ADVERTISEMENT

ಸಂಸತ್ ಕಲಾಪವನ್ನೂ ಮೀರಿಸಿದ ‘ಯುವ ಸಂಸತ್’

ಜನಪ್ರತಿನಿಧಿಗಳಿಗೂ ಮೀರಿದ ಜ್ಞಾನ, ವಾಗ್ಝರಿಗೆ ಸೋತ ಪ್ರೇಕ್ಷಕ ವೃಂದ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2024, 6:49 IST
Last Updated 14 ನವೆಂಬರ್ 2024, 6:49 IST
ಮಡಿಕೇರಿಯ ಸರ್ಕಾರಿ ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ಬುಧವಾರ ನಡೆದ ಜಿಲ್ಲಾಮಟ್ಟದ ‘ಯುವ ಸಂಸತ್ ಸ್ಪರ್ಧೆ’ಯಲ್ಲಿ ಭಾಗವಹಿಸಿದ್ದ ಕೊಡಗು ಜಿಲ್ಲೆಯ ವಿದ್ಯಾರ್ಥಿಗಳು
ಮಡಿಕೇರಿಯ ಸರ್ಕಾರಿ ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ಬುಧವಾರ ನಡೆದ ಜಿಲ್ಲಾಮಟ್ಟದ ‘ಯುವ ಸಂಸತ್ ಸ್ಪರ್ಧೆ’ಯಲ್ಲಿ ಭಾಗವಹಿಸಿದ್ದ ಕೊಡಗು ಜಿಲ್ಲೆಯ ವಿದ್ಯಾರ್ಥಿಗಳು   

ಮಡಿಕೇರಿ: ಒಂದೆಡೆ ಪ್ರಶ್ನೆಗಳ ಸುರಿಮಳೆ, ಮತ್ತೊಂದೆಡೆ ಉತ್ತರಗಳ ಮಹಾಪೂರ, ಸಂಸತ್ ಪಟುಗಳ ವಾಕ್ಚಾತುರ್ಯ ಕಂಡು ಬೆರಗಾಗದವರೇ ಇರಲಿಲ್ಲ.

ಈ ದೃಶ್ಯ ಇಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ಬುಧವಾರ ನಡೆದ ಜಿಲ್ಲಾಮಟ್ಟದ ‘ಯುವ ಸಂಸತ್ ಸ್ಪರ್ಧೆ’ಯಲ್ಲಿ ಕಂಡು ಬಂತು.

ಸಂಸದೀಯ ವ್ಯವಹಾರಗಳ ಇಲಾಖೆ, ಪದವಿಪೂರ್ವ ಶಿಕ್ಷಣ ಇಲಾಖೆ, ಸರ್ಕಾರಿ ಪದವಿಪೂರ್ವ ಕಾಲೇಜು ವತಿಯಿಂದ ಈ ಅಪರೂಪದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಂಸತ್ ಸದಸ್ಯರನ್ನೂ ಮೀರಿಸುವ ಪರಿಯಲ್ಲಿ ವಿದ್ಯಾರ್ಥಿಗಳು ರಾಷ್ಟ್ರ, ರಾಜ್ಯ ಮತ್ತು ವಿಶ್ವವನ್ನು ಕಾಡುತ್ತಿರುವ ಜ್ವಲಂತ ಸಮಸ್ಯೆಗಳನ್ನು ಪ್ರಸ್ತಾಪಿಸಿದರು. ಸಮಸ್ಯೆಗಳಿಗೆ ಉತ್ತರವನ್ನೂ ಅವರೇ ಕಂಡುಕೊಂಡು, ನೋಡುಗರನ್ನು ವಿಸ್ಮಿತಗೊಳಿಸಿದರು.

