ADVERTISEMENT

‘ಬಂಡಾಯ’ದ ನಡುವೆಯೂ ಎಸ್‌.ಎಲ್‌.ಭೋಜೇಗೌಡಗೆ ನಿರಾಯಾಸದ ಗೆಲುವು

ನೈರುತ್ಯ ಶಿಕ್ಷಕರ ಕ್ಷೇತ್ರದಿಂದ 2ನೇ ಸಲ ಮೇಲ್ಮನೆಗೆ ಆಯ್ಕೆಯಾದ ಭೋಜೇಗೌಡ

​ಪ್ರಜಾವಾಣಿ ವಾರ್ತೆ
Published 7 ಜೂನ್ 2024, 4:57 IST
Last Updated 7 ಜೂನ್ 2024, 4:57 IST

ಮಂಗಳೂರು: ವಿಧಾನ ಪರಿಷತ್‌ ಚುನಾವಣೆಯಲ್ಲಿ ಸಾಕಷ್ಟು ಕುತೂಹಲ ಮೂಡಿಸಿದ್ದ ನೈರುತ್ಯ ಶಿಕ್ಷಕರ ಕ್ಷೇತ್ರದಲ್ಲಿ ಜೆಡಿಎಸ್‌–ಬಿಜೆಪಿ ಮೈತ್ರಿಕೂಟದ ಅಭ್ಯರ್ಥಿ ಎಸ್‌.ಎಲ್‌.ಭೋಜೇಗೌಡ ಅವರು ‘ಬಂಡಾಯ’ದ ನಡುವೆಯೂ ನಿರಾಯಾಸವಾಗಿ ಗೆದ್ದಿದ್ದಾರೆ. ಈ ಕ್ಷೇತ್ರ ದಿಂದ ಸತತ ಎರಡನೇ ಸಲ ಅವರು ಆಯ್ಕೆಯಾಗಿದ್ದಾರೆ.

2018ರ ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿಯಾಗಿದ್ದ ಅವರು ಎರಡನೇ ಪ್ರಾಶಸ್ತ್ಯದ ಮತ ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಕ್ಯಾ.ಗಣೇಶ್ ಕಾರ್ಣಿಕ್ ವಿರುದ್ಧ ಪ್ರಯಾಸದ ವಿಜಯ ಸಾಧಿಸಿದ್ದರು. ಬಿಜೆಪಿ ಭದ್ರಕೋಟೆ ಎಂದೇ ಗುರುತಿಸಿಕೊಂಡಿದ್ದ ಈ ಕ್ಷೇತ್ರದಲ್ಲಿ ಮೊದಲ ಸಲ ಬಿಜೆಪಿಯೇತರ ಪಕ್ಷದ ಅಭ್ಯರ್ಥಿಯ ಗೆಲುವು ಅದಾಗಿತ್ತು. ಈ ಸಲ ಬಿಜೆಪಿ ಮತದಾರರ ಬೆಂಬಲವೂ ಭೋಜೇಗೌಡರಿಗೆ ಇದ್ದುದರಿಂದ ಮೊದಲ ಪ್ರಾಶಸ್ತ್ಯದ ಮತಗಳ ಎಣಿಕೆಯಲ್ಲೇ ಗೆಲುವಿನ ನಗೆ ಬೀರಿದ್ದಾರೆ.

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ ಹಾಗೂ ಸಹಕಾರ ಭಾರತಿ ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದ ಹಾಗೂ  ಮಂಗಳೂರು ವಿಶ್ವವಿದ್ಯಾಲಯದ ಸಿಂಡಿಕೇಟ್‌ನ ಮಾಜಿ ಸದಸ್ಯ ಎಸ್‌.ಆರ್‌. ಹರೀಶ್‌ ಆಚಾರ್ಯ ಸ್ಪರ್ಧೆಯು  ಭೋಜೇಗೌಡ ಗೆಲುವಿಗೆ ಅಡ್ಡಗಾಲು ಹಾಕಬಹುದು. ವಿಧಾನಸಭಾ ಚುನಾವಣೆಯಲ್ಲಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಬಿಜೆಪಿಯ ನಾಯಕ ಸಿ.ಟಿ.ರವಿ ಸೋಲಿನಲ್ಲಿ ಭೋಜೇಗೌಡ ಪಾತ್ರ ವಹಿಸಿದ್ದರು ಎಂಬ ಕಾರಣಕ್ಕೆ ಬಿಜೆಪಿ ಬೆಂಬಲಿಗರು ಭೋಜಗೌಡರ ಬದಲು ಹರೀಶ್ ಆಚಾರ್ಯ ಅವರನ್ನು ಬೆಂಬಲಿಸಬಹುದು ಎಂಬ ಚರ್ಚೆ ಶಿಕ್ಷಕರ ವಲಯದಲ್ಲಿ ನಡೆದಿತ್ತು. ಆದರೆ, ಕೊನೆಯ ಕ್ಷಣದಲ್ಲಿ ಬಿಜೆಪಿ ನಾಯಕರೆಲ್ಲ ಒಗ್ಗಟ್ಟಿನಿಂದ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಳ್ಳುವ ಮೂಲಕ ಪಕ್ಷದ ಬೆಂಬಲಿಗರ ಮತಗಳು ಮೈತ್ರಿಕೂಟದ ಅಭ್ಯರ್ಥಿಯ ಪರವಾಗಿ ಚಲಾವಣೆಯಾಗುವಂತೆ ನೋಡಿಕೊಂಡರು. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರೇ  ಆಖಾಡಕ್ಕಿಳಿದು ಬಿರುಸಿನ ಪ್ರಚಾರ ನಡೆಸಿದ್ದರು. ಯಾವುದೇ ಕಾರಣಕ್ಕೂ ಮೈತ್ರಿಕೂಟದ  ಅಭ್ಯರ್ಥಿ ಸೋಲಬಾರದು ಎಂಬ ಸೂಚನೆ ರವಾನಿಸಿದ್ದರು. ಇದು ಭೋಜೇಗೌಡರ ಗೆಲುವನ್ನು ಮತ್ತಷ್ಟು ಸುಲಭಗೊಳಿಸಿತು.

ADVERTISEMENT

2018ರ ಚುನಾವಣೆಯಲ್ಲಿ ಮೂರನೇ ಸ್ಥಾನಕ್ಕೆ ಖುಷಿಪಟ್ಟಿದ್ದ ಕಾಂಗ್ರೆಸ್‌ ಅಭ್ಯರ್ಥಿ ಕೆ.ಕೆ.ಮಂಜುನಾಥ್‌ ಕುಮಾರ್‌ ಈ ಸಲವೂ ಗೆಲುವಿನ ದಡ ಸೇರುವಲ್ಲಿ ಯಶಸ್ವಿ ಆಗಲಿಲ್ಲ. 4,562 ಮತ ಪಡೆದ ಅವರು ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಗಿದೆ. ಕಾಂಗ್ರೆಸ್‌ನ ಬಂಡಾಯ ಅಭ್ಯರ್ಥಿಯಾಗಿದ್ದ ಬಿ.ಆರ್‌. ನಂಜೇಶ್‌ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿತ್ತು. ಈ ಕ್ಷೇತ್ರದ ವ್ಯಾಪ್ತಿಯಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿಯಿಂದ ತಲಾ 14 ಹಾಗೂ ಜೆಡಿಎಸ್‌ನ ಒಬ್ಬ ಶಾಸಕ ಇದ್ದರು. ಆದರೆ ಶೇ 50ಕ್ಕೂ ಮತಗಳು ಬಿಜೆಪಿ ಪ್ರಾಬಲ್ಯ ಇರುವ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲೇ ಇತ್ತು.

ಪದವೀಧರ ಶಿಕ್ಷಕರನ್ನು ಮತದಾರರಾಗಿ ನೋಂದಣಿ ಮಾಡಿಸುವಲ್ಲೂ ಬಿಜೆಪಿಯವರಷ್ಟು ಆಸಕ್ತಿಯನ್ನು ಕಾಂಗ್ರೆಸ್‌ನವರು ತೋರಿಸಿರಲಿಲ್ಲ. ಇದು ಕೂಡ ಕಾಂಗ್ರೆಸ್‌ ಅಭ್ಯರ್ಥಿಯ ಹಿನ್ನಡೆಗೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.