ADVERTISEMENT

ಮಡಿಕೇರಿ | ಮತ್ತೆ ಚುರುಕಾದ ಮುಂಗಾರು, ಹರ್ಷಗೊಂಡ ರೈತರು

ಮಡಿಕೇರಿ, ವಿರಾಜಪೇಟೆ, ಭಾಗಮಂಡಲದಲ್ಲಿ ಬಿರುಸಿನ ವರ್ಷಧಾರೆ

​ಪ್ರಜಾವಾಣಿ ವಾರ್ತೆ
Published 2 ಜುಲೈ 2024, 4:53 IST
Last Updated 2 ಜುಲೈ 2024, 4:53 IST

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಒಂದೆರಡು ದಿನಗಳ ಕಾಲ ಶಾಂತವಾಗಿದ್ದ ಮುಂಗಾರು ಮತ್ತೆ ಚುರುಕಾಗಿದೆ. ಭಾನುವಾರ ರಾತ್ರಿಯಿಂದಲೆ ಜಿಲ್ಲೆಯ ಹಲವು ಭಾಗಗಳಲ್ಲಿ ಮಳೆ ಸುರಿಯುತ್ತಿದ್ದು, ರೈತರಲ್ಲಿ ನಿರೀಕ್ಷೆಗಳನ್ನು ಗರಿಗೆದರಿಸಿದೆ.

ವಿರಾಜಪೇಟೆ ಪಟ್ಟಣ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಮಳೆ ಬಿರುಸಾಗಿರುವುದು ವಿಶೇಷ. ಇಲ್ಲಿ ಭಾನುವಾರ ರಾತ್ರಿ ಮಾತ್ರವಲ್ಲ, ಸೋಮವಾರವೂ ಬಿರುಸಿನ ಮಳೆ ಸುರಿಯಿತು. ಇದರಿಂದ ಕೆರೆ, ತೋಡುಗಳು ಭರ್ತಿಯಾಗಿವೆ.

ಮಡಿಕೇರಿಯಲ್ಲೂ ಭಾನುವಾರ ರಾತ್ರಿ ಬಿರುಸಿನ ಮಳೆ ಸುರಿಯಿತು. ಸೋಮವಾರವೂ ಆಗಿದ್ದಾಂಗ್ಗೆ ಮಳೆ ಸುರಿಯುತ್ತಲೇ ಇತ್ತು. ಭಾಗಮಂಡಲದಲ್ಲಿ ಧಾರಾಕಾರ ಮಳೆಯಾಗಿದ್ದು, ನದಿಗಳು ಉಕ್ಕೇರಿ ಹರಿಯತೊಡಗಿವೆ. ಮತ್ತೊಂದು ಕಡೆ ದಕ್ಷಿಣ ಕೊಡಗಿನ ಗೋಣಿಕೊಪ್ಪಲು, ಕುಟ್ಟ, ಶ್ರೀಮಂಗಲ, ಹುದಿಕೇರಿ, ಪೊನ್ನಂಪೇಟೆ ಭಾಗಗಳಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದೆ.

ADVERTISEMENT

ಉತ್ತರ ಕೊಡಗಿನಲ್ಲೂ ಮುಂಗಾರು ಚುರುಕಾಗಿದೆ. ಸೋಮವಾರಪೇಟೆ ತಾಲ್ಲೂಕಿನ ಶಾಂತಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ಇದರಿಂದ ಹಟ್ಟಿಹೊಳೆ ಮತ್ತು ಮಾದಾಪುರ ಹೊಳೆಗಳು ತುಂಬಿ ಹರಿಯುತ್ತಿವೆ. ಹೊಳೆಯಲ್ಲಿ ಮಣ್ಣು ಮಿಶ್ರಿತ ನೀರು ಹರಿಯುತ್ತಿದೆ. ಇದೇ ಹಾರಂಗಿ ಆಣೆಕಟ್ಟೆಗೆ ಪ್ರಮುಖ ನೀರಿನ ಮೂಲವಾಗಿದ್ದು, ಮಳೆ ಹೀಗೆ ಮುಂದುವರೆದಲ್ಲಿ ಕೆಲವೇ ದಿನಗಳಲ್ಲಿ ಆಣೆಕಟ್ಟು ಶೀಘ್ರ ತುಂಬಲಿದೆ ಎಂದು ಸ್ಥಳೀಯರು ತಿಳಿಸಿದರು.

ಇಲ್ಲಿಯವರೆಗಿನ ವಾಡಿಕೆ ಮಳೆ 78 ಸೆಂ.ಮೀ ಆಗಿದ್ದು, ಸದ್ಯ 77 ಸೆಂ.ಮೀ ಮಳೆಯಾಗಿದ್ದು, ಮಳೆ ಕೊರತೆ ಪ್ರಮಾಣ ಶೇ 4ಕ್ಕೆ   ಕಡಿಮೆಯಾಗಿದೆ.

ಮತ್ತಷ್ಟು ಮಳೆ ಸುರಿಯುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.