ADVERTISEMENT

ಕಾವೇರಿ ನದಿ ನೀರಿನ ಹಂಚಿಕೆ, ಅಕ್ರಮ ಬಾಂಗ್ಲಾ ವಲಸಿಗರ ಸಮಸ್ಯೆ, ನೀಟ್ ಪರೀಕ್ಷೆಯಲ್ಲಿ ಅಕ್ರಮ, ನೋಟುಗಳ ಅಮಾನ್ಯೀಕರಣದಿಂದಲೂ ನಿಯಂತ್ರಣಕ್ಕೆ ಬಾರದ ಕಪ್ಪುಹಣ, ಇಸ್ರೇಲ್–ಹಮಾಸ್ ನಡುವಿನ ಹಾಗೂ ರಷ್ಯಾ– ಉಕ್ರೇನ್ ನಡುವಿನ ಯುದ್ಧ... ಹೀಗೆ ಹಲವು ಹತ್ತು ಸಮಸ್ಯೆಗಳನ್ನು ವಿರೋಧ ಪಕ್ಷದ ಸದಸ್ಯರಾಗಿ ಕಾರ್ಯನಿರ್ವಹಿಸಿದ ವಿದ್ಯಾರ್ಥಿಗಳು ಮಂಡಿಸಿದರು.

ಇದಕ್ಕೆ ಆಡಳಿತ ಪಕ್ಷದ ಸದಸ್ಯರಾಗಿ ಕಾರ್ಯನಿರ್ವಹಿಸಿದ ವಿದ್ಯಾರ್ಥಿಗಳು ಉತ್ತರಗಳನ್ನು ನೀಡಿದರು. ಉತ್ತರಗಳು ಸಮಾಧಾನಕರವಾಗಿಲ್ಲದ್ದಾಗ ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರ ನಡುವೆ ವಾಕ್ಸಮರಕ್ಕೂ ಈ ಅಣಕು ಸಂಸತ್ ಸಾಕ್ಷಿಯಾಯಿತು.

ಮತ್ತೂ ವಿಶೇಷ ಎಂದರೆ, ಪ‍್ರಸಕ್ತ ದೇಶದ ಉದ್ದಗಲಕ್ಕೂ ಚರ್ಚೆಯಾಗುತ್ತಿರುವ ಏಕರೂಪ ನಾಗರಿಕ ಸಂಹಿತೆಯು ರಾಷ್ಟ್ರದ ಅಭಿವೃದ್ಧಿಗೆ ಪೂರಕವೇ ಎಂಬ ಬಗ್ಗೆಯೂ ಈ ಅಣಕು ಸಂಸತ್‌ನಲ್ಲಿ ಸ್ವಾರಸ್ಯಕರವಾದ ಚರ್ಚೆಯಾಯಿತು.

‘ರಾಷ್ಟ್ರದ ಅಭಿವೃದ್ಧಿಯಲ್ಲಿ ಎಲ್ಲರೂ ಕೈಜೋಡಿಸಬೇಕು. ಜೊತೆಗೆ, ಸಮಾನವಾಗಿ ಬದುಕಬೇಕು. ಆ ನಿಟ್ಟಿನಲ್ಲಿ ಏಕರೂಪ ಕಾನೂನುಗಳು ಜಾರಿಯಾಗಬೇಕು, ಸಮಾಜ ನಿಂತ ನೀರು ಆಗದೆ, ಹರಿಯುವ ನೀರು ಆಗಬೇಕು. ಆ ದಿಸೆಯಲ್ಲಿ ಬದಲಾವಣೆಯತ್ತ ಮುನ್ನೆಡೆಯಬೇಕು’ ಎಂಬ ಸಮರ್ಥನೆಯು ಆಡಳಿತ ಪಕ್ಷದವರಿಂದ ಕೇಳಿ ಬಂತು.

ಜೊತೆಗೆ, ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಪ್ರಯೋಜನಗಳ ಬಗ್ಗೆಯೂ ಸ್ವಾರಸ್ಯಕರ ಚರ್ಚೆ ಸದನದಲ್ಲಿ ನಡೆಯಿತು.

ವಿದ್ಯಾರ್ಥಿಗಳಾದ ಮಡಿಕೇರಿಯ ಸರ್ಕಾರಿ ಪಿಯು ಕಾಲೇಜಿನ ಶಕುಂತಲಾ ಸಭಾಧ್ಯಕ್ಷತೆ ವಹಿಸಿದ್ದರು. ತಿತಿಮತಿ ಸರ್ಕಾರಿ ಪಿಯು ಕಾಲೇಜಿನ ವಿನಯ ಕುಮಾರ, ವಿರಾಜಪೇಟೆ ಸರ್ಕಾರಿ ಪಿಯು ಕಾಲೇಜಿನ ಅನ್ಸಿಕಾ, ಸೋಮವಾರಪೇಟೆಯ ಪಿಯು ಕಾಲೇಜಿನ ಅಮೃತ್, ಕುಶಾಲನಗರದ ಸರ್ಕಾರಿ ಪಿಯು ಕಾಲೇಜಿನ ಪ್ರೀತಂ, ಮೂರ್ನಾಡು ಪಿಯು ಕಾಲೇಜಿನ ಅನನ್ಯ ದೇವೇಂದ್ರ ನಾಯಕ, ನಾಪೋಕ್ಲು ಸರ್ಕಾರಿ ಪಿಯು ಕಾಲೇಜಿನ ರಾಣಿ, ಕೂಡಿಗೆ ಸರ್ಕಾರಿ ಪಿಯು ಕಾಲೇಜಿನ ಡಿಂಪಲ್, ಸೋಮವಾರಪೇಟೆ ಪಿಯು ಕಾಲೇಜಿನ ಇಮ್ರಾನ್, ಮಡಿಕೇರಿ ಸರ್ಕಾರಿ ಪಿಯು ಕಾಲೇಜಿನ ಶ್ರೀನಿವಾಸ ಇತರರು ಆಡಳಿತ ಮತ್ತು ವಿರೋಧ ಪಕ್ಷದಲ್ಲಿ ಪಾಲ್ಗೊಂಡು ಚರ್ಚೆ ನಡೆಸಿದರು. ಜಿಲ್ಲೆಯ ಸುಮಾರು 90ಕ್ಕೂ ಹೆಚ್ಚು ವಿದ್ಯಾರ್ಥಿಗಳು ಯುವ ಸಂಸತ್‍ನಲ್ಲಿ ಪಾಲ್ಗೊಂಡಿದ್ದರು.

ಸರ್ಕಾರಿ ಪದವಿ ಪೂರ್ವ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಉಪನ್ಯಾಸಕ‌ ಚಿದಾನಂದ ಅವರು, ಪ್ರಜಾಪ್ರಭುತ್ವದಲ್ಲಿ ಸಂಸತ್ತಿನ ಕಾರ್ಯ ಕಲಾಪಗಳ ಬಗ್ಗೆ ಮಾಹಿತಿ ನೀಡಿ, ಸಭಾಧ್ಯಕ್ಷರ ಕಾರ್ಯ ನಿರ್ವಹಣೆ, ಪ್ರಶ್ನೋತ್ತರ ವೇಳೆ, ಶೂನ್ಯ ವೇಳೆ, ಗಮನ ಸೆಳೆಯುವ ಸೂಚನೆಗಳು, ಶಾಸನ ರಚನೆ ಹಾಗೂ ವಿಧೇಯಕಗಳ ಮಂಡನೆ ಮತ್ತಿತರ ವಿಚಾರಗಳ ಕುರಿತು ವಿವರಿಸಿದರು. 

ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ತೆನ್ನಿರಾ ಮೈನಾ, ಸಂತ ಮೈಕಲರ ಶಾಲೆಯ ಪ್ರಾಂಶುಪಾಲರಾದ ಕೆ.ಎಸ್.ಸುಮಂತ್, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಪ್ರಾದೇಶಿಕ ನಿರ್ದೇಶಕಿ ಸ್ಮಿತಾ ಸುಬ್ಬಯ್ಯ, ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಉದಯ್ ಕುಮಾರ್ ಭಾಗವಹಿಸಿದ್ದರು.

ಮಡಿಕೇರಿಯ ಸರ್ಕಾರಿ ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ಬುಧವಾರ ನಡೆದ ಜಿಲ್ಲಾಮಟ್ಟದ ‘ಯುವ ಸಂಸತ್ ಸ್ಪರ್ಧೆ’ಯಲ್ಲಿ ವಿಧಾನ ಪರಿಷತ್ತಿನ ಮಾಜಿ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ಮಾತನಾಡಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.