ADVERTISEMENT

ಸಮುದಾಯ ಆಸ್ಪತ್ರೆಗೆ ಅಂಬುಲೆನ್ಸ್

ಡಯಾಲಿಸಿಸ್ ಯಂತ್ರ ಉದ್ಘಾಟಿಸಿ ಶಾಸಕ ಡಾ.ಮಂತರ್ ಗೌಡ ಭರವಸೆ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2024, 6:27 IST
Last Updated 16 ನವೆಂಬರ್ 2024, 6:27 IST
ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ವತಿಯಿಂದ ನೀಡಿದ ಎರಡು ಡಯಾಲಿಸಿಸ್ ಯಂತ್ರಗಳ ಉದ್ಘಾಟನಾ ಸಮಾರಂಭದಲ್ಲಿ ಶಾಸಕ ಡಾ.ಮಂತರ್ ಗೌಡ, ಎಸ್.ಕೆ.ಸತೀಶ್ ಭಾಗವಹಿಸಿದ್ದರು
ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ವತಿಯಿಂದ ನೀಡಿದ ಎರಡು ಡಯಾಲಿಸಿಸ್ ಯಂತ್ರಗಳ ಉದ್ಘಾಟನಾ ಸಮಾರಂಭದಲ್ಲಿ ಶಾಸಕ ಡಾ.ಮಂತರ್ ಗೌಡ, ಎಸ್.ಕೆ.ಸತೀಶ್ ಭಾಗವಹಿಸಿದ್ದರು   

ಕುಶಾಲನಗರ: ತಾಲ್ಲೂಕು ಕೇಂದ್ರ ಕುಶಾಲನಗರ ಪಟ್ಟಣದಲ್ಲಿರುವ ಸಮುದಾಯ ಆರೋಗ್ಯ ಕೇಂದ್ರಕ್ಕೆ ರೋಗಿಗಳ ಅನುಕೂಲಕ್ಕಾಗಿ ವೈಯುಕ್ತಿಕವಾಗಿ ಅಂಬುಲೆನ್ಸ್ ವಾಹನವನ್ನು ಕೊಡುಗೆಯಾಗಿ ನೀಡುವುದಾಗಿ ಶಾಸಕ ಡಾ.ಮಂತರ್ ಗೌಡ ಭರವಸೆ ನೀಡಿದರು.

ಇಲ್ಲಿನ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ರೋಟರಿ ಸಂಸ್ಥೆಯ ಕೋರಿಕೆ ಮೇರೆಗೆ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ವತಿಯಿಂದ ಕೊಡುಗೆಯಾಗಿ ನೀಡಿದ ಎರಡು ಡಯಾಲಿಸಿಸ್ ಯಂತ್ರಗಳನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.

ಸರ್ಕಾರದಿಂದ ನಾಲ್ಕು ಡಯಾಲಿಸಿಸ್ ಯಂತ್ರಗಳನ್ನು ಆಸ್ಪತ್ರೆಗೆ ಮಂಜೂರು ಮಾಡಿಸಿ ಡಯಾಲಿಸಿಸ್ ಕೇಂದ್ರವನ್ನು ಉದ್ಘಾಟನೆ ಮಾಡಲಾಗಿದೆ. ಈಗ ಹೆಚ್ಚುವರಿಯಾಗಿ ಎರಡು ಡಯಾಲಿಸಿಸ್ ಯಂತ್ರಗಳನ್ನು ಸೆಂಟ್ರಲ್ ಬ್ಯಾಂಕ್ ನೀಡಿದೆ. ಇದರಿಂದ ತಾಲ್ಲೂಕಿನಲ್ಲಿ ಮೂತ್ರಕೋಶದ ತೊಂದರೆಯಿಂದ ಬಳಲುತ್ತಿರುವ ಬಡ ರೋಗಿಗಳಿಗೆ ಅನುಕೂಲವಾಗಲಿದೆ ಎಂದರು.

ADVERTISEMENT

ಇತ್ತೀಚಿನ ದಿನಗಳಲ್ಲಿ ಮೂತ್ರಕೋಶ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ರೋಗಿಗಳು ಡಯಾಲಿಸಿಸ್ ಕೇಂದ್ರದ ಸೌಲಭ್ಯವನ್ನು ಸದುಪಯೋಗ ಮಾಡಿಕೊಂಡು ತಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಸರ್ಕಾರಿ ಆಸ್ಪತ್ರೆಗೆ ಡಯಾಲಿಸಿಸ್ ಯಂತ್ರ ನೀಡಿದ ಸೆಂಟ್ರಲ್ ಬ್ಯಾಂಕ್ ಅಧಿಕಾರಿಗಳಿಗೆ ಹಾಗೂ ಯಂತ್ರಗಳನ್ನು ತರಲು ಶ್ರಮಿಸಿದ ರೋಟರಿ ಸಂಸ್ಥೆಗೆ ಶಾಸಕರು ಕೃತಜ್ಞತೆ ಸಲ್ಲಿಸಿದರು.

ರೋಟರಿ ಸಂಸ್ಥೆಯ ಜಿಲ್ಲಾ ಯೋಜನಾ ಮುಖ್ಯಸ್ಥ ಎಸ್.ಕೆ.ಸತೀಶ್ ಮಾತನಾಡಿ, ರೋಟರಿ ಸಂಸ್ಥೆ ಅಂತರರಾಷ್ಟ್ರೀಯ ಸಂಸ್ಥೆಯಾಗಿದ್ದು, ಮಾನವ ಸೇವೆಯೇ ಮೂಲ ಉದ್ದೇಶವಾಗಿದೆ ಎಂದರು.

ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ವಲಯ ಮುಖ್ಯಸ್ಥ ಕೆ.ಧಾರಾಸಿಂಗ್ ನಾಯಕ್ ಮಾತನಾಡಿ, ಸಿಎಸ್ಆರ್ ನಿಧಿಯಿಂದ ₹15 ಲಕ್ಷ ವೆಚ್ಚದ ಎರಡು ಡಯಾಲಿಸಿಸ್ ಯಂತ್ರಗಳನ್ನು ಕುಶಾಲನಗರ ಸರ್ಕಾರಿ ಆಸ್ಪತ್ರೆಗೆ ನೀಡಲಾಗಿದೆ. ಇದು ರೋಗಿಗಳಿಗೆ ತುಂಬ ಉಪಯುಕ್ತವಾಗಲಿದೆ. ಮುಂದಿನ ದಿನಗಳಲ್ಲೂ ಸಾಮಾಜಿಕ ಸೇವಾ ಕಾರ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ಹೇಳಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ‌.ಸತೀಶ್, ಜಿಲ್ಲಾ ರೋಟರಿ ಗವರ್ನರ್ ವಿಕ್ರಂದತ್ತ ಮಾತನಾಡಿದರು.
ಕುಶಾಲನಗರ ರೋಟರಿ ಸಂಸ್ಥೆ ಅಧ್ಯಕ್ಷ ಹರೀಶ್ ಅಧ್ಯಕ್ಷತೆ ವಹಿಸಿದ್ದರು. ಪುರಸಭೆ ಅಧ್ಯಕ್ಷೆ ಜಯಲಕ್ಷ್ಮಿಚಂದ್ರು, ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ರೋಟರಿ ಸಂಸ್ಥೆಯ ಸಹಾಯಕ ಗವರ್ನರ್ ಡಾ.ಹರೀಶ್ ಶೆಟ್ಟಿ, ಕುಶಾಲನಗರ ರೋಟರಿ ಸಂಸ್ಥೆ ಕಾರ್ಯದರ್ಶಿ ಕಿರಣ್, ಸೆಂಟರ್ ಬ್ಯಾಂಕ್ ಮಡಿಕೇರಿ ಶಾಖೆಯ ವ್ಯವಸ್ಥಾಪಕಿ ಪ್ರಿಯಾಂಕಾ, ಕುಶಾಲನಗರ ಶಾಖೆಯ ವ್ಯವಸ್ಥಾಪಕ ರಾಜ್ ಮೋಹನ್, ತಾಲ್ಲೂಕು ವೈದ್ಯಾಧಿಕಾರಿ ಡಾ.ಇಂದೂಧರ್, ಸಮುದಾಯ ಆರೋಗ್ಯ ಕೇಂದ್ರದ ಮುಖ್ಯಸ್ಥ ಡಾ.ಮಧುಸೂದನ್, ಡಯಾಲಿಸಿಸ್ ಕೇಂದ್ರದ ರಮ್ಯ ಪೂಜಾರಿ ಹಾಗೂ ರೋಟರಿ ಸದಸ್ಯರು ಉಪಸ್ಥಿತರಿದ್ದರು.

ಕೆ.ಧಾರಾಸಿಂಗ್ ನಾಯಕ್, ಡಾ.ಮಂತರ್ ಗೌಡ, ಡಾ.ಸತೀಶ್ ಅವರನ್ನು ರೋಟರಿ ಸಂಸ್ಥೆ ವತಿಯಿಂದ ಸನ್ಮಾನಿಸಲಾಯಿತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.