ADVERTISEMENT

ಕಡಿಮೆ ದರದಲ್ಲಿ ಕೆಂಪು ಕಲ್ಲು: ಶಾಸಕ ಎ.ಎಸ್.ಪೊನ್ನಣ್ಣ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2023, 7:10 IST
Last Updated 30 ಆಗಸ್ಟ್ 2023, 7:10 IST
ವಿರಾಜಪೇಟೆಯ ಪುರಭವನದಲ್ಲಿ ಮಂಗಳವಾರ ನಡೆದ ಸುದ್ಧಿಗೋಷ್ಠಿಯಲ್ಲಿ ಶಾಸಕ ಎ.ಎಸ್.ಪೊನ್ನಣ್ಣ ಮಾತನಾಡಿದರು.
ವಿರಾಜಪೇಟೆಯ ಪುರಭವನದಲ್ಲಿ ಮಂಗಳವಾರ ನಡೆದ ಸುದ್ಧಿಗೋಷ್ಠಿಯಲ್ಲಿ ಶಾಸಕ ಎ.ಎಸ್.ಪೊನ್ನಣ್ಣ ಮಾತನಾಡಿದರು.   

ವಿರಾಜಪೇಟೆ: ‘ಜಿ.ಎಸ್.ಟಿ, ಅಳತೆ ಮತ್ತು ತೂಕದ ಪ್ರಮಾಣಪತ್ರ ಹೊಂದಿರುವ ವಾಹನಗಳು ನಾಳೆಯಿಂದಲೇ ಜಿಲ್ಲೆಗೆ ಕೆಂಪುಕಲ್ಲು ಸಾಗಾಟ ಮಾಡಬಹುದು’ ಎಂದು ಶಾಸಕ ಎ.ಎಸ್.ಪೊನ್ನಣ್ಣ ತಿಳಿಸಿದರು.

ಪಟ್ಟಣದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಮೇಲಿನ ಎರಡು ಷರತ್ತುಗಳನ್ನು ಪಾಲನೆ ಮಾಡುವ ವಾಹನಗಳು ಕಟ್ಟಡ ನಿರ್ಮಾಣಕ್ಕೆ ಬಳಸುವ ಕೆಂಪುಕಲ್ಲನ್ನು ಕೇರಳದಿಂದ ಜಿಲ್ಲೆ ಸೇರಿದಂತೆ ಇತರೆಡೆಗಳಿಗೆ ಸಾಗಿಸಬಹುದು. ಇದರಿಂದ ಸಾರ್ವಜನಿಕರಿಗೆ ಮೊದಲಿನ ದರಕ್ಕಿಂತ ಕಡಿಮೆ ಬೆಲೆಗೆ ಕೆಂಪುಕಲ್ಲು ಇನ್ನು ಮುಂದೆ ಸಿಗಲಿದೆ. ಕಾನೂನುಬದ್ಧ ಸಾಗಾಟಕ್ಕಷ್ಟೇ ಅನುಮತಿ ನೀಡುವುದಾಗಿ ಪೊಲೀಸ್ ವರಿಷ್ಠಾಧಿಕಾರಿಯೂ ಭರವಸೆ ನೀಡಿದ್ದಾರೆ’ ಎಂದರು.

‘ಹಿಂದೆ ಕೆಂಪುಕಲ್ಲು ಕೇರಳ ರಾಜ್ಯದಿಂದ ಕೊಡಗು ಸೇರಿದಂತೆ ರಾಜ್ಯದಾದ್ಯಂತ ದುಬಾರಿ ದರಕ್ಕೆ ಸರಬರಾಜಾಗುತ್ತಿತ್ತು. ಸರ್ಕಾರದ ಯಾವುದೇ ನಿಯಮ ಪಾಲನೆಯಾಗದೇ ವಿಪರೀತ ಭ್ರಷ್ಟಚಾರ ತಾಂಡವ ವಾಡುತ್ತಿದ್ದದ್ದರಿಂದ ಕೆಂಪುಕಲ್ಲಿನ ಅಕ್ರಮ ಸಾಗಾಟ ಕೆಲವು ದಿನಗಳಿಂದ ತಡೆಹಿಡಿಯಲಾಗಿತ್ತು’ ಎಂದು ಮಾಹಿತಿ ನೀಡಿದರು.

ADVERTISEMENT

ಸಿಂಗಲ್ ಆರ್. ಟಿ.ಸಿ ಇಲ್ಲದೆ ಸರ್ಕಾರದ ಯಾವ ಸೌಲಭ್ಯವನ್ನು ಪಡೆದುಕೊಳ್ಳಲಾಗದೆ, ಸಾಲ ಪಡೆಯಲಾಗದೆ ಜನ ಸಂಕಷ್ಟ ಅನುಭವಿಸುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ಈ ವಿಚಾರವಾಗಿ ದೊಡ್ಡಮಟ್ಟದ ಅಭಿಯಾನವನ್ನು ಸರ್ಕಾರದಿಂದ ಕೈಗೊಂಡು ಸಮಸ್ಯೆ ಬಗೆಹರಿಸಲಾಗುತ್ತದೆ. ಸೆಸ್ಕ್‌‌‌ನಿಂದ 66 ಕೆ.ವಿ ವಿದ್ಯುತ್ ಮಾರ್ಗದ ಕಾಮಗಾರಿ ಪ್ರಗತಿಯಲ್ಲಿದೆ. ಜಾಗದ ಅವಶ್ಯಕತೆಯಿರುವ ಕೆಲವೆಡೆ ಸಾರ್ವಜನಿಕರು ಜಾಗ ನೀಡಿದರೆ ಆ ಕೆಲಸವೂ ಆದಷ್ಟು ಬೇಗನೇ ಮುಗಿದು ಜಿಲ್ಲೆಯ ವಿದ್ಯುಚ್ಛಕ್ತಿ ಸಮಸ್ಯೆ ಕೊನೆಗಾಣುತ್ತದೆ’ ಎಂದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಧರ್ಮಜ ಉತ್ತಪ್ಪ ಸೇರಿದಂತೆ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.

ಜಮ್ಮಾಬಾಣೆ ಭೂಮಿಗೆ ಕಂದಾಯ ನಿಗದಿ

‘ಜಿಲ್ಲೆಯಲ್ಲಿ ಕಂದಾಯ ನಿಗದಿಯಾಗದೇ ಸುಮಾರು ಒಂದು ಲಕ್ಷ ಎಕರೆ ಜಮ್ಮಾಬಾಣೆ ಭೂಮಿ ಹಾಗೇ ಉಳಿದುಕೊಂಡಿದೆ. ಇದನ್ನು ಸರಿಪಡಿಸುವುದಾಗಿ ಚುನಾವಣೆ ಸಂದರ್ಭ ಜನರಿಗೆ ನೀಡಿದ್ದ ಭರವಸೆಯಂತೆ ಜಿಲ್ಲಾಧಿಕಾರಿ ಸಹಕಾರದಿಂದ ಪೈಲೈಟ್ ಪ್ರಾಜೆಕ್ಟ್ ಒಂದನ್ನು ಮಾಡಲಾಗಿದೆ’ಎಂದು ಶಾಸಕ ಪೊನ್ನಣ್ಣ ಹೇಳಿದರು. ‘ಅದರಂತೆ ಮಡಿಕೇರಿ ಸೋಮವಾರಪೇಟೆ ಕುಶಾಲನಗರ ಪೊನ್ನಂಪೇಟೆ‌ ಹಾಗೂ ವಿರಾಜಪೇಟೆಯಲ್ಲಿ ಐದು ಗ್ರಾಮಗಳನ್ನು ಗುರುತಿಸಿ ಆ ಗ್ರಾಮಗಳಲ್ಲಿ ಕಂದಾಯ ನಿಗದಿಯಾಗದ ಜಾಗಗಳಿಗೆ ಕಂದಾಯ ನಿಗದಿ ಮಾಡುವ ವ್ಯವಸ್ಥೆ ಮಾಡಲಾಗಿದೆ. ಮಡಿಕೇರಿ ತಾಲ್ಲೂಕಿನ ಬೇಂಗೂರು 712 ಎಕರೆ ಸೋಮವಾರಪೇಟೆ ಕಿರಂಗದೂರು 296 ಎಕರೆ ಕುಶಾಲನಗರದ ಶಿರಂಗಾಲ 469 ಎಕರೆ ವಿರಾಜಪೇಟೆ ಅಮ್ಮತ್ತಿ  230 ಎಕರೆ ಹಾಗೂ ಪೊನ್ನಂಪೇಟೆ ಕುಂದಾ 223 ಎಕರೆ ಜಾಗಗಳು ಕಂದಾಯ ನಿಗದಿಯಾಗದೆ ಉಳಿದಿವೆ. ಮುಂದಿನ ದಿನಗಳಲ್ಲಿ ಸರ್ವೆ ಇಲಾಖೆ ವಾರದಲ್ಲಿ ಮೂರು ದಿನ ಆಯಾ ತಾಲ್ಲೂಕುಗಳಲ್ಲಿ ಸರ್ವೇ ಕೈಗೊಳ್ಳಲಿದೆ. ಈ ಕೆಲಸ ಪೂರ್ಣಗೊಂಡರೆ ಜಿಲ್ಲೆಯಲ್ಲಿ ಸುಮಾರು ಎರಡು ಸಾವಿರ ಎಕರೆ ಭೂಮಿಗೆ ಕಂದಾಯ ನಿಗದಿ ಮಾಡಿದಂತಾಗುತ್ತದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.