ADVERTISEMENT

ಶಾಸಕ ಜನಾರ್ದನ ರೆಡ್ಡಿ ಮಣ್ಣಿನ‌ ಕಳ್ಳ: ಸಚಿವ ಶಿವರಾಜ್ ತಂಗಡಗಿ

ಸಿದ್ದರಾಮಯ್ಯ ವಿರುದ್ಧ ಹೇಳಿಕೆಗೆ ಖಂಡನೆ; ಸಚಿವ ತಂಗಡಗಿ ಆಗ್ರಹ

​ಪ್ರಜಾವಾಣಿ ವಾರ್ತೆ
Published 19 ಜೂನ್ 2024, 13:51 IST
Last Updated 19 ಜೂನ್ 2024, 13:51 IST
ಕೊಪ್ಪಳದಲ್ಲಿ ಬುಧವಾರ ಕಾಂಗ್ರೆಸ್‌ ಪಕ್ಷದ ವತಿಯಿಂದ ನಡೆದ ಪ್ರತಿಭಟನೆ ವೇಳೆ ಬಿಜೆಪಿ ಶಾಸಕ ಜನಾರ್ದನ ರೆಡ್ಡಿ ಪ್ರತಿಕೃತಿ ದಹಿಸಲಾಯಿತು
ಕೊಪ್ಪಳದಲ್ಲಿ ಬುಧವಾರ ಕಾಂಗ್ರೆಸ್‌ ಪಕ್ಷದ ವತಿಯಿಂದ ನಡೆದ ಪ್ರತಿಭಟನೆ ವೇಳೆ ಬಿಜೆಪಿ ಶಾಸಕ ಜನಾರ್ದನ ರೆಡ್ಡಿ ಪ್ರತಿಕೃತಿ ದಹಿಸಲಾಯಿತು    

ಕೊಪ್ಪಳ: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಶಾಸಕ ಜನಾರ್ದನ ರೆಡ್ಡಿ ಮಣ್ಣಿನ‌ ಕಳ್ಳ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ವಾಗ್ದಾಳಿ ನಡೆಸಿದರು.

ಜಿಲ್ಲಾ ಕಾಂಗ್ರೆಸ್ ವತಿಯಿಂದ ಅಶೋಕ ವೃತ್ತದಲ್ಲಿ ಬುಧವಾರ ನಡೆದ ಪ್ರತಿಭಟನೆ ವೇಳೆ ಮಾತನಾಡಿದ ಅವರು ‘ಬಿಜೆಪಿ ಸರ್ಕಾರ‌ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಹತ್ತು ವರ್ಷದಲ್ಲಿ ತೈಲ ಬೆಲೆಯನ್ನು ನೂರು ರೂಪಾಯಿ ದಾಟಿಸಿದೆ. ಜನಾರ್ದನ ರೆಡ್ಡಿ ಬಿಜೆಪಿ ಸೇರಿದ ಹಿನ್ನೆಲೆಯಲ್ಲಿ ಆ ಪಕ್ಷದ ನಾಯಕರ ಓಲೈಕೆಗೆ ಅಬ್ಬರಿಸುತ್ತಿದ್ದಾರೆ. ರೆಡ್ಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾಲಿನ‌ ದೂಳು ಅಲ್ಲ, ಅವರ ಕಾಲಿನ ಉಗುರಿನಲ್ಲಿನ ದೂಳಿಗೂ ಸಮ ಇಲ್ಲ. ರೆಡ್ಡಿ ಅವರೇ ಇದು ಬಳ್ಳಾರಿಯಲ್ಲ, ಕೊಪ್ಪಳ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಂಗಳವಾರ ಬಿಜೆಪಿಯಿಂದ ನಡೆದಿದ್ದ ಪ್ರತಿಭಟನೆ ವೇಳೆ ರೆಡ್ಡಿ ‘ಸಾಮಾನ್ಯ ಜನರ ಬದುಕು ದಯನೀಯ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸ್ಥಾನದಲ್ಲಿ ಮುಂದುವರಿಯಲು ಅಯೋಗ್ಯ’ ಎಂದು ಜರಿದು ಬಡವರ ಜೇಬಿಗೆ ಕತ್ತರಿ ಹಾಕುತ್ತಿರುವ ಪಿಕ್‌ ಪಾಕೆಟ್‌ ಸರ್ಕಾರ ಎಂದು ಹರಿಹಾಯ್ದಿದ್ದರು.

ADVERTISEMENT

ಆದ್ದರಿಂದ ಕಾಂಗ್ರೆಸ್‌ ಮರು ಪ್ರತಿಭಟನೆ ನಡೆಸಿತ್ತು. ಈ ವೇಳೆ ಕಾಂಗ್ರೆಸ್‌ ಕಾರ್ಯಕರ್ತರು ಜನಾರ್ದನ ರೆಡ್ಡಿ ಭಾವಚಿತ್ರಕ್ಕೆ ಚಪ್ಪಲಿಯಿಂದ ಹೊಡೆದು ಪ್ರತಿಕೃತಿ ದಹಿಸಿದರು.

‘ರೆಡ್ಡಿ ಅವರು ನಮ್ಮ ಬಳಿ ಅನುದಾನಕ್ಕಾಗಿ ಅಲೆದಾಡಿದರು. ಅನುಕೂಲ ಪಡೆದು ನಮ್ಮ ನಾಯಕರ ವಿರುದ್ಧವೇ ಅವಹೇಳನಕಾರಿಯಾಗಿ ಮಾತನಾಡುತ್ತಿದ್ದಾರೆ. ಈ ಕೂಡಲೇ ರೆಡ್ಡಿ ಅವರು ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ರೆಡ್ಡಿ ವಿರುದ್ಧ ಹೋರಾಟ ತೀವ್ರಗೊಳಿಸಲಾಗುವುದು’ ಎಂದು ಎಚ್ಚರಿಸಿದರು.

ಸಂಸದ ರಾಜಶೇಖರ್ ಹಿಟ್ನಾಳ್, ಮಾಜಿ ಸಂಸದ ಕರಡಿ ಸಂಗಣ್ಣ, ಶಾಸಕ ರಾಘವೇಂದ್ರ ಹಿಟ್ನಾಳ್, ಪಕ್ಷದ ಜಿಲ್ಲಾಧ್ಯಕ್ಷ ಅಮರೇಗೌಡ ಬಯ್ಯಾಪುರ, ಕೆಪಿಸಿಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೃಷ್ಣ ಇಟ್ಟಂಗಿ, ಜ್ಯೋತಿ ಗೊಂಡಬಾಳ, ಮಂಜುನಾಥ ಗೊಂಡಬಾಳ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.