ಮಡಿಕೇರಿ: ‘ರಾಜ್ಯದಲ್ಲಿ ಪಕ್ಷವನ್ನು ಕಟ್ಟಿ ಬೆಳೆಸಿದ ಬಿಜೆಪಿಯ ನಿಷ್ಠಾವಂತ ಶಾಸಕರಿಗೆ ಮಂತ್ರಿ ಸ್ಥಾನ ನೀಡದೇ, ಬಕೆಟ್ ಹಿಡಿಯುವವರಿಗೆ ನೀಡಲಾಗಿದೆ’ ಎಂದು ಮಡಿಕೇರಿ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್, ಶನಿವಾರ ಇಲ್ಲಿ ಆಕ್ರೋಶ ಹೊರಹಾಕಿದರು.
‘ವಿಧಾನ ಪರಿಷತ್ ಸದಸ್ಯ ಅಡಗೂರು ಎಚ್. ವಿಶ್ವನಾಥ್ ಹೇಳುವುದರಲ್ಲಿ ಸತ್ಯವಿದೆ. ವಿಶ್ವನಾಥ್ ಸೋಲಿಗೆ ಸಿ.ಪಿ.ಯೋಗೇಶ್ವರ್ ಅವರೇ ಪ್ರಮುಖ ಕಾರಣ. ನಾನೂ ಹುಣಸೂರು ಕ್ಷೇತ್ರದ ಉಪ ಚುನಾವಣೆಯ ಉಸ್ತುವಾರಿಯಾಗಿದ್ದೆ. ಕೊನೆಯ ಎರಡು ದಿನ ಯೋಗೇಶ್ವರ್ ಏನು ಮಾಡಿದ್ದರು ಎಂಬುದು ತಿಳಿದಿದೆ. ಅಂಥ ವ್ಯಕ್ತಿಗೆ ಮಂತ್ರಿ ಸ್ಥಾನ ಕೊಡಲಾಗಿದೆ’ ಎಂದು ಕಿಡಿಕಾರಿದರು.
‘ಶೀಘ್ರವೇ ಹೈಕಮಾಂಡ್ ಭೇಟಿ ಮಾಡಿ, ಪಕ್ಷ ನಿಷ್ಠೆಯುಳ್ಳ ಶಾಸಕರಿಗೆ ಆಗಿರುವ ಅನ್ಯಾಯ ತಿಳಿಸಲಾಗುವುದು’ ಎಂದು ಮಾಹಿತಿ ನೀಡಿದರು.
‘ಕೊಡಗಿಗೆ ಹೆಚ್ಚಿನ ಅನುದಾನದ ಅಗತ್ಯವಿದೆ. ಜಿಲ್ಲೆಯಲ್ಲಿ ಮಳೆಯಿಂದ ಸಾಕಷ್ಟು ಅನಾಹುತವಾಗಿದೆ. ಅದನ್ನು ಬಿಟ್ಟು ಅಭಿವೃದ್ಧಿಯಾಗಿರುವ, ಕಾಂಗ್ರೆಸ್ ಶಾಸಕ ಜಮೀರ್ ಅಹಮ್ಮದ್ ಅವರ ಕ್ಷೇತ್ರಕ್ಕೆ ₹ 200 ಕೋಟಿ ಅನುದಾನ ನೀಡುವ ಅಗತ್ಯವಾದರೂ ಏನಿತ್ತು’ ಎಂದು ರಂಜನ್ ಪ್ರಶ್ನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.