ADVERTISEMENT

ಕೊಡಗು: ಬಜೆಟ್‌ನಲ್ಲಿ ಜಿಲ್ಲೆಗೆ ಒಂದಿಷ್ಟು ಸಿಹಿ, ಮತ್ತಷ್ಟು ಕಹಿ

ಕೆ.ಎಸ್.ಗಿರೀಶ್
Published 17 ಫೆಬ್ರುವರಿ 2024, 7:41 IST
Last Updated 17 ಫೆಬ್ರುವರಿ 2024, 7:41 IST
ವಿರಾಜಪೇಟೆಯಲ್ಲಿ ನ್ಯಾಯಾಲಯ ಸಂಕೀರ್ಣ ನಿರ್ಮಿಸಲು ಮೀಸಲಿರಿಸಿದ ಸ್ಥಳ
ವಿರಾಜಪೇಟೆಯಲ್ಲಿ ನ್ಯಾಯಾಲಯ ಸಂಕೀರ್ಣ ನಿರ್ಮಿಸಲು ಮೀಸಲಿರಿಸಿದ ಸ್ಥಳ   

ಮಡಿಕೇರಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಮಂಡಿಸಿದ ಬಜೆಟ್‌ನಲ್ಲಿ ಕೊಡಗಿಗೆ ಭರಪೂರ ಕೊಡುಗೆಗಳು ಘೋಷಣೆಯಾಗದಿದ್ದರೂ, ತೀರಾ ಅಗತ್ಯವಾಗಿ ಬೇಕಿದ್ದ ಕೆಲವೊಂದಿಷ್ಟು ಲಭಿಸಿವೆ.

ಆರೋಗ್ಯ, ಕ್ರೀಡೆ, ಕಾಫಿ, ಬುಡಕಟ್ಟು ಜನರ ಕಲ್ಯಾಣ, ಗಡಿಭಾಗದಲ್ಲಿ ಕನ್ನಡದ ಉಳಿವು, ಕೊಡವ ಭಾಷೆ, ಸಂಸ್ಕೃತಿ, ಸಾಹಿತ್ಯದ ಉಳಿವು ಸೇರಿದಂತೆ ಕೆಲವಾರು ಕ್ಷೇತ್ರಗಳಲ್ಲಿ ಯೋಜನೆಗಳನ್ನು ಘೋಷಿಸಲಾಗಿದೆ. ಆದರೂ, ಪ್ರವಾಸೋದ್ಯಮ, ರಸ್ತೆಗಳ ಅಭಿವೃದ್ಧಿ, ಕಾಫಿ ಬೆಳೆಗಾರರಿಗೆ ನೆರವಿನಂತಹ ಪ್ರಮುಖ ವಲಯಗಳ ಬೇಡಿಕೆಗಳ ಕಡೆಗೆ ಗಮನ ನೀಡಿಲ್ಲ. ಹೀಗಾಗಿ, ಬಜೆಟ್‌ನಲ್ಲಿ ಕೆಲವಾರು ಕೊಡುಗೆಗಳು ಸಿಕ್ಕಿದ್ದರೂ, ಇನ್ನಷ್ಟು ಬೇಕಿತ್ತು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಆರೋಗ್ಯ ಕ್ಷೇತ್ರದಲ್ಲಿ ಕೊಡಗು ಜಿಲ್ಲೆ ಅಪಾರ ನಿರೀಕ್ಷೆಯನ್ನು ಹೊಂದಿತ್ತು. ಅದರಲ್ಲೂ ಸೂಪರ್‌ಸ್ಪೆಷಾಲಿಟಿ ಆಸ್ಪತ್ರೆ ಬೇಕೆಂಬ ಕೂಗು ಬಲವಾಗಿಯೇ ಕೇಳಿಬಂದಿತ್ತು. ಇದು ಘೋಷಣೆಯಾಗದಿದ್ದರೂ, ಹೃದ್ರೋಗ ಘಟಕವನ್ನು ಸಾರ್ವಜನಿಕ– ಖಾಸಗಿ ಸಹಭಾಗಿತ್ವದಲ್ಲಿ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ತೆರೆಯುವ ಯೋಜನೆ ಪ್ರಕಟಿಸಿರುವುದು ತುಸು ಸಮಾಧಾನ ತರಿಸಿದೆ.

ADVERTISEMENT

ಪ್ರಯೋಗಾಲಯ ಸೇವೆಗಳ ಕೊರತೆಯನ್ನು ಎದುರಿಸುತ್ತಿದ್ದ ಜಿಲ್ಲೆಯ ಜನರು ಹೆಚ್ಚಿನ ಪ್ರಯೋಗಾಲಯ ಸೇವೆ ಪಡೆಯಲು ಹೊರ ಜಿಲ್ಲೆಗೆ ಹೋಗಬೇಕಿತ್ತು. ಅದನ್ನು ತಪ್ಪಿಸಲು ಕೈಗೆಟುಕುವ ದರದಲ್ಲಿ ಪ್ರಯೋಗಾಲಯ ಸೇವೆ ಒದಗಿಸಲು ಜಿಲ್ಲೆಯಲ್ಲಿ ಸಂಯೋಜಿತ ಮತ್ತು ಸಾರ್ವಜನಿಕ ಆರೋಗ್ಯ ಪ್ರಯೋಗಾಲಯಗಳ ಸ್ಥಾಪನೆಗೆ ಮುಂದಾಗಿರುವುದು ಹಾಗೂ ‘ವಿಆರ್‌ಡಿಎಲ್‌’ ಪ್ರಯೋಗಾಲಯ ಸ್ಥಾಪನೆ ಘೋಷಣೆಗಳು ಒಳ್ಳೆಯ ಬೆಳವಣಿಗೆ ಎನಿಸಿದೆ.

ಕೊಡಗಿನಲ್ಲಿ ಹೆಚ್ಚಿನ ಕ್ರೀಡಾಪಟುಗಳು ಇರುವುದರಿಂದ ಬಜೆಟ್‌ನಲ್ಲಿ ಘೋಷಿಸಿದ ಯೋಜನೆಗಳ ಪೈಕಿ ಕ್ರೀಡಾಪಟುಗಳಿಗೆ ನೇಮಕಾತಿಯಲ್ಲಿ ಶೇ 2ರಷ್ಟು ಮೀಸಲು, ರಾಷ್ಟ್ರೀಯ, ಅಂತರರಾಷ್ಟ್ರೀಯ ಮಟ್ಟದಲ್ಲಿ ಗಾಯಗೊಂಡ ಕ್ರೀಡಾಪಟುಗಳಿಗೆ ಆರೋಗ್ಯವಿಮೆ ಹಾಗೂ ಪೊನ್ನಂಪೇಟೆಯಲ್ಲಿ ₹ 5 ಕೋಟಿ ವೆಚ್ಚದಲ್ಲಿ ಕ್ರೀಡಾ ವಸತಿ ನಿಲಯ ಕಟ್ಟಡ ಸ್ಥಾಪ‍ನೆಯಂತಹ ಕ್ರಮಗಳು ಸಮಾಧಾನ ತರಿಸಿವೆ.

ಬುಡಕಟ್ಟು ಜನರ ನೆರವಿಗಾಗಿ ಬಜೆಟ್‌ನಲ್ಲಿ ಘೋಷಿಸಿದ ಕೆಲವು ಯೋಜನೆಗಳು ಇಲ್ಲಿನ ಕೆಲವು ಸಮುದಾಯಗಳಿಗೆ ನೆರವಾಗುವ ನಿರೀಕ್ಷೆ ಇದೆ. ಅದರಲ್ಲೂ ಕೊರಗ, ಜೇನುಕುರುಬ, ಯರವ, ಕಾಡುಕುರುಬ, ಸೋಲಿಗ, ಗೊಂಡ, ಸಿದ್ಧಿ, ಮಲೈಕುಡಿ, ಕುಡಿಯ, ಹಸಲರು, ಗೌಡಲು, ಬೆಟ್ಟಕುರುಬ, ಹಕ್ಕಿಪಿಕ್ಕಿ, ಇರುಳಿಗ, ರಾಜಗೊಂಡ, ಹರಿಣಿಶಿಕಾರಿ ಮೊದಲಾದ 23 ಅಲೆಮಾರಿ, ಅರೆಅಲೆಮಾರಿ ಸಮುದಾಯದವರಿಗೆ ಏಕಲವ್ಯ ಮಾದರಿಯ ಪ್ರತಿ ವಸತಿ ಶಾಲೆಯಲ್ಲಿ 20 ಸೀಟುಗಳನ್ನು ಮೀಸಲಿರಿಸಿ, ಪ್ರವೇಶ ಪರೀಕ್ಷೆಯಿಂದ ವಿನಾಯಿತಿ ನೀಡಿರುವುದು, ಪಡಿತರ ಚೀಟಿ ಮೊದಲಾದ ಸರ್ಕಾರಿ ದಾಖಲೆಗಳನ್ನು ಒದಗಿಸಲು ವಿಶೇಷ ಕೋಶ ರಚನೆ ಮಾಡುವ ಯೋಜನೆಗಳು ಇವುಗಳ ಸಾಲಿನಲ್ಲಿ ಸೇರಿವೆ.

ಗಡಿಭಾಗದಲ್ಲಿ ಕನ್ನಡ ಉಳಿವಿಗಾಗಿ ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಗಡಿಭಾಗದಲ್ಲಿ ಕನ್ನಡ ಶಾಲೆಗಳ ಅಭಿವೃದ್ಧಿ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸುವ ಯೋಜನೆ ಹೆಚ್ಚಿನ ಗಡಿಪ್ರದೇಶ ಹೊಂದಿರುವ ಕೊಡಗಿಗೆ ತೀರಾ ಅಗತ್ಯವಾಗಿ ಬೇಕಿತ್ತು. ಇದರಿಂದ ಏದುಸಿರು ಬಿಡುತ್ತಿರುವ ಗಡಿಭಾಗದ ಕನ್ನಡ ಶಾಲೆಗಳಿಗೆ ಉಸಿರು ತುಂಬಿದಂತಾಗುತ್ತದೆ.

ಇನ್ನು ಇಲ್ಲಿನ ಕೊಡವ ಭಾಷೆಯ ಅಭಿವೃದ್ಧಿಗಾಗಿ ಅಕಾಡೆಮಿಗಳ ಮೂಲಕ ಭಾಷೆ, ಸಂಸ್ಕೃತಿ, ಸಾಹಿತ್ಯವನ್ನು ಪ್ರೋತ್ಸಾಹಿಸುವ ಯೋಜನೆಯೂ ಕೊಡಗಿಗೆ ಪೂರಕವಾಗಿದೆ.

ಇನ್ನುಳಿದಂತೆ, ಮಡಿಕೇರಿಯಲ್ಲಿ ತಾರಾಲಯ ಸ್ಥಾಪನೆ, ಸ್ವಯಂ ಚಾಲಿತ ಚಾಲನಾ ಪರೀಕ್ಷಾ ಪಥ ಹಾಗೂ ವಿರಾಜಪೇಟೆಯಲ್ಲಿ ಹೊಸ ನ್ಯಾಯಾಲಯ ಸಂಕೀರ್ಣವನ್ನು ₹ 12 ಕೋಟಿ ವೆಚ್ಚದಲ್ಲಿ ನಿರ್ಮಿಸುವ ಯೋಜನೆಗಳು ಇಲ್ಲಿನ ಬಹುಕಾಲದ ಬೇಡಿಕೆಗಳೇ ಆಗಿದ್ದವು. ಅವು ಬಜೆಟ್‌ನಲ್ಲಿ ಕೊನೆಗೂ ಈಡೇರುವ ಹಂತಕ್ಕೆ ಬಂದಿರುವುದು ವಿಶೇಷ.

ಮಡಿಕೇರಿಯಲ್ಲಿ ಬಹುತೇಕ ಅಂತಿಮ ಹಂತ ತಲುಪಿದ 700 ಹಾಸಿಗೆ ಸಾಮರ್ಥ್ಯದ ನೂತನ ಆಸ್ಪತ್ರೆ ಕಟ್ಟಡ ಕಾಮಗಾರಿ
ನಾಪೋಕ್ಲು ಸಮೀಪದ ನೆಲಜಿ ಗ್ರಾಮದ ಕಾಫಿ ತೋಟವೊಂದರಲ್ಲಿ ರೊಬಸ್ಟಾ ಕಾಫಿ ಹಣ್ಣಾಗಿರುವುದು.
ಕಾಫಿ ಜಗ್ಗ್ ಹಾಗೂ ಕಾಫಿ ಲೋಟದ ಮಾದರಿ
ಅಪಾಯದಿಂದ ಪಾರು... ಕೊಡಗು ಜಿಲ್ಲೆ ಸಿದ್ದಾಪುರ ಸಮೀಪ ಕೂದಲೆಳೆಯ ಅಂತರದಲ್ಲಿ ಕಾರ್ಮಿಕರೊಬ್ಬರು ಕಾಡಾನೆ ದಾಳಿಯಿಂದ ಪಾರಾದ ದೃಶ್ಯ.  (ಸಂಗ್ರಹ ಚಿತ್ರ)
ಜಿಲ್ಲೆಯ ಆರೋಗ್ಯ ವಲಯಕ್ಕೆ ಆದ್ಯತೆ ನೀಡಿದ ಬಜೆಟ್‌ ಆಯವ್ಯಯದಲ್ಲಿ ಭಾಷೆ, ಸಂಸ್ಕೃತಿಗೂ ಪ್ರಾಧ್ಯಾನ್ಯತೆ ಕಾಫಿ, ವನ್ಯಜೀವಿ ಹಾವಳಿ, ಪ್ರವಾಸೋದ್ಯಮಕ್ಕೆ ಬೇಕಿತ್ತು ಇನ್ನಷ್ಟು ಕಸುವು

ಕೊಡಗಿಗೆ ದಕ್ಕಿದ್ದೇನು?

* ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಅಪಾಯಕಾರಿ ಸಾಂಕ್ರಮಿಕ ರೋಗಗಳು ಮತ್ತು ವೈರಲ್ ಸೋಂಕುಗಳನ್ನು ಪತ್ತೆ ಹಚ್ಚಲು ‘ವಿಆರ್‌ಡಿಎಲ್‌’ ಪ್ರಯೋಗಾಲಯಗಳ ಸ್ಥಾಪನೆ

* ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಪಿಪಿಪಿ ಮಾದರಿಯಲ್ಲಿ ಹೃದ್ರೋಗ ಘಟಕಗಳ ಸ್ಥಾಪ‍ನೆ

* ಸಂಯೋಜಿತ ಮತ್ತು ಸಾರ್ವಜನಿಕ ಆರೋಗ್ಯ ಪ್ರಯೋಗಾಲಯಗಳ ಸ್ಥಾಪನೆಯ ಮೂಲಕ ಸಾರ್ವಜನಿಕರಿಗೆ ಕೈಗೆಟುಕುವ ದರದಲ್ಲಿ ಪ್ರಯೋಗಾಲಯಗಳ ಸೇವೆ

* ಕಾಫಿ ಮಂಡಳಿಯ ಸಹಭಾಗಿತ್ವದಲ್ಲಿ ಸ್ವಸಹಾಯ ಗುಂಪುಗಳ ಸದಸ್ಯರಾಗಿರುವ ಒಂದು ಲಕ್ಷ ಮಹಿಳೆಯರಿಗೆ ಕಾಫಿ ಉದ್ಯಮಿಗಳಾಗಲು ತರಬೇತಿ ನೀಡಲಾಗುವುದು. ಇದರ ಜೊತೆಯಲ್ಲಿ 2500 ಕಾಫಿ ಕಿಯೊಸ್ಕ್‌ಗಳನ್ನು ₹ 25 ಕೋಟಿ ವೆಚ್ಚದಲ್ಲಿ ಸ್ಥಾಪಿಸಲಾಗುವುದು. ಇದರ ಸಂಪೂರ್ಣ ನಿರ್ವಹಣೆಯನ್ನು ಎಸ್‌ಎಚ್‌ಜಿ ಮಹಿಳೆಯರ ಮೂಲಕ ಮಾಡುವುದು.

* ಮಡಿಕೇರಿಯಲ್ಲಿ ತಾರಾಲಯ ಸ್ಥಾ‍ಪನೆ * ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಗಡಿಭಾಗದಲ್ಲಿ ಕನ್ನಡ ಶಾಲೆಗಳ ಅಭಿವೃದ್ಧಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸುವ ಮೂಲಕ ಕನ್ನಡ ಭಾಷೆಯ ಅಭಿವೃದ್ಧಿ ಮಾಡುವುದು

* ಕೊಡವ ಭಾಷೆಯ ಅಭಿವೃದ್ಧಿಗಾಗಿ ಅಕಾಡೆಮಿಗಳ ಮೂಲಕ ಭಾಷೆ ಸಂಸ್ಕೃತಿ ಸಾಹಿತ್ಯವನ್ನು ಪ್ರೋತ್ಸಾಹಿಸುವುದು

* ಕ್ರೀಡಾಪಟುಗಳಿಗೆ ನೇಮಕಾತಿಯಲ್ಲಿ ಶೇ 2ರಷ್ಟು ಮೀಸಲು

* ರಾಷ್ಟ್ರೀಯ ಅಂತರರಾಷ್ಟ್ರೀಯ ಮಟ್ಟದಲ್ಲಿ ಗಾಯಗೊಂಡ ಕ್ರೀಡಾಪಟುಗಳಿಗೆ ಆರೋಗ್ಯವಿಮೆ

* ಕೊಡಗು ಜಿಲ್ಲೆಯ ಪೊನ್ನಂಪೇಟೆಯಲ್ಲಿ ₹ 5 ಕೋಟಿ ವೆಚ್ಚದಲ್ಲಿ ಕ್ರೀಡಾ ವಸತಿ ನಿಲಯ ಕಟ್ಟಡ ನಿರ್ಮಾಣ

* ಪರಿಷ್ಕೃತ ಪ್ರವಾಸೋದ್ಯಮ ನೀತಿ 2024–29ನ್ನು ಜಾರಿಗೆ ತರುವುದು

* ರಾಜ್ಯದ ಪ್ರಮುಖ ಜಲಾಶಯಗಳ ಹಿನ್ನೀರಿನಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಜಲಕ್ರೀಡೆಗಳು ಮತ್ತು ಜಲಸಾಹಸ ಪ್ರವಾಸೋದ್ಯಮ

* ಸಾಹಸ ಪ್ರವಾಸೋದ್ಯಮದ ಪ್ರೋತ್ಸಾಹಕ್ಕೆ ರಾಜ್ಯದ 10 ಕಡೆ ಕೇಬಲ್ ಕಾರ್ ಅಥವಾ ರೋಪ್‌ವೇ ಸೌಲಭ್ಯ

* ರೈಲ್ವೆ ಬ್ಯಾರಿಕೇಡ್ ನಿರ್ಮಿಸಲು ಪ್ರಾಮುಖ್ಯತೆ ನೀಡುವುದು

* ಮಡಿಕೇರಿಯಲ್ಲಿ ಸ್ವಯಂ ಚಾಲಿತ ಚಾಲನಾ ಪರೀಕ್ಷಾ ಪಥ

* ವಿರಾಜಪೇಟೆಯಲ್ಲಿ ಹೊಸ ನ್ಯಾಯಾಲಯ ಸಂಕೀರ್ಣವನ್ನು ₹ 12 ಕೋಟಿ ವೆಚ್ಚದಲ್ಲಿ ನಿರ್ಮಾಣ

* ಏಕಲವ್ಯ ಮಾದರಿಯ ಪ್ರತಿ ವಸತಿ ಶಾಲೆಯಲ್ಲಿ 20 ಸೀಟುಗಳನ್ನು ಮೀಸಲಿರಿಸಿ ಪ್ರವೇಶ ಪರೀಕ್ಷೆಯಿಂದ ವಿನಾಯಿತಿ ನೀಡಿ ಕೊರಗ ಜೇನುಕುರುಬ ಯರವ ಕಾಡುಕುರುಬ ಸೋಲಿಗ ಗೊಂಡ ಸಿದ್ಧಿ ಮಲೈಕುಡಿ ಕುಡಿಯ ಹಸಲರು ಗೌಡಲು ಬೆಟ್ಟಕುರುಬ ಹಕ್ಕಿಪಿಕ್ಕಿ ಇರುಳಿಗ ರಾಜಗೊಂಡ ಹರಿಣಿಶಿಕಾರಿ ಮೊದಲಾದ 23 ಅಲೆಮಾರಿ ಅರೆಅಲೆಮಾರಿ ಸಮುದಾಯದವರಿಗೆ ಮೀಸಲಿರಿಸುವುದು

* ಪಡಿತರ ಚೀಟಿ ಮೊದಲಾದ ಸರ್ಕಾರಿ ದಾಖಲೆಗಳನ್ನು ಒದಗಿಸಲು ವಿಶೇಷ ಕೋಶವನ್ನು ರಚಿಸಲು ₹ 3 ಕೋಟಿ ಅನುದಾನದಲ್ಲಿ ಒಂದು ವರ್ಷದ ಅವಧಿಗೆ ಸ್ಥಾಪಿಸುವುದು

ಇನ್ನಷ್ಟು ಬೇಕಿತ್ತು

ಜಿಲ್ಲೆಯ ಪ್ರಮುಖ ವಲಯವಾದ ಕಾಫಿಗೆ ಹೆಚ್ಚಿನ ಪ್ರೋತ್ಸಾಹ ಬೇಕಿತ್ತು ಎಂಬ ಅಭಿಪ್ರಾಯ ಕೇಳಿ ಬಂದಿದೆ. ಬಜೆಟ್‌ನಲ್ಲಿ ಕೇವಲ ಕಾಫಿ ಮಂಡಳಿಯ ಸಹಭಾಗಿತ್ವದಲ್ಲಿ ಸ್ವಸಹಾಯ ಗುಂಪುಗಳ ಸದಸ್ಯರಾಗಿರುವ ಒಂದು ಲಕ್ಷ ಮಹಿಳೆಯರಿಗೆ ಕಾಫಿ ಉದ್ಯಮಿಗಳಾಗಲು ತರಬೇತಿ ನೀಡುವುದು 2500 ಕಾಫಿ ಕಿಯೊಸ್ಕ್‌ಗಳನ್ನು ₹ 25 ಕೋಟಿ ವೆಚ್ಚದಲ್ಲಿ ಸ್ಥಾಪಿಸುವ ಯೋಜನೆಗಳಷ್ಟೇ ಇದೆ. ಕಾಫಿ ಬೆಳೆಗಾರರಿಗೆ ನೆರವಾಗುವ ಘೋಷಣೆಗಳು ಇನ್ನಷ್ಟು ಹೊರಬೀಳಬೇಕಿತ್ತು ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಮತ್ತೊಂದು ಪ್ರಮುಖ ವಲಯ ಪ್ರವಾಸೋದ್ಯಮ ಕ್ಷೇತ್ರ. ಜಿಲ್ಲೆಯಲ್ಲಿ ಈ ಕ್ಷೇತ್ರದ ಬೆಳವಣಿಗೆಗೆ ಗುರುತರವಾದ ಯೋಜನೆಗಳನ್ನು ಬಜೆಟ್‌ನಲ್ಲಿ ಪ್ರಕಟಿಸಿಲ್ಲ. ಮಾನವ ವನ್ಯಜೀವಿ ಸಂಘರ್ಷ ತಪ್ಪಿಸಲು ಬಜೆಟ್‌ ಹೆಚ್ಚಿನ ಆಸಕ್ತಿ ವಹಿಸಿಲ್ಲ. ರೈಲ್ವೆ ಬ್ಯಾರಿಕೇಡ್ ನಿರ್ಮಿಸಲು ಪ್ರಾಮುಖ್ಯತೆ ನೀಡಲಾಗುವುದು ಎಂಬ ಒಂದು ಸಾಲಿನ ಘೋಷಣೆ ಬಿಟ್ಟರೆ ಈ ಕುರಿತು ಹೆಚ್ಚಿನ ಸ್ಪಷ್ಟತೆ ದೊರಕಿಲ್ಲ. ಸಂಪೂರ್ಣ ನಿರ್ಲಕ್ಷ್ಯ ಕೊಡಗನ್ನು ಬಾಧಿಸುತ್ತಿರುವ ಪ್ರಮುಖ ಸಮಸ್ಯೆ ಎನಿಸಿದ ರಸ್ತೆಗಳ ಅಭಿವೃದ್ಧಿಗೆ ಇಲ್ಲಿನ ಪ್ರವಾಸಿ ಸ್ಥಳಗಳ ಅಭಿವೃದ್ಧಿಗೆ ಮಾನವ– ವನ್ಯಜೀವಿ ಸಂಘರ್ಷ ತಡೆಗೆ ನಿರ್ದಿಷ್ಟವಾದ ಯೋಜನೆ ಪ್ರಕಟಿಸದೇ ಇರುವುದು ಜಿಲ್ಲೆಯ ಜನರ ಅಸಮಾಧಾನಕ್ಕೆ ಕಾರಣವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.