ADVERTISEMENT

ಮಣ್ಣು ಪರೀಕ್ಷೆ: ಆರೋಗ್ಯ ಚೀಟಿ ವಿತರಣೆ

ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಪ್ರಚಾರ ವಾಹನಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 13 ಜುಲೈ 2019, 12:25 IST
Last Updated 13 ಜುಲೈ 2019, 12:25 IST
ಮಡಿಕೇರಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಪ್ರಚಾರ ವಾಹನಕ್ಕೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಸಿಇಒ ಕೆ.ಲಕ್ಷ್ಮಿಪ್ರಿಯಾ ಚಾಲನೆ ನೀಡಿದರು
ಮಡಿಕೇರಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಪ್ರಚಾರ ವಾಹನಕ್ಕೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಸಿಇಒ ಕೆ.ಲಕ್ಷ್ಮಿಪ್ರಿಯಾ ಚಾಲನೆ ನೀಡಿದರು   

ಮಡಿಕೇರಿ: ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಬಗ್ಗೆ ಎಲ್‌ಇಡಿ ವಾಹನದ ಮೂಲಕ ಗ್ರಾಮೀಣ ಪ್ರದೇಶದಲ್ಲಿ ಜಾಗೃತಿ ಮೂಡಿಸುವ ಪ್ರಚಾರ ಆಂದೋಲನಕ್ಕೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಜಿ.ಪಂ ಸಿಇಒ ಕೆ.ಲಕ್ಷ್ಮಿಪ್ರಿಯಾ ಅವರು ಶುಕ್ರವಾರ ಚಾಲನೆ ನೀಡಿದರು.

ಜಿಲ್ಲೆಯ ಮೂರು ಗ್ರಾಮಗಳನ್ನು ಮಣ್ಣು ಆರೋಗ್ಯ ಅಭಿಯಾನದ ಅಡಿ ಆಯ್ಕೆಯಾಗಿದ್ದು, ಮಣ್ಣು ಪರೀಕ್ಷೆ ಮೂಲಕ ಗ್ರಾಮದ ಭೂಮಿ ಫಲವತ್ತತೆ ಸಮೀಕ್ಷೆ ನಡೆಸಲಾಗುತ್ತಿದೆ. ಹಾಕತ್ತೂರು (ಮಡಿಕೇರಿ), ನಂಜರಾಯಪಟ್ಟಣ (ಸೋಮವಾರಪೇಟೆ), ಕದನೂರು (ವಿರಾಜಪೇಟೆ) ಗ್ರಾಮಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ರಾಜು ತಿಳಿಸಿದರು.

ಕಳೆದ 4 ವರ್ಷದಿಂದ ಜಿಲ್ಲೆಯಲ್ಲಿ ಮಣ್ಣು ಪರೀಕ್ಷೆ ಮಾಡಿ, ರೈತರಿಗೆ ವೈಯಕ್ತಿಕವಾಗಿ ಮಣ್ಣು ಆರೋಗ್ಯ ಚೀಟಿ ನೀಡಲಾಗಿದೆ. ಪ್ರಥಮ ಸುತ್ತಿನಲ್ಲಿ 45 ಸಾವಿರ ರೈತರಿಗೆ ಚೀಟಿ ನೀಡಲಾಗಿತ್ತು. 2ನೇ ಸುತ್ತಿನಲ್ಲಿ 42 ಸಾವಿರ ರೈತರ ಜಮೀನಿನ ಮಣ್ಣು ಪರೀಕ್ಷೆ ಮಾಡಿ ಚೀಟಿ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ADVERTISEMENT

3 ಗ್ರಾಮ ಆಯ್ಕೆ ಮಾಡಿಕೊಂಡು ಸಮಗ್ರ ಸಮೀಕ್ಷೆ ನಡೆಸಲಾಗುತ್ತಿದೆ. ಕೃಷಿ ಇಲಾಖೆ ಸಿಬ್ಬಂದಿ ರೈತರ ಜಮೀನಿಗೆ ತೆರಳಿ, ಮಣ್ಣು ಮಾದರಿ ಸಂಗ್ರಹಿಸುತ್ತಾರೆ. ಕೂಡಿಗೆಯಲ್ಲಿ ಮಣ್ಣು ಪರೀಕ್ಷಾ ಕೇಂದ್ರದಲ್ಲಿ 12 ಪೋಷಕಾಂಶ ಪರೀಕ್ಷೆ ಮಾಡಲಾಗುತ್ತದೆ ಎಂದು ತಿಳಿಸಿದರು.

ಮಣ್ಣು ಆರೋಗ್ಯ ಚೀಟಿಯಲ್ಲಿ ಮಣ್ಣಿನ ಫಲವತ್ತತೆ ಮಾಹಿತಿಯೊಂದಿಗೆ ಗೊಬ್ಬರ ಬಳಕೆ, ಯಾವ ಬೆಳೆ ಬೆಳೆಯುವುದು ಸೂಕ್ತ ಎಂದು ಶಿಫಾರಸು ಮಾಡಲಾಗುತ್ತದೆ ಎಂದು ರಾಜು ವಿವರಿಸಿದರು.

ಜಿಲ್ಲೆಯ ಜನದಟ್ಟಣೆ ಪ್ರದೇಶದಲ್ಲಿ ಪ್ರಚಾರ ವಾಹನದ ಮೂಲಕ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಬಗ್ಗೆ ಮೂರು ದಿನಗಳ ಕಾಲ ಮಾಹಿತಿ ನೀಡಲಾಗುತ್ತದೆ ಎಂದು ತಿಳಿಸಿದರು. ಕಾರ್ಯಕ್ರಮ ಸಂಯೋಜ‌ಕ ಬೊಳ್ಳಜಿರ ಅಯ್ಯಪ್ಪ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.