾಲೆಯ ಹಳೆಯ ಕಟ್ಟಡವು ಖಾಸಗಿ ಶಾಲಾ ಕಟ್ಟಡವನ್ನೂ ಮೀರಿಸುವಂತಹ ರೀತಿಯಲ್ಲಿ ಬದಲಾಗಿದ್ದು, ವಿದ್ಯಾರ್ಥಿಗಳನ್ನು ಸೂಜಿಗಲ್ಲಿನಂತೆ ಸೆಳೆಯಿತು. ಶಾಲೆಯ ಹಳೆಯ ವಿದ್ಯಾರ್ಥಿಗಳೂ ಒಂದೆಡೆ ಸೇರಿ ₹ 1.17 ಲಕ್ಷ ಮೊತ್ತದಲ್ಲಿ ಪೀಠೋಪಕರಣಗಳ ದುರಸ್ತಿ ಮಾಡಿರುವುದು ಶಾಲೆ ಮತ್ತೆ ಕಂಗೊಳಿಸಲು ಕಾರಣವಾಯಿತು.

ಇದೆಲ್ಲಕ್ಕೂ ಕಿರೀಟವಿಟ್ಟಂತೆ ಶಾಲೆ ಹೊಂದಿರುವ ಬಸ್‌ ವ್ಯವಸ್ಥೆ ಎಲ್ಲರ ಗಮನ ಸೆಳೆದಿದೆ. ಈ ಬಸ್‌ ಅನ್ನು ದೈಹಿಕ ಶಿಕ್ಷಕ ಎಂ.ಟಿ.ಸತ್ಯ ಅವರು ಉಚಿತವಾಗಿ ಚಾಲನೆ ಮಾಡುತ್ತಿದ್ದಾರೆ. ನಿತ್ಯವೂ ಅವರು 34 ಕಿ.ಮೀ ಚಾಲನೆ ಮಾಡಿ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಮನೆಯಿಂದ ಕರೆದುಕೊಂಡು ಶಾಲೆಗೆ ಬಂದು, ವಾಪಸ್ ಮನೆಗೆ ಬಿಡುವ ಕೆಲಸ ಮಾಡುತ್ತಿದ್ದಾರೆ.

ಈ ಎಲ್ಲ ಕಾರಣದಿಂದ ಸದ್ಯ ಶಾಲೆಯಲ್ಲಿ 175 ವಿದ್ಯಾರ್ಥಿಗಳಿದ್ದು, ದ್ವಿಶತಕದತ್ತ ಹೆಜ್ಜೆ ಇಟ್ಟಿದೆ. 1ರಿಂದ 7ನೇ ತರಗತಿಯವರೆಗಿನ ಈ ಶಾಲೆಯಲ್ಲಿ ಸೋಫಿಯಾ, ಎಂ.ಟಿ.ಸತ್ಯ, ಬಿ.ಯು.ರಾಗಿಣಿ, ಎಂ.ಕೆ.ಲೀಲಾ, ಎಂ.ಟಿ.ಸುಮಾ, ಎಂ.ಬಿ.ಸಹನಾ, ‍ಪಿ.ವಿ.ಲಾಯ್ಡ್, ಲಾವಣ್ಯ ಎಂಬ 8 ಮಂದಿ ಶಿಕ್ಷಕರಿದ್ದಾರೆ.

ಶಾಲೆಯು 6 ಎಕರೆಯಷ್ಟು ವಿಸ್ತಾರವಾದ ಪ್ರದೇಶದಲ್ಲಿರುವುದರಿಂದ ವಿಶಾಲವಾದ ಆಟದ ಮೈದಾನವು ವಿದ್ಯಾರ್ಥಿಗಳಿಗೆ ಲಭ್ಯವಾಗಿದೆ. ಇದರಿಂದ ವಿದ್ಯಾರ್ಥಿಗಳು ಕಳೆದ ವರ್ಷ ನಡೆದ ಕ್ರೀಡಾಕೂಟದಲ್ಲಿ ತಾಲ್ಲೂಕುಮಟ್ಟದಲ್ಲಿ ಸಮಗ್ರ ಪ್ರಶಸ್ತಿಯನ್ನು ಪಡೆದು, ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದರು.

ಈ ಶಾಲೆಗೆ ರುದ್ರಬೀಡು, ಧನುಗಾಲ, ಮಾಯಾಮುಡಿ, ಬಾಳಾಜಿ, ನೊಕ್ಯ ಗ್ರಾಮದಿಂದ ವಿದ್ಯಾರ್ಥಿಗಳು ಬರುತ್ತಿದ್ದಾರೆ. ಶಾಲೆಯ ಮಾದರಿಯನ್ನೇ ಗೋಣಿಕೊಪ್ಪಲು ದಸರೆಯಲ್ಲಿ ಸ್ತಬ್ಧಚಿತ್ರ ಮಾಡಿದ್ದು, ಸರ್ಕಾರಿ ಶಾಲೆಯ ಅಭಿವೃದ್ಧಿಗೆ ಹಿಡಿದ ಕೈಗನ್ನಡಿಯಂತಿದೆ.

ಸದ್ಯ, ಶಾಲೆಯ ಬಸ್‌ ನಿರ್ವಹಣೆಗೆ ಇನ್ನಷ್ಟು ನೆರವಿನ ಅಗತ್ಯ ಇದೆ. ಅರಣ್ಯ ಇಲಾಖೆ, ಪೋಷಕರು ಹಾಗೂ ಶಾಲಾಭಿವೃದ್ಧಿ ಮತ್ತು ಸಲಹಾ ಸಮಿತಿ ಸದಸ್ಯರು ನೆರವು ನೀಡುತ್ತಿದ್ದರೂ, ವಾಹನದ ವಿಮಾ ಹಣ, ವಾಹನದ ನಿರ್ವಹಣೆ ಮಾಡಿಸುವಷ್ಟರಲ್ಲಿ ಶಿಕ್ಷಕರಿಗೆ ಸಾಕು ಬೇಕಾಗುತ್ತಿದೆ. ಇನ್ನೂ 4ರಿಂದ 5 ಕೊಠಡಿಗಳು ಹಾಗೂ ಉದ್ಯಾನದ ಅಗತ್ಯ ಶಾಲೆಗೆ ಇದೆ ಎಂದು ಶಿಕ್ಷಕರು ಹೇಳುತ್ತಾರೆ.

ಶಾಲೆಯು ವಿಶಾಲ ಜಾಗದಲ್ಲಿ ಉತ್ತಮ ಪರಿಸರದಲ್ಲಿ ಸುಸಜ್ಜಿತ ಕಟ್ಟಡ ಹೊಂದಿದೆ. ವಾಹನ ಸೌಲಭ್ಯವೂ ವಿದ್ಯಾರ್ಥಿಗಳಿಗಿದ್ದು ಸುತ್ತಮುತ್ತಲ ಪ್ರದೇಶದ ಪೋಷಕರು ಮಕ್ಕಳನ್ನು ಶಾಲೆಗೆ ಸೇರಿಸಬಹುದು. -ಎಂ.ಎ.ಸೋಫಿಯಾ ಮುಖ್ಯ ಶಿಕ್ಷಕಿ.

ಶಾಲೆ ಭೌತಿಕ ಸ್ವರೂಪದಲ್ಲಿ ಮಾತ್ರವಲ್ಲದೇ ಬೌದ್ಧಿಕವಾಗಿ ಉತ್ತಮವಾಗಿದೆ. ಉತ್ತಮ ಶಿಕ್ಷಣ ನೀಡಲಾಗುತ್ತಿದೆ

-ರಾಗಿಣಿ ಸಹ ಶಿಕ್ಷಕಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